ಪದ್ಯ ೨೧: ಭೀಮ ಕೌರವನ ಯುದ್ಧ ಹೇಗೆ ನಡೆಯಿತು?

ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ (ಗದಾ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಮನ ಹೊಯ್ಲನ್ನು ತಪ್ಪಿಸಿ ಅವನ ಮೇಲೆ ಕೌರವನು ಹೊಯ್ದನು. ಭೀಮನು ಗದೆಯನ್ನು ಅಡ್ಡಹಿದಿದು, ಕೌರವನನ್ನು ಹೊಯ್ದನು. ಭೀಮನ ಹೊಡೆತವನ್ನು ಕೌರವನು ತಪ್ಪಿಸಿಕೊಂಡನು. ಕೌರವನು ಸರಿದೊಡನೆ ಭೀಮನು ನುಗ್ಗಿ ಹೊಯ್ದನು. ಕೌರವನು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡನು. ಇಬ್ಬರ ಆಯುಧಪ್ರಯೋಗವನ್ನು ಕಂಡು ದೇವತೆಗಳೂ ಬೆರಗಾದರು.

ಅರ್ಥ:
ಹೊಯ್ದು: ಹೊಡೆ; ಬಿಡಿಸು: ಸಡಲಿಸು; ಅನಿಲಜ: ಭೀಮ; ಅವನಿಪ: ರಾಜ; ಒಡ್ಡು: ಅಡ್ಡ ಗಟ್ಟೆ; ಗದೆ: ಮುದ್ಗರ; ಕಾಯು: ತಾಳು; ತಿವಿ: ಚುಚ್ಚು; ನೃಪತಿ: ರಾಜ; ವಂಚಿಸು: ತಪ್ಪಿಸಿಕೊಳ್ಳು; ಇಟ್ಟಣಿಸು: ದಟ್ಟವಾಗು; ಪವನಜ: ಭೀಮ; ಒಲೆ; ಭೂಪ: ರಾಜ; ಕಯ್ದುಕಾರ: ಹೋರಾಟ; ಬೆರಗಾಗು: ಆಶ್ಚರ್ಯ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಹೊಯ್ದು+ ಬಿಡಿಸಿದಡ್+ಅನಿಲಜನ +ಮೇ
ಲ್ವಾಯ್ದನ್+ಅವನಿಪನ್+ಒಡ್ಡಿ+ ಗದೆಯಲಿ
ಕಾಯ್ದು +ತಿವಿದನು +ಭೀಮಸೇನನ+ ನೃಪತಿ+ ವಂಚಿಸಿದ
ಮೆಯ್ದೆಗೆದಡ್+ಇಟ್ಟಣಿಸಿ +ಪವನಜ
ಹೊಯ್ದಡ್+ಒಲೆದನು +ಭೂಪನ್+ಇಬ್ಬರ
ಕಯ್ದುಕಾರತನಕ್ಕೆ+ ಬೆರಗಾದುದು +ಸುರಸ್ತೋಮ

ಅಚ್ಚರಿ:
(೧) ಅನಿಲಜ, ಪವನಜ, ಭೀಮಸೇನ – ಭೀಮನನ್ನು ಕರೆದ ಪರಿ
(೨) ಅವನಿಪ, ನೃಪತಿ, ಭೂಪ – ಕೌರವನನ್ನು ಕರೆದ ಪರಿ

ಪದ್ಯ ೪೨: ಯುದ್ಧದಲ್ಲಿ ಯಾವ ರೀತಿಯ ಮಂಜು ಆವರಿಸಿತು?

ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ (ಶಲ್ಯ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಲ್ಯನ ಬಾಣಗಳನ್ನು ಲೆಕ್ಕಿಸದೆ ಭೀಮನ ದಳದ ಆನೆಗಳು ಮುಮ್ದಾದವು. ಸಾತ್ಯಕಿ ಉಪಪಾಂಡವರು ಮೊದಲಾದ ಯುದ್ಧ ನಿಪುಣರೂ ಪ್ರಖ್ಯಾತರೂ ಆದ ವೀರರು ಯುದ್ಧಕ್ಕೆ ಬರಲು ಧೂಳಿನ ಮಂಜು ಕವಿಯಿತು.

ಅರ್ಥ:
ಧರಣಿಪತಿ: ರಾಜ; ಕರಿಘಟೆ: ಆನೆಗಳ ಗುಂಪು; ಇಟ್ಟಣಿಸು: ದಟ್ಟವಾಗು, ಒತ್ತಾಗು; ಮೋಹರ: ಯುದ್ಧ; ರಥ: ಬಂಡಿ; ಸುತ: ಮಗ; ಬಿರುದು: ಗೌರವ ಸೂಚಕ ಹೆಸರು; ಭಟ: ಸೈನಿಕ; ಔಕು: ನೂಕು; ರಾಯ: ರಾಜ; ಧುರ: ಯುದ್ಧ, ಕಾಳಗ; ಧೀವಸಿ: ಸಾಹಸ, ವೀರ; ನಿಹಾರ: ಮಂಜು; ಉರವಣೆ: ಆತುರ, ಆಧಿಕ್ಯ; ಅಂಬು: ಬಾಣ; ಮಳೆ: ವರ್ಷ; ಮನ್ನಿಸು: ಅಂಗೀಕರಿಸು, ಒಪ್ಪು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಕರಿಘಟೆಗಳ್+ಇಟ್ಟಣಿಸಿದವು +ಮೋ
ಹರಿಸಿದವು+ ಸಾತ್ಯಕಿಯ +ರಥವಾ +ದ್ರೌಪದೀ+ಸುತರ
ಬಿರುದ +ಭಟರ್+ಔಕಿದರು +ರಾಯನ
ಧುರದ +ಧೀವಸಿಗಳು +ನಿಹಾರದಲ್
ಉರವಣಿಸಿದರು +ಶಲ್ಯನ್+ಅಂಬಿನ +ಮಳೆಯ +ಮನ್ನಿಸದೆ

ಅಚ್ಚರಿ:
(೧) ರೂಪಕದ ಪ್ರಯೋಗ – ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು

ಪದ್ಯ ೮೧: ಎರಡು ಕಡೆಯ ಆನೆಯ ಸೈನ್ಯವು ಹೇಗೆ ಯುದ್ಧ ಮಾಡಿದವು?

ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು (ಭೀಷ್ಮ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶತ್ರು ಸೈನಿಕರನ್ನು ಕಾಲಲ್ಲಿ ತುಳಿದು, ಸೊಂಡಿಲಿನಿಂದ ಸೀಳಿಹಾಕಿ, ದಂತಗಳನ್ನು ಮುಂದೆ ಮಾದಿ, ಮುಖವನ್ನು ಆಚೆ ಈಚೆ ತೂಗಿ ಎದುರಿದ್ದ ಆನೆಯು ಓಡಿಹೋದರೆ, ಅಟ್ಟಿಸಿಕೊಂಡು ಹೋಗಿ, ಯೋಧರನ್ನು ಹಿಡಿದು ಅಪ್ಪಳಿಸಿ ಕೆಡವಲು ಹೆಣಗಳ ತಂಡವೇ ಕಾಣಿಸಿತು. ಆನೆ, ರಥ ಕಾಲಾಳುಗಲನ್ನು ಎರಡು ಸೈನ್ಯಗಳ ಆನೆಗಳೂ ಸವರಿದವು.

ಅರ್ಥ:
ಮೆಟ್ಟು: ತುಳಿ; ಸೀಳು: ಕತ್ತರಿಸು; ಹಾಯ್ಕು: ಹೊಡೆ; ದಾಡೆ:ದವಡೆ, ಒಸಡು; ಕೊಟ್ಟು: ನೀಡು; ಮೋರೆ: ಮುಖ; ಒಲೆ: ತೂಗಾಡು; ಹರಿ: ಸೀಳು; ಅಟ್ಟು: ಹಿಂಬಾಲಿಸು; ಹಿಡಿ: ಬಂಧಿಸು; ಅಪ್ಪಳಿಸು: ತಟ್ಟು, ತಾಗು;
ಜೋದ: ಯೋಧ; ಅಂಘ್ರಿ: ಪಾದ; ಅರೆ: ನುಣ್ಣಗೆ ಮಾಡು; ಇಟ್ಟು: ಇಡು; ಕೆಡಹು: ನಾಶಮಾಡು; ಹೆಣ: ಜೀವವಿಲ್ಲದ ಶರೀರ; ಲೊಟ್ಟಾಲೊಟ್ಟಿ: ಲಟಲಟ ಶಬ್ದ; ಮಸಗು: ಹರಡು; ಕೆರಳು; ತುರಗ: ಕುದರೆ; ನರ: ಮನುಷ್ಯ; ರಥ: ಬಂಡಿ; ಇಟ್ಟಣ: ಹಿಂಸೆ, ಆಘಾತ; ಸವರು: ನಾಶಮಾಡು; ದಂತಿ: ಆನೆ; ವ್ರಾತ: ಗುಂಪು; ಉಭಯ: ಎರಡು;

ಪದವಿಂಗಡಣೆ:
ಮೆಟ್ಟಿ+ ಸೀಳಿದು+ಹಾಯ್ಕಿ +ದಾಡೆಯ
ಕೊಟ್ಟು +ಮೋರೆಯನ್+ಒಲೆದು +ಹರಿದರೆ
ಅಟ್ಟಿ +ಹಿಡಿದಪ್ಪಳಿಸಿ+ ಜೋದರನ್+ಅಂಘ್ರಿಯಿಂದ್+ಅರೆದು
ಇಟ್ಟು+ ಕೆಡಹಲು +ಹೆಣನ +ಲೊಟ್ಟಾ
ಲೊಟ್ಟಿ +ಮಸಗಿತು+ ತುರಗ+ ನರ+ ರಥವ್
ಇಟ್ಟಣಿಸೆ +ಸವರಿದವು +ದಂತಿ+ವ್ರಾತವ್+ಉಭಯದೊಳು

ಅಚ್ಚರಿ:
(೧) ಮೆಟ್ಟು, ಸೀಳು, ಹಾಯ್ಕು, ಒಲೆ, ಹರಿ, ಅಟ್ಟಿ, ಅಪ್ಪಳಿಸಿ, ಇಟ್ಟಣಿಸಿ, ಕೆಡಹು, ಸವರು – ಹೋರಟವನ್ನು ವಿವರಿಸುವ ಪದಗಳು