ಪದ್ಯ ೫೨: ಅರ್ಜುನನ ಪರಾಕ್ರಮವನ್ನು ಕೃಷ್ಣನು ಹೇಗೆ ವರ್ಣಿಸಿದನು?

ನರನ ಗಾಂಡೀವಪ್ರತಾಪ
ಸ್ಫುರಿತ ನಾರಾಚ ಪ್ರಚಂಡೋ
ತ್ಕರ ದವಾನಲನಿಂದವೀ ಕೌರವ ಕುಲಾರಣ್ಯ
ಉರಿದು ನಂದದೆ ಮಾಣದಧಿಕರೊ
ಳಿರದೆ ತೊಡಕುವುದಾಗದೆಂಬುದ
ನರಿಯೆಯಾ ನೀನೆಂದು ಜರೆದನು ಕೌರವಾಧಿಪನ (ಉದ್ಯೋಗ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನ ಪರಾಕ್ರಮವನ್ನು ಹೇಳುತ್ತಾ, ಅರ್ಜುನನ ಗಾಂಡಿವ ಧನುಸ್ಸಿನಿಂದ ಹೊರಟ ಬಾಣಗಳಿಂದ ಹೊತ್ತಿ ಆವರಿಸುವ ಪ್ರಚಂಡವಾದ ಕಾಡುಕಿಚ್ಚಿನಿಂದ ಕೌರವ ಕುಲವೆಂಬ ಅರಣ್ಯವು ಉರಿದು ಕರಿದಾಗದೆ ಬಿಡುವುದಿಲ್ಲ. ತಮಗಿಂದ ಅಧಿಕ ಪ್ರತಾಪಿಗಳೊಡನೆ ಯುದ್ಧ ಮಾಡಬಾರದೆಂಬ ತತ್ವವು ನಿನಗೆ ಗೊತ್ತಿಲ್ಲವೇ ಎಂದು ಕೃಷ್ಣನು ದುರ್ಯೋಧನನನ್ನು ನಿಂದಿಸಿದನು.

ಅರ್ಥ:
ನರ: ಅರ್ಜುನ; ಪ್ರತಾಪ: ಪರಾಕ್ರಮ; ಸ್ಫುರಿತ: ಹೊಳೆವ, ಪ್ರಕಾಶಿಸುವ; ನಾರಾಚ: ಬಾಣ; ಪ್ರಚಂಡ:ಭಯಂಕರವಾದುದು; ಉತ್ಕರ:ಸಮೂಹ; ದವ: ಕಾಡು, ಅರಣ್ಯ; ಅನಲ: ಬೆಂಕಿ; ಕುಲ: ವಂಶ; ಅರಣ್ಯ: ಕಾಡು; ಉರಿ: ಸುಡು; ನಂದು: ಆರಿಹೋಗು; ಮಾಣ್: ಬಿಡು; ಅಧಿಕ: ಹೆಚ್ಚು; ತೊಡಕು: ತೊಂದರೆ; ಅರಿ: ತಿಳಿ; ಜರೆ: ನಿಂದಿಸು; ಅಧಿಪ: ಒಡೆಯ;

ಪದವಿಂಗಡಣೆ:
ನರನ +ಗಾಂಡೀವ+ಪ್ರತಾಪ
ಸ್ಫುರಿತ +ನಾರಾಚ +ಪ್ರಚಂಡ
ಉತ್ಕರ +ದವಾನಲನಿಂದವ್+ಈ+ ಕೌರವ+ ಕುಲಾರಣ್ಯ
ಉರಿದು +ನಂದದೆ +ಮಾಣದ್+ಅಧಿಕರೊಳ್
ಇರದೆ+ ತೊಡಕುವುದಾಗದ್+ಎಂಬುದನ್
ಅರಿಯೆಯಾ +ನೀನೆಂದು +ಜರೆದನು+ ಕೌರವಾಧಿಪನ

ಅಚ್ಚರಿ:
(೧) ದವ, ಅರಣ್ಯ – ಸಮನಾರ್ಥಕ ಪದ
(೨) ಪ್ರತಾಪ, ಪ್ರಚಂಡ – ಪ್ರ ಪದಗಳ ಬಳಕೆ

ಪದ್ಯ ೨೭: ಪುಣ್ಯಪಾಪವು ಎಷ್ಟು ಸಮಯದೊಳಗೆ ಫಲವನ್ನು ಸೂಚಿಸುತ್ತವೆ?

ವರುಷ ಮೂರಾ ಮಾಸ ಮೇಣ್ಮೂ
ರರೊಳು ಪಕ್ಷತ್ರಯಗೊಳಗೆ ಬಂ
ದರುಹುವುದು ದಿನ ಮೂರರಲಿ ಸಂದೇಹ ಬೇಡಿದಕೆ
ಧರೆಯೊಳುತ್ಕಟ ಪುಣ್ಯ ಪಾಪೋ
ತ್ಕರದ ಫಲವಿಹದಲ್ಲಿ ಸೂಚಿಸಿ
ಮರಳುವುದು ಪರಲೋಕದೆಡೆಗವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಲೋಕದಲ್ಲಿ ಮಾಡಿದ ಅತಿ ಹೆಚ್ಚಿನ ಪುಣ್ಯವಾಗಲಿ ಪಾಪವಾಗಲಿ ಮೂರುವರ್ಷ, ಮೂರು ತಿಂಗಳು, ಮೂರುಪಕ್ಷ, ಮೂರುದಿನಗಳೊಳಗಾಗಿ ತಮ್ಮ ಫಲವನ್ನು ಸೂಚಿಸಿ ಪರಲೋಕಕ್ಕೆ ಹಿಂದಿರುಗುತ್ತವೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ವರುಷ: ಸಂವತ್ಸರ; ಮೂರು: ತ್ರಿ; ಮಾಸ: ತಿಂಗಳು; ಮೇಣ್: ಮತ್ತು; ಪಕ್ಷ: ಹದಿನೈದು ದಿನಗಳ ಕಾಲ; ಬಂದು: ಆಗಮಿಸು; ಅರುಹು:ತಿಳಿಸು, ಹೇಳು; ದಿನ: ವಾರ; ಸಂದೇಹ: ಸಂಶಯ, ಅನುಮಾನ; ಬೇಡ: ಸಲ್ಲದು, ಕೂಡದು; ಧರೆ: ಭೂಮಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಪುಣ್ಯ: ಸದಾಚಾರ, ಪರೋಪಕಾರ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಪಾಪ: ಕೆಟ್ಟ ಕೆಲಸ; ಉತ್ಕರ: ರಾಶಿ, ಸಮೂಹ ; ಫಲ: ಫಲಿತಾಂಶ, ಪ್ರಯೋಜನ; ಸೂಚಿಸು: ತೋರಿಸು; ಮರಳು: ಹಿಂದಿರುಗು; ಪರಲೋಕ: ಬೇರೆಯಲೋಕ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವರುಷ +ಮೂರ್ +ಆ+ ಮಾಸ +ಮೇಣ್
ಮೂರರೊಳು +ಪಕ್ಷ+ತ್ರಯಗೊಳಗೆ+ ಬಂದ್
ಅರುಹುವುದು +ದಿನ +ಮೂರರಲಿ+ ಸಂದೇಹ +ಬೇಡಿದಕೆ
ಧರೆಯೊಳ್+ಉತ್ಕಟ +ಪುಣ್ಯ +ಪಾಪ+ಉತ್
ಕರದ +ಫಲವಿಹದಲ್ಲಿ+ ಸೂಚಿಸಿ
ಮರಳುವುದು +ಪರಲೋಕದ್+ಎಡೆಗ್+ಅವನೀಶ +ಕೇಳೆಂದ

ಅಚ್ಚರಿ:
(೧) ಮೂರು ತ್ರಯ – ಸಮನಾರ್ಥಕ ಪದ
(೨) ಮೂರು – ೩ ಬಾರಿ ಪ್ರಯೋಗ
(೩) ಉತ್ಕಟ, ಉತ್ಕರ – ಪದಗಳ ಬಳಕೆ