ಪದ್ಯ ೧: ದ್ರೋಣರು ಭೀಷ್ಮರಿಗೆ ಏನು ಹೇಳಿದರು?

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವ ಸೇನೆಯಲ್ಲಿ ಎಲ್ಲೆಲ್ಲೂ ಭಯವು ಆವರಿಸಿತ್ತು, ಎದುರಿನಲ್ಲಿ ಬಂದವನು ಅರ್ಜುನನೇ ಎಂದು ದ್ರೋಣ, ಭೀಷ್ಮರಿಗೆ ತಿಳಿಯಿತು, ದ್ರೋಣರು ಭೀಷ್ಮರಿಗೆ, “ಈ ಯುದ್ಧದಲ್ಲಿ ನಮಗೆ ಜಯವುಂಟಾಗುವುದಿಲ್ಲ, ಈಗ ತೋರುತ್ತಿರುವ ಅಪಶಕುನಗಳು ಈ ಸಂಶಯಕ್ಕೆ ಎಡೆಗೊಡುತ್ತದೆ, ನಮಗೆ ಶತಪ್ರತಿಶತ ಸೋಲಾಗುತ್ತದೆ” ಎಂದರು.

ಅರ್ಥ:
ಭಯ: ಅಂಜಿಕೆ; ಭಾರ: ಹೊರೆ, ತೂಕ; ಮಹೀಪತಿ: ರಾಜ; ಕೇಳು: ಆಲಿಸು; ಸೇನೆ: ಸೈನ್ಯ; ಅರಿ: ತಿಳಿ; ಜಯ: ಗೆಲುವು; ಜೋಡಿಸು: ಕೂಡಿಸು; ಸಂಶಯ: ಅನುಮಾನ; ಸುಳಿವು: ಕುರುಹು; ಉತ್ಪಾತ: ಅಪಶಕುನ; ಶತವಿದು: ಖಂಡಿತವಾಗಿಯು; ಲಯ: ಅಳಿವು, ನಾಶ; ಬೀಜ: ಮೂಲ; ಚಿತ್ತವಿಸು: ಗಮನವಿಡು;

ಪದವಿಂಗಡಣೆ:
ಭಯವು+ ಭಾರವಿಸಿತ್ತು +ಜನಮೇ
ಜಯ +ಮಹೀಪತಿ +ಕೇಳು +ಕುರು +ಸೇ
ನೆಯಲಿ +ಭೀಷ್ಮ+ದ್ರೋಣರ್+ಅರಿದರು +ಪಾರ್ಥನೆಂಬುದನು
ಜಯವು +ಜೋಡಿಸಲ್+ಅರಿಯದಿದು+ ಸಂ
ಶಯದ +ಸುಳಿವ್+ಉತ್ಪಾತ +ಶತವಿದು
ಲಯದ+ ಬೀಜವು +ಭೀಷ್ಮ +ಚಿತ್ತವಿಸೆಂದನಾ +ದ್ರೋಣ

ಅಚ್ಚರಿ:
(೧) ಜಯ, ಸಂಶಯ, ಭಯ, ಲಯ – ಪ್ರಾಸ ಪದಗಳು
(೨) ಅರಿದರು, ಅರಿಯದಿದು – ಅರಿ ಪದದ ಬಳಕೆ
(೩) ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಪರಿ – ಸಂಶಯದ ಸುಳಿವುತ್ಪಾತ ಶತವಿದು ಲಯದ ಬೀಜವು

ಪದ್ಯ ೪೨: ಯಾವ ಬಗೆಯ ಅಪಶಕುನಗಳ ಕಾಣಿಸಿತು?

ಬಾರಿಸಿತು ದೆಸೆದೆಸೆಗಳಲಿ ಹಾ
ಹಾರವಾವಿರ್ಭಾವ ತೊಳಗಿರೆ
ತಾರಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ (ಸಭಾ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಾಹಾಕಾರ, ದುಃಖದ ಮೊರೆ ಎಲ್ಲಾ ದೆಸೆಗಳಿಂದಲೂ ಮೊಳಗಿತು. ಆಕಾಶದಲ್ಲಿ ನಕ್ಷತ್ರಗಳು ಹಗಲಿನಲ್ಲೇ ಕಾಣಿಸಿದವು. ರಾಹುವು ಸೂರ್ಯನ ಬಿಂಬವನ್ನು ನುಂಗಿದನು. ಕೌರವನ ಅರಮನೆಯ ಮಹಾದ್ವಾರಕ್ಕೆ ಕಟ್ಟಿದ್ದ ತೋರಣಗಳಿಗೆ ಉರಿಹತ್ತಿ ಮಹಾದ್ವಾರದೆಲ್ಲೆಲ್ಲಾ ಹೊಗೆ ಮುಸುಕಿತು. ಭೂಮಿ, ಆಕಾಶ ಎಲ್ಲಾ ದಿಕ್ಕುಗಳಲ್ಲಿಯೂ ಉತ್ಪಾತಗಳು ಉಂಟಾಗಿ ಅದ್ಭುತವಾಗಿ ಕಾಣಿಸಿತು.

ಅರ್ಥ:
ಬಾರಿಸು: ಹೊಡೆ; ದೆಸೆ: ದಿಕ್ಕು; ಹಾಹಾ: ದುಃಖದ ಕೂಗು; ರವ: ಶಬ್ದ; ಆವಿರ್ಭಾವ: ಹುಟ್ಟು, ಕಾಣಿಸಿಕೊ; ತೊಳಗು: ಕಾಂತಿ, ಪ್ರಕಾಶ; ತಾರಕೆ: ನಕ್ಷತ್ರ; ಬಿಂಬ: ಪ್ರಭಾವ ವಲಯ; ಝೋಂಪಿಸು: ಭಯಗೊಳ್ಳು, ಬೆಚ್ಚಿಬೀಳು; ತೋರಣ: ಬಾಗಿಲು, ಬೀದಿಗಳಲ್ಲಿ ಕಟ್ಟುವ ತಳಿರು; ಉರಿ: ಬೆಂಕಿ; ತಳಿತು: ಹುಟ್ಟು, ಚಿಗುರು; ದ್ವಾರ: ಬಾಗಿಲು; ಹೊಗೆ: ಧೂಮ; ಅಂಬರ: ಆಗಸ; ಧಾರುಣಿ: ಭೂಮಿ; ಉತ್ಪಾತ: ಅಪಶಕುನ; ಬಿಗಿ: ಕಟ್ಟು, ಬಂಧಿಸು; ಮೊಗೆ: ಸೆರೆಹಿಡಿ, ಬಂಧಿಸು; ಅದ್ಭುತ: ಆಶ್ಚರ್ಯ; ಇನ: ಸೂರ್ಯ;

ಪದವಿಂಗಡಣೆ:
ಬಾರಿಸಿತು +ದೆಸೆದೆಸೆಗಳಲಿ+ ಹಾಹಾ
ರವ+ಆವಿರ್ಭಾವ +ತೊಳಗಿರೆ
ತಾರಕೆಗಳ್+ಇನ +ಬಿಂಬವನು +ಝೋಂಪಿಸಿದನ್+ಆ+ ರಾಹು
ತೋರಣದಲ್+ಉರಿ+ ತಳಿತು+ ರಾಜ
ದ್ವಾರ +ಹೊಗೆದುದು +ದೆಸೆಗಳ್+ಅಂಬರ
ಧಾರುಣಿಯೊಳ್+ಉತ್ಪಾತ +ಬಿಗಿದುದು +ಮೊಗೆದುದ್+ಅದ್ಭುತವ

ಅಚ್ಚರಿ:
(೧) ಗ್ರಹಣವಾಯಿತು ಎಂದು ಹೇಳಲು – ಇನ ಬಿಂಬವನು ಝೋಂಪಿಸಿದನಾ ರಾಹು
(೨) ಅಪಶಕುನಗಳು – ತೋರಣದಲುರಿ ತಳಿತು ರಾಜದ್ವಾರ ಹೊಗೆದುದು

ಪದ್ಯ ೧೮: ಯುಧಿಷ್ಠಿರನು ಧೌಮ್ಯನಿಗೆ ಏನೆಂದು ಹೇಳಿದ?

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತವುಪಭೋಗವೆನಗೆಂದ (ಸಭಾ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೌಮ್ಯನು ಊರಿಗೆ ತೆರಳಿದ ಮೇಲೆ ಶಾಂತಿಕಾರ್ಯವನ್ನು ಮಾಡಿಸೋಣ ಎಂದುದಕ್ಕೆ, ಯುಧಿಷ್ಠಿರನು ಊರಿಗೆ ತೆರಳಿದ ಮೇಲೆ ಶಾಂತಿ ಕಾರ್ಯ ಮಾಡಿಸಿ ಏನು ಪ್ರಯೋಜನ. ಅಲ್ಲಿರುವಾಗ ನಾರದನು ನನ್ನ ಸ್ವಪ್ನಗಳ ವಿಷಯವನ್ನು ಕೇಳಿ ಇದು ನಿಮ್ಮ ಐಶ್ವರ್ಯನಾಶವನ್ನು ಸೂಚಿಸುತ್ತದೆ ಎಂದನು. ನಿನ್ನೆ ರಾತ್ರಿ ಕನಸಿನಲ್ಲಿ ಬೆಟ್ಟ ಅಡವಿಗಳಲ್ಲಿ ತಿರುಗಾಡಿದಂತೆ ಕನಸನ್ನು ಕಂಡೆ. ದೈವಚಿತ್ತದಿಂದ ಬಂದುದನ್ನು ಉಪಭೋಗಿಸೋಣ ಎಂದನು.

ಅರ್ಥ:
ಪುರ: ಊರು; ಒರೆ: ಹೇಳು; ಉತ್ಪಾತ: ಅಪಶಕುನ; ಪ್ರಬಂಧ: ವ್ಯವಸ್ಥೆ, ಏರ್ಪಾಡು; ಹೊರಿಗೆ: ಭಾರ, ಹೊರೆ; ಐಶ್ವರ್ಯ: ಸಂಪತ್ತು, ಸಿರಿ; ವಿಧ್ವಂಸಕ: ವಿನಾಶ; ಇರುಳು: ಕತ್ತಲೆ; ಸ್ವಪ್ನ: ಕನಸು; ಕಾನನ: ಅಡವಿ; ಗಿರಿ: ಬೆಟ್ಟ; ಪರಿಭ್ರಮಣೆ: ತಿರುಗು; ಚಿಂತೆ: ಯೋಚನೆ; ಭರಿತ: ಮುಳುಗು; ದೈವ: ಭಗವಂತ; ಕೃತ: ನಿರ್ಮಿಸಿದ; ಉಪಭೋಗ: ವಿಷಯಾನುಭವ;

ಪದವಿಂಗಡಣೆ:
ಪುರದೊಳ್+ಎಲ್ಲಿಯ +ಶಾಂತಿ +ನಾರದನ್
ಒರೆದನ್+ಉತ್ಪಾತ +ಪ್ರಬಂಧದ
ಹೊರಿಗೆಯನು +ನಿಮ್+ಐಶ್ವರಿಯ +ವಿಧ್ವಂಸಕರವೆಂದು
ಇರುಳು +ನಾನಾ +ಸ್ವಪ್ನ+ಕಾನನ
ಗಿರಿ+ ಪರಿಭ್ರಮಣೈಕ+ ಚಿಂತಾ
ಭರಿತನಾದೆನು+ ದೈವಕೃತವ್+ಉಪಭೋಗವೆನಗೆಂದ

ಅಚ್ಚರಿ:
(೧) ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವ ನುಡಿ – ದೈವಕೃತವುಪಭೋಗವೆನಗೆಂದ

ಪದ್ಯ ೩೪: ದುರ್ಯೋಧನನು ಹೊರಡುವಾಗ ಪರಿಸರದಲ್ಲಿ ಏನನ್ನು ಕಂಡನು?

ಹೊಗೆದುದಂಬರವವನಿ ನಡುಗಿತು
ಗಗನ ಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದುವರುಣಾಂಬುಗಳಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ (ವಿರಾಟ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಸೈನ್ಯದ ಜೊತೆಗೆ ವಿರಾಟನಗರಕ್ಕೆ ಹೊರಟನು, ಆಗ ಆಕಾಶದಲ್ಲಿ ಹೊಗೆಯು ಆವರಿಸಿತು, ಭೂಮಿ ನಡುಗಿತು, ಸೂರ್ಯನ ಸುತ್ತ ನಕ್ಷತ್ರಗಳು ಕಾಣಿಸಿದವು ಕೆಂಪುನೀರಿನ ಧಾರೆ ಸುರಿದವು, ಆಕಾಶದಲ್ಲಿ ಧೂಮಕೇತುಗಳು ಕಂಡವು. ಅನೇಕ ಉತ್ಪಾತಗಳನ್ನು ಲೆಕ್ಕಿಸದೆ ದುರ್ಯೋಧನನು ರಭಸದಲಿ ಊರನ್ನು ಬಿಟ್ಟು ಹೊರಟನು.

ಅರ್ಥ:
ಹೊಗೆ: ಧೂಮ; ಅಂಬರ: ಆಗಸ, ಬಾನು; ಅವನಿ: ಭೂಮಿ; ನಡುಗು: ಅಲುಗಾಡು; ಗಗನ: ಆಕಾಶ; ಮಣಿ: ಬೆಲೆಬಾಳುವ ಹರಳು; ಗಗನಮಣಿ: ಸೂರ್ಯ; ಪರಿವೇಷ: ಸುತ್ತುವರಿದಿರುವುದು, ಪ್ರಭಾವಳಿ; ತಾರೆ: ನಕ್ಷತ್ರ; ಹೊಳೆ: ಪ್ರಕಾಶಿಸು; ಸುರಿ: ಬೀಳು; ಅರುಣಾಂಬು: ಕೆಂಪುನೀರು; ಧಾರೆ; ವರ್ಷ; ದಿಗುವಳಯ: ದಿಕ್ಕು; ಧೂಮಕೇತು: ಉಲ್ಕೆ; ಒಗೆದವ್: ಹೊರಹಾಕು; ಅವನಿಪ: ರಾಜ; ಕೋಟಿ: ಲೆಕ್ಕಕ್ಕೆ ಸಿಗದ; ಪುರ: ಊರು; ಹೊರವಂಟ: ಹೊರಟನು; ಸಗಾಢ:ಜೋರು; ಉತ್ಪಾತ: ಅಪಶಕುನ;

ಪದವಿಂಗಡಣೆ:
ಹೊಗೆದುದ್+ಅಂಬರವ್+ಅವನಿ+ ನಡುಗಿತು
ಗಗನ ಮಣಿ +ಪರಿವೇಷದಲಿ +ತಾ
ರೆಗಳು +ಹೊಳೆದವು +ಸುರಿದುವ್+ಅರುಣಾಂಬುಗಳ+ಧಾರೆಗಳು
ದಿಗುವಳಯದಲಿ +ಧೂಮಕೇತುಗಳ್
ಒಗೆದವ್+ಎನಲ್+ಉತ್ಪಾತ +ಕೋಟಿಯ
ಬಗೆಯದ್+ಅವನಿಪ+ ಪುರವ+ ಹೊರವಂಟನು +ಸಗಾಢದಲಿ

ಅಚ್ಚರಿ:
(೧) ಗ್ರಹಣವನ್ನು ಸೂಚಿಸುವ ಸಾಲು – ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು, ಸೂರ್ಯನ ಬೆಳಕಿಗೆ ತಾರೆಗಳ ಹೊಳೆಯಲು ಅಸಾಧ್ಯ, ಆದರೆ ಸೂರ್ಯನ ಪ್ರಭಾವಳಿಯಲ್ಲಿ ತಾರೆಗಳು ಹೊಳೆದವು ಎಂದರೆ ಸೂರ್ಯನ ಪ್ರಭಾವ ಕಡಿಮೆಯಾಗಿರಬಹುದು, ಎಂದರೆ ಸೂರ್ಯನಿಗೆ ಚಂದ್ರನು ಅಡ್ಡಬಂದ ಗ್ರಹಣವಾಗಿರಬೇಕೆಂದು ವಿವರಿಸಬಹುದು
(೨) ಅಪಶಕುನಗಳು: ಭೂಮಿ ನಡುಗಿತು, ಆಗಸದಲ್ಲಿ ಹೊಗೆಯು ಆವರಿಸುವುದು, ಕೆಂಪಾದ ನೀರಿನ ಮಳೆ, ಧೂಮಕೇತುವಿನ ಗೋಚರ, ಉತ್ಪಾತಗಳ ಬೀಳುವಿಕೆ
(೩) ಅವನಿ – ೧, ೬ ಸಾಲಿನ ಮೊದಲ ಪದದಲ್ಲಿ ಬರುವ ಪದ, ೧ ಸಾಲಿನಲ್ಲಿ ಭೂಮಿ ಯ ಅರ್ಥ, ೬ ಸಾಲಿನಲ್ಲಿ ರಾಜ ಎಂದು ಅರ್ಥ