ಪದ್ಯ ೫೦: ಕರ್ಣನು ಯಾವ ಅಸ್ತ್ರವನ್ನು ತೆಗೆದನು?

ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾರನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸೈನಿಕರ ಈ ಮಾತನ್ನು ಕೇಳಿ ಕರ್ಣನು, ಇವನು ಇದಿರು ನಿಂತರೆ ಇವನ ಪ್ರಾಣವನ್ನು ತೆಗೆಯುತ್ತೇನೆ, ಅಲ್ಲಿಯವರೆಗೆ ಬಾಯಿಗೆ ಬಂದಂತೆ ಮಾತಾಡಬೇಡಿ, ಓಡಿಹೋಗಬೇಡಿ, ಮದ್ಯಪಾಯಿಯ (ರಾಕ್ಷಸ) ಕರುಳನ್ನು ನೆಲದಮೇಲೆ ಹರಡುತ್ತೇನೆ, ಎಂದು ತನ್ನವರಿಗೆ ಅಭಯಹಸ್ತವನ್ನು ತೋರಿಸಿದನು. ಉಗ್ರಧಾರೆಯುಳ್ಳ, ಕಿಡಿಯುಗುಳುವ, ಉರಿಯುಗುಳುವ ಮಹಾಸ್ತ್ರವನ್ನು ಕರ್ಣನು ಬತ್ತಳಿಕೆಯಿಂದ ಎಳೆದನು.

ಅರ್ಥ:
ಅಸು: ಪ್ರಾಣ; ಮೈ; ತನು, ದೇಹ; ತೋರು: ಗೋಚರಿಸು; ನಿಂದು: ನಿಲ್ಲು; ನಿಮಿಷ: ಕ್ಷಣ; ಕರುಳು: ಪಚನಾಂಗ; ಹರಹು: ವಿಸ್ತಾರ, ವೈಶಾಲ್ಯ; ಜಾರು: ಕೆಳಕ್ಕೆ ಬೀಳು; ಅಭಯ: ನಿರ್ಭಯತೆ, ರಕ್ಷಣೆ; ಹಸ್ತ: ಕೈ; ತೋರು: ಗೋಚರಿಸು; ತುಡುಕು: ಹೋರಾಡು, ಸೆಣಸು; ಉಗ್ರ: ಪ್ರಚಂಡತೆ, ಭಯಂಕರ; ಧಾರೆ: ಮಳೆ; ತೂರು: ಹೊರಸೂಸು; ಕಿಡಿ: ಬೆಂಕಿ; ತುರುಗು: ಸಂದಣಿಸು; ಮಹಾಸ್ತ್ರ: ದೊಡ್ಡ ಅಸ್ತ್ರ; ಕಳ್ಳೇರು: ಕಪಟ; ಕಳ್ಳೇರುಕಾರ: ಕಪಟ ಯುದ್ಧ ಮಾಡುವವ;

ಪದವಿಂಗಡಣೆ:
ಕಾರಿಸುವೆನಿವನ್+ಅಸುವನ್+ಇವ+ ಮೈ
ದೋರಿ +ನಿಂದರೆ +ನಿಮಿಷದಲಿ+ ಬಾ
ಯಾರದಿರಿ+ ಕಳ್ಳೇರುಕಾರನ +ಕರುಳ +ಹರಹುವೆನು
ಜಾರದಿರಿ+ಎನುತ್+ಅಭಯ+ಹಸ್ತವ
ತೋರಿ +ತುಡುಕಿದನ್+ಉಗ್ರಧಾರೆಯ
ತೂರು+ಕಿಡಿಗಳ +ತುರುಗಿದ್+ಉರಿಯ +ಮಹಾಸ್ತ್ರವನು +ಕರ್ಣ

ಅಚ್ಚರಿ:
(೧) ಘಟೋತ್ಕಚನನ್ನು ಕಳ್ಳೇರುಕಾರ ಎಂದು ಕರೆದಿರುವುದು
(೨) ತ ಕಾರದ ಸಾಲು ಪದ – ತೋರಿ ತುಡುಕಿದನುಗ್ರಧಾರೆಯ ತೂರುಗಿಡಿಗಳ ತುರುಗಿದುರಿಯ