ಪದ್ಯ ೭: ಧರ್ಮಜನು ಕೃಷ್ಣನ ಬಳಿ ಹೇಗೆ ತಲುಪಿದನು?

ಹಳುವವನು ಹೊರವಂಟು ಗರುಡನ
ಹಲವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ (ಅರಣ್ಯ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನು ತಾನಿದ್ದ ಕಾಡಿನಿಂದ ಹೊರಟು ಕೃಷ್ಣನ ಬರುವ ಮಾರ್ಗದಲ್ಲಿ ಮುನ್ನಡೆದನು, ದೂರದಲ್ಲಿ ಗರುಡ ಧ್ವಜವನ್ನು ಕಂಡನು. ಆನಂದ ಬಾಷ್ಪಗಳು ಸೂಸಲು, ರೋಮಾಂಚನಗೊಂಡು ಮತ್ತೆ ಮತ್ತೆ ನಮಸ್ಕರಿಸುತ್ತಾ ಶ್ರೀಕೃಷ್ಣನತ್ತ ನಡೆತಂದನು.

ಅರ್ಥ:
ಹಳುವ: ಕಾಡು; ಹೊರವಂಟು: ಹೊರಟು; ಗರುಡ: ವಿಷ್ಣುವಿನ ವಾಹನ; ಹಳವಿಗೆ: ಬಾವುಟ; ದೂರ: ಅಂತರ; ಕಂಡು: ನೋಡು; ತುಳುಕು: ಹೊರ ಚೆಲ್ಲು; ಸಂತೋಷ: ಹರ್ಷ; ಜಲ: ನೀರು; ನಿಟ್ಟೆಸಳುಗಂಗಳು: ಹೂವಿನದಳದಂತೆ ದೀರ್ಘವಾದ ಕಣ್ಣುಗಳು; ತಳಿತ: ಚಿಗುರಿದ; ರೋಮಾಂಚನ: ಪುಳಕ; ಸಮ್ಮುದ: ಸಂತೋಷ; ಪುಳಕ: ಮೈನವಿರೇಳುವಿಕೆ; ಪೂರಾಯ: ಪರಿಪೂರ್ಣ; ಉಬ್ಬು: ಅಧಿಕ; ಇಳೆ: ಭೂಮಿ; ಇಳೆಯೊಡೆಯ: ರಾಜ; ಮೈಯಿಕ್ಕು: ನಮಸ್ಕರಿಸು; ಐದು: ಬಂದುಸೇರು; ಅಖಿಳ: ಎಲ್ಲಾ; ಜನ: ಜನರು; ಸಹಿತ; ಜೊತೆ;

ಪದವಿಂಗಡಣೆ:
ಹಳುವವನು +ಹೊರವಂಟು +ಗರುಡನ
ಹಳವಿಗೆಯ+ ದೂರದಲಿ +ಕಂಡನು
ತುಳುಕಿದವು +ಸಂತೋಷಜಲ+ ನಿಟ್ಟೆಸಳುಗಂಗಳಲಿ
ತಳಿತ+ರೋಮಾಂಚದಲಿ+ ಸಮ್ಮುದ
ಪುಳಕದಲಿ+ ಪೂರಾಯದ್+ಉಬ್ಬಿನಲ್
ಇಳೆಯೊಡೆಯ+ ಮೈಯಿಕ್ಕುತ್+ಐದಿದನ್+ಅಖಿಳ +ಜನಸಹಿತ

ಅಚ್ಚರಿ:
(೧) ಧರ್ಮಜನ ಸಂಭ್ರಮ – ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ ತಳಿತರೋಮಾಂಚದಲಿ ಸಮ್ಮುದ ಪುಳಕದಲಿ ಪೂರಾಯದುಬ್ಬಿನಲಿಳೆಯೊಡೆಯ ಮೈಯಿಕ್ಕುತೈದಿದನ