ಪದ್ಯ ೮: ಸಾತ್ಯಕಿಯು ಏನೆಂದು ಯೋಚಿಸಿದನು?

ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಕಹ್ತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರ ಫಾಲನೇತ್ರಂಗೆ (ದ್ರೋಣ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಯೋಚಿಸುತ್ತ, ದ್ರೋಣರೊಡನೆ ಯುದ್ಧ ಮಾಡುತ್ತಾ ನಿಂತರೆ ಅರ್ಜುನನು ಹೇಗಿರುವನೆಂಬುದು ತಿಳಿಯುವುದಿಲ್ಲ, ದೊರೆಯು ಕೋಪಗೊಳುತ್ತಾನೆ ಎಂದು ಮನಗೊಂಡು, ಬಿಲ್ಲನ್ನು ಕೆಳಗಿಟ್ಟು, ಕೈಗಳೆರಡನ್ನು ತಲೆಗೆ ಚಾಚಿ ಧನುರ್ಧರರಲ್ಲಿ ಶಿವನಾದ ದ್ರೋಣನಿಗೆ ಹೀಗೆಂದು ಬಿನ್ನಹಮಾಡಿದನು.

ಅರ್ಥ:
ಕೂಡೆ: ಜೊತೆ; ಕಾದು: ಹೋರಾಡು; ಇರವು: ಬದುಕಿರುವ; ಅರಿ: ತಿಳಿ; ಚಿತ್ತ: ಮನಸ್ಸು; ಖತಿ: ರೇಗುವಿಕೆ, ಕೋಪ; ಅವನೀಪಾಲ: ರಾಜ; ಬಿಲ್ಲು: ಚಾಪ; ಇಳುಹು: ಕೆಳಕ್ಕೆ ತರು; ಉತ್ತಮಾಂಗ: ಶಿರ; ಕರ: ಹಸ್ತ; ಕರಯುಗ: ಎರಡೂ ಕೈಗಳು; ಚಾಚು: ಹರಡು; ಬಿನ್ನೈಸು: ಬೇದು; ಧನು: ಬಿಲ್ಲು; ಧನುರ್ಧರ: ಬಿಲ್ಲಿನಲ್ಲಿ ಪರಾಕ್ರಮಿಯಾದ; ಫಾಲನೇತ್ರ: ಶಿವ; ನೇತ್ರ: ಕಣ್ಣು; ಫಾಲ: ಹಣೆ;

ಪದವಿಂಗಡಣೆ:
ಇತ್ತಲೀತನ +ಕೂಡೆ +ಕಾದುವಡ್
ಅತ್ತಲ್+ಅರ್ಜುನನ್+ಇರವನ್+ಅರಿಯೆನು
ಚಿತ್ತದಲಿ + ಖತಿಗೊಂಬನ್+ಅವನೀಪಾಲನೆಂದ್+ಎನುತ
ಮತ್ತೆ +ಸಾತ್ಯಕಿ +ಬಿಲ್ಲನ್+ಇಳುಹಿದನ್
ಉತ್ತಮಾಂಗಕೆ +ಕರಯುಗವ +ಚಾ
ಚುತ್ತ +ಬಿನ್ನೈಸಿದ +ಧನುರ್ಧರ +ಫಾಲನೇತ್ರಂಗೆ

ಅಚ್ಚರಿ:
(೧) ಶಿರಕ್ಕೆ ಉತ್ತಮಾಂಗ ಎಂದು ಕರೆದಿರುವುದು
(೨) ದ್ರೋಣರನ್ನು ಕರೆದ ಪರಿ – ಧನುರ್ಧರ ಫಾಲನೇತ್ರ

ಪದ್ಯ ೪೯: ಧನಂಜಯನ ಕಣ್ಣುಗಳು ಯಾವ ರಸದಲ್ಲಿ ಮುಳುಗಿದವು?

ಮತ್ತೆ ಕಂಡನು ಖಂಡಪರುಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಿರಾತನ ತಲೆಯ ಮೇಲೆ ತಾನು ಪೂಜಿಸಿದ ಹೂಗಳನ್ನು ಮತ್ತೆ ನೋಡಿದನು. ಇತ್ತ ತಿರುಗಿದರೆ ಆ ಹೂಗಳು ಲಿಂಗದ ಮೇಲಿರಲಿಲ್ಲ. ಅರ್ಜುನನ ಕಣ್ಣುಗಳು ಕೌತುಕಗೊಂಡು, ಇದು ಅದ್ಭುತವೆಂದುಕೊಳ್ಳುತ್ತಿದ್ದಂತೆಯೇ, ಅವನ ಕಣ್ಣುಗಳು ಭಯಾನಕ ರಸದಲ್ಲಿ ಮುಳುಗಿದವು.

ಅರ್ಥ:
ಕಂಡು: ನೋಡು; ಖಂಡಪರುಶು: ಶಿವ;ಉತ್ತಮಾಂಗ: ಶಿರ; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಕಾಣು: ತೋರು; ಕುಸುಮ: ಹೂವು; ಮಂಜರಿ: ಗೊಂಚಲು; ತುತ್ತು: ಅನುಭವ, ಅಡಗಿಸು; ಕೌತುಕ: ಆಶ್ಚರ್ಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಅದುಭುತ: ಆಶ್ಚರ್ಯ; ಭಯಾನಕ: ಭಯಂಕರ, ಘೋರ; ರಸ: ಸಾರ; ಮುಳುಗು: ತೋಯು; ಕಂಗಳು: ಕಣ್ಣು;

ಪದವಿಂಗಡಣೆ:
ಮತ್ತೆ+ ಕಂಡನು +ಖಂಡಪರುಶುವಿನ್
ಉತ್ತಮಾಂಗದಲ್+ಈಚೆಯಲಿ +ಲಿಂಗ
ಉತ್ತಮಾಂಗದ+ ಮೇಲೆ +ಕಾಣನು +ಕುಸುಮ +ಮಂಜರಿಯ
ತುತ್ತಿದವು +ಕೌತುಕವ +ರಂಜಿಸಿ
ಹೊತ್ತವ್+ಅದುಭುತವನು +ಭಯಾನಕ
ವೆತ್ತ+ರಸದಲಿ +ಮುಳುಗಿದವು+ ಕಂಗಳು +ಧನಂಜಯನ

ಅಚ್ಚರಿ:
(೧) ಅರ್ಜುನನಿಗಾದ ಭಾವನೆ: ತುತ್ತಿದವು ಕೌತುಕವ ರಂಜಿಸಿಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ

ಪದ್ಯ ೪೯: ಪ್ರಾತಿಕಾಮಿಕನು ದ್ರೌಪದಿಯನ್ನು ಎಷ್ಟು ಸಖಿಯರ ಮಧ್ಯೆ ನೋಡಿದನು?

ಸುತ್ತಲೆಸೆವ ವಿಳಾಸಿನೀ ಜನ
ಹತ್ತು ಸಾವಿರ ನಡುವೆ ಕಂಡನು
ಮತ್ತ ಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ (ಸಭಾ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ಹತ್ತು ಸಾವಿರ ಸಖಿಯರ ನಡುವೆ ಅತ್ಯಂತ ಸುಂದರಿಯಾದ, ಪತಿವ್ರತೆಯರಲ್ಲಿ ಶ್ರೇಷ್ಠಳಾದ ದ್ರೌಪದಿಯನ್ನು ಕಂಡನು. ಅವಳ ಬಳಿಗೆ ಹೋಗಲು ಹೆದರಿದನು, ಎರಡು ಕೈಗಳನ್ನು ಹಣೆಗೆ ಚಾಚಿ ಹೀಗೆ ತನ್ನ ಮನವಿಯನ್ನು ನುಡಿದನು.

ಅರ್ಥ:
ಸುತ್ತ: ಎಲ್ಲಾ ಕಡೆ; ಎಸೆ: ತೋರು; ವಿಳಾಸಿನಿ: ಸಖಿ, ದಾಸಿ; ಸಾವಿರ: ಸಹಸ್ರ; ಹತ್ತು: ದಶ; ನಡುವೆ: ಮಧ್ಯೆ; ಕಂಡು: ನೋಡು; ಮತ್ತಕಾಶಿನಿ: ಸುಂದರಿ; ಪತಿವ್ರತೆ: ಗಂಡನಿಗೆ ವಿಧೇಯಳಾದ ಗರತಿ; ಶಿರೋಮಣಿ: ಶ್ರೇಷ್ಠ; ಹತ್ತಿರ: ಸಮೀಪ; ಅಂಜು: ಹೆದರು; ಉತ್ತಮಾಂಗ: ಶಿರ; ಕರ: ಹಸ್ತ; ಕರಯುಗ: ಎರಡುಕೈಗಳನ್ನೂ; ಚಾಚು: ಮುಂದೆ ಒಡ್ಡು; ಬಿನ್ನಹ: ಮನವಿ; ನಂದನೆ: ಮಗಳು;

ಪದವಿಂಗಡಣೆ:
ಸುತ್ತಲ್+ಎಸೆವ +ವಿಳಾಸಿನೀ +ಜನ
ಹತ್ತು +ಸಾವಿರ+ ನಡುವೆ +ಕಂಡನು
ಮತ್ತ +ಕಾಶಿನಿಯನು +ಪತಿವ್ರತೆಯರ +ಶಿರೋಮಣಿಯ
ಹತ್ತಿರೈತರಲ್+ಅಂಜಿದನು +ತನ್ನ್
ಉತ್ತಮಾಂಗಕೆ+ ಕರಯುಗವ+ ಚಾ
ಚುತ್ತ +ಬಿನ್ನಹ +ಮಾಡಿದನು +ಪಾಂಚಾಲ +ನಂದನೆಗೆ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳುವ ಪರಿ – ತನ್ನುತ್ತಮಾಂಗಕೆ ಕರಯುಗವ ಚಾಚುತ್ತ
(೨) ದ್ರೌಪದಿಯ ಸೇವೆಯಲ್ಲಿದ್ದ ಸಖಿಯರು – ಸುತ್ತಲೆಸೆವ ವಿಳಾಸಿನೀ ಜನ ಹತ್ತು ಸಾವಿರ ನಡುವೆ
(೩) ದ್ರೌಪದಿಯನ್ನು ವರ್ಣಿಸುವ ಪರಿ – ಮತ್ತ ಕಾಶಿನಿ, ಪತಿವ್ರತೆಯರ ಶಿರೋಮಣಿ

ಪದ್ಯ ೫೨: ಶಿವನು ನಾರಾಯಣಿಗೆ ಏನೆಂದು ಹೇಳಿ ಕೃಪೆ ತೋರಿದನು?

ನಿನ್ನ ಕಥನವೆ ಪುಣ್ಯ ಕಥನವು
ನಿನ್ನ ಚರಿತವೆ ಪುಣ್ಯ ಚರಿತವು
ನಿನ್ನ ನೆನೆದಂಗನೆಗೆ ಬಹುದು ಪತ್ರಿವ್ರತಾಭಾವ
ಎನ್ನನುಜ್ಞೆಗೆ ಧರ್ಮಚಿಂತಾ
ಪನ್ನೆಯಾಗದಿರೆಂದು ಕೃಪೆಯಲಿ
ತನ್ನ ಸಿರಿ ಕರತಳವನಿರಿಸಿದನುತ್ತಮಾಂಗದಲಿ (ಆದಿ ಪರ್ವ, ೧೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಿವನು ನಾರಾಯಣಿಯನ್ನುದೇಶಿಸಿ, ನಿನ್ನ ಕಥೆಯೆ ಪುಣ್ಯಕರವಾದುದು, ನಿನ್ನ ಚರಿತವೆ ಮಂಗಳವನ್ನುಂಟುಮಾಡುವಂತಹುದು, ನಿನ್ನನ್ನು ಯಾವ ಹೆಣ್ಣು ನೆನೆಯುತ್ತಾರೋ ಅವರಿಗೆ ಪಾತಿವ್ರತ್ಯ ಲಾಭವು ದೊರೆಯುತ್ತದೆ. ನನ್ನ ಅಪ್ಪಣೆಯನ್ನು ಕೇಳು, ಇದು ಧರ್ಮವೊ ಅಧರ್ಮವೋ ಎಂಬ ಚಿಂತೆಗೊಳಗಾಗಬೇಡ, ಎಂದು ಹೇಳಿ ಶಿವನು ನಾರಾಯಣಿಯ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಕೃಪೆಮಾಡಿದನು.

ಅರ್ಥ:
ಕಥನ:ಪಠಣ; ಪುಣ್ಯ: ಸದಾಚಾರ, ಸುಕೃತ; ಚರಿತ: ಗತಿ, ನಡಗೆ;ಅಂಗನೆ: ಹುಡುಗಿ; ಚಿಂತ: ಯೋಚನೆ, ಆಲೋಚನೆ; ಪತಿವ್ರತ: ಸಾಧ್ವಿ; ಧರ್ಮ: ಧಾರಣಮಾಡಿದುದು, ನಿಯಮ, ಆಚಾರ; ಅನುಜ್ಞೆ: ಒಪ್ಪಿಗೆ, ಅಪ್ಪಣೆ; ಕೃಪೆ:ಕರುಣೆ; ಸಿರಿ: ಐಶ್ವರ್ಯ; ಕರ: ಕೈ; ಕರತಳ: ಕೈಯನಿಟ್ಟು; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ನಿನ್ನ +ಕಥನವೆ +ಪುಣ್ಯ +ಕಥನವು
ನಿನ್ನ +ಚರಿತವೆ +ಪುಣ್ಯ +ಚರಿತವು
ನಿನ್ನ +ನೆನೆದ್+ಅಂಗನೆಗೆ+ ಬಹುದು +ಪತ್ರಿವ್ರತಾಭಾವ
ಎನ್+ಅನುಜ್ಞೆಗೆ +ಧರ್ಮ+ಚಿಂತಾ
ಪನ್ನೆ+ಯಾಗದಿ+ರೆಂದು +ಕೃಪೆಯಲಿ
ತನ್ನ +ಸಿರಿ +ಕರತಳವನ್+ಇರಿಸಿದನ್+ಉತ್ತಮಾಂಗದಲಿ

ಅಚ್ಚರಿ:
(೧) ತಲೆಯ ಮೇಲೆ ಕೈಯಿರಿಸಿದನು ಎಂದು ವರ್ಣಿಸಲು – ತನ್ನ ಸಿರಿ ಕರತಳವನಿರಿಸಿದನುತ್ತಮಾಂಗದಲಿ, ಶಿರವನ್ನು ಉತ್ತಮಾಂಗ ಎಂದು ಬಣ್ಣಿಸಿರುವುದು
(೨) ನಿನ್ನ ಪುಣ್ಯ – ೧, ೨ ಸಾಲಿನ ೧, ೩ ಪದಗಳು