ಪದ್ಯ ೬೧: ಅರ್ಜುನನೇಕೆ ಕೊರಗಿದನು?

ಹೂಡಿಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯ ತೃಪ್ತನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೧ ಪದ್ಯ)

ತಾತ್ಪರ್ಯ:
ಜಗತ್ತನ್ನು ಹೂಡಿ ಅಲ್ಲಿ ಜೀವರೊಡನೆ ಸೇರಿ ವಿಷಯ ಭೋಗಗಳಿಂದ ಸಂತೋಷ ಪಡುವವನೂ, ಸೃಷ್ಟಿಯಾಗದ, ನಾಶವಾಗದ ಹೋಗಿ ಬಾರದಿರುವ ಕೂಡದ ಅಗಲದ, ನಿತ್ಯತೃಪ್ತನೂ ನಿರೂಢನೂ ಆದ ಶಿವನೊಡನೆ ನಾನು ಯುದ್ಧ ಮಾಡಿದೆನಲ್ಲವೇ ಎಂದು ಅರ್ಜುನನು ತನ್ನ ತಪ್ಪು ತಿಳುವಳಿಕೆಗಾಗಿ ಕೊರಗಿದನು.

ಅರ್ಥ:
ಹೂಡು: ಸಿದ್ಧಪಡಿಸು; ಜಗ: ಪ್ರಪಂಚ; ಜೀವರ: ಜೀವಿ; ಕೂಡೆ: ಜೊತೆ; ಬೆರಸು: ಕಲಸು; ಸಮಸ್ತ: ಎಲ್ಲಾ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಸೊಗಸು: ಎಲುವು; ಉಪಭೋಗ: ವಿಷಯಾನುಭವ; ಪ್ರಪಂಚ: ಜಗತ್ತು; ಅಳಿ: ಸಾವು, ನಾಶ; ಗಮಿಸು: ಚಲಿಸು; ಮರಳು: ಹಿಂದಿರುಗು; ಕೂಡು: ಜೊತೆಯಾಗು; ಅಗಲ: ವಿಸ್ತಾರ; ನಿತ್ಯ: ಯಾವಾಗಲು; ತೃಪ್ತ: ಸಂತುಷ್ಟಿ; ನಿರೂಢಿ: ಸಾಮಾನ್ಯ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಹೂಡಿ+ಜಗವನು+ ಜಗದ+ ಜೀವರ
ಕೂಡೆ +ಬೆರಸಿ +ಸಮಸ್ತ+ವಿಷಯದೊಳ್
ಆಡಿ +ಸೊಗಸುವನ್+ಆತನ್+ಉಪಭೋಗ +ಪ್ರಪಂಚದಲಿ
ಹೂಡದ್+ಅಳಿಯದ +ಗಮಿಸಿ +ಮರಳದ
ಕೂಡದ್+ಅಗಲದ +ನಿತ್ಯ +ತೃಪ್ತ+ನಿ
ರೂಢನ್+ಒಡನ್+ಎಚ್ಚಾಡಿದೆವಲಾ +ಶಿವ +ಶಿವಾಯೆಂದ

ಅಚ್ಚರಿ:
(೧) ಶಂಕರನ ಗುಣಗಳ ವರ್ಣನೆ: ನಿರೂಢ, ಹೂಡದಳಿಯದ, ಕೂಡನಗಲದ, ನಿತ್ಯತೃಪ್ತ, ಗಮಿಸಿ ಮರಳದ

ಪದ್ಯ ೧೮: ಯುಧಿಷ್ಠಿರನು ಧೌಮ್ಯನಿಗೆ ಏನೆಂದು ಹೇಳಿದ?

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತವುಪಭೋಗವೆನಗೆಂದ (ಸಭಾ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೌಮ್ಯನು ಊರಿಗೆ ತೆರಳಿದ ಮೇಲೆ ಶಾಂತಿಕಾರ್ಯವನ್ನು ಮಾಡಿಸೋಣ ಎಂದುದಕ್ಕೆ, ಯುಧಿಷ್ಠಿರನು ಊರಿಗೆ ತೆರಳಿದ ಮೇಲೆ ಶಾಂತಿ ಕಾರ್ಯ ಮಾಡಿಸಿ ಏನು ಪ್ರಯೋಜನ. ಅಲ್ಲಿರುವಾಗ ನಾರದನು ನನ್ನ ಸ್ವಪ್ನಗಳ ವಿಷಯವನ್ನು ಕೇಳಿ ಇದು ನಿಮ್ಮ ಐಶ್ವರ್ಯನಾಶವನ್ನು ಸೂಚಿಸುತ್ತದೆ ಎಂದನು. ನಿನ್ನೆ ರಾತ್ರಿ ಕನಸಿನಲ್ಲಿ ಬೆಟ್ಟ ಅಡವಿಗಳಲ್ಲಿ ತಿರುಗಾಡಿದಂತೆ ಕನಸನ್ನು ಕಂಡೆ. ದೈವಚಿತ್ತದಿಂದ ಬಂದುದನ್ನು ಉಪಭೋಗಿಸೋಣ ಎಂದನು.

ಅರ್ಥ:
ಪುರ: ಊರು; ಒರೆ: ಹೇಳು; ಉತ್ಪಾತ: ಅಪಶಕುನ; ಪ್ರಬಂಧ: ವ್ಯವಸ್ಥೆ, ಏರ್ಪಾಡು; ಹೊರಿಗೆ: ಭಾರ, ಹೊರೆ; ಐಶ್ವರ್ಯ: ಸಂಪತ್ತು, ಸಿರಿ; ವಿಧ್ವಂಸಕ: ವಿನಾಶ; ಇರುಳು: ಕತ್ತಲೆ; ಸ್ವಪ್ನ: ಕನಸು; ಕಾನನ: ಅಡವಿ; ಗಿರಿ: ಬೆಟ್ಟ; ಪರಿಭ್ರಮಣೆ: ತಿರುಗು; ಚಿಂತೆ: ಯೋಚನೆ; ಭರಿತ: ಮುಳುಗು; ದೈವ: ಭಗವಂತ; ಕೃತ: ನಿರ್ಮಿಸಿದ; ಉಪಭೋಗ: ವಿಷಯಾನುಭವ;

ಪದವಿಂಗಡಣೆ:
ಪುರದೊಳ್+ಎಲ್ಲಿಯ +ಶಾಂತಿ +ನಾರದನ್
ಒರೆದನ್+ಉತ್ಪಾತ +ಪ್ರಬಂಧದ
ಹೊರಿಗೆಯನು +ನಿಮ್+ಐಶ್ವರಿಯ +ವಿಧ್ವಂಸಕರವೆಂದು
ಇರುಳು +ನಾನಾ +ಸ್ವಪ್ನ+ಕಾನನ
ಗಿರಿ+ ಪರಿಭ್ರಮಣೈಕ+ ಚಿಂತಾ
ಭರಿತನಾದೆನು+ ದೈವಕೃತವ್+ಉಪಭೋಗವೆನಗೆಂದ

ಅಚ್ಚರಿ:
(೧) ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವ ನುಡಿ – ದೈವಕೃತವುಪಭೋಗವೆನಗೆಂದ

ಪದ್ಯ ೧೧: ಅರ್ಜುನನು ತನ್ನ ತಮ್ಮಂದಿರಿಗೆ ಏನೆಂದು ತಿಳುಹಿದನು?

ರಾಗಲೋಭವ್ಯಾಪ್ತಿಯಲಿ ನೀ
ವೀ ಗುರುವಿಗಳುಪುವರೆ ಸಲೆ ಧ
ರ್ಮಾಗಮವನಾಚರಿಸುವುದಲೇ ನಮ್ಮನುಷ್ಠಾನ
ಈಗಳೀ ಗುರುವಚನ ಧರ್ಮ
ತ್ಯಾಗವೇನಿದು ಧರ್ಮವೇ ಉಪ
ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ (ಆದಿ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ತಾಯಿಯ ಮಾತಿನ ಹಿರಿಮೆಯನ್ನು ವಿವರಿಸುತ್ತಾ, ಅರ್ಜುನನು ತನ್ನ ಸಹೋದರರಿಗೆ, ನೀವೆಲ್ಲರು ರಾಗ, ಲೋಭ ಮುಂತಾದ ಅರಿಷಡ್ವರ್ಗಗಳಿಗೆ ಒಳಗಾಗಿ ಗುರುಮಾತಾದ ತಾಯಿಯ ಮಾತನ್ನು ಅಲ್ಲಗಳೆಯುವುದೇ? ಧರ್ಮ, ಆಗಮ ಮುಂತಾದ ಶಾಸ್ತ್ರಸಮ್ಮತವಾದ ಕಾರ್ಯವನ್ನು ಮಾಡುವುದಲ್ಲವೆ ನಮ್ಮ ಅನುಷ್ಠಾನ? ಈಗ ಗುರುವಿನ ಮಾತನ್ನು ಮೀರುವುದು ಧರ್ಮವಾದೀತೆ? ತಾಯಿಯ ಮಾತಿನಂತೆ ನಾವೈವರೂ ಇವಲನ್ನು ಭೋಗಿಸೋಣ ಎಂದು ಅರ್ಜುನನು ತನ್ನ ಸಹೋದರರಿಗೆ ತಿಳಿಸಿದನು.

ಅರ್ಥ:
ರಾಗ: ಒಲುಮೆ, ಪ್ರೀತಿ; ಲೋಭ: ಅತಿಯಾದ ಆಸೆ; ವ್ಯಾಪ್ತಿ: ವಿಸ್ತಾರ; ಗುರು: ಆಚಾರ್ಯ; ಅಳುಪು: ಬಯಕೆ;ಸಲೆ: ಸದಾ, ಯಾವಾಗಲು; ಧರ್ಮ: ಧಾರಣಮಾಡಿರುವುದು, ನಿಯಮ, ಆಚಾರ; ಆಗಮ: ಜ್ಞಾನ, ತಿಳಿವಳಿಕೆ; ಆಚರಿಸು: ಪಾಲಿಸು; ಅನುಷ್ಠಾನ: ಪಾಲನೆ; ವಚನ: ನುಡಿ; ತ್ಯಾಗ: ತೊರೆಯುವುದು; ಉಪ: ಹತ್ತಿರ; ಭೋಗ: ಸುಖ, ಸೌಖ್ಯ; ತಿಳುಗು: ತಿಳಿವಳಿಕೆ;

ಪದವಿಂಗಡಣೆ:
ರಾಗ+ಲೋಭ+ವ್ಯಾಪ್ತಿಯಲಿ +ನೀವ್
ಈ+ ಗುರುವಿಗ್+ಅಳುಪುವರೆ +ಸಲೆ +ಧ
ರ್ಮ+ಆಗಮವನ್+ಆಚರಿಸುವುದಲೇ +ನಮ್ಮ+ಅನುಷ್ಠಾನ
ಈಗಳ್+ಈ+ ಗುರುವಚನ+ ಧರ್ಮ
ತ್ಯಾಗ+ವೇನಿದು +ಧರ್ಮವೇ +ಉಪ
ಭೋಗವ್+ಐವರಿಗೆಂದು+ ತಿಳುಹಿದನ್+ಅವರನ್+ಆ+ ಪಾರ್ಥ

ಅಚ್ಚರಿ:
(೧) ಈ – ೨, ೪ ಸಾಲಿನ ಮೊದಲ ಸ್ವರ ಪದ
(೨) ಗುರು – ೨, ೪ ಸಾಲಿನ ೨ ಪದವಾಗಿರುವುದು
(೩) ಧರ್ಮ – ೨, ೪ ಸಾಲಿನ ಕೊನೆಯ ಪದ