ಪದ್ಯ ೧೧: ಕನಕನು ಕೃತ್ಯೆಗೆ ಯಾವ ಕೆಲಸವನ್ನು ನೇಮಿಸಿದನು?

ಹೋಗು ಪಾಂಡವರಾಯರಿಹ ಬನ
ಕಾಗಿ ನೀನವರೈವರನು ನೆರೆ
ನೀಗುತಾಯಾಹುತಿಯನಿಂದನುವಾಗಿ ಭಕ್ಷಿಪುದು
ಬೇಗದಲಿ ಕೊಲು ಹೋಗಿಯವರನು
ಸಾಗಿಸಿಯೆಯಡಗಗ್ನಿಕುಂಡದೊ
ಳೀಗಿದುವೆ ತಾ ನೇಮವೆಂದನು ಕನಕ ಕೈಮುಗಿದು (ಅರಣ್ಯ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕನಕನು ಕೃತ್ಯೆಗೆ ಕೈಮುಗಿದು, ಪಾಂದವರಿರುವ ವನಕ್ಕೆ ಹೋಗಿ ಅವರನ್ನು ತಿನ್ನು. ಅವರೇ ನಿನಗಾಹುತಿ, ಶೀಘ್ರವಾಗಿ ಅವರನ್ನು ತಿಂದು, ಅಗ್ನಿಕುಂಡದಲ್ಲಿ ಅಡಗು, ಇದೇ ನೀನು ಮಾಡಬೇಕಾಗಿರುವ ಕೆಲಸ ಎಂದು ಹೇಳಿದನು.

ಅರ್ಥ:
ಹೋಗು: ತೆರಳು; ರಾಯ: ರಾಜ; ಇಹ: ವಾಸಿಸುವ; ಬನ: ಕಾಡು; ನೆರೆ: ಸಮೀಪ, ಹತ್ತಿರ, ಕೂಡು; ನೀಗು: ತಿನ್ನು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಅನುವು: ರೀತಿ; ಭಕ್ಷಿಪುದು: ತಿನ್ನುವುದು; ಬೇಗ; ಶೀಘ್ರ; ಕೊಲು: ಸಾಯಿಸು; ಸಾಗಿಸು: ಕಳುಹಿಸು; ಅಡಗು: ಬಚ್ಚಿಟ್ಟುಕೊಳ್ಳು; ಅಗ್ನಿ: ಬೆಂಕಿ; ಕುಂಡ:ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ನೇಮ: ಕೆಲಸ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹೋಗು +ಪಾಂಡವರಾಯರ್+ಇಹ +ಬನ
ಕಾಗಿ +ನೀನವರ್+ಐವರನು +ನೆರೆ
ನೀಗುತಾ+ಆಹುತಿಯನಿಂದ್+ಅನುವಾಗಿ +ಭಕ್ಷಿಪುದು
ಬೇಗದಲಿ +ಕೊಲು +ಹೋಗಿ+ಅವರನು
ಸಾಗಿಸಿಯೆ+ಅಡಗ್+ಅಗ್ನಿಕುಂಡದೊಳ್
ಈಗಿದುವೆ +ತಾ +ನೇಮವೆಂದನು+ ಕನಕ+ ಕೈಮುಗಿದು

ಅಚ್ಚರಿ:
(೧)ಅನುವಾಗಿ , ಆಹುತಿ, ಅಡಗು, ಅಗ್ನಿ, ಅವರನು – ಅ ಕಾರದ ಪದಗಳ ಬಳಕೆ

ಪದ್ಯ ೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು
ಏಳು ದಿಟವೈಯೆಮ್ಮ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾದ ಮನ್ಮಥನ ಯಮನ ದಾರಿಯನ್ನು ಪಾಂಡವರು ಹಿಡಿಯಲಿದ್ದಾರೆ. ಹೇ ಕೃಷ್ಣ ನೀನು ಏಳು, ನನ್ನ ಮಾತು ನಿಜ. ನಮ್ಮ ಭಾಷೆಯನ್ನು ನಡೆಸಿಕೊಡು. ಸಂಕಲ್ಪ ಭಂಗವಾದರೆ ನಾವು ಹಾಳಾದಂತೆ. ಕೃಷ್ಣ ಬೇಗ ಬಾ ಎಂದು ಬೇಡಿದಳು.

ಅರ್ಥ:
ಕಂಠ: ಕೊರಳು; ನೀಲಕಂಠ: ಶಿವ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಆಹುತಿ: ಬಲಿ; ಮುಗ್ಗು: ಬಾಗು, ಮಣಿ; ಕಾಲ: ಸಮಯ; ಕಾಮ: ಮನ್ಮಥ; ಪಥ: ದಾರಿ; ಪಡೆ: ದೊರಕು; ನಂದನ: ಮಕ್ಕಳು; ಏಳು: ಎದ್ದೇಳು; ದಿಟ: ಸತ್ಯ; ನುಡಿ: ಮಾತು; ಪಾಲಿಸು: ರಕ್ಷಿಸು; ಸಂಕಲ್ಪ: ನಿರ್ಧಾರ, ನಿರ್ಣಯ; ಅಳಿ: ನಾಶ; ಹಾಳು: ನಾಶ; ಮೈದೋರು: ಕಾಣಿಸಿಕೋ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ನೀಲಕಂಠನ+ ನೇತ್ರ+ವಹ್ನಿ
ಜ್ವಾಲೆಗ್+ಆಹುತಿಯಾಗಿ +ಮುಗ್ಗಿದ
ಕಾಲ +ಕಾಮನ +ಪಥವ +ಪಡೆವರು+ ಪಾಂಡುನಂದನರು
ಏಳು +ದಿಟವೈ+ಎಮ್ಮ +ನುಡಿಯನು
ಪಾಲಿಸೈ +ಸಂಕಲ್ಪವ್+ಅಳಿದೊಡೆ
ಹಾಳು +ಹೊರುವುದು +ಕೃಷ್ಣ+ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು

ಪದ್ಯ ೯೮: ಪಾಶುಪತಾಸ್ತ್ರದ ಮಹತ್ವವೇನು?

ಸವಡಿನುಡಿಯುಂಟೇ ಚತುರ್ದಶ
ಭುವನದಾಹವ ದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ (ಅರಣ್ಯ ಪರ್ವ, ೭ ಸಂಧಿ, ೯೮ ಪದ್ಯ)

ತಾತ್ಪರ್ಯ:
ಆರ್ಜುನನ ಬೇಡಿಕೆಯನ್ನು ಕೇಳಿ, ಕೊಟ್ಟ ಮಾತಿಗೆ ಎರಡುಂಟೆ ಅರ್ಜುನ ಎಂದು ಹೇಳುತ್ತಾ, ಹದಿನಾಲ್ಕು ಲೋಕಗಳನ್ನು ಯುದ್ಧದಲ್ಲಿ ಮಣಿಸುವ ಶಕ್ತಿಯುಳ್ಳ ಬ್ರಹ್ಮ ಶಿರೋಸ್ತ್ರವನ್ನು ಕೊಡುವೆ, ದೇವ ದೈತ್ಯ ಸರ್ಪಗಳೆ ಮೊದಲಾದವರು ಎದುರಿಸಿದರೂ ಇದು ಆ ಶಕ್ತಿಗಿಂತ ಹೆಚ್ಚಾಗಿ ಇದಿರು ನಿಂತವರನ್ನು ಮಣಿಸುತ್ತದೆ, ನೀನು ಉದ್ದೇಶಿಸಿದುದೇ ಇದಕ್ಕೆ ಆಹುತಿ, ಅಷ್ಟು ಬಲಶಾಲಿಯಾದ ಅಸ್ತ್ರವಿದು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಸವಡಿ: ಸುಳ್ಳು; ನುಡಿ: ಮಾತು; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಆಹವ: ಯುದ್ಧ; ದಕ್ಷ: ಸಮರ್ಥ; ಬಾಣ: ಶರ; ಕೊಟ್ಟೆ: ನೀಡು; ಮಗ: ಸುತ; ಬೊಮ್ಮ: ಬ್ರಹ್ಮ; ಮಹಾ: ಶ್ರೇಷ್ಠ; ಶರ: ಬಾಣ; ದಿವಿಜ: ದೇವತೆ; ದನುಜ: ದಾನವ, ರಾಕ್ಷಸ; ಭುಜಂಗ: ಹಾವು, ಉರಗ; ಆದಿ: ಮೊದಲಾದ; ಅವಗಡಿಸು: ಕಡೆಗಣಿಸು, ಸೋಲಿಸು; ಉರೆ: ಅತಿಶಯವಾಗಿ; ಹೆಚ್ಚು: ಜಾಸ್ತಿ; ಸಂಭವಿಸು: ಉಂಟಾಗು, ಒದಗಿಬರು; ಆಹುತಿ: ಬಲಿ; ಉದ್ದಂಡ: ಪ್ರಬಲವಾದ, ಶ್ರೇಷ್ಠ; ಬಲ: ಶಕ್ತಿ;

ಪದವಿಂಗಡಣೆ:
ಸವಡಿ+ನುಡಿಯುಂಟೇ +ಚತುರ್ದಶ
ಭುವನದ್+ಆಹವ+ ದಕ್ಷವ್+ಈ+ ಬಾ
ಣವನು +ಕೊಟ್ಟೆನು +ಮಗನೆ+ ಬೊಮ್ಮಶಿರೋ+ಮಹಾಶರವ
ದಿವಿಜ+ ದನುಜ+ ಭುಜಂಗಮ್+ಆದಿಗಳ್
ಅವಗಡಿಸಲ್+ಉರೆ +ಹೆಚ್ಚುವುದು +ಸಂ
ಭವಿಸಿದ್+ಆಹುತಿಯೆಂದು+ ಶರವ್+ಉದ್ದಂಡ+ ಬಲವೆಂದ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳಲು – ಬೊಮ್ಮಶಿರೋಮಹಾಶರವ
(೨) ಪಾಶುಪತಾಸ್ತ್ರದ ಮಹಿಮೆ – ಸಂಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ

ಪದ್ಯ ೧೯: ಯುದ್ಧವನ್ನು ಯಜ್ಞಕ್ಕೆ ಕರ್ಣನು ಹೇಗೆ ಹೋಲಿಸಿದನು?

ಅರುಣ ಜಲದಾಜ್ಯದೊಳು ಬಂಬಲು
ಗರುಳ ಚರುವಿನೊಳೆಲುವಿನೊಟ್ಟಿಲ
ಬೆರಳ ಸಮಿಧೆಯೊಳಡಗಿನಖಿಳಾಹುತಿಯ ರಚನೆಯೊಳು
ನರಕಪಾಲದ ಪಾತ್ರೆಯೊಳು ನಿಡು
ದೆರಳೆಗಳ ಕೇಶದ ಸುದರ್ಭಾಂ
ಕುರದೊಳಾಹವ ಯಜ್ಞದೀಕ್ಷಿತನಹೆನು ತಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಯುದ್ಧ ಯಜ್ಞದಲ್ಲಿ ರಕ್ತವೇ ತುಪ್ಪ, ಕರುಳುಗಳೇ ಅರು, ಎಲುಬುಗಳೇ ಇಂಧನ, ಬೆರಳುಗಳೇ ಸಮಿತ್ತುಗಳು, ನರರ ತಲೆ ಬುರುಡೆಗಳೇ ಪಾತ್ರೆ, ಕೂದಲುಗಳೇ ದರ್ಭೆಗಳು ಮತ್ತು ಈ ಯಜ್ಞಕ್ಕೆ ನಾನೇ ದೀಕ್ಷಿತನು ಎಂದು ಕರ್ಣನು ಯುದ್ಧದ ಯಜ್ಞಕ್ರಿಯೆಯನ್ನು ವರ್ಣಿಸಿದನು.

ಅರ್ಥ:
ಅರುಣ: ಕೆಂಪು ಬಣ್ಣ; ಜಲ: ನೀರು; ಆಜ್ಯ: ತುಪ್ಪ, ಘೃತ; ಬಂಬಲು: ಗುಂಪು, ಸಮೂಹ; ಕರುಳ: ; ಚರು: ನೈವೇದ್ಯ; ಎಲುಬು: ಮೂಳೆ, ಅಸ್ಥಿ; ಒಟ್ಟಿಲು: ರಾಶಿ, ಗುಂಪು; ಬೆರಳು: ಅಂಗುಲಿ; ಸಮಿಧೆ:ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಅಡಗು: ಮಾಂಸ, ಅವಿತುಕೊಳ್ಳು; ಅಖಿಳ: ಎಲ್ಲಾ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ರಚನೆ: ನಿರ್ಮಾಣ, ಸೃಷ್ಟಿ; ನರ: ಮನುಷ್ಯ; ಕಪಾಲ: ತಲೆಬುರುಡೆ; ಪಾತ್ರೆ: ಅಡುಗೆ ಮಾಡಲು ಬಳಸುವ ಸಾಮಗ್ರಿ; ಕೇಶ: ಕೂದಲು; ದರ್ಭೆ:ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಅಂಕುರ: ಕೂದಲು, ಮೊಳಕೆ; ಆಹವ:ಯಾಗ, ಯಜ್ಞ; ದೀಕ್ಷೆ:ಪವಿತ್ರ ಕಾರ್ಯಕ್ಕಾಗಿ ಆರಂಭದಲ್ಲಿ ನಡೆಸುವ ಸಂಸ್ಕಾರ;

ಪದವಿಂಗಡಣೆ:
ಅರುಣ +ಜಲದ್+ಆಜ್ಯದೊಳು +ಬಂಬಲು
ಗರುಳ+ ಚರುವಿನೊಳ್+ಎಲುವಿನ್+ಒಟ್ಟಿಲ
ಬೆರಳ+ ಸಮಿಧೆಯೊಳ್+ಅಡಗಿನ್+ಅಖಿಳ+ಆಹುತಿಯ +ರಚನೆಯೊಳು
ನರ+ಕಪಾಲದ +ಪಾತ್ರೆಯೊಳು +ನಿಡು
ದೆರಳೆಗಳ +ಕೇಶದ +ಸುದರ್ಭಾಂ
ಕುರದೊಳ್+ಆಹವ +ಯಜ್ಞ+ದೀಕ್ಷಿತನಹೆನು+ ತಾನೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸಿ ಬರೆದಿರುವ ಪದ್ಯ

ಪದ್ಯ ೮೫: ಅರಗಿನರಮನೆಯನ್ನು ಕಂಡ ಯಮಸೂನುವಿಗೆ ನಗಲು ಕಾರಣವೇನು?

ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯೆ ತಾನಗ್ನಿಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು (ಆದಿ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅರಗಿನರಮನೆಯನ್ನು ಕಂಡ ಧರ್ಮರಾಯನಿಗೆ, ನಾವು ನಾಲ್ವರು ಈ ಅಗ್ನಿಕುಂಡಕ್ಕೆ (ಈ ಅರಗಿನರಮನೆ) ಸಮಿತ್ತುಗಳು, ಕುಂತಿಯೆ ಆಹುತಿ, ಭೀಮನೆ ಪಶು, ಅರಮನೆಯ ಅಗ್ನಿಕುಂಡ, ಆದರೆ ನನಗೊಂದು ಸಂಶಯ, ಈ ಯಜ್ಞದೀಕ್ಷೆಯನ್ನು ಧೃತರಾಷ್ಟ್ರನೋ ಅಥವ ದುರ್ಯೋಧನನೋ ಕಟ್ಟಿಕೊಂಡಿರುವುದು ಎಂದು ಯೋಚಿಸುತ್ತಾ ನಕ್ಕನು.

ಅರ್ಥ:
ಸಮಿಧೆ: ಹೋಮಕ್ಕೆ ಉಪಯೋಗಿಸುವ ಹತ್ತಿ; ಅಯ್ಯ: ತಂದೆ; ರಮಣಿ: ಹೆಣ್ಣು, ಕನ್ಯೆ; ಆಹುತಿ: ಬಲಿ, ತುತ್ತು; ಪಶು: ಪ್ರಾಣಿ; ಕುಮತಿ: ಕೆಟ್ಟ ಬುದ್ಧಿ; ಅರಮನೆ: ರಾಜರ ವಾಸಸ್ಥಾನ; ಅಗ್ನಿ: ಶಿಖಿ; ಕುಂಡ: ಹೋಮಗಳಿಗೆ ನೆಲದಲ್ಲಿ ಮಾಡಿದ ಕುಣಿ;
ಸಂಶಯ: ಸಂದೇಹ, ಅನುಮಾನ; ದೀಕ್ಷೆ: ನಿಯಮ, ವ್ರತ; ಕ್ರಮ: ನಡೆಯುವಿಕೆ; ಧರಿಸು: ತೊಡು; ನಗು: ಹಾಸ್ಯವನ್ನು ವ್ಯಕ್ತಪಡಿಸುವ ಮುಖಭಾವ; ಸೂನು: ಮಗ; ರಾಜ: ಧರಣೀಪತಿ, ನೃಪ; ಉತ್ತಮ: ಶ್ರೇಷ್ಠ;

ಪದವಿಂಗಡನೆ:
ಸಮಿಧೆಗಳು +ನಾವ್ +ನಾಲ್ವರ್+ಅಯ್ಯನ
ರಮಣಿ+ಆಹುತಿ+ ಭೀಮನೇ +ಪಶು
ಕುಮತಿ+ ಕಟ್ಟಿಸಿದ್+ಅರಮನೆಯೆ+ ತಾನ್+ಅಗ್ನಿ+ಕುಂಡವಿದು
ಎಮಗೆ+ ಸಂಶಯವಿಲ್ಲ+ ರಾಜೋ
ತ್ತಮನೊ+ ದುರ್ಯೋಧನನೊ+ ದೀಕ್ಷಾ
ಕ್ರಮವ +ಧರಿಸಿದನ್+ಆವನೆಂದನು+ ನಗುತ +ಯಮಸೂನು

ಅಚ್ಚರಿ:
(೧) ಕುಂತಿ ಯನ್ನು ವಿವರಿಸಲು – ಅಯ್ಯನ ರಮಣಿ ಎಂದು ವರ್ಣಿಸಿರುವುದು
(೨) ಧೃತರಾಷ್ಟ್ರನನ್ನು ರಾಜೋತ್ತಮ ನೆಂದು ಕರೆದಿರುವುದು
(೩) ತಮ್ಮನ್ನು ಸುಡಲೆಂದೆ ನಿರ್ಮಿಸಿದ ಭವನವೆಂದು ತಿಳಿದ ಬಳಿಕವು ಇದನ್ನು ಕಂಡು ನಗುವ ಧರ್ಮರಾಯನ ಮನ:ಸ್ಥಿತಿಯನ್ನರಿಯಬಹುದು