ಪದ್ಯ ೪೦: ದ್ರೋಣನು ಶಿಖಂಡಿಯನ್ನು ಯಾರಿಗೆ ಹೋಲಿಸಿದನು?

ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ದ್ರೋಣನು ಸಾರಥಿಗೆ ಹೇಳುತ್ತಾ, ಸಿಂಹದೆದುರಿಗೆ ನರಿಯು ಸೆಟೆದು ನಿಂತಿದೆ ನೋಡು, ಭೀಷ್ಮನೆದುರಿಗೆ ನಿಂತ ಶಕ್ತಿಯನ್ನು ನೆನೆದು ಇವನು ಮುಂದುಗಾಣದಾಗಿದ್ದಾನೆ. ಬಿಲ್ಲು ಹಿಡಿದಿರುವ ಶಿಖಂಡಿ ಬಾಣದಿಂದ ಮಾತಾಡುವುದನ್ನು ಬಿಟ್ಟು ಮಾತಿನ ಚಪಲವೇಕೆ ಎಂದು ಹೇಳಿ ಬಾಣಗಳನ್ನು ಬಿಟ್ಟನು.

ಅರ್ಥ:
ಅಕಟ: ಅಯ್ಯೋ; ಸಿಂಹ: ಕೇಸರಿ; ಮಲೆತು: ಕೊಳೆಯಿಂದ ಕೂಡಿದ, ಸೊಕ್ಕಿದ; ಜಂಬುಕ: ನರಿ; ನೋಡು: ವೀಕ್ಷಿಸು; ಸೂತ: ಸಾರಥಿ; ಇದಿರು: ಎದುರ; ಮದ: ಅಹಂಕಾರ; ಮುಂದುಗಾಣು: ಮುಂದೆ ತೋರು; ಚಕಿತ: ವಿಸ್ಮಿತನಾದವನು; ಚಾಪ: ಬಿಲ್ಲು; ಶಿಖಂಡಿ: ನಪುಂಸಕ; ನಿಲು: ನಿಲ್ಲು; ಸಾಯಕ: ಬಾಣ, ಅಂಬು; ಮೊನೆ: ಚೂಪಾದ ತುದಿ; ಮಾತು: ನುಡಿ; ಉಕುತಿ: ಮಾತು; ಚಾಪಳ: ಚಂಚಲ ಸ್ವಭಾವದವನು; ಕಣೆ: ಬಾಣ; ಕೆದರು: ಹರಡು;

ಪದವಿಂಗಡಣೆ:
ಅಕಟ +ಸಿಂಹಕೆ +ಮಲೆತುದೋ +ಜಂ
ಬುಕನು+ ನೋಡೈ +ಸೂತ +ಭೀಷ್ಮನ
ಶಕುತಿಗ್+ಅಂದ್+ಇದಿರಾದ +ಮದದಲಿ +ಮುಂದುಗಾಣನಿವ
ಚಕಿತ +ಚಾಪ +ಶಿಖಂಡಿ +ನಿಲು +ಸಾ
ಯಕದ +ಮೊನೆಯಲಿ +ಮಾತನಾಡುವುದ್
ಉಕುತಿ +ಚಾಪಳವೇಕ್+ಎನುತ +ಕಣೆ+ಕೆದರಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಕಟ ಸಿಂಹಕೆ ಮಲೆತುದೋ ಜಂಬುಕನು ನೋಡೈ
(೨) ಶಿಖಂಡಿಯನ್ನು ಹಂಗಿಸುವ ಪರಿ – ಚಕಿತ ಚಾಪ ಶಿಖಂಡಿ ನಿಲು ಸಾಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆ

ಪದ್ಯ ೧೩: ನಕುಲನ ಅಭಿಪ್ರಾಯವೇನು?

ನಕುಲ ನೀ ಹೇಳೇನು ಹದನಿ
ನ್ನುಕುತಿ ಸಾಮವೊ ಮೇಣು ಸಮರವೊ
ಸುಕರ ಮಂತ್ರವನರುಹು ನೀನೆಮಗಂಜಬೇಡೆನಲು
ಯುಕುತಿ ನಮಗಿನ್ನೇನುಭಯರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯ ವಿನಯದೊಳು (ಉದ್ಯೋಗ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿದ ಕೃಷ್ಣನು ನಕುಲನ ಅಭಿಪ್ರಾಯವನ್ನು ಕೇಳಲು ಮುಂದಾದನು. ಎಲೈ ನಕುಲ ನೀನು ನಿನ್ನಭಿಪ್ರಾಯವನ್ನು ಅಂಜದೆ ತಿಳಿಸು, ಸಂಧಿಯೋ ಸಮರವೋ ಎಂದು ಕೇಳಲು, ನಕುಲನು ನನ್ನ ಮಾತು ಹೊಸದೇನು ಇಲ್ಲ. ಉಭಯ ರಾಜರನ್ನು ಸಮಾಧಾನ ಪಡಿಸು ಇದನ್ನು ಬಿಟ್ಟು ಬೇರೆಯ ಮಾತೇನು ಇಲ್ಲ ಎಂದು ನಕುಲನು ನುಡಿದನು.

ಅರ್ಥ:
ಹೇಳು: ತಿಳಿಸು; ಹದ: ಸರಿಯಾದ ಸ್ಥಿತಿ; ಉಕುತಿ: ಉಕ್ತಿ, ಮಾತು, ನೀತಿಮಾತು; ಸಾಮ: ಸಂಧಿ; ಸಮರ: ಯುದ್ಧ; ಸುಕರ: ಸುಲಭವಾದುದು, ಸರಾಗವಾದುದು; ಮಂತ್ರ: ವಿಚಾರ; ಅರುಹು: ತಿಳಿಸು, ಹೇಳು; ಅಂಜಬೇಡ: ಹೆದರಬೇಡ; ಯುಕುತಿ: ಬುದ್ಧಿ; ಉಭಯ: ಎರಡು; ರಾಜಕ: ರಾಜಪಕ್ಷ; ಸಂತೈಸು: ಸಮಾಧಾನ ಪಡಿಸು; ಬೇರೆ: ಅನ್ಯ; ಮಾದ್ರೇಯ: ಮಾದ್ರಿಯ ಮಗ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ನಕುಲ +ನೀ +ಹೇಳ್+ಏನು +ಹದ+ನಿನ್
ಉಕುತಿ +ಸಾಮವೊ +ಮೇಣು +ಸಮರವೊ
ಸುಕರ +ಮಂತ್ರವನ್+ಅರುಹು +ನೀನ್+ಎಮಗ್+ಅಂಜಬೇಡ್+ಎನಲು
ಉಕುತಿ+ ನಮಗಿನ್ನೇನ್+ಉಭಯ+ರಾ
ಜಕವ +ಸಂತೈಸುವುದು +ಬೇರ್
ಎಮ್ಮ+ಉಕುತಿ+ಯೆಲ್ಲಿಯದ್+ಎಂದನಾ +ಮಾದ್ರೇಯ +ವಿನಯದೊಳು

ಅಚ್ಚರಿ:
(೧) ಉಕುತಿ: ೩ ಬಾರಿ ಪ್ರಯೋಗ
(೨) ಸಾಮವೋ ಸಮರವೋ – ಪದಗಳ ಬಳಕೆ