ಪದ್ಯ ೪೫: ಧೃತರಾಷ್ಟ್ರನು ಯಾರನ್ನು ಸಂತೈಸಿಸಲು ಧರ್ಮಜನಿಗೆ ಹೇಳಿದನು?

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ (ಗದಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಧರ್ಮಜನನ್ನು ಉದ್ದೇಶಿಸುತ್ತಾ, ಧರ್ಮಜ ನೀನಾಡಿದ ಮಾತು ಒಳಿತಾಗಿದೆ, ಇದು ನಮಗೆ ಸಾಕು, ನಿಮ್ಮ ತಾಯಿಯ ಉದ್ರೇಕವನ್ನು ನಿವಾರಿಸು. ಶೋಕವೊಂದು ಕಡೆ, ಕೋಪವೊಂಡುಕಡೆ, ಅವುಗಳ ಉಪಟಲವನ್ನು ಆಕೆ ತಡೆದುಕೊಳ್ಳಲಾರಳು ಎಂದು ಹೇಳಿ ವ್ಯಾಸ ವಿದುರರಿಗೆ ಇವರನ್ನು ಕರೆದುಕೊಂಡು ಹೋಗಿ ಆಕೆಯನ್ನು ತೋರಿಸಿರಿ ಎಂದನು.

ಅರ್ಥ:
ಸಾಕು: ನಿಲ್ಲು; ಅಬಲೆ: ಹೆಣ್ಣು; ಉದ್ರೇಕ: ಉದ್ವೇಗ, ತಳಮಳ; ಹಿರಿಯ: ದೊಡ್ಡ; ತಾಯಿ: ಅಮ್ಮ; ಪರಿಹರಿಸು: ಶಮನಗೊಳಿಸು; ಶೋಕ: ದುಃಖ; ಕ್ರೋಧ: ಕೋಪ; ಉಪಟಳ: ಕಿರುಕುಳ; ಸೈರಿಸು: ಸಮಾಧಾನ ಪಡಿಸು; ಅರಿ: ತಿಳಿ; ಆಕೆವಾಳ: ವೀರ, ಪರಾಕ್ರಮಿ; ಕಾಣಿಸು: ನೋದು;

ಪದವಿಂಗಡಣೆ:
ಸಾಕ್+ಇದಂತಿರಲ್+ಅಬಲೆಯರೊಳ್
ಉದ್ರೇಕಿ +ನಿಮ್ಮಯ +ಹಿರಿಯ +ತಾಯ್
ಉದ್ರೇಕವನು +ಪರಿಹರಿಸು +ಶೋಕ+ಕ್ರೋಧದ್+ಉಪಟಳಕೆ
ಆಕೆ +ಸೈರಿಸಲ್+ಅರಿಯಳ್+ಅರಿವಿನೊಳ್
ಆಕೆವಾಳರು+ ತಿಳಿಹಿ +ತಮ್ಮನನ್
ಆಕೆಯನು +ಕಾಣಿಸುವುದೆಂದನು +ವ್ಯಾಸ +ವಿದುರರಿಗೆ

ಅಚ್ಚರಿ:
(೧) ಆಕೆ, ಆಕೆವಾಳ, ಆಕೆಯನು – ಆಕೆ ಪದದ ಬಳಕೆ
(೨) ಗಾಂಧಾರಿಯ ಸ್ಥಿತಿ – ನಿಮ್ಮಯ ಹಿರಿಯ ತಾಯುದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳ್

ಪದ್ಯ ೬: ಸಚಿವರೇಕೆ ಧರ್ಮಜನ ನಾಸಿಕದ ಮೇಲೆ ಕೈಯಿಟ್ಟರು?

ಹೊಳಲು ತಲೆಕೆಳಕಾಯ್ತು ಹುಯ್ಯಲು
ತಳಿತುದೊಳತೋಟಿಯಲಿ ಕೆತ್ತವು
ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು
ಎಲೆಲೆ ಕೆಟ್ಟುದು ಕಟಕವೆಂದು
ಮ್ಮಳಿಸಿದರು ಸಚಿವರು ಮಹೀಪತಿ
ಯುಳಿವನರಿಯಲು ನಾಸಿಕದಲಾರೈದರುಸುರುಗಳ (ದ್ರೋಣ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಪಾಂಡವರ ಪಾಳೆಯ ತಲೆಕೆಳಗಾಯ್ತು, ಅಲ್ಲಲ್ಲಿ ಕೂಗು ಕೇಕೆ ಜಗಳಗಳಾರಂಭವಾದವು. ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿಕೊಂಡರು. ಉದ್ರೇಕಿಗಳ ಕೈವಾಡ ಹೆಚ್ಚಿತು. ಸೈನ್ಯವು ಕೆಟ್ಟಿತೆಂದು ದುಃಖಿಸಿದ ಸಚಿವರು ಧರ್ಮಜನ ಮೂಗಿನ ಬಳಿ ಬೆರಳಿಟ್ಟು ಉಸಿರಾಡುವುದೇ ಎಂದು ಪರೀಕ್ಷಿಸಿದರು.

ಅರ್ಥ:
ಹೊಳಲು: ನಗರ, ಪ್ರಕಾಶ; ತಲೆಕೆಳಗೆ: ಉಲ್ಟ, ಮೇಲೆಕೆಳಗೆ; ಹುಯ್ಯಲು: ಪೆಟ್ಟು, ಹೊಡೆತ; ತಳಿತ: ಚಿಗುರಿದ; ತೋಟಿ:ಕಲಹ, ಜಗಳ; ಕೆತ್ತು: ನಡುಕ, ಸ್ಪಂದನ; ನಿಳಯ: ಮನೆ; ಕವಾಟ: ಬಾಗಿಲು; ಉದ್ರೇಕ: ಉದ್ವೇಗ, ಆವೇಗ; ಮಯ: ತುಂಬಿದ; ಕೆಟ್ಟುದು: ಸರಿಯಿಲ್ಲದ; ಕಟಕ: ಸೈನ್ಯ; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು; ಸಚಿವ: ಮಂತ್ರಿ; ಮಹೀಪತಿ: ರಾಜ; ಉಳಿವು: ಜೀವಿಸು; ಅರಿ: ತಿಳಿ; ನಾಸಿಕ: ಮೂಗು; ಉಸುರು: ಮಾತನಾಡು; ಪ್ರಾಣ;

ಪದವಿಂಗಡಣೆ:
ಹೊಳಲು+ ತಲೆಕೆಳಕಾಯ್ತು +ಹುಯ್ಯಲು
ತಳಿತುದ್+ಒಳತೋಟಿಯಲಿ +ಕೆತ್ತವು
ನಿಳಯ +ನಿಳಯ +ಕವಾಟವ್+ಉದ್ರೇಕಿಗಳ +ಮಯವಾಯ್ತು
ಎಲೆಲೆ +ಕೆಟ್ಟುದು +ಕಟಕವೆಂದ್
ಉಮ್ಮಳಿಸಿದರು +ಸಚಿವರು +ಮಹೀಪತಿ
ಉಳಿವನ್+ಅರಿಯಲು +ನಾಸಿಕದಲ್+ಆರೈದರ್+ಉಸುರುಗಳ

ಅಚ್ಚರಿ:
(೧) ಧರ್ಮಜನ ಸ್ಥಿತಿಯನ್ನು ವರ್ಣಿಸುವ ಸಾಲು – ಮಹೀಪತಿಯುಳಿವನರಿಯಲು ನಾಸಿಕದಲಾರೈದರುಸುರುಗಳ

ಪದ್ಯ ೩: ಧೃತರಾಷ್ಟ್ರನು ಸಂಜಯನಿಗೆೇನು ಹೇಳಿದನು?

ಸಾಕು ಸಂಜಯ ನುಡಿಯ ಖಡ್ಗದ
ಲೇಕೆ ಗಂಟಲ ಕೊಯ್ವೆ ತಾನವಿ
ವೇಕದಲುಪಾರ್ಜಿಸಿದ ದುಷ್ಕೃತ ಫಲವೆ ತನಗಾಯ್ತು
ಸಾಕದಂತಿರಲಿನ್ನದೇಹರಿ
ಶೋಕಿಸುವೆನಿಲ್ಲಿಂದ ಮೇಲು
ದ್ರೇಕಿ ಕೌರವನೇನ ನೆಗಳಿದ ಹದನ ಹೇಳೆಂದ (ದ್ರೋಣ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನ ಮಾತನ್ನು ಕೇಳಿ ಧೃತರಾಷ್ಟ್ರನು, ಸಾಕು ಸಂಜಯ ಮಾತಿನ ಖಡ್ಗದಿಂದ ನನ್ನ ಕತ್ತನ್ನು ಏಕೆ ಕತ್ತರಿಸುವೆ? ಅವಿವೇಕದಿಂದ ಮಾಡಿದ ಪಾಪದ ಫಲ ನನಗೆ ಬಂದಿದೆ. ಇನ್ನು ಈ ಮಾತು ಸಾಕು, ಎಷ್ಟೆಂದು ಶೋಕಿಸಲಿ? ಉದ್ರೇಕಿಯಾದ ಕೌರವನು ಮುಂದೇನು ಮಾಡಿದನೆನ್ನುವುದನ್ನು ಹೇಳು ಎಂದು ಕೇಳಿದನು.

ಅರ್ಥ:
ಸಾಕು: ನಿಲ್ಲಿಸು; ನುಡಿ: ಮಾತು; ಖಡ್ಗ: ಕತ್ತಿ; ಗಂಟಲು: ಕೊರಳು; ಕೊಯ್ವೆ: ಸೀಳು; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಅರ್ಜಿಸು: ಸಂಪಾದಿಸು; ದುಷ್ಕೃತ: ಕೆಟ್ಟ ಕೆಲಸ; ಫಲ: ಪ್ರಯೋಜನ; ಉದ್ರೇಕ: ಉದ್ವೇಗ, ಆವೇಗ; ನೆಗಳು: ಮಾಡು, ಆಚರಿಸು; ಶೋಕ: ನೋವು, ದುಃಖ; ಹದ: ಸ್ಥಿತಿ; ಹೇಳು: ತಿಳಿಸು;

ಪದವಿಂಗಡಣೆ:
ಸಾಕು +ಸಂಜಯ +ನುಡಿಯ +ಖಡ್ಗದ
ಲೇಕೆ +ಗಂಟಲ +ಕೊಯ್ವೆ +ತಾನ್+ಅವಿ
ವೇಕದಲ್+ಉಪಾರ್ಜಿಸಿದ +ದುಷ್ಕೃತ +ಫಲವೆ+ ತನಗಾಯ್ತು
ಸಾಕ್+ಅದಂತಿರಲ್+ಇನ್ನದೇಹರಿ
ಶೋಕಿಸುವೆನ್+ಇಲ್ಲಿಂದ +ಮೇಲ್
ಉದ್ರೇಕಿ +ಕೌರವನ್+ಏನ +ನೆಗಳಿದ+ ಹದನ +ಹೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ನುಡಿಯ ಖಡ್ಗದಲೇಕೆ ಗಂಟಲ ಕೊಯ್ವೆ