ಪದ್ಯ ೨೩: ಧರ್ಮಜನೇಕೆ ಪಟ್ಟಾಭಿಷೇಕ ಬೇಡವೆಂದನು?

ಎನಲು ನಗುತೆಂದನು ಮಹೀಪತಿ
ವಿನಯ ಮಧುರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಚನವೆ
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ಸಾಕುಪಚಾರ ನಮಗೇಕೆಂದನಾ ಭೂಪ (ವಿರಾಟ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮರಾಯನು ನಗುತ್ತಾ, ದೊರೆಯೇ ಮಧುರವಾದ ವಿನಯರಸದಿಮ್ದ ಅಭಿಷೇಕ ಮಾಡಿದೆ, ಮತ್ತೆ ಪಟ್ಟಾಭಿಷೇಕದ ಅಗತ್ಯವಿಲ್ಲ (ಅದು ದ್ವಿರುಕ್ತಿಯಾಗುತ್ತದೆ), ನೀನು ನಮ್ಮವನು, ಈ ದೇಶ ನಮ್ಮದು, ಈ ಜನರು ನಮ್ಮವರು ಎನ್ನುವ ಮಾತೇ ಸಾಕು, ಉಪಚಾರದ ಅಗತ್ಯವಿಲ್ಲ ಎಂದು ವಿರಾಟನಿಗೆ ಹೇಳಿದನು.

ಅರ್ಥ:
ನಗು: ಸಂತಸ; ಮಹೀಪತಿ: ರಾಜ; ವಿನಯ: ಸೌಜನ್ಯ; ಮಧುರ: ಸಿಹಿಯಾದ; ರಸ: ಅಮೃತ; ಅಭಿಷೇಕ: ಮಂಗಳ ಸ್ನಾನ; ಉಕ್ತ: ಮಾತು; ಅಭಿಷೇಚನ: ಅಭಿಷೇಕ; ಜನ: ಮನುಷ್ಯ; ಧರಿತ್ರಿ: ಭೂಮಿ; ನೆನಹು: ನೆನಪು; ಸಾಕು: ನಿಲ್ಲಿಸು; ಉಪಚಾರ: ಸತ್ಕಾರ; ಭೂಪ: ರಾಜ;

ಪದವಿಂಗಡಣೆ:
ಎನಲು +ನಗುತ್+ಎಂದನು+ ಮಹೀಪತಿ
ವಿನಯ+ ಮಧು+ರಸಾಭಿಷೇಕವನ್
ಎನಗೆ +ಮಾಡಿದೆ +ಸಾಕು +ಪುನರ್+ಉಕ್ತಾಭಿಷೇಚನವೆ
ಜನವಿದ್+ಎಮ್ಮದು+ ನೀನು+ ನಮ್ಮಾ
ತನು +ಧರಿತ್ರಿಯಿದ್+ಎಮ್ಮದ್+ಎಂಬೀ
ನೆನಹು+ ಸಾಕ್+ಉಪಚಾರ +ನಮಗೇಕೆಂದನಾ+ ಭೂಪ

ಅಚ್ಚರಿ:
(೧) ಮಹೀಪತಿ, ಭೂಪ – ೧, ೬ ಸಾಲಿನ ಕೊನೆ ಪದ, ಸಮನಾರ್ಥಕ ಪದ
(೨) ರಸಾಭಿಷೇಕ, ಉಕ್ತಾಭಿಷೇಚನ – ಪದಗಳ ಬಳಕೆ

ಪದ್ಯ ೧೯: ಅರ್ಜುನನು ಊರ್ವಶಿಯನ್ನು ಹೇಗೆ ನೋಡಿದನು?

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವ್ ಕೃತಾರ್ಥರಲ
ಏನುಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ (ಅರಣ್ಯ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಊರ್ವಶಿಯನ್ನು ಕಂಡ ಅರ್ಜುನನು ಆಕೆಯ ಬಳಿ ಬಂದು, ಏನು ನೀವು ಇತ್ತ ದಯಮಾಡಿಸಿದಿರಿ, ಮಹಾಮಾನನಿಧಿಯಾದವರು ನೀವು, ದಯೆಯಿಟ್ಟು ಆಸೀನರಾಗಿರಿ, ನೀವು ಇಂದ್ರನ ಮಹಿಳೆ, ನಮಸ್ಕಾರಕ್ಕೆ ಯೋಗ್ಯರಾದವರು, ನಿಮ್ಮ ಅಪ್ಪಣೆಯನ್ನು ನೀಡಿರಿ, ಏನು ಹೇಳಲು ಬಂದಿರಿ, ನಾನು ನಿಮಗೆ ಮಗ, ಉಪಚಾರದ ಮಾತುಗಳನ್ನು ಬಳಸದೆ ಸಂತೋಷದಿಂದ ಹೇಳಿರಿ ಎಂದು ಅರ್ಜುನನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿಸಿದಿರಿ, ಬಂದಿರಿ; ಮಾನ: ಗೌರವ, ಮರ್ಯಾದೆ; ನಿಧಿ: ನಿಕ್ಷೇಪ, ಸಮುದ್ರ; ಮಾನನಿಧಿ: ಶ್ರೇಷ್ಠವಾದವ; ಕುಳ್ಳಿರಿ: ಆಸೀನರಾಗಿರಿ; ಸುರೇಂದ್ರ: ಇಂದ್ರ; ಸುರ: ದೇವತೆ; ಇಂದ್ರ: ಒಡೆಯ; ಮಾನಿನಿ: ಹೆಣ್ಣು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಕೃತಾರ್ಥ: ಧನ್ಯ; ಬೆಸಸು: ಆಜ್ಞಾಪಿಸು; ಹದ: ರೀತಿ, ಸರಿಯಾದ ಸ್ಥಿತಿ; ಮಗ: ಸುತ; ಉಪಚಾರ: ಸತ್ಕಾರ; ಮನ: ಮನಸ್ಸು; ಅನುರಾಗ: ಪ್ರೀತಿ; ಅರುಹು: ತಿಳಿಸು, ಹೇಳು;

ಪದವಿಂಗಡಣೆ:
ಏನು +ಬಿಜಯಂಗೈದಿರ್+ಇತ್ತಲು
ಮಾನನಿಧಿ+ ಕುಳ್ಳಿರಿ +ಸುರೇಂದ್ರನ
ಮಾನಿನಿಯರ್+ಅಭಿವಂದನೀಯರು +ನಾವ್+ ಕೃತಾರ್ಥರಲ
ಏನು+ಬೆಸಸ್+ಎನಗೇನು +ಹದ +ನಿಮಗ್
ಆನು+ ಮಗನ್+ಉಪಚಾರವೇಕೆ+ ಮ
ನೋನುರಾಗದಲ್+ಅರುಹಿ+ಎಂದನು +ಪಾರ್ಥನ್+ಊರ್ವಶಿಗೆ

ಅಚ್ಚರಿ:
(೧) ಮಾನನಿಧಿ, ಮಾನಿನಿ – ಪದಗಳ ಬಳಕೆ