ಪದ್ಯ ೫೯: ಧರ್ಮಜನು ಯಾರನ್ನು ಸತ್ಕರಿಸಿದನು?

ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಿಯರ ಸಂ
ಕರುಷಣನನು ಮಹದುಗ್ರಸೇನನ ಕಂಡನವನೀಶ
ವರಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ (ವಿರಾಟ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ವಸುದೇವ, ದೇವಕಿ, ಬಲರಾಮ, ಉಗ್ರಸೇನರನ್ನು ಕಂಡು ವಂದಿಸಿದನು. ಸುಭದ್ರೆಯು ಭಾವಂದಿರಿಗೆ ನಮಸ್ಕರಿಸಿದಳು. ಅಭಿಮನ್ಯುವು ಮ್ಪಾಂಡವರನ್ನು ಹರ್ಷದಿಂದ ಆಲಿಂಗಿಸಿದಳು.

ಅರ್ಥ:
ದರುಶನ: ನೋಟ; ಒಲಿ: ಪ್ರೀತಿ; ಸಂಕರುಷಣ: ವಿಷ್ಣು; ಅವನೀಶ: ರಾಜ; ಕಂಡು: ನೋಡು; ವರ: ಶ್ರೇಷ್ಠ; ಭಾವ: ತಂಗಿಯ ಗಂಡ; ವಂದಿಸು: ನಮಸ್ಕರಿಸು; ಕುಮಾರ: ಮಕ್ಕಳು; ಹರುಷ: ಸಂತಸ; ಬಿಗಿ: ಗಟ್ಟಿಯಾಗಿ; ಅಪ್ಪು: ಆಲಂಗಿಸು;

ಪದವಿಂಗಡಣೆ:
ದರುಶನವನ್+ಒಲಿದಿತ್ತು+ ವಸುದೇ
ವರನು +ದೇವಕಿ +ದೇವಿಯರ +ಸಂ
ಕರುಷಣನನು +ಮಹದುಗ್ರಸೇನನ +ಕಂಡನ್+ಅವನೀಶ
ವರ+ಸುಭದ್ರಾದೇವಿ+ ಭಾವಂ
ದಿರಿಗೆ+ ವಂದಿಸಿದಳು+ ಕುಮಾರನು
ಹರುಷದಲಿ+ ಬಿಗಿಯಪ್ಪಿದನು +ಅಭಿಮನ್ಯು +ಪಾಂಡವರ

ಅಚ್ಚರಿ:
(೧) ವಸುದೇವ, ದೇವಕಿ, ಸಂಕರುಷಣ, ಉಗ್ರಸೇನ, ಸುಭದ್ರಾ, ಅಭಿಮನ್ಯು – ಹೆಸರುಗಳನ್ನು ಪ್ರಸ್ತಾಪಿಸಿರುವುದು

ಪದ್ಯ ೩೨: ಉಡುಗೊರೆಗಳನ್ನು ಯಾರಿಗೆ ಕಳಿಸಿದ್ದರು?

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ (ವಿರಾಟ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರು ಉಡುಗೊರೆಗಳನ್ನು ಕೃಷ್ಣನ ಎಲ್ಲಾ ಪರಿಜನರಿಗೆ ಕಳಿಸಿದ್ದರು. ಒಡೆಯಾ ಪಾಂಡವರು ನಿಮ್ಮ ಪಾದಗಳಿಗೆ, ರಾಣೀವಾಸದವರಿಗೆ, ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಕುಲಗುರುಗಳಾದ ಅಕ್ರೂರ ಉದ್ಧವರಿಗೆ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧರಿಗೆ ಈ ಉಡುಗೊರೆಗಳನ್ನು ಕಳಿಸಿದ್ದಾರೆ ಎಂದು ದೂತರು ಹೇಳಿದರು.

ಅರ್ಥ:
ಕಳುಹು: ಕೊಡು; ಉಡುಗೊರೆ: ಕಾಣಿಕೆ, ಬಳುವಳಿ; ಜೀಯ: ಒಡೆಯ; ನಿಮ್ಮಡಿ: ನಿಮ್ಮ ಪಾದ; ರಾಣಿ: ಅರಸಿ; ವರ್ಗ: ಗುಂಪು; ಬಲ: ಬಲರಾಮ; ಕುಲ: ವಂಶ; ಗುರು: ಆಚಾರ್ಯ; ಬಲುಭುಜ: ಮಹಾಪರಾಕ್ರಮ; ಲಲಿತ: ಸುಂದರವಾದ; ಕುಮಾರ: ಮಗ; ಕಂದರ್ಪ: ಮನ್ಮಥ, ಕಾಮ;

ಪದವಿಂಗಡಣೆ:
ಕಳುಹಿದ್+ಉಡುಗೊರೆ +ಜೀಯ +ನಿಮ್ಮಡಿ
ಗಳಿಗೆ+ ರಾಣೀವಾಸ +ವರ್ಗಕೆ
ಬಲಗೆ +ವಸುದೇವರಿಗೆ+ ದೇವಕಿ+ಉಗ್ರಸೇನರಿಗೆ
ಕುಲಗುರುಗಳ್+ಅಕ್ರೂರನುದ್ಧವ
ಬಲುಭುಜನು +ಕೃತವರ್ಮ +ಸಾತ್ಯಕಿ
ಲಲಿತ +ಸಾಂಬ+ಕುಮಾರ+ ಕಂದರ್ಪ+ಅನಿರುದ್ಧರಿಗೆ

ಅಚ್ಚರಿ:
(೧) ಕೃಷ್ಣನ ಪರಿವಾರದ ಪರಿಚಯ – ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಅಕ್ರೂರ ಉದ್ಧವ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧ