ಪದ್ಯ ೫೨: ವಿದುರನು ಧೃತರಾಷ್ಟ್ರನಿಗೆ ಯಾವ ಸಲಹೆಯನ್ನು ನೀಡಿದನು?

ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ (ಆದಿ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕಂಟಕನಾದ ಒಬ್ಬನನ್ನು ಕುಲಕ್ಕಾಗಿ ತ್ಯಜಿಸಬೇಕು. ಒಂದು ಊರನ್ನು ಉಳಿಸಲು ಒಂದು ವಂಶವನ್ನು ತ್ಯಜಿಸಬೇಕು. ದೇಶವನ್ನುಳಿಸುವುದಕ್ಕಾಗಿ ಒಂದು ಊರನ್ನೇ ಕೆಡಿಸಬೇಕು. ಆತ್ಮೋದ್ಧಾರಕ್ಕಾಗಿ ಭೂಮಿಯ ಸಮಸ್ತವನ್ನೂ ತ್ಯಜಿಸಬೇಕು ಎಂದು ಸುಭಾಷಿತವಿದೆ. ಇದನ್ನರಿತು ಇವನನ್ನು ದೂರಕ್ಕೆಸೆದು ಬಿಟ್ಟುಬಿಡು ಎಂದು ವಿದುರನು ಹೇಳಿದನು.

ಅರ್ಥ:
ಕುಲ: ವಂಶ; ಕಂಟಕ: ತೊಂದರೆ; ಕಳೆ: ನಾಶಮಾಡು; ಊರು: ಪುರ; ಅಳಿವು: ನಾಶ; ಕುಲ: ವಂಶ; ದೇಶ: ರಾಷ್ಟ್ರ; ಕೆಡಿಸು: ನಾಶಮಾಡು; ಇಳೆ: ಭೂಮಿ; ಅಖಿಳ: ಎಲ್ಲಾ; ಬಿಸುಡು: ಹೊರಹಾಕು; ಉಳಿವು: ಜೀವಿಸು; ವಚನ: ಮಾತು; ಬಿಸುಟು: ಹೊರಹಾಕು;

ಪದವಿಂಗಡಣೆ:
ಕುಲಕೆ +ಕಂಟಕನಾದಡ್+ಒಬ್ಬನ
ಕಳೆವುದ್+ಊರ್+ಅಳಿವಿನಲಿ +ಕಳೆವುದು
ಕುಲವನೊಂದನು+ ದೇಶದ್+ಅಳಿವಿನಲ್+ಊರ +ಕೆಡಿಸುವುದು
ಇಳೆಯನ್+ಅಖಿಳವ +ಬಿಸುಡುವುದು +ತ
ನ್ನುಳಿವ +ಮಾಡುವುದೆಂಬ +ವಚನವ
ತಿಳಿವುದ್+ಈತನ+ ಬಿಸುಟು +ಕಳೆ +ನೀನೆಂದನಾ+ ವಿದುರ

ಅಚ್ಚರಿ:
(೧) ಸುಭಾಷಿತದ ನುಡಿಯನ್ನು ವಿವರಿಸಿರುವ ಪರಿ
(೨) ಕಳೆವು – ೨ ಸಾಲಿನ ಮೊದಲ ಮತ್ತು ಕೊನೆಯ ಪದ

ಪದ್ಯ ೪: ಬಾಣಗಳ ಸದ್ದು ಹೇಗಿತ್ತು?

ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ (ದ್ರೋಣ ಪರ್ವ, ೧೮ ಸಂಧಿ, ೪ ಪದ್ಯ)

ತಾತ್ಪರ್ಯ:
ಯಮನ ಬೆಳೆ ಬಂದ ಗದ್ದೆಯನ್ನು ಮುತ್ತಿದ ಗಿಳಿಗಳೋ ದ್ರೋಣನ ಬಾಣಗಳೋ ಎಂದು ಹೇಳಲಾಗದು. ನಿಳಿ, ನಿಟಿಲು, ಭುಗಿಲ್, ಛಿಳಿ ಛಿಳಿ, ಛಿಟಿಲು, ಭೋರ್, ಖಣಿ ಖಟಿಲು ಖಳಿಲೆಂಬ ಬಾಣಗಳ ಸದ್ದು ಆಕಾಶದಲ್ಲೆಲ್ಲಾ ತುಂಬಿ ಮಹಾದ್ಭುತವನ್ನು ಮೂಡಿಸಿತು.

ಅರ್ಥ:
ಇಳೆ: ಭೂಮಿ; ಅದುಭುತ: ಆಶ್ಚರ್ಯ; ಕೃತಾಂತ: ಯಮ; ಫಲಿತ: ಹಣ್ಣಾದ; ಶಾಳೀವನ: ಬತ್ತದ ಗದ್ದೆ; ಮುತ್ತು: ಆವರಿಸು; ಗಿಳಿ: ಶುಕ; ಆಚಾರ್ಯ: ಗುರು; ಅಂಬು: ಬಾಣ; ಮಹಾದೇವ: ಶಿವ; ಅಂಬು: ಬಾಣ; ದನಿ: ಧ್ವನಿ, ಸದ್ದು; ತುಂಬು: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಇಳೆಯೊಳ್+ಅದುಭುತವ್+ಇದು +ಕೃತಾಂತನ
ಫಲಿತ +ಶಾಳೀವನವ+ ಮುತ್ತಿದ
ಗಿಳಿಗಳೋ +ಆಚಾರ್ಯನ್+ಅಂಬುಗಳೋ +ಮಹಾದೇವ
ನಿಳಿನಿಳಿಲು +ಭುಗಿಲೆಂಬ +ಛಿಳಿ+ಛಿಳಿ
ಛಿಳಿ+ಛಿಟಿಲು +ಭೋರೆಂಬ +ಖಣಿ+ಖಟಿ
ಖಳಿಲು +ಖಳಿಲೆಂಬ್+ಅಂಬುಗಳ +ದನಿ +ತುಂಬಿತ್+ಅಂಬರವ

ಅಚ್ಚರಿ:
(೧) ಬಾಣಗಳ ಶಬ್ದವನ್ನು ವಿವರಿಸುವ ಪದಗಳು – ನಿಳಿನಿಳಿ, ಭುಗಿಲ್, ಛಿಳಿಛಿಳಿ, ಛಿಳಿಛಿಟಿಲು, ಭೋರ್, ಖಣಿಖಟಿ, ಖಳಿಲು, ಖಳಿ

ಪದ್ಯ ೪೪: ಪಾಂಡವರ ಸ್ಥಿತಿ ಹೇಗಾಯಿತು?

ಮುರಿದುದಾಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲಿರಿಯೆನಾನೆಂದ (ದ್ರೋಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯ ಮುರಿಯಿತು. ಭೂಮಿ ಬಿರಿಯುವಂತೆ ಕೌರವ ಬಲ ಬೊಬ್ಬಿರಿಯಿತು. ಅವರಿಗೆ ಅಪಜಯದ ಮಳೆ ವರ್ಷಿಸಿತು ಇವರಿಗೆ ಹಾವು ಹಗ್ಗದ ಭಯ ಬಿಟ್ಟಿತು. ಆಚೆಯ ಸೈನ್ಯ ಓಡಿತು, ಈ ಸೈನ್ಯ ಮುನ್ನುಗ್ಗಿತು. ಕೌರವನ ರಣೋತ್ಸಾಹ ಅವರ್ಣನೀಯವಾಗಿತ್ತು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಇಳೆ: ಭೂಮಿ; ಒಡೆಯ: ರಾಜ; ಬೊಬ್ಬಿರಿ: ಗರ್ಜಿಸು; ಅಪಜಯ: ಸೋಳು; ಮಳೆ: ವರ್ಷ; ಹರಿ: ಪ್ರವಹಿಸು, ಚಲಿಸು; ಸರ್ಪ: ಉರಗ; ರಜ್ಜು: ಹಗ್ಗ; ತೆರಳು: ಮರಳು; ಥಟ್ಟು: ಗುಂಪು; ಮುಂದಣಿ: ಮುಂಚೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಒಡ್ಡು: ರಾಶಿ, ಸಮೂಹ; ಅರಸ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಮುರಿದುದ್+ಆ+ಬಲವ್ + ಇಳೆ+ಒಡೆಯೆ+ ಬೊ
ಬ್ಬಿರಿದುದ್+ಈ+ ಬಲವ್+ಅಪಜಯದ +ಮಳೆ
ಗರೆದುದ್+ಅವರಿಗೆ +ಹರಿದುದ್+ಇವರಿಗೆ+ ಸರ್ಪ+ರಜ್ಜು+ಭಯ
ತೆರಳಿತ್+ಆಚೆಯ +ಥಟ್ಟು +ಮುಂದಣಿಗ್
ಉರವಣಿಸಿತ್+ಈ+ ಒಡ್ಡು +ಕೌರವರ್
ಅರಸನ್+ಉತ್ಸಾಹವನು +ಬಣ್ಣಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಕೌರವರ ಸ್ಥಿತಿಯನ್ನು ಹೇಳುವ ಪರಿ – ಹರಿದುದಿವರಿಗೆ ಸರ್ಪರಜ್ಜುಭಯ
(೨) ರಾಜನನ್ನು ಇಳೆಯೊಡೆಯ ಎಂದು ಕರೆದಿರುವುದು

ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ

ಪದ್ಯ ೮೫: ಭೀಮನು ಕೀಚಕನಿಗೆ ಏನು ಹೇಳಿದನು?

ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ (ವಿರಾಟ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ಕತ್ತಲಲ್ಲಿ ಮಂಚದ ಮೇಲೆ ಮಲಗಿದ್ದ ಭೀಮನು, ಕೀಚಕ, ನಿನ್ನನ್ನು ಹೋಲುವ ಚೆಲುವರಿಲ್ಲ, ಅದು ಹಾಗಿರಲಿ, ನಾನು ಅಷ್ಟೇ ಈ ಲೋಕದ ಹೆಂಗಸರ ರೀತಿಯು ನನ್ನದಲ್ಲ, ನನ್ನ ರೂಪವೇ ಬೇರೆ. ಈ ಭೂಮಿಯಲ್ಲಿ ನನಗೆ ಸರಿಸಮರಿಲ್ಲ. ಅಂತಹ ನಾನು ನಿನಗೆ ಒಲಿದು ಬಂದಿದ್ದೇನೆ, ನನ್ನ ರೀತಿಯನ್ನು ಇನ್ನು ಮೇಲೆ ನೋಡುವೆಯಂತೆ, ಬೇಗ ತೋರಿಸುತ್ತೇನೆ ಎಂದು ಕೀಚಕನಿಗೆ ಭೀಮನು ಹೇಳಿದನು.

ಅರ್ಥ:
ಹೋಲು: ಎಣೆಯಾಗು, ಸದೃಶವಾಗು; ಚೆಲುವು: ಸುಂದರ; ಲೋಕ: ಜಗತ್ತು; ಲಲನೆ: ಹೆಣ್ಣು; ಪರಿ: ರೀತಿ, ಕ್ರಮ; ರೂಪು: ಆಕಾರ; ಬೇರೆ: ಅನ್ಯ; ಇಳೆ: ಲೋಕ; ಎಣೆ: ಸಮ, ಸಾಟಿ; ಒಲಿ: ಬಯಸು, ಅಪೇಕ್ಷಿಸು; ಬಂದು: ಆಗಮಿಸು; ಪರಿ: ರೀತಿ; ಬಳಿಕ: ನಂತರ; ತೋರು: ಪ್ರದರ್ಶಿಸು;

ಪದವಿಂಗಡಣೆ:
ಎಲವೊ +ಕೀಚಕ +ನಿನ್ನ +ಹೋಲುವ
ಚೆಲುವರ್+ಇಲ್ಲಂತಿರಲಿ +ಲೋಕದ
ಲಲನೆಯರ +ಪರಿಯಲ್ಲ+ ತನ್ನಯ +ರೂಪು +ಬೇರೊಂದು
ಇಳೆಯೊಳ್+ಎನಗ್+ಎಣೆಯಿಲ್ಲ +ನಿನಗ್
ಆನ್+ಒಲಿದು +ಬಂದೆನು +ತನ್ನ +ಪರಿಯನು
ಬಳಿಕ +ನೋಡಾ +ಬೇಗ +ತೋರುವೆನ್+ಎಂದನಾ +ಭೀಮ

ಅಚ್ಚರಿ:
(೧) ಸೈರಂಧ್ರಿ ತನ್ನ ರೂಪದ ಬಗ್ಗೆ ಹೇಳುವ ಪರಿ – ಇಳೆಯೊಳೆನಗೆಣೆಯಿಲ್ಲ; ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು

ಪದ್ಯ ೪೨: ಕುರುಕ್ಷೇತ್ರದಲ್ಲಿ ಸೈನ್ಯವು ಯಾವ ದಿಕ್ಕಿಗೆ ಬೀಡು ಬಿಟ್ಟಿತು?

ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ (ಉದ್ಯೋಗ ಪರ್ವ, ೧೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರೆ ಈ ಸೈನ್ಯದ ಸಂಭ್ರಮ, ಸಜ್ಜುಗಳು, ಉತ್ಸಾಹದ ನಡೆ, ಹೊಸದೆಂದು ಜಗತ್ತು ಆಶ್ಚರ್ಯ ಪಟ್ಟಿತು. ಪಾಂಡವ ಸೈನ್ಯವು ಕುರುಕ್ಷೇತ್ರಕ್ಕೆ ಬಂದರು. ಶತ್ರುಗಳನ್ನು ಗೆದ್ದವರು ಭೂಮಿಯನ್ನು ಗೆದ್ದರು. ಶ್ರೀಕೃಷ್ಣನ ಅಪ್ಪಣೆಯಂತೆ ಕುರುಕ್ಷೇತ್ರದ ಪಶ್ಚಿಮ ಭಾಗದಲ್ಲಿ ಸೈನ್ಯ ಸಾಗರವು ಬೀಡು ಬಿಟ್ಟಿತು.

ಅರ್ಥ:
ನಡೆ: ಚಲಿಸು; ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ರಾಯ: ರಾಜ; ಕಟಕ:ಸೈನ್ಯ, ಗುಂಪು; ತೆರಳು: ಹೋಗು, ನಡೆ; ಸೌರಂಭ:ಸಂಭ್ರಮ, ಸಡಗರ; ಇಳೆ: ಭೂಮಿ; ಅಚ್ಚರಿ: ಆಶ್ಚರ್ಯ; ಬೀರು: ತೋರು; ವರ: ಶ್ರೇಷ್ಠ; ಗಮಿಸು: ಹೊರಡು; ಅರಿ: ವೈರಿ; ವಿಜಯ: ಗೆಲುವು; ನೆಲ: ಭೂಮಿ; ಗೆಲಿದು: ಗೆದ್ದು; ಹರಿ: ಕೃಷ್ಣ; ನೇಮ: ಆಜ್ಞೆ; ಎಡೆ: ಪ್ರದೇಶ, ಜಾಗ; ಅರಿ: ತಿಳಿ; ಬಲ: ಸೈನ್ಯ; ಶರಧಿ: ಸಾಗರ; ಬಿಟ್ಟುದು: ನೆಲೆಸು; ಕಳ: ರಣರಂಗ; ಪಶ್ಚಿಮ: ವಾಮ; ದೆಸೆ: ದಿಕ್ಕು; ಪಸರು: ಹಬ್ಬು, ಹರಡು;

ಪದವಿಂಗಡಣೆ:
ಅರರೆ +ನಡೆದುದು +ರಾಯ +ಕಟಕದ
ತೆರಳಿಕೆಯ +ಸೌರಂಭವ್+ಇಳೆಗ್
ಅಚ್ಚರಿಯ +ಬೀರಿತು +ವರ+ಕುರುಕ್ಷೇತ್ರಕ್ಕೆ +ಗಮಿಸಿದರು
ಅರಿವಿಜಯಿಗಳು +ನೆಲನ +ಗೆಲಿದರು
ಹರಿಯ +ನೇಮದಲ್+ಎಡೆಯರಿದು +ಬಲ
ಶರಧಿ +ಬಿಟ್ಟುದು +ಕಳನ +ಪಶ್ಚಿಮ +ದೆಸೆಯ +ಪಸರದಲಿ

ಅಚ್ಚರಿ:
(೧) ಇಳೆ, ನೆಲ, ಎಡೆ – ಸಾಮ್ಯ ಪದಗಳು;

ಪದ್ಯ ೧೮: ಭೂಮಿಯ ಭೋಗವು ಕಳೆದೊಡನೆ ಮನುಷ್ಯರು ಎಲ್ಲಿ ಹೋಗುತ್ತಾರೆ?

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿ ಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು
ಕಳೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರಿದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೂರ್ಯನು ಸಂಜೆ ಪಡುವಣ ದಿಕ್ಕಿನಲ್ಲಿ ಸಮುದ್ರಕ್ಕಿಳಿಯಲು ಅನೇಕ ಜಾತಿಯ ಪಕ್ಷಿಗಳು ತಮ್ಮ ಕಲರವ ಮಾಡುತ್ತಾ ಒಂದು ಮರವನ್ನು ಸೇರಿ ರಾತ್ರಿಯನ್ನು ಕಳೆದು ಮರುದಿನ ಮುಂಜಾನೆ ಸೂರ್ಯನು ಹುಟ್ಟುವ ವೇಳೆಗೆ ದಿಕ್ಕು ದಿಕ್ಕಿಗೆ ಹೋಗಿ ಬಿಡುತ್ತವೆ. ಅದರಂತೆ ಭೂಮಿಯ ಭೋಗವನ್ನು ಕಳೆದೊಡನೆ ಮನುಷ್ಯರು ಲೋಕಾಂತರಗಳಿಗೆ ಹೋಗುತ್ತಾರೆ.

ಅರ್ಥ:
ನಳಿನ: ಕಮಲ; ನಳಿನಮಿತ್ರ: ಸೂರ್ಯ; ಪಶ್ಚಿಮ: ಪಡುವಣ; ಅಂಬುಧಿ: ಸಾಗರ; ಇಳೆ: ಭೂಮಿ; ನಾನಾ: ಹಲವಾರು; ಪಕ್ಷಿ: ಖಗ; ಜಾತಿ: ಕುಲ; ಉಲಿವುತ: ಕಲರವ; ವೃಕ್ಷ: ಮರ; ಏರು: ಹತ್ತು; ರಾತ್ರಿ: ಇರುಳು; ಕಳೆ: ದಾಟು; ದೆಸೆ: ದಿಕ್ಕು; ಹರಿವು: ಹಾರು, ಹೋಗು; ಭೋಗ:ಸುಖವನ್ನು ಅನುಭವಿಸುವುದು; ದೃಷ್ಟಿ: ನೋಟ; ತೀರಿದ: ಮುಗಿದ; ಬಳಿಕ: ನಂತರ; ಲೋಕ: ಜಗತ್ತು; ಲೋಕಾಂತರ: ಬೇರೆ ಲೋಕ; ಎಯ್ದು: ಹೋಗಿಸೇರು; ಮುನಿ: ಋಷಿ;

ಪದವಿಂಗಡಣೆ:
ನಳಿನಮಿತ್ರನು +ಪಶ್ಚಿಮ+ಅಂಬುಧಿಗ್
ಇಳಿಯೆ +ನಾನಾ +ಪಕ್ಷಿ +ಜಾತಿಗಳ್
ಉಲಿವುತೈತಂದ್+ಒಂದೊಂದು +ವೃಕ್ಷವನೇರಿ +ರಾತ್ರಿಯನು
ಕಳೆದು +ನಾನಾ +ದೆಸೆಗೆ +ಹರಿವವೊಲ್
ಇಳೆಯ +ಭೋಗದ +ದೃಷ್ಟಿ +ತೀರಿದ
ಬಳಿಕ+ ಲೋಕಾಂತರವನ್+ಎಯ್ದುವರ್+ಎಂದನಾ +ಮುನಿಪ

ಅಚ್ಚರಿ:
(೧) ಸೂರ್ಯನನ್ನು ನಳಿನಮಿತ್ರ ಎಂದು ಕರೆದಿರುವುದು
(೨) ಇಳೆಯ – ೨, ೫ ಸಾಲಿನ ಮೊದಲ ಪದ
(೩) ನಾನಾ – ೨, ೪ ಸಾಲಿನ ಎರಡನೆ ಪದ
(೪) ಉಪಮಾನದ ಪ್ರಯೋಗ – ನಳಿನಮಿತ್ರನು ಪಶ್ಚಿಮಾಂಬುಧಿಗಿಳಿಯೆ ನಾನಾ ಪಕ್ಷಿ ಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು ಕಳೆದು ನಾನಾ ದೆಸೆಗೆ ಹರಿವವೊಲ್

ಪದ್ಯ ೧೨: ಕೃಷ್ಣನನ್ನು ಕಳುಹಿಸಿದರೂ ಕೃಷ್ಣನು ಎಲ್ಲಿದ್ದನು?

ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಷ್ಣನು ದ್ವಾರಕೆಗೆ ಹೋದರೂ ಪಾಂಡವರ ಚಿತ್ತದಲ್ಲಿ ಅವನು ನೆಲಸಿದ್ದನು, ಕಣ್ಣುಗಳಿಂದ ಅವನು ದೂರವಾದರೂ ಮನಸ್ಸು ಅವನನ್ನು ಕಳುಹಿಸಲಿಲ್ಲ, ದ್ವಾರಕೆಗೆ ಕೃಷ್ಣ ಹೋದ ಸುದ್ದಿ ಹಬ್ಬಿತು, ಪಾಂಡವರು ತಮ್ಮ ಅರಮನೆಗೆ ಹೋಗಿ ಒಳ್ಳೆಯಮನಸ್ಸಿನಿಂದ ರಾಜ್ಯಭಾರ ಮಾಡುತ್ತಿದ್ದರು.

ಅರ್ಥ:
ಕಳುಹಿ: ಬೀಳ್ಕೊಟ್ಟು; ಕಂಗಳು: ನಯನ; ಮರಳು: ಹಿಂದಿರುಗು; ಮನ: ಮನಸ್ಸು, ಚಿತ್ತ; ಕಳುಹದ: ಬೀಳ್ಕೊಡದೆ; ಮಂಗಳ: ಶುಭ; ಮಹೋತ್ಸವ: ಸಮಾರಂಭ; ನುಡಿ: ಮಾತು; ಹೊಕ್ಕು: ಸೇರು; ಅಸುರಾರಿ: ಕೃಷ್ಣ; ಬಳಿಕ: ನಂತರ; ನಿಜ:ಸ್ವಂತ; ರಾಜಭವನ: ಅರಮನೆ; ಸ್ಥಳ: ಪ್ರದೇಶ, ಜಾಗ; ಬಂದು: ಆಗಮಿಸು; ಸೌಮನಸ್ಯ: ಒಳ್ಳೆಯ ಮನಸ್ಸುಳ್ಳ; ಇಳೆ: ಭೂಮಿ; ಪಾಲಿಸು: ಸಲಹು; ಅವನೀಪಾಲ: ರಾಜ; ಒಸಗೆ: ಶುಭ, ಮಂಗಳ;

ಪದವಿಂಗಡಣೆ:
ಕಳುಹಿ +ಕಂಗಳು +ಮರಳಿದವು +ಮನ
ಕಳುಹದಾ +ದ್ವಾರಾವತಿಗೆ+ ಮಂ
ಗಳ +ಮಹೋತ್ಸವದ್+ಒಸಗೆ +ನುಡಿಯಲಿ +ಹೊಕ್ಕನ್+ಅಸುರಾರಿ
ಬಳಿಕಿವರು +ನಿಜ +ರಾಜಭವನ
ಸ್ಥಳಕೆ+ ಬಂದರು +ಸೌಮನಸ್ಯದಲ್
ಇಳೆಯ +ಪಾಲಿಸುತಿರ್ದರ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಇಳೆ, ಅವನಿ – ಸಮನಾರ್ಥಕ ಪದ
(೨) ಜೋಡಿ ಪದಗಳು- “ಕ”-ಕಳುಹಿ ಕಂಗಳು; “ಮ”- ಮರಳಿದವು ಮನ