ಪದ್ಯ ೯೩: ಅರ್ಜುನನು ಕೃಷ್ಣನಿಗೆ ಹೇಗೆ ಉತ್ತರಿಸಿದನು?

ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ (ಭೀಷ್ಮ ಪರ್ವ, ೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ನೀವು ನೆನೆಸಿದರೆ ಲೆಕ್ಕವಿಲ್ಲದಷ್ಟು ಬ್ರಹ್ಮರು ಹುಟ್ಟುತ್ತಾರೆ, ನೀವು ತಾತ್ಸಾರ ಮಾಡಿದರೆ ಅವರು ಅಳಿದು ಹೋಗುತ್ತಾರೆ, ಪ್ರಭು ನಿನ್ನ ಮಹಿಮೆ ಎಷ್ಟೆಂದು ಹೇಳಲು ಸಾಧ್ಯ! ಯುದ್ಧದಲ್ಲಿ ಹೇಳಿದಂತೆ ನಡೆಯದಿದ್ದರೆ ನಾನು ನಿನ್ನ ಸೇವಕನಲ್ಲ ಎಂದು ಹೇಳಿದನು.

ಅರ್ಥ:
ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಅಜ: ಬ್ರಹ್ಮ; ಕೋಟಿ: ಅಸಂಖ್ಯಾತ; ಮನ: ಮನಸ್ಸು; ಜನಿಸು: ಹುಟ್ಟು; ಉಪೇಕ್ಷೆ: ಅಲಕ್ಷ್ಯ; ಅನಿತು: ಅಷ್ಟು; ಕಮಲಜ: ಬ್ರಹ್ಮ; ಅಳಿ: ನಾಶ; ಮಹಿಮೆ: ಹಿರಿಮೆ, ಶ್ರೇಷ್ಠತೆ; ನೆನೆ: ಜ್ಞಾಪಿಸಿಕೋ; ಅಳವು: ಶಕ್ತಿ; ಜೀಯ: ಒಡೆಯ; ಸಾಕು: ನಿಲ್ಲಿಸು; ಅನುವರ: ಯುದ್ಧ; ಬೆಸಸು: ಹೇಳು; ಮುಖ: ಆನನ; ತಿರುಹು: ತಿರುಗಿಸು; ಡಿಂಗರಿಗ: ಭಕ್ತ;

ಪದವಿಂಗಡಣೆ:
ನೆನೆದಡ್+ಅಜ+ಕೋಟಿಗಳು+ ನಿಮ್ಮಯ
ಮನದೊಳಗೆ +ಜನಿಸುವರ್+ಉಪೇಕ್ಷೆಯೊಳ್
ಅನಿತು+ ಕಮಲಜರ್+ಅಳಿವರ್+ಎಂದರೆ +ನಿಮ್ಮ +ಮಹಿಮೆಯನು
ನೆನೆಯಲ್+ಅಳವೇ+ ಜೀಯ +ಸಾಕಿನ್
ಅನುವರದೊಳ್+ಎನಗೇನ+ ಬೆಸಸಿದರ್
ಅನಿತ+ ತಾ +ಮುಖದ್+ಇರುಹಿದರೆ +ಡಿಂಗರಿಗನ್+ಅಲ್ಲೆಂದ

ಅಚ್ಚರಿ:
(೧) ಅಜ, ಕಮಲಜ – ಬ್ರಹ್ಮನನ್ನು ಕರೆದ ಪರಿ

ಪದ್ಯ ೯: ದೇವೇಂದ್ರನು ಅರ್ಜುನನಲ್ಲಿ ಏನು ಬೇಡಿದನು?

ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಮ್ದವರುಳಿದರಾ ದಾ
ನವರ ಮರ್ದಿಸಿ ದೇವಲೋಕವ
ನೆವಗೆ ನಿರುಪದ್ರವದಲಿಡೆ ಮಾಡೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ದೇವತೆಗಳನ್ನು ದಾನವರು ಉಪೇಕ್ಷಿಸುವುದು ಮುಂದುವರೆದಿದೆ, ನಮ್ಮ ಬೇಹುಗಾರಿಕೆಯೂ ಅವರ ನಾಶಕ್ಕಾಗಿ ಮಾಡಿದ ದೈವಿಕ ಕರ್ಮಗಳೂ ಅವರನ್ನು ಏನೂ ಮಾಡಲಿಲ್ಲ. ಅವರು ನಾಶವಾಗಲಿಲ್ಲ. ಅವರನ್ನು ಮರ್ದಿಸಿ, ಸ್ವರ್ಗ ಲೋಕಕ್ಕೆ ಯಾವ ಉಪದ್ರವವೂ ಇಲ್ಲದಂತೆ ಮಾಡು ಎಂದು ಇಂದ್ರನು ನನಗೆ ಹೇಳಿದನು.

ಅರ್ಥ:
ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಉಳಿವು: ಬದುಕುವಿಕೆ, ಜೀವನ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಸುಳಿವು: ಗುರುತು, ಕುರುಹು; ಮೇಣ್: ಮತ್ತು, ಅಥವ; ಅಳುಕಿಸು: ಅಳಿಸು, ಇಲ್ಲವಾಗಿಸು; ಅಧಿದೈವ: ಮುಖ್ಯ ಅಥವ ಪ್ರಮುಖವಾದ ದೇವ; ಕರ್ಮ:ಕೆಲಸ, ಕಾರ್ಯ; ಗತಿ: ಗಮನ, ಸಂಚಾರ; ದಿವಿಜ: ದೇವತೆ; ದಾನವ: ರಾಕ್ಷಸ; ಮರ್ದಿಸು: ಸಾಯಿಸು; ದೇವಲೋಕ: ಸ್ವರ್ಗ; ಉಪದ್ರವ: ಕಾಟ; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಅವರ್+ಉಪೇಕ್ಷೆಯ +ಉಳಿವಿನಲಿ +ನ
ಮ್ಮವರ +ಬೇಹಿನ+ ಸುಳಿವಿನಲಿ+ ಮೇಣ್
ಅವರನ್+ಅಳುಕಿಸುವ+ಅಧಿದೈವಿಕ+ ಕರ್ಮ+ಗತಿಗಳಲಿ
ದಿವಿಜರಿಂದ್+ಅವರ್+ಉಳಿದರಾ+ ದಾ
ನವರ +ಮರ್ದಿಸಿ +ದೇವಲೋಕವನ್
ಎವಗೆ+ ನಿರುಪದ್ರವದಲಿಡೆ+ ಮಾಡೆಂದನ್+ಅಮರೇಂದ್ರ

ಅಚ್ಚರಿ:
(೧) ಉಳಿವಿನಲಿ, ಸುಳಿವಿನಲಿ – ಪ್ರಾಸ ಪದಗಳು

ಪದ್ಯ ೪೧: ಅರ್ಜುನನೇಕೆ ಮಂದಭಾಗ್ಯನೆಂದು ಚಿಂತಿಸಿದ?

ಹಂದಿಯೈತರಲೇಕೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದರವಮಾನಕರು ತಾವವಮಾನ್ಯರಾದೆವಲೆ
ಇಂದು ಮೌಳಿಯುಪೇಕ್ಷೇಯೋ ತಾ
ನಿಂದು ಶಿವಪದ ಭಕ್ತಿಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ (ಅರಣ್ಯ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಈ ಹಂದಿಯು ಏಕೆ ಬಂತು? ಕಾಡಿನ ಈ ಶಬರನೊಂದಿಗೆ ಯುದ್ಧವೇಕೆ ಸಂಭವಿಸಿತು? ಈ ಶಬರನೇ ಮಾನ್ಯನಾದ, ನಾನು ಅವಮಾನಿತನಾದೆನಲ್ಲಾ? ಶಿವನು ನನ್ನನ್ನು ಕಡೆಗಣಿಸಿದನೇ? ನನಗೆ ಶಿವನ ಪಾದಗಳ ಮೇಲೆ ಭಕ್ತಿ ಇಲ್ಲದಿರಬಹುದೇ? ಅಯ್ಯೋ ನಾನು ಅದೃಷ್ಟಹೀನನಾದೆನೇ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಹಂದಿ: ಸೂಕರ; ಐತರು: ಬಂದು ಸೇರು; ಬನ: ಕಾದು; ಪುಳಿಂದ: ಬೇಡ; ಸೆಣಸು: ಹೋರಾಡು; ಮಾನ್ಯ: ಶ್ರೇಷ್ಠ; ಅವಮಾನ್ಯ: ಅಗೌರವ; ಇಂದು: ಚಂದ್ರ; ಮೌಳಿ: ಶಿರ; ಉಪೇಕ್ಷೆ: ಕಡೆಗಣಿಸುವಿಕೆ; ಶಿವ: ಶಂಕರ; ಪದ: ಚರಣ; ಭಕ್ತಿ: ಭಗವಂತನಲ್ಲಿರುವ ನಿಷ್ಠೆ; ಶೂನ್ಯ: ಬರಿದಾದುದು; ಮಂದ: ನಿಧಾನ ಗತಿಯುಳ್ಳದು; ಭಾಗ್ಯ: ಮಂಗಳ, ಶ್ರೇಯಸ್ಸು; ಚಿಂತಿಸು: ಯೋಚಿಸು;

ಪದವಿಂಗಡಣೆ:
ಹಂದಿ+ಐತರಲೇಕೆ +ಬನದ +ಪು
ಳಿಂದನಲಿ +ಸೆಣಸಾಗಲೇಕೆ+ ಪು
ಳಿಂದರವ+ಮಾನಕರು+ ತಾವ್+ಅವಮಾನ್ಯರ್+ಆದೆವಲೆ
ಇಂದು +ಮೌಳಿ+ಉಪೇಕ್ಷೆಯೋ +ತಾನ್
ಇಂದು +ಶಿವಪದ+ ಭಕ್ತಿಶೂನ್ಯನೊ
ಮಂದಭಾಗ್ಯನು+ ತಾನಲಾ+ ಹಾಯೆನುತ +ಚಿಂತಿಸಿದ

ಅಚ್ಚರಿ:
(೧) ಳಿಂದರವಮಾನಕರು ತಾವವಮಾನ್ಯರಾದೆವಲೆ – ಪದಗಳ ರಚನೆ
(೨) ಅರ್ಜುನನು ವ್ಯಥೆಪಟ್ಟ ಬಗೆ – ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ

ಪದ್ಯ ೯೬: ವಿಕರ್ಣನು ಸಭಾಸದರನ್ನು ಏಕೆ ಜರೆದನು?

ಅರಿದು ಮೌನವೊ ಮೇಣು ಮಾನಿನಿ
ಯೊರಲುತಿರಲೆಂದಾದುಪೇಕ್ಷೆಯೊ
ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ
ಅರಿಯಿರೇ ಸಮವರ್ತಿ ದೂತರ
ಮುರುಕವನು ನೀವೇಕೆ ನಿಮ್ಮನು
ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ (ಸಭಾ ಪರ್ವ, ೧೫ ಸಂಧಿ, ೯೬ ಪದ್ಯ)

ತಾತ್ಪರ್ಯ:
ಎಲ್ಲರ ಭೀತಿಯಿಂದ ಮೌನವಾಗಿರುವುದನ್ನು ಕಂಡು, ಕೌರವರಲ್ಲೊಬ್ಬನಾದ ವಿಕರ್ಣನು ಎದ್ದು ನಿಂತು, ಇದೇನು ತಿಳಿದು ಎಲ್ಲರೂ ಮೌನವಾಗಿದ್ದೀರಿ, ಹೆಣ್ಣೊಬ್ಬಳು ಪ್ರಶ್ನೆ ಕೇಳಿದಳೆಂದ ಅಲಕ್ಷವೋ? ನೇರವಾಗಿ ಕಡ್ಡಿ ಮುರಿದಹಾಗೆ ಸಮಸ್ಯೆಗೆ ಉತ್ತರವನ್ನು ಕೊಡಲು ನಿಮಗೆ ಸಾಧ್ಯವಿಲ್ಲವೋ? ಏತಕ್ಕಾಗಿ ಸುಮ್ಮನಿರುವಿರಿ? ತಿಳಿಯದೇ ನಿಮಗೆ ಪಾಂಡವರಿಗಾದ ನಾಶವು, ನಿಮ್ಮ ವಿವೇಕವನ್ನು ನೀವೇಕೆ ಮರೆತಿರಿ ಎಂದು ವಿಕರ್ಣನು ಕೇಳಿದನು.

ಅರ್ಥ:
ಅರಿ: ತಿಳಿ; ಮೌನ: ನೀರವತೆ, ಮಾತಿಲ್ಲದ ಸ್ಥಿತಿ; ಮೇಣು: ಮತ್ತು, ಅಥವಾ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ಉಪೇಕ್ಷೆ:ಅಲಕ್ಷ್ಯ, ಕಡೆಗಣಿಸುವಿಕೆ; ಮುರಿ: ತುಂಡು, ಸೀಳು; ನುಡಿ: ಮಾತಾಡು; ಅಸಾಧ್ಯ: ಸಾಧ್ಯವಲ್ಲದ; ಸಮವರ್ತಿ: ತಾರತಮ್ಯ ಭಾವವಿಲ್ಲದವನು; ದೂತ: ಸೇವಕ; ಮುರುಕ: ಬಿಂಕ, ಬಿನ್ನಾಣ; ಮರೆ: ನೆನಪಿನಿಂದ ದೂರ ಮಾಡು; ಜರೆ: ಬಯ್ಯು; ಸಭೆ: ಓಲಗ;

ಪದವಿಂಗಡಣೆ:
ಅರಿದು +ಮೌನವೊ +ಮೇಣು +ಮಾನಿನಿ
ಒರಲುತಿರಲ್+ಎಂದಾದ್+ಉಪೇಕ್ಷೆಯೊ
ಮುರಿದು+ ನುಡಿವುದ್+ಅಸಾಧ್ಯವೋ +ಮೇಣ್+ಆವುದ್+ಇದರೊಳಗೆ
ಅರಿಯಿರೇ+ ಸಮವರ್ತಿ +ದೂತರ
ಮುರುಕವನು +ನೀವೇಕೆ +ನಿಮ್ಮನು
ಮರೆದಿರೆಂದು +ವಿಕರ್ಣ +ಜರೆದನು +ತತ್ಸಭಾಸದರ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೌನವೊ ಮೇಣು ಮಾನಿನಿ

ಪದ್ಯ ೨: ಸಭೆಯಲ್ಲಿದ್ದ ರಾಜರ ಮುಖಭಾವ ಹೇಗಿತ್ತು?

ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ (ಸಭಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಕಿವಿಯಲ್ಲಿ ಮುಖವಿಟ್ಟು ಮೆತ್ತಿಗೆ ಮಾತನಾಡುವ, ಎರದು ಕೈಗಳನ್ನು ಜೋಡಿಸಿ (ಮುಷ್ಟಿ) ಯನ್ನು ತೋರಿಸುವ, ಕಡೆಗಣ್ಣಿನ ಸನ್ನೆಗಳ, ಜೋಡುಗೈಗಳನ್ನು ಹಿಡಿದು ನಂಬಿಸುವ, ಮನಸ್ಸುಗಳು ಕೂಡುವ, ಅವಸರದಿಂದ ಸ್ನೇಹ ಮಾದಿಕೊಳ್ಳುವ, ಮಂತ್ರಿಗಳ ಮಾತನ್ನು ಕಡೆಗಣಿಸುವ ರಾಜರು ಯುದ್ಧಮಾದುವ ತವಕದಿಂದ ಕುದಿಯುತ್ತಿದ್ದರು.

ಅರ್ಥ:
ಕಿವಿ: ಕರ್ಣ; ಮೋರೆ: ಮುಖ; ಮುಷ್ಟಿ: ಕೈ, ಕರ; ಬವರಿ: ಕೆನ್ನೆಯ ಮೇಲಿನ ಕೂದಲು, ತಿರುಗುವುದು; ಬವರ: ಜಗಳ, ಪೈಪೋಟಿ; ಕಡೆಗಣ್ಣ: ಕಣ್ಣಿನ ಕೊನೆ/ಅಂಚು; ಸನ್ನೆ: ಗುರುತು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ನಂಬು: ವಿಶ್ವಾಸವಿಡು, ಭರವಸೆಯನ್ನು ಹೊಂದು, ನೆಚ್ಚು; ಮನ: ಮನಸ್ಸು; ಬೆಸುಗೆ: ; ಅವಸರ: ಬೇಗ; ಮೈತ್ರಿ: ಸ್ನೇಹ; ಮಂತ್ರಿ: ಸಚಿವ; ಪ್ರವರ: ಪ್ರಧಾನ ವ್ಯಕ್ತಿ, ಶ್ರೇಷ್ಠ; ವಚನ: ಮಾತು; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ರಣ: ಯುದ್ಧ; ತವಕ: ಬಯಕೆ, ಆತುರ; ಕಳವಳ:ಗೊಂದಲ; ಕೂಡೆ: ಜೊತೆ; ನೃಪ: ರಾಜ; ಕಟಕ: ಗುಂಪು;

ಪದವಿಂಗಡಣೆ:
ಕಿವಿವಳೆಯ+ ಮೋರೆಗಳ+ ಮುಷ್ಟಿಯ
ಬವರಿಗಳ +ಕಡೆಗಣ್ಣ +ಸನ್ನೆಯ
ಸವಡಿ+ಕೈಗಳ +ನಂಬುಗೆಯ +ಮನಮನದ +ಬೆಸುಗೆಗಳ
ಅವಸರದ +ಮೈತ್ರಿಗಳ +ಮಂತ್ರಿ
ಪ್ರವರ +ವಚನ+ಉಪೇಕ್ಷೆಗಳ +ರಣ
ತವಕದಲಿ +ಕಳವಳಿಸುತ್+ಇರ್ದುದು +ಕೂಡೆ +ನೃಪ+ಕಟಕ

ಅಚ್ಚರಿ:
(೧) ರಾಜರ ಭಾವನೆಗಳನ್ನು ಚಿತ್ರಿಸುವ ಪದ್ಯ

ಪದ್ಯ ೨೫: ಸಭೆಯಲ್ಲಿದ್ದ ವೀರರು ಅರ್ಜುನನಲ್ಲಿ ಏನನ್ನು ಕಂಡರು?

ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರವಿಕ್ರಮ
ವಿವನ ಕೊಂಡೆಯತನವಿವೇ ಸಾ
ಕಿವನು ಘಾಟದ ವೀರನೆಂದರು ವೀರರರ್ಜುನನ (ಆದಿ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಬರುವುದನ್ನು ಕಂಡ ವೀರರು ಇವನ ಗತಿ (ಬರುವ ಠೀವಿ), ಮುಖದ ಹಾವಭಾವ, ಮುಖದಲ್ಲಿದ್ದ ಉತ್ಸಾಹ, ಬಿಲ್ಲಿನ ಬಗ್ಗೆ ಇದ್ದ ಉಪೇಕ್ಷೆ (ಕಡೆಗಣಿಸುವಿಕೆ), ಜೋರು, ನಡೆಗೆಯಲ್ಲಿನ ದರ್ಪ, ಗಾಂಭೀರ್ಯ, ನಿರ್ಭೀತಿ, ದೋಷರಹಿತವಾದ ಕ್ಷಾತ್ರಶಕ್ತಿ, ಇವುಗಳನ್ನು ನೋಡಿ ಅಲ್ಲಿ ನೆರೆದಿದ್ದ ವೀರರು ಇವನು ಮಹಾವೀರನೆಂದರು.

ಅರ್ಥ:
ಗತಿ: ವೇಗ; ಮುಖ: ಆನನ; ಚೇಷ್ಟೆ: ಅಂಗಾಂಗಗಳ ಚಲನೆ; ಭಾವ: ಸ್ವರೂಪ; ಉತ್ಸಾಹ: ಹುಮ್ಮಸ್ಸು, ಚೈತನ್ಯ; ವಿಲಾಸ: ಸೊಬಗು; ಉಪೇಕ್ಷೆ: ಕಡೆಗಣಿಸುವಿಕೆ; ಭರ: ಜೋರು; ಗರುವಿಕೆ: ಗರ್ವ, ದರ್ಪ; ಗಮಕ: ಕ್ರಮ, ಬೆಡಗು, ಸೊಗಸು; ಅವಭೀತಿ: ನಿರ್ಭೀತಿ; ಭುಲ್ಲವಣೆ: ಅತಿಶಯ, ಹೆಚ್ಚಳ; ವಿಮಲ: ನಿರ್ಮಲ; ಕ್ಷತ್ರ: ಕ್ಷತ್ರಿಯ; ವಿಕ್ರಮ: ಶೌರಿ, ಪರಾಕ್ರಮಿ; ಘಾಟ: ಸಮರ್ಥ; ವೀರ: ಶೂರ;

ಪದವಿಂಗಡಣೆ:
ಇವನ +ಗತಿ +ಮುಖಚೇಷ್ಟೆ +ಭಾವೋ
ತ್ಸವ +ವಿಲಾಸವ್+ಉಪೇಕ್ಷೆ +ಭರ+ವಂ
ಘವಣೆ +ಗರುವಿಕೆ +ಗಮಕಭಾವ+ಅವಭೀತಿ +ಭುಲ್ಲವಣೆ
ಇವನ +ವಿಮಲ+ಕ್ಷತ್ರ+ವಿಕ್ರಮವ್
ಇವನ+ ಕೊಂಡೆಯತನವ್+ಇವೇ +ಸಾಕ್
ಇವನು +ಘಾಟದ +ವೀರನೆಂದರು +ವೀರರ್+ಅರ್ಜುನನ

ಅಚ್ಚರಿ:
(೧) ಇವನ – ೪ ಸಾಲಿನ ಮೊದಲ ಪದ
(೨) ಅರ್ಜುನನ ಹಾವಭಾವದ ವರ್ಣನೆ: ಗತಿ, ಮುಖಚೇಷ್ಟೆ, ಉತ್ಸಾಹ, ವಿಲಾಸ, ಉಪೇಕ್ಷೆ, ನಿರ್ಭೀತಿ, ಭರ, ಗರುವಿಕೆ, ಭುಲ್ಲವಣೆ, ವಿಮಲ, ವಿಕ್ರಮ