ಪದ್ಯ ೩೧: ಕೌರವನೇಕೆ ಮಂತ್ರಾಕ್ಷರವನ್ನು ಮರೆತನು?

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ (ಗದಾ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಈ ಘೋಷವನ್ನು ಕೇಳಿ ನಿನ್ನ ಮಗನಿಗೆ ಅತಿಶಯ ಕೋಪಾಗ್ನಿ ಉಕ್ಕಿತು. ರೋಮಾಂಚನಗೊಂಡ ಅವನ ಇಂದ್ರಿಯಗಳು ಮನಸ್ಸು ಉರಿದೆದ್ದವು. ಅಂತರಂಗದಲ್ಲಿ ದುಃಖವುಂಟಾಗಿ, ಜಲಸ್ತಂಭ ಮಂತ್ರದ ಬೀಜಾಕ್ಷರಗಳು ಮರೆತುಹೋದವು. ವೀರಾವೇಶದಿಂದ ನಿನ್ನ ಮಗನು ಕುದಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಗ: ಸುತ; ಉಬ್ಬರ: ಅತಿಶಯ, ಹೆಚ್ಚಳ; ರೋಮಾಂಚನ: ಆಶ್ಚರ್ಯ; ಗಬ್ಬ: ಅಹಂಕಾರ, ಸೊಕ್ಕು; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಕರಣ: ಜ್ಞಾನೇಂದ್ರಿಯ; ಆದಿ: ಮುಂತಾದ; ತುರುಗು: ಸಂದಣಿಸು; ಅಂತಃಖೇದ: ಒಳ ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಅಕಾರ ಮೊದಲಾದ ವರ್ಣ; ಜವನಿಕೆ: ತೆರೆ, ಪರದೆ; ನಿರ್ಭರ: ವೇಗ, ರಭಸ; ವೀರ: ಶೂರ; ಆವೇಶ: ರೋಷ, ಆಗ್ರಹ; ಪಲ್ಲಟ: ಮಾರ್ಪಾಟು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ನಿನ್ನ +ಮಗನ್
ಉಬ್ಬರಿಸಿದನು +ರೋಮಾಂಚದಲಿಗ್
ಅಬ್ಬರಿಸುತ್+ಅಧಿಕ+ಕ್ರೋಧ+ಶಿಖಿ +ಕರಣೇಂದ್ರಿ+ಆದಿಗಳ
ತುರುಗಿದ್+ಅಂತಃ+ಖೇದ +ಮಂತ್ರಾ
ಕ್ಷರಕೆ +ಜವನಿಕೆಯಾದುದೈ +ನಿ
ರ್ಭರದ +ವೀರಾವೇಶದಲಿ +ಪಲ್ಲಟಿಸಿದನು +ಭೂಪ

ಅಚ್ಚರಿ:
(೧) ಮಂತ್ರವನ್ನು ಮರೆತ ಎಂದು ಹೇಳುವ ಪರಿ – ಮಂತ್ರಾಕ್ಷರಕೆ ಜವನಿಕೆಯಾದುದೈ
(೨) ದುರ್ಯೋಧನನ ಸ್ಥಿತಿ – ನಿರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
(೩) ಅರಸ, ಭೂಪ – ಸಮಾನಾರ್ಥಕ ಪದ, ಮೊದಲ ಮತ್ತು ಕೊನೆಯ ಪದ

ಪದ್ಯ ೩೬: ಕೌರವರ ಸೈನ್ಯವು ಏಕೆ ಅಬ್ಬರಿಸಿತು?

ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿ ಕುಂಡದೊ
ಳೊರಗುವದ ನೋಡುವೆವೆನುತ ತನಿಗೆದರಿತರಿಸೇನೆ (ದ್ರೋಣ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದವರು ಉತ್ತರೀಯದ ಸೆರಗನ್ನು ಬೀಸಿದರು. ಕೂಗಿದರು. ಭೇರಿಗಳನ್ನು ಬಾರಿಸಿದರು. ದಾರಿಬಿಡು ಪ್ರತಿಜ್ಞೆ ಮಾದಿದವನು ಮೆರವಣಿಗೆಯಲ್ಲಿ ಹೋಗಿ ಅಗ್ನಿಕುಂಡದಲ್ಲಿ ಸಾಯುವುದನ್ನು ನೋಡುತ್ತೇವೆ ಎಂದು ಅಬ್ಬರಿಸಿದರು.

ಅರ್ಥ:
ಸೆರಗ: ಉತ್ತರೀಯ; ಆರು: ಘರ್ಷಿಸು; ಬೀಸು: ತೂಗುವಿಕೆ; ಬೊಬ್ಬಿರಿ: ಗರ್ಜಿಸು; ಗಂಭೀರ: ಆಳವಾದುದು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಬಿರುದನಿ: ಜೋರಾದ ಶಬ್ದ; ಉಬ್ಬರ: ಹೆಚ್ಚು, ಅಧಿಕ; ಗಬ್ಬರಿಸು: ತೋಡು, ಬಗಿ; ನಭ: ಆಗಸ; ತೆರಹು: ಬಿಚ್ಚು, ತೆರೆ; ಕೊಡು: ನೀಡು; ಭಾಷೆ: ನುಡಿ; ಮೆರೆ: ಹೊಳೆ, ಪ್ರಕಾಶಿಸು; ಹೋಗು: ತೆರಳು; ವಹ್ನಿ: ಅಗ್ನಿ; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ, ಗುಣಿ; ಒರಗು: ಸಾಯು, ಮರಣ ಹೊಂದು; ನೋಡು: ವೀಕ್ಷಿಸು; ತನಿ: ಚೆನ್ನಾಗಿ ಬೆಳೆದುದು; ಕೆದರು: ಹರಡು; ಅರಿಸೇನೆ: ವೈರಿ ಸೈನ್ಯ;

ಪದವಿಂಗಡಣೆ:
ಸೆರಗ +ಬೀಸಿದರ್+ಆರಿದರು+ ಬೊ
ಬ್ಬಿರಿದರ್+ಉರು +ಗಂಭೀರ+ಭೇರಿಯ
ಬಿರುದನಿಗಳ್+ಉಬ್ಬರಿಸಿದವು +ಗಬ್ಬರಿಸಿದವು+ ನಭವ
ತೆರಹ+ ಕೊಡು +ಕೊಡು +ಭಾಷೆಕಾರನು
ಮೆರೆದು +ಹೋಗಲಿ +ವಹ್ನಿ +ಕುಂಡದೊಳ್
ಒರಗುವದ +ನೋಡುವೆವೆನುತ+ ತನಿ+ಕೆದರಿತ್+ಅರಿಸೇನೆ

ಅಚ್ಚರಿ:
(೧) ಉಬ್ಬರಿಸಿ, ಗಬ್ಬರಿಸಿ – ಪ್ರಾಸ ಪದ
(೨) ಅರ್ಜುನನನ್ನು ಹಂಗಿಸುವ ಪರಿ – ಭಾಷೆಕಾರನು ಮೆರೆದು ಹೋಗಲಿ ವಹ್ನಿ ಕುಂಡದೊಳೊರಗುವದ ನೋಡುವೆ

ಪದ್ಯ ೨೨: ಭೂರಿಶ್ರವನ ತಲೆಯನ್ನು ಯಾರು ಕಡೆದರು?

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.

ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;

ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ

ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು

ಪದ್ಯ ೨೪: ಭೀಷ್ಮರು ಏತಕ್ಕಾಗಿ ಬಳಲಿದರು?

ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ (ಭೀಷ್ಮ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಷ್ಮರು ಬಾಣದ ಹಾಸಿಗೆಯ ಮೇಲೆ ಮಲಗಿರಲು ಅವರ ದೇಹ ಬಹಳ ನೋವನ್ನನುಭವಿಸಿತು. ಮಕ್ಕಳೇ ರೋಮರೋಮಗಳಲ್ಲಿ ನೆಟ್ಟ ಬಾಣಗಳು ದೇಹವನ್ನು ಘಾಸಿಗೊಳಿಸುತ್ತಿವೆ. ನೋವು ಹೆಚ್ಚಾಗಿ ಅಂಗಳು ಒಣಗಿ ಹೋಗಿ ನಾನು ಮಾತನಾಡಲಾರೆ, ಬಹಳ ಬಾಯಾರಿಸಿದೆ ಎಂದು ಹೇಳಲು, ದುರ್ಯೋಧನನು ನಡನಡುಗಿ ಧೂತರನ್ನು ಅಟ್ಟಿ ನೀರನ್ನು ತರಲು ಹೇಳಿದನು.

ಅರ್ಥ:
ಒಡಲು: ದೇಹ; ಜಡಿ: ಭಾರದಿಂದ ಕೆಳಕ್ಕೆ ಜೋಲು; ರೋಮ: ಕೂದಲು; ಅಡಸು: ಬಿಗಿಯಾಗಿ ಒತ್ತು, ತುರುಕು; ಅಂಬು: ಬಾಣ; ಅಂಗ: ದೇಹದ ಭಾಗ; ವೇದನೆ: ನೋವು; ತೊಡಕು: ಸಿಕ್ಕು, ಗೋಜು; ಉಬ್ಬರ: ಅತಿಶಯ, ಹೆಚ್ಚಳ; ಢಗೆ: ಕಾವು, ದಗೆ; ಗೋನಾಳಿ: ಕುತ್ತಿಗೆಯ ನಾಳ; ನೀರ್ದೆಗೆ: ಬಾಯಾರಿಕೆ; ನುಡಿ: ಮಾತಾಡು; ಮಕ್ಕಳು: ಸುತರು, ಕುಮಾರ; ನೀರು: ಜಲ; ನೀರಡಸಿ: ನೀರೊದಗಿಸು; ಹಿರಿ: ದೊಡ್ಡವ; ನಡುಗು: ಹೆದರು, ಅಲುಗಾಡು; ದೂತ: ಸೇವಕ; ಕರೆ: ಬರೆಮಾಡು; ನೇಮಿಸು: ಆಜ್ಞಾಪಿಸು;

ಪದವಿಂಗಡಣೆ:
ಒಡಲ +ಜಡಿದವು +ರೋಮ +ರೋಮದೊಳ್
ಅಡಸಿದ್+ಅಂಬುಗಳ್+ಅಂಗ+ ವೇದನೆ
ತೊಡಕಿತ್+ಉಬ್ಬರಿಸಿದುದು +ಢಗೆ+ ಗೋನಾಳಿ +ನೀರ್ದೆಗೆಯೆ
ನುಡಿಯಲಾರೆನು+ ಮಕ್ಕಳಿರ+ನೀ
ರಡಸಿದೆನು+ ಹಿರಿದಾಗಿ+ಎನೆ+ ನಡ
ನಡುಗಿ +ದುರ್ಯೋಧನನು +ದೂತರ +ಕರೆದು +ನೇಮಿಸಿದ

ಅಚ್ಚರಿ:
(೧) ಭೀಷ್ಮರ ಸ್ಥಿತಿ – ನುಡಿಯಲಾರೆನು ಮಕ್ಕಳಿರನೀರಡಸಿದೆನು ಹಿರಿದಾಗಿ

ಪದ್ಯ ೪೬: ಧರ್ಮಜನಿಗೆ ಯಾವ ವರವನ್ನು ಯಕ್ಷನು ನೀಡಿದನು?

ಒಲಿದನೊಡಲನು ಧರ್ಮ ಸಂಗತಿ
ಗಲ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿಕೊಡುವೆನೆನೆ ಯಮತನುಜನಿಂತೆಂದ (ಅರಣ್ಯ ಪರ್ವ, ೨೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ಬಾಯಾರಿಕೆಯಿಂದ ಬಳಲಿದವನಾದರೂ ಧರ್ಮಸಂವಾದ ಮಾಡುತ್ತಾ ಹರ್ಷಿತನಾದನು. ಅವನು ರೋಮಾಂಚನಗೊಂಡನು. ಪಾಪಗಳೆಲ್ಲವೂ ಕಳೆದುಹೋದವು. ಆಗ ಯಕ್ಷನು ರಾಜ ನಿನ್ನ ಅರಿವಿಗೆ ಮೆಚ್ಚಿದ್ದೇನೆ, ಸತ್ತುಹೋಗಿರುವ ನಿನ್ನ ತಮ್ಮಂದಿರಲ್ಲಿ ಒಬ್ಬನಿಗೆ ಜೀವವನ್ನು ಕೊಡುತ್ತೇನೆ ಕೇಳು ಎಂದು ವರಪ್ರದಾನ ಮಾಡಿದನು. ಆಗ ಧರ್ಮಜನು ಹೀಗೆ ಉತ್ತರಿಸಿದನು.

ಅರ್ಥ:
ಒಲಿ: ಪ್ರೀತಿ; ಒಡಲು: ದೇಹ; ಸಂಗತಿ: ವಿಚಾರ; ಸಂವಾದ: ವಿಚಾರ; ನಿಜ: ತನ್ನ; ತನು: ದೇಹ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಉಬ್ಬರ: ಹೆಚ್ಚಳ; ಗಬ್ಬರಿಸು: ಬಗಿ, ಆವರಿಸು; ದುಷ್ಕೃತ: ಕೆಟ್ಟ ಕೆಲಸ; ಮಹೀಪತಿ: ರಾಜ; ಮೆಚ್ಚು: ಇಷ್ಟವಾಗು; ಅಳಿ: ಸಾವು; ತಲೆ: ಶಿರ; ಬದುಕಿಸು: ಜೀವಿಸು; ತನುಜ: ಮಗ;

ಪದವಿಂಗಡಣೆ:
ಒಲಿದನ್+ಒಡಲನು+ ಧರ್ಮ +ಸಂಗತಿ
ಗಳ +ಸುಸಂವಾದದಲಿ+ ನಿಜತನು
ಪುಳಕವ್+ಉಬ್ಬರಿಸಿದುದು +ಗಬ್ಬರಿಸಿದುದು +ದುಷ್ಕೃತವ
ಎಲೆ +ಮಹೀಪತಿ +ಮೆಚ್ಚಿದೆನು +ಬೇಡ್
ಅಳಿದ +ತಮ್ಮಂದಿರಲಿ+ಒಬ್ಬನ
ತಲೆಯ +ಬದುಕಿಸಿಕೊಡುವೆನ್+ಎನೆ +ಯಮತನುಜನ್+ಇಂತೆಂದ

ಅಚ್ಚರಿ:
(೧) ಉಬ್ಬರಿಸಿದುದು, ಗಬ್ಬರಿಸಿದುದು – ಪ್ರಾಸ ಪದಗಳು;
(೨) ಯಮತನುಜ, ಮಹೀಪತಿ – ಧರ್ಮಜನನ್ನು ಕರೆದ ಪರಿ