ಪದ್ಯ ೫: ದುರ್ಯೋಧನನು ಯಾವ ಭೂಮಿಯನ್ನು ಪಾಂಡವರಿಗೆ ಕೊಟ್ಟನು?

ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮ ಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ಧಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ (ಉದ್ಯೋಗ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧ ಭೂಮಿಯನ್ನು ನಾನು ನಿಮಗಾಗಿ ಕೇಳಿದರೆ, ಅವನು ನಿಮಗೆ ಯುದ್ಧಭೂಮಿಯನ್ನು ನೀಡಿದನು. ನಿಮ್ಮಲ್ಲಿ ಅವನಿಗೆ ಸ್ವಲ್ಪವೂ ಪ್ರೇಮವಿಲ್ಲ. ಸಂಧಿಯೆನ್ನುವುದರಲ್ಲಿ ಹುರುಳಿಲ್ಲ. ನೀವು ಚತುರರಾದರೆ, ಕುರುಕ್ಷೇತ್ರದಲ್ಲಿ ಅವರ ಸೈನ್ಯಕ್ಕೆ ಪ್ರತಿಯಾಗಿ ಸೈನ್ಯವನ್ನು ಜೋಡಿಸುವುದು ಸರಿಯಾದ ಮಾರ್ಗ ಎಂದು ಕೃಷ್ಣನು ಹೇಳಿದನು.

ಅರ್ಥ:
ಭೂಮಿ: ಧರಿತ್ರಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಬೇಡು: ಕೇಳು; ಮಹೀಪತಿ: ರಾಜ; ಮಹೀ: ಭೂಮಿ; ಸಂಗ್ರಾಮ: ಯುದ್ಧ; ಕೊಡು: ನೀಡು; ಅಪ್ರಿಯ: ಪ್ರೀತಿಯಿಲ್ಲದವ; ಸಾಮ: ಸಂಧಿ; ಸೊಗಸು: ಚೆಲುವು; ನಿಸ್ಸೀಮ: ಪ್ರವೀಣ; ಜೋಡಿಸು: ಸೇರಿಸು; ಉದ್ಧಾಮ: ಶ್ರೇಷ್ಠ; ಕುಳ: ಕುಲ, ವಂಶ; ಇದಿರು: ಎದುರು; ಪತಿಕರಿಸು: ಅಂಗೀಕರಿಸು;

ಪದವಿಂಗಡಣೆ:
ಭೂಮಿಯೊಳಗ್+ಅರ್ಧವನು +ಬೇಡಿದೊಡ್
ಆ +ಮಹೀಪತಿ+ ಐವರಿಗೆ+ ಸಂ
ಗ್ರಾಮ +ಭೂಮಿಯನೈದೆ+ ಕೊಟ್ಟನು +ನಿಮ್ಮೊಳ್+ಅಪ್ರಿಯನು
ಸಾಮದಲಿ +ಸೊಗಸಿಲ್ಲ +ನೀವ್ +ನಿ
ಸ್ಸೀಮರಾದೊಡೆ +ಜೋಡಿಸುವುದ್+ಉ
ದ್ಧಾಮ +ಕುರುಭೂಮಿಯಲಿ +ಕುಳವರಿದವರ +ಪತಿಕರಿಸಿ

ಅಚ್ಚರಿ:
(೧) ಭೂಮಿ, ಮಹೀ – ಸಮನಾರ್ಥಕ ಪದ
(೨) ಸಾಮ, ನಿಸ್ಸೀಮ, ಸಂಗ್ರಾಮ, ಉದ್ಧಾಮ – ಪ್ರಾಸ ಪದಗಳು