ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ಪದ್ಯ ೭೩: ಧರ್ಮಜನು ಕೃಷ್ಣನಲ್ಲಿ ಏನೆಂದು ಬಿನ್ನವಿಸಿದನು?

ಮರಳಿದವು ತುರುವಿತ್ತಲಹಿತರು
ಸರಿದರತ್ತಲು ಮತ್ಸ್ಯನೆಮ್ಮೈ
ವರನು ನಾವೆಂದರಿದು ಕೊಂಡಾಡಿದನು ವಿನಯದಲಿ
ವರ ಸುಭದ್ರಾನಂದನಂಗು
ತ್ತರೆಯನೀವರ್ಥಿಯಲಿಯಿರಲಾ
ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ (ವಿರಾಟ ಪರ್ವ, ೧೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಗೋವುಗಳು ಇಲ್ಲಿಗೆ ಬಂದವು, ಶತ್ರುಗಳು ಸೋತು ಹಸ್ತಿನಪುರಕ್ಕೆ ಹೋದರು, ಇಲ್ಲಿ ನಾವು ಪಾಂಡವರೆಂಬುದನ್ನು ವಿರಾಟನು ಅರಿತನು, ತನ್ನ ಮಗಳನ್ನು ಅಭಿಮನ್ಯುವಿಗೆ ಕೊಡುವ ಪ್ರಸ್ತಾಪಮಾಡಲು, ನಾವು ನಿಮ್ಮನ್ನು ಕರೆಕಳಿಸಿದೆವು ಎಂದು ಹೇಳಿದನು.

ಅರ್ಥ:
ಮರಳು: ಹಿಂದಿರುಗು; ತುರು: ಆಕಳು; ಅಹಿತ: ವೈರಿ; ಸರಿ: ದೂರಹೋಗು; ಅರಿ: ತಿಳಿ; ಕೊಂಡಾಡು: ಹೊಗಳು; ವಿನಯ: ಒಳ್ಳೆಯತನ, ಸೌಜನ್ಯ; ವರ: ಶ್ರೇಷ್ಠ; ನಂದನ: ಮಗ; ಕರೆ: ಆಹ್ವಾನ ಮಾಡು; ಅಟ್ಟು: ಕಳಿಸು; ಬಿನ್ನವಿಸು: ತಿಳಿಸು, ಹೇಳು; ಭೂಪಾಲ: ರಾಜ; ಅರ್ಥಿ: ಬೇಡುವುದು;

ಪದವಿಂಗಡಣೆ:
ಮರಳಿದವು +ತುರುವ್+ಇತ್ತಲ್+ಅಹಿತರು
ಸರಿದರ್+ಅತ್ತಲು +ಮತ್ಸ್ಯನ್+ಎಮ್ಮೈ
ವರನು+ ನಾವೆಂದ್+ಅರಿದು +ಕೊಂಡಾಡಿದನು +ವಿನಯದಲಿ
ವರ+ ಸುಭದ್ರಾನಂದನಂಗ್
ಉತ್ತರೆಯನ್+ ನೀವ್+ಅರ್ಥಿಯಲ್+ಇರಲ್+ಆ+
ಕರೆಯಲ್+ಅಟ್ಟಿದೆವ್+ಎಂದು +ಬಿನ್ನವಿಸಿದನು +ಭೂಪಾಲ

ಅಚ್ಚರಿ:
(೧) ಇತ್ತಲ್, ಅತ್ತಲ್ – ಪದಗಳ ಬಳಕೆ

ಪದ್ಯ ೩೨: ಅರ್ಜುನನು ಯಾರ ಬಳಿಗೆ ಬಂದನು?

ಇತ್ತಲರ್ಜುನದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ (ವಿರಾಟ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಇತ್ತ ಅರ್ಜುನನು ಉತ್ತರೆಯ ಮನೆಗೆ ಹೋಗಿ ತಾನು ತಂದ ಉತ್ತಮ ಬಟ್ಟೆ, ರತ್ನಾಭರಣ ಮುಂತಾದ ವಸ್ತುಗಳನ್ನು ಅವಳಿಗೆ ಕೊಟ್ಟು, ಅತೀವ ಸಂತೋಷದಿಂದ ಚಂದ್ರವಂಶದ ಮದಗಜದಂತ್ತಿದ್ದ ಅರ್ಜುನನು ಧರ್ಮಜನ ಬಳಿಗೆ ಬಂದನು.

ಅರ್ಥ:
ಸಾರು: ಬಳಿ ಸೇರು; ಭವನ: ಆಲಯ; ಉತ್ತಮ: ಶ್ರೇಷ್ಠ; ಅಂಬರ: ಬಟ್ಟೆ; ವಿವಿಧ: ಹಲವಾರು; ರತ್ನಾಭರಣ: ಒಡವೆ; ವಸ್ತು: ಸಾಮಗ್ರಿ; ಕನ್ನಿಕೆ: ಹೆಣ್ಣು, ಕುವರಿ; ಮುದ: ಸಂತಸ; ಮಿಗ: ಹೆಚ್ಚು; ಮನೆ: ಆಲಯ; ಶಶಿಕುಲ: ಚಂದ್ರವಂಶ; ಮತ್ತವಾರಣ: ಮದಗಜ; ಬಂದ: ಆಗಮಿಸು; ಅಗ್ರಜ: ಹಿರಿಯ; ಭೀಮಾಗ್ರಜ: ಯುಧಿಷ್ಠಿರ; ಹೊರೆ: ಹತ್ತಿರ, ಸಮೀಪ;

ಪದವಿಂಗಡಣೆ:
ಇತ್ತಲ್+ಅರ್ಜುನ+ದೇವ +ಸಾರಿದನ್
ಉತ್ತರೆಯ +ಭವನವನು +ತಾ +ತಂದ್
ಉತ್ತಮ+ಅಂಬರ +ವಿವಿಧ +ರತ್ನಾಭರಣ+ ವಸ್ತುಗಳ
ಇತ್ತನಾ+ ಕನ್ನಿಕೆಗೆ+ ಮುದ +ಮಿಗಲ್
ಉತ್ತರೆಯ +ಮನೆಯಿಂದ +ಶಶಿಕುಲ
ಮತ್ತವಾರಣ+ ಬಂದನಾ +ಭೀಮಾಗ್ರಜನ +ಹೊರೆಗೆ

ಅಚ್ಚರಿ:
(೧) ಭವನ, ಮನೆ – ಸಮನಾರ್ಥಕ ಪದ
(೨) ಅರ್ಜುನನನ್ನು ವರ್ಣಿಸುವ ಪರಿ – ಶಶಿಕುಲ ಮತ್ತವಾರಣ

ಪದ್ಯ ೩೮: ಅರ್ಜುನನು ಉತ್ತರೆಯ ಬಳಿ ಏನು ಕೇಳಿದನು?

ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪನೆನೆ ಮೀರಬಲ್ಲೆನೆ ಮಗಳೆ ಹೇಳೆಂದ (ವಿರಾಟ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಉತ್ತರೆಯು ಬಿರುಸಾಗಿ ಬರುವುದನ್ನು ಕಂಡು ಪಾರ್ಥನು ಇದೇನು ಇಷ್ಟು ಬಿರುಸಾಗಿ ಬರುತ್ತಿರುವೆ ರಾಜ ಕುಮಾರಿ, ಈ ತೀವ್ರಗತಿಯಲ್ಲಿ ಬರಲು ಕಾರಣವಾದರು ಏನು, ಎಂದು ಪಾರ್ಥನು ಕೇಳಲು, ನಗುತ್ತಾ ಉತ್ತರೆಯು ನೀವು ನನ್ನ ಮಾತನ್ನು ನಡೆಸಿಕೊಡುವಿರೆಂದು ಮಾತು ಕೊಟ್ಟರೆ ಹೇಳುವೆನು ಎಂದು ಹೇಳಲು, ಪಾರ್ಥನು ಪ್ರೀತಿಯಿಂದ ಮಗಳೇ ನಿನ್ನ ಮಾತನ್ನು ಮೀರಲಾದೀತೆ ಎಂದು ಅರ್ಜುನನು ಹೇಳಿದನು.

ಅರ್ಥ:
ಬರವ: ಬರುವುದನ್ನು, ಆಗಮನ; ಕಂಡು: ನೋಡಿ; ಕುಮಾರಿ: ಹುಡುಗಿ; ಕಠೋರ: ಬಿರುಸಾದ; ಗತಿ: ವೇಗ; ಭಾರಿ:ದೊಡ್ಡದಾದುದು; ಕಾರಿಯ: ಕಾರ್ಯ, ಕೆಲಸ; ಸೂಚಿಸು: ತಿಳಿಸು; ನಗುತ: ಹಸನ್ಮುಖ; ಬೇರೆ: ಅನ್ಯ; ಮಾತು: ನುಡಿ; ಹುರುಳು:ತಿರುಳು, ಸಾರ; ಗೆಡಿಸು: ತಳ್ಳಿಹಾಕು; ಸಲಿಸು:ದೊರಕಿಸಿ ಕೊಡು, ಪೂರೈಸು; ಅರುಹು: ತಿಳಿಸು; ಮೀರು: ದಾಟು; ಮಗಳೆ: ಪುತ್ರಿ; ಹೇಳು: ತಿಳಿಸು;

ಪದವಿಂಗಡಣೆ:
ಬರವ+ ಕಂಡನು +ಪಾರ್ಥನ್+ಏನ್
ಉತ್ತರೆ +ಕುಮಾರಿ +ಕಠೋರ+ಗತಿಯಲಿ
ಬರವು +ಭಾರಿಯ+ ಕಾರಿಯವ +ಸೂಚಿಸುವುದ್+ಎನೆ +ನಗುತ
ಬರವು +ಬೇರಿಲ್ಲ+ಎನ್ನ +ಮಾತನು
ಹುರುಳು+ಗೆಡಿಸದೆ +ಸಲಿಸುವೊಡೆ +ನಿಮಗ್
ಅರುಹಿದಪನ್+ಎನೆ +ಮೀರಬಲ್ಲೆನೆ +ಮಗಳೆ +ಹೇಳೆಂದ

ಅಚ್ಚರಿ:
(೧) ಬರವು – ೩,೪ ಸಾಲಿನ ಮೊದಲ ಪದ; ಬರವ, ಬರುವು – ಸಾಮ್ಯಪದಗಳು
(೨) ಜೋಡಿ ಪದಗಳು – ‘ಬ’ ಬರವು ಬೇರಿಲ್ಲ; ‘ಕ’ – ಕುಮಾರಿ ಕಠೋರಗತಿ
(೩) ಮಗಳೆ, ಕುಮಾರಿ – ಹುಡುಗಿ ಎಂದು ಸೂಚಿಸುವ ಪದಗಳು

ಪದ್ಯ ೨೯: ಉತ್ತರೆಯು ಉತ್ತರಂಗೆ ಏನೆಂದು ಹೇಳಿದಳು?

ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣ ದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ (ವಿರಾಟ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ತನ್ನ ಸಖಿಯು ಹೇಳಿದ ಮಾತು ಕೇಳಿ ಉತ್ತರೆಯು ಸಂತೋಷಪಟ್ಟು, ತನ್ನ ಅಣ್ಣನ ಓಲಗಕೆ ಬಂದು, ಅವನ ಪಾದಗಳಿಗೆ ನಮಸ್ಕರಿಸಿ, ಕೈಮುಗಿದು, ಅಣ್ಣಾ ನಿಮಗೆ ಸಾರಥಿಯು ಸಿಕ್ಕಿದ್ದಾನೆ, ನೀವು ಯುದ್ಧಕ್ಕೆ ಹೋಗಿ ಶತ್ರುರಾಜರನ್ನು ಸಂಹಾರಮಾಡಿ ಜಯಶೀಲರಾಗಿ ಎಂದು ಹೇಳಿದಳು.

ಅರ್ಥ:
ಕೇಳಿ: ಆಲಿಸಿ; ಹರುಷ: ಸಂತೋಷ; ಓಲಗ: ದರ್ಬಾರು; ಅಂಘ್ರಿ: ಪಾದ; ಲೋಲ: ಅತ್ತಿತ್ತ ಅಲುಗಾಡುವ; ಲೋಚನೆ: ಕಣ್ಣು; ಎರಗು: ನಮಸ್ಕರಿಸು; ಕೈ: ಕರ; ಹದನ: ರೀತಿ; ಸಾರಥಿ: ಗಾಡಿಯನ್ನು ಓಡಿಸುವ; ನೆಲೆ:ಆಶ್ರಯ; ಕಾಳಗ: ಯುದ್ಧ; ನೃಪಾಲ: ರಾಜ; ಜಯ: ವಿಜಯ, ಗೆಲುವು; ನಗು: ಸಂತೋಷ; ಬೆಸ:ಕೆಲಸ, ಕಾರ್ಯ;

ಪದವಿಂಗಡಣೆ:
ಕೇಳಿ +ಹರುಷಿತೆಯಾದಳ್+ಉತ್ತರೆ
ಯೋಲಗಕೆ+ ಬಂದ್+ಅಣ್ಣನ್+ಅಂಘ್ರಿಗೆ
ಲೋಲಲೋಚನೆ+ಎರಗಿ+ ಕೈಮುಗಿದ್+ಎಂದಳೀ +ಹದನ
ಕೇಳಿದೆನು +ಸಾರಥಿಯ +ನೆಲೆಯನು
ಕಾಳಗಕೆ+ ನಡೆಯಣ್ಣ +ದೇವ +ನೃ
ಪಾಲಕರ +ಜಯಿಸೆಂದಡ್+ಉತ್ತರ +ನಗುತ +ಬೆಸಗೊಂಡ

ಅಚ್ಚರಿ:
(೧) ಕೇಳಿ – ೧, ೪ ಸಾಲಿನ ಮೊದಲ ಪದ
(೨) ಅಂಘ್ರಿ, ಕೈ – ೨, ೩ ಸಾಲಿನ ಪದಗಳ ಬಳಕೆ
(೩) ನೆಲೆಯನು, ನೃಪಾಲ, ನಗುತ – ೪-೬ ಸಾಲಿನ ಕೊನೆಪದಗಳು
(೪) ಉತ್ತರೆ, ಉತ್ತರ – ೧, ೬ ಸಾಲಿನಲ್ಲಿ ಬರುವ ಪದ