ಪದ್ಯ ೨೫: ಪಾಂಡವ ಸೈನ್ಯವನ್ನು ದ್ರೋಣರು ಹೇಗೆ ನಾಶ ಮಾಡಿದರು?

ಉದಧಿಯುದರದೊಳಿಳಿದು ತೆರೆಗಳ
ನೊದೆವ ಮಂದರದಂತೆ ಮದಕರಿ
ಕದಳಿಯಲಿ ಕೈಮಾಡುವಂತಿರೆ ಪರರ ಥಟ್ಟಿನಲಿ
ಹೊದರ ಹರೆಗಡಿದೌಕಿದನು ತೋ
ಕಿದನು ಸುಭಟರ ಜೀವವನು ಹಳೆ
ವಿದಿರಮೆಳೆಯಲಿ ಮೊಳಗಿದುರಿಯವೊಲುರುಹಿದನು (ದ್ರೋಣ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಾಳದಲ್ಲಿ ತೆರೆಗಳಿಗೆ ಬೆದರದೆ ಕಡೆಯುವ ಮಂದರ ಪರ್ವತದಂತೆ, ಆನೆಯು ಬಾಳೆಯ ತೋಟವನ್ನು ಮುರಿಯುವಮ್ತೆ, ಪಾಂಡವ ಸೈನ್ಯದಲ್ಲಿ ಯೋಧರ ಗುಂಪುಗಳನ್ನು ಕಡಿದನು. ಬಾಣ ಪ್ರಯೋಗದಿಂದ ವೀರರ ಪ್ರಾಣಗಳನ್ನು ಕಳೆದನು. ಹಳೆಯ ಬಿದಿರ ಗುಂಪಿನಲ್ಲಿ ಬೆಂಕಿ ಹಬ್ಬಿ ಸುಟ್ಟಂತೆ ಪಾಂಡವ ಸೈನ್ಯವನ್ನು ದ್ರೋಣನು ನಾಶ ಮಾಡಿದನು.

ಅರ್ಥ:
ಉದಧಿ: ಸಾಗರ; ಉದರ: ಹೊಟ್ಟೆ; ಇಳಿ: ಬಾಗು, ಕೆಳಕ್ಕೆ ಹೋಗು; ತೆರೆ: ಅಲೆ; ಒದೆ: ನೂಕು; ಮಂದರ: ಬೆಟ್ಟ; ಮದ: ಮತ್ತು, ಅಮಲು; ಕರಿ: ಆನೆ; ಕದಳಿ: ಬಾಳೆ; ಕೈಮಾಡು: ಹೊಡೆ; ಪರರು: ಹೊರಗಿನವರು; ಥಟ್ಟು: ಗುಂಪು; ಹೊದರು: ಗುಂಪು, ಸಮೂಹ; ಹರೆ: ವ್ಯಾಪಿಸು, ವಿಸ್ತರಿಸು; ಕಡಿ: ಸೀಳು; ಔಕು: ನೂಕು; ತೋಕು: ಎಸೆ, ಪ್ರಯೋಗಿಸು; ಸುಭಟ: ಸೈನಿಕ; ಜೀವ: ಪ್ರಾಣ; ಹಳೆ: ಪುರಾತನ; ಬಿದಿರ: ಚೆದರು, ಹರಡು; ಬೊಂಬು; ಮೆಳೆ: ಗಿಡದ ಪೊದರು; ಮೊಳಗು: ಧ್ವನಿ, ಸದ್ದು, ವಿಜೃಂಭಿಸು; ಉರಿ: ಬೆಂಕಿ; ಉರುಹು: ಸುಡು, ತಾಪಗೊಳಿಸು;

ಪದವಿಂಗಡಣೆ:
ಉದಧಿ+ಉದರದೊಳ್+ಇಳಿದು +ತೆರೆಗಳನ್
ಒದೆವ +ಮಂದರದಂತೆ +ಮದಕರಿ
ಕದಳಿಯಲಿ +ಕೈಮಾಡುವಂತಿರೆ +ಪರರ +ಥಟ್ಟಿನಲಿ
ಹೊದರ+ ಹರೆ+ಕಡಿದ್+ಔಕಿದನು +ತೋ
ಕಿದನು +ಸುಭಟರ +ಜೀವವನು +ಹಳೆ
ವಿದಿರ+ಮೆಳೆಯಲಿ +ಮೊಳಗಿದ್+ಉರಿಯವೊಲ್+ಉರುಹಿದನು

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳೆವಿದಿರಮೆಳೆಯಲಿ ಮೊಳಗಿದುರಿಯವೊಲುರುಹಿದನು, ಉದಧಿಯುದರದೊಳಿಳಿದು ತೆರೆಗಳನೊದೆವ ಮಂದರದಂತೆ, ಮದಕರಿ ಕದಳಿಯಲಿ ಕೈಮಾಡುವಂತಿರೆ

ಪದ್ಯ ೩೭: ವ್ಯಾಸರು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದರು?

ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹ ಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನ್ರ್ಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ (ದ್ರೋಣ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಮುನಿವರ್ಯರೇ, ಹಿಂದಿನ ರಾಜರಲ್ಲಿ ಮೃತ್ಯುವಿಗೆ ಕೈವಶರಾದ ರಾಜರಾರು? ಧರ್ಮಜನ ಪ್ರಶ್ನೆಯನ್ನು ಕೇಳಿದ ಪರಮದಯಾಳುವಾದ ವ್ಯಾಸರು ಹದಿನಾರು ರಾಜರ ಕಥೆಯನ್ನು ಹೇಳಿದನು. ಅವರ ಕಥೆಗಳು ಶೋಕವೆಂಬ ಕಾಡನ್ನು ನಿವಾರಿಸುವ ವಡಬಾಗ್ನಿಯಂತಿತ್ತು.

ಅರ್ಥ:
ಮೃತ್ಯು: ಮರಣ; ಕೈವಶ: ಬಂಧನ; ಅರುಹು: ಹೇಳು; ಬೇಹುದು: ಬೇಕು; ಮೇದಿನಿ: ಭೂಮಿ; ಮೇದಿನೀಶ: ರಾಜ; ಬಿನ್ನಹ: ಕೋರಿಕೆ; ನೃಪತಿ: ರಾಜ; ದಯಾಳು: ಕರುಣಾಸಾಗರ; ಅರಸ: ರಾಜ; ಶೋಕ: ದುಃಖ; ಉದಧಿ: ಸಮುದ್ರ; ವಡಬಾಗ್ನಿ: ಸಮದ್ರದಲ್ಲಿನ ಬೆಂಕಿ; ಷೋಡಶ: ಹದಿನಾರು; ಮಹೀಶ: ರಾಜ; ಕಥೆ: ಚರಿತ್ರೆ; ವಿರಚಿಸು: ತಿಳಿಸು, ರಚಿಸು; ಸಮ: ಸಮಾನವಾದ, ಸಾಟಿ; ಆದಿ: ಮೊದಲು;

ಪದವಿಂಗಡಣೆ:
ಆದರ್+ಆ+ ಮೃತ್ಯುವಿನ+ ಕೈವಶ
ವಾದವರನ್+ಎನಗ್+ಅರುಹ +ಬೇಹುದು
ಮೇದಿನೀಶರೊಳೆಂದು +ಬಿನ್ನಹ +ಮಾಡಿದನು+ನೃಪತಿ
ಆ +ದಯಾಳುಗಳ್+ಅರಸನಾ+ ಶೋಕ
ಉದಧಿಗೆ +ವಡಬಾಗ್ನಿ +ಸಮನೆನಿಪ
ಆದಿಯಲಿ +ಷೋಡಶ +ಮಹೀಶರ +ಕಥೆಯ +ವಿರಚಿಸಿದ

ಅಚ್ಚರಿ:
(೧) ಮಹೀಶ, ಮೇದಿನೀಶ, ನೃಪತಿ – ಸಮಾನಾರ್ಥಕ ಪದ

ಪದ್ಯ ೨: ದ್ರೋಣನ ಆಕ್ರಮಣ ಹೇಗಿತ್ತು?

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಜೀಯಾ ಏನು ಹೇಳಲಿ, ಕಾಳ್ಗಿಚ್ಚು ಅಡವಿಯಲ್ಲಿ ಹಬ್ಬಿದಂತೆ ದ್ರೋಣನು ಪ್ರಖ್ಯಾತರಾದ ಭಟರನ್ನು ಸಂಹರಿಸಿದನು. ಅವನು ಹೋದ ದಾರಿಯಲ್ಲಿ ಪಾಂಡವಸೇನೆ ಕಲುಕಿತು. ಕಡಲು ಬತ್ತಿದರೆ ಮೀನುಗಳು ಮರುಗುವಂತೆ ವೀರರು ಮರುಗಿದರು. ದ್ರೋಣನು ಧರ್ಮಪುತ್ರನ ಬೆನ್ನು ಹತ್ತಿ ಹೋದನು

ಅರ್ಥ:
ಹೇಳು: ತಿಳಿಸು; ಜೀಯ: ಒಡೆಯ; ಕೃಶಾನು: ಅಗ್ನಿ, ಬೆಂಕಿ; ಅಡವಿ: ಕಾದು; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ಮುರಿ: ಸೀಳು; ಮಾರ್ಗ: ದಾರಿ; ಸೇನೆ: ಸೈನ್ಯ; ಕಲಕು: ಅಲ್ಲಾಡಿಸು; ಬತ್ತು: ಒಣಗು, ಆರು; ಉದಧಿ: ಸಾಗರ; ಮೀನು: ಮತ್ಸ್ಯ; ಮರುಗು: ತಳಮಳ, ಸಂಕಟ; ಭಟರು: ಸೈನಿಕ; ನರೇಂದ್ರ: ರಾಜ; ಅಳವಿ: ಶಕ್ತಿ; ಬೆಂಬತ್ತು: ಹಿಂಬಾಲಿಸು;

ಪದವಿಂಗಡಣೆ:
ಏನ+ ಹೇಳಲುಬಹುದು +ಜೀಯ +ಕೃ
ಶಾನುವ್+ಅಡವಿಯಲಾಡಿದಂದದಿನ್
ಆ +ನಿರೂಢಿಯ+ ಭಟರ+ ಮುರಿದನು +ಮುರಿದ+ ಮಾರ್ಗದಲಿ
ಸೇನೆ +ಕಲಕಿತು +ಬತ್ತಿದ್+ಉದಧಿಯ
ಮೀನಿನಂತಿರೆ +ಮರುಗಿದರು +ಭಟರ್
ಆ+ ನರೇಂದ್ರನನ್+ಅಳವಿಯಲಿ +ಬೆಂಬತ್ತಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃಶಾನುವಡವಿಯಲಾಡಿದಂದದಿ; ಬತ್ತಿದುದಧಿಯ ಮೀನಿನಂತಿರೆ ಮರುಗಿದರು ಭಟರ್

ಪದ್ಯ ೩೩: ಸುದರ್ಶನ ಚಕ್ರವು ಹೇಗೆ ಕಂಡಿತು?

ಹರಿದು ಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತ ಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರ ನರೋರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕವ ಹುರಿದುದು ಚಕ್ರದೊಷ್ಮೆಯಲಿ (ಭೀಷ್ಮ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಚಕ್ರವು ಬರುತ್ತಿರಲು ಅದರ ಬಳ್ಳಿಯಾಕಾರದ ಬೆಳಕು ಅದರ ಸುತ್ತಲೂ ವೃತ್ತಾಕಾರದಲ್ಲಿ ತೋರಿತು. ನೂರು ಸಹಸ್ರ ಸೂರ್ಯ ಬಿಂಬದ ಪ್ರಭೆ ಕಾಣಿಸಿತು. ಅದರ ಬಿಸಿಯ ಝಳ ಸುತ್ತಲೂ ಹಬ್ಬಿತು. ದೇವತೆಗಳು ಮನುಷ್ಯರು ರಾಕ್ಷಸರು ಆ ಕಾಂತಿಯನ್ನು ನೋಡಲಾಗದೆ ಕಣ್ಣುಮುಚ್ಚಿದರು. ಅದರ ಕಾವಿಗೆ ಸಮುದ್ರಗಳು ಬತ್ತಿ ಅದರ ತಲದಲ್ಲಿದ್ದ ಮುತ್ತುಗಳು ಹುರಿದು ಕಪ್ಪಾದವು.

ಅರ್ಥ:
ಹರಿ: ಚಲಿಸು; ಹಬ್ಬು: ಹರಡು, ವ್ಯಾಪಿಸು; ಬಳ್ಳಿ: ಹಬ್ಬಿ ಬೆಳೆಯುವ ಸಸ್ಯ, ಲತೆ; ಮುರಿ: ಸೀಳು; ಮಂಡಳಿಸು: ಸುತ್ತುವರಿ; ಶತ: ನೂರು; ಸಾವಿರ: ಸಹಸರ; ದಿವಾಕರ: ಸೂರ್ಯ; ಬಿಂಬ: ಆಕಾರ, ವಿಗ್ರಹ; ಎಸೆ: ಬಾಣ ಬಿಡು, ಹೊಡೆ; ಝಳ: ಪ್ರಕಾಶ, ಕಾಂತಿ; ಹೊಯಿಲು: ಏಟು, ಹೊಡೆತ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಜಗ: ಜಗತ್ತು; ಕಂಗಳು: ಕಣ್ಣು; ತೆರಹು: ಬಿಚ್ಚು, ತೆರೆ; ಕೆತ್ತು: ನಡುಕ, ಸ್ಪಂದನ; ಬತ್ತು: ಒಣಗು, ಆರು; ಉದಧಿ: ಸಾಗರ; ಉರಿ: ಜ್ವಾಲೆ, ಸಂಕಟ; ಮಣಲು: ಮರಳು; ಮಾಣಿಕ: ಮಾಣಿಕ್ಯ; ಹುರಿ:ಹೊಲೆಯುವಿಕೆ, ನುಲಿಯುವಿಕೆ; ಚಕ್ರ: ಸುದರ್ಶನ; ಉಷ್ಮೆ: ಶಾಖ;

ಪದವಿಂಗಡಣೆ:
ಹರಿದು +ಹಬ್ಬುವ +ಬಳ್ಳಿವೆಳಗಿನ
ಮುರಿವು +ಮಂಡಳಿಸಿದುದು +ಶತ +ಸಾ
ವಿರ+ ದಿವಾಕರ+ ಬಿಂಬವೆಸೆದುದು+ ಝಳದ+ ಹೊಯಿಲಿನಲಿ
ಸುರ +ನರ+ಉರಗ+ ಜಗದ+ ಕಂಗಳ
ತೆರಹು +ಕೆತ್ತವು +ಬತ್ತಿದ್ +ಉದಧಿಯೊಳ್
ಉರಿ+ಮಣಲು +ಮಾಣಿಕವ+ ಹುರಿದುದು +ಚಕ್ರದ್+ಊಷ್ಮೆಯಲಿ

ಅಚ್ಚರಿ:
(೧) ಸುದರ್ಶನ ಚಕ್ರದ ಪ್ರಕಾಶ – ಶತ ಸಾವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ

ಪದ್ಯ ೬೪: ಆಕಾಶವು ಯಾವುದರಿಂದ ಆವರಿಸಿಕೊಂಡಿತು?

ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ (ಭೀಷ್ಮ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಬಳಿಕ, ಧೃಷ್ಟದ್ಯುಮ್ನನ ಆಜ್ಞೆಯಂತೆ ಪಾಂಡವ ಸೇನೆಯು ಪಶ್ಚಿಮ ಸಮುದ್ರವನ್ನು ಪೂರ್ವ ಸಮುದ್ರವು ಎದುರಿಸಿದಂತೆ, ಕೌರವ ಸೈನ್ಯಕ್ಕೆದುರಾಯಿತು. ಎರಡೂ ಸೈನ್ಯಗಳ ಧ್ವಜಗಳೂ ಛತ್ರ ಚಾಮರಗಳೂ ತೋಮರ ಕುಂತಾದಿ ಆಯುಧಗಳೂ ಆಕಾಶ ಮುಚ್ಚಿ ಹೋಗಿ ನಾಲ್ಕೇ ಭೂತಗಳುಳಿದವು (ಭೂಮಿ, ನೀರು, ಅಗ್ನಿ, ವಾಯು)

ಅರ್ಥ:
ಬಳಿಕ: ನಂತರ; ಆಜ್ಞೆ: ಅಪ್ಪಣೆ; ಅಳವಿ: ಯುದ್ಧ; ಸೇನೆ: ಸೈನ್ಯ; ಮೂಡಣ: ಪೂರ್ವ; ಜಲಧಿ: ಸಾಗರ; ಪಶ್ಚಿಮ: ಪಡುವಣ; ಉದಧಿ: ಸಾಗರ; ರಭಸ: ವೇಗ; ಪಳಹರ: ಬಾವುಟ, ಧ್ವಜ; ತೋಮರ: ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ; ಕುಂತ: ಒಂದು ಬಗೆಯ ಆಯುಧ, ಈಟಿ, ಭರ್ಜಿ; ಆವಳಿ: ಗುಂಪು; ಚಮರ: ಚಾಮರ; ಚ್ಛತ್ರ: ಕೊಡೆ; ಸಂಕುಲ: ಸಮೂಹ; ಭೂತ: ಐದು ಎಂಬ ಸಂಖ್ಯೆಯ ಸಂಕೇತ; ಆಕಾಶ: ನಭ; ಗತ: ಹಿಂದೆ ಆದುದು, ಕಳೆದು ಹೋದ;

ಪದವಿಂಗಡಣೆ:
ಬಳಿಕ +ಧೃಷ್ಟದ್ಯುಮ್ನನ್+ಆಜ್ಞೆಯೊಳ್
ಅಳವಿಗೊಟ್ಟುದು+ ಸೇನೆ+ ಮೂಡಣ
ಜಲಧಿಗಾಂತುದು +ಪಶ್ಚಿಮ+ಉದಧಿಯೆಂಬ +ರಭಸದಲಿ
ಪಳಹರದ +ತೋಮರದ+ ಕುಂತಾ
ವಳಿಯ+ ಚಮರ+ಚ್ಛತ್ರಮಯ +ಸಂ
ಕುಳದಿನಾದುದು +ಭೂತ +ನಾಲ್ಕ್+ಆಕಾಶ+ಗತವಾಗಿ

ಅಚ್ಚರಿ:
(೧) ಎರಡು ಸೈನ್ಯವನ್ನು ಸಾಗರಕ್ಕೆ ಹೋಲಿಸಿರುವ ಪರಿ – ಅಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
(೨) ಕವಿಯ ಕಲ್ಪನೆ ಪಂಚಭೂತಗಳ ಜೊತೆ ಹೋಲಿಕೆ – ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ

ಪದ್ಯ ೭: ಐಂದ್ರಾಸ್ತ್ರದ ಪ್ರಭಾವ ಹೇಗಿತ್ತು?

ಮೊದಲೊಳೈಂದ್ರ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನಮಾರ್ಗದಲಿ
ಉದರ್ಧಿಯುದಧಿಯ ತೆರೆಯ ಗಂಟಿ
ಕ್ಕಿದವು ಹರಹರ ಹೇಳಬಾರದ
ಹೊದರು ಹೊಡಿಸಿತು ಕೀಳುಮೇಲಣ ಜಗದ ಹಂತಿಗಳ (ಅರಣ್ಯ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಅರ್ಜುನನು ಐಂದ್ರಾಸ್ತ್ರವನ್ನು ಮೊದಲು ಹೂಡಿದನು. ಭೂಮಿಯ ತುಂಬಾ ಹೊಗೆ ತುಂಬಿತು. ದಿಕ್ಕುಗಳೂ ಕೂಗಿಕೊಂಡವು. ಆಕಾಶದಲ್ಲಿ ಸೂರ್ಯನ ರಥವು ಮುಗ್ಗುರಿಸಿತು. ಸಮುದ್ರಗಳ ಅಲಿಗಳು ಗಂಟು ಹಾಕಿಕೊಂಡವು. ಮೇಲು ಮತ್ತು ಕೀಳ ಲೋಕಗಳಲ್ಲಿ ಹೇಳಲಾಗದಮ್ತಹ ಮಬ್ಬು ಮುಸುಕಿತು.

ಅರ್ಥ:
ಮೊದಲು: ಮುಂಚೆ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಹೂಡು: ಅಣಿಗೊಳಿಸು; ಹೊಗೆ: ಧೂಮ; ಭುವನ: ಭೂಮಿ; ದಿಕ್ಕು: ದಿಶೆ; ಒದರು: ಕೊಡಹು, ಜಾಡಿಸು; ಪಂಟಿಸು: ಆಕ್ರಮಿಸು, ಸುತ್ತುವರಿ; ರವಿ: ಸೂರ್ಯ; ರಥ: ಬಂಡಿ; ಗಗನ: ಆಗಸ; ಮಾರ್ಗ: ಹಾದಿ; ಉದಧಿ: ಸಮುದ್ರ; ತೆರೆ: ಅಲೆ; ಗಂಟು: ಸೇರಿಸಿ ಕಟ್ಟಿದುದು, ಕಟ್ಟು; ಹರ: ಶಿವ; ಹೊದರು: ತೊಡಕು, ತೊಂದರೆ; ಹೊದಿಸು: ಮುಚ್ಚು; ಕೀಳುಮೇಲಣ: ಕನಿಷ್ಠ ಶ್ರೇಷ್ಠ; ಜಗ: ಪ್ರಪಂಚ; ಹಂತಿ: ಗುಂಪು;

ಪದವಿಂಗಡಣೆ:
ಮೊದಲೊಳ್+ಐಂದ್ರ +ಮಹಾಸ್ತ್ರವನು +ಹೂ
ಡಿದನು +ಹೊಗೆದುದು +ಭುವನ +ದಿಕ್ಕುಗಳ್
ಒದರಿದವು +ಪಂಟಿಸಿತು +ರವಿ+ರಥ +ಗಗನ+ಮಾರ್ಗದಲಿ
ಉದಧಿ+ಉದಧಿಯ +ತೆರೆಯ +ಗಂಟಿ
ಕ್ಕಿದವು +ಹರಹರ +ಹೇಳಬಾರದ
ಹೊದರು +ಹೊಡಿಸಿತು +ಕೀಳುಮೇಲಣ +ಜಗದ +ಹಂತಿಗಳ

ಅಚ್ಚರಿ:
(೧) ಜೋಡಿ ಪದಗಳು – ಉದಧಿಯುದಧಿ, ಹರಹರ
(೨) ಹ ಕಾರದ ಸಾಲು ಪದಗಳು – ಹರಹರ ಹೇಳಬಾರದ ಹೊದರು ಹೊಡಿಸಿತು

ಪದ್ಯ ೩೬: ಸೈನ್ಯ ಸಾಗರವು ಯಾವ ಪರಿ ಹೊರಟಿತು?

ರೂಢಿಸಿದ ಸುಮುಹೂರ್ತದೊಳು ಹೊರ
ಬೀಡ ಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪಪಾಳೆಯಂಗಳೊಳು
ಕೂಡಿತಾಹವ ಸೈನ್ಯಸಾಗರ
ವೀಡಿರಿದು ನಡೆಗೊಂಡುದುದಧಿಯ
ನೋಡಿಸುವ ಜೋಡಿಗಳ ಜೋಕೆಯ ಘನರವಂಗಳೊಳು (ಉದ್ಯೋಗ ಪರ್ವ, ೧೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಒಂದು ಒಳ್ಳೆಯ ಗಳಿಗೆಯಲ್ಲಿ ಪಾಂಡವರ ಸೈನ್ಯವು ಹೊರಬೀಡು ಬಿಟ್ಟಿತು. ಯುದ್ಧಕ್ಕೆ ಹೊರಡಬೇಕೆಂದು ರಾಜರು ತಮ್ಮ ಪಾಳೆಯಗಳಲ್ಲಿ ಸಾರಿದರು. ಸೈನ್ಯ ಸಾಗರವು ಸಮುದ್ರದ ಮೊರೆತವನ್ನು ಮೀರಿಸುವ ಸದ್ದುಮಾಡುತ್ತಾ ಪ್ರಯಾಣ ಬೆಳೆಸಿತು.

ಅರ್ಥ:
ರೂಢಿಸು: ನೆಲಸು, ಇರು; ಸುಮುಹೂರ್ತ: ಒಳ್ಳೆಯ ಗಳಿಗೆ; ಹೊರ: ಆಚೆ; ಬೀಡು: ಗುಂಪು; ಬೀಡಬಿಟ್ಟರು: ಸೇರಿದರು; ರಣ: ಯುದ್ಧ; ಪಯಣ: ಪ್ರಯಾಣ; ಓಸುಗ: ಕಾರಣ, ಓಸ್ಕರ; ಸಾರು: ಹರಡು; ನೃಪ: ರಾಜ; ಪಾಳೆಯ: ಗುಂಪು; ಕೂಡು: ಸೇರು; ಆಹವ: ಯುದ್ಧ; ಸೈನ್ಯ: ಸೇನೆ, ಬಲ; ಸಾಗರ: ಸಮುದ್ರ; ನಡೆಗೊಂಡು: ಚಲಿಸುತ್ತ; ಉದಧಿ: ಸಾಗರ; ಓಡಿಸು: ಹೊರದೂಡು; ಜೋಡಿ: ಗುಂಪು; ಜೋಕೆ:ಎಚ್ಚರಿಕೆ, ಜಾಗರೂಕತೆ, ಸೊಗಸು; ಘನ: ಶ್ರೇಷ್ಠ; ರವ: ಧ್ವನಿ, ಶಬ್ದ;ಅಂಗಳ: ಆವರಣ;

ಪದವಿಂಗಡಣೆ:
ರೂಢಿಸಿದ +ಸುಮುಹೂರ್ತದೊಳು +ಹೊರ
ಬೀಡ +ಬಿಟ್ಟರು +ರಣಕೆ +ಪಯಣವ
ಮಾಡಲೋಸುಗ+ ಸಾರಿದರು +ನೃಪ+ಪಾಳೆ+ ಅಂಗಳೊಳು
ಕೂಡಿತ್+ಆಹವ +ಸೈನ್ಯ+ಸಾಗರ
ವೀಡಿರಿದು +ನಡೆಗೊಂಡುದ್+ಉದಧಿಯನ್
ಓಡಿಸುವ +ಜೋಡಿಗಳ+ ಜೋಕೆಯ +ಘನ+ರವಂಗಳೊಳು

ಅಚ್ಚರಿ:
(೧) ಪಾಳೆಯಂಗಳೊಳು, ರವಂಗಳೊಳು – ಪ್ರಾಸ ಪದ
(೨) ಉದಧಿ, ಸಾಗರ- ಸಮನಾರ್ಥಕ ಪದ ,೪,೫ ಸಾಲಿನ ಕೊನೆ ಪದ
(೩) ‘ಜ’ ಕಾರದ ಜೋಡಿ ಪದ – ಜೋಡಿಗಳ ಜೋಕೆಯ

ಪದ್ಯ ೨೫: ಘಟೋತ್ಕಚನ ಲಂಕೆಯ ಪ್ರವೇಶ ಹೇಗಿತ್ತು?

ತೋರಿತತಿ ದೂರದಲಿ ಲಂಕೆಯ
ಮೂರು ಶಿಖರದ ದುರ್ಗವುದಧಿಗೆ
ಮಾರುದಧಿಯೆನೆ ಮೆರೆದುದಂದು ಮಣಿ ಪ್ರಭಾವದಲಿ
ನೂರು ಯೋಜನ ಸೇತು ಮೂಲವ
ಮೀರಿ ನಡೆದನು ಬಡಗವಾಗಿಲ
ಕೀರಿದಗಳಿನ ಪಡಿಮೊಗವ ದಾಟಿದನು ವಹಿಲದಲಿ (ಸಭಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಘಟೋತ್ಕಚನು ಸೇತುವಿನ ಮೇಲೆ ನಿಂತು ಲಂಕೆಯನ್ನು ನೋಡಲು ಆತನಿಗೆ ಲಂಕೆಯ ಮೂರು ಶಿಖರಗಳ ಕೋಟೆಯು, ಮಣಿಗಳಿಂದ ಹೊಳೆಯುತ್ತಾ ಸಮುದ್ರಕ್ಕೆ ಪ್ರತಿಸಮುದ್ರವೋ ಎಂಬಂತೆ ದೂರದಿಂದಲೇ ಕಾಣಿಸಿತು. ಘಟೋತ್ಕಚನು ನೂರು ಯೋಜನ ದೂರದ ಸೇತುವೆಯನ್ನು ದಾಟಿ, ಉತ್ತರ ದಿಕ್ಕಿನ ಮುಂಭಾಗದಿಂದ ಕೋಟೆಯನ್ನು ಒಳಹೊಕ್ಕು ವೇಗವಾಗಿ ನಡೆದನು.

ಅರ್ಥ:
ತೋರು: ಗೋಚರಿಸು; ಅತಿ: ಬಹಳ; ದೂರ: ಬಹಳ ಅಂತರ; ಮೂರು: ತ್ರಿ; ಶಿಖರ: ಗೋಪುರ; ದುರ್ಗ: ಕೋಟೆ; ಉದಧಿ: ಸಮುದ್ರ; ಮಾರು: ಪ್ರತಿ, ಇನ್ನೊಂದು; ಮೆರೆ: ಹೊಳೆ, ಪ್ರಕಾಶಿಸು; ಮಣಿ: ರತ್ನ; ಪ್ರಭಾವ: ತೇಜಸ್ಸು, ವರ್ಚಸ್ಸು; ನೂರು: ಶತ; ಯೋಜನ: ಅಳತೆಯ ಪ್ರಮಾಣ; ಸೇತು: ಸಂಕ; ಮೂಲ:ಕಾರಣ; ಮೀರು:ದಾಟು; ನಡೆ: ಓಡಾಡು; ಬಡಗ: ಉತ್ತರ; ಬಾಗಿಲು: ಕದ; ಪಡಿ: ಬಾಗಿಲಿನ – ರೆಕ್ಕೆ, ಕದ; ಮೊಗ: ಮುಖ,ಎದುರು; ದಾಟು: ಹಾಯುವಿಕೆ; ವಹಿಲ: ವೇಗ;

ಪದವಿಂಗಡಣೆ:
ತೋರಿತ್+ಅತಿ +ದೂರದಲಿ +ಲಂಕೆಯ
ಮೂರು +ಶಿಖರದ+ ದುರ್ಗವ್+ಉದಧಿಗೆ
ಮಾರ್+ಉದಧಿಯೆನೆ+ ಮೆರೆದುದ್+ಅಂದು +ಮಣಿ +ಪ್ರಭಾವದಲಿ
ನೂರು +ಯೋಜನ +ಸೇತು +ಮೂಲವ
ಮೀರಿ +ನಡೆದನು+ ಬಡಗವಾಗಿಲ
ಕೀರಿದಗಳಿನ+ ಪಡಿಮೊಗವ+ ದಾಟಿದನು +ವಹಿಲದಲಿ

ಅಚ್ಚರಿ:
(೧) “ಮ” ಕಾರದ ತ್ರಿವಳಿ ಪದ – ಮಾರುದಧಿಯೆನೆ ಮೆರೆದುದಂದು ಮಣಿ