ಪದ್ಯ ೧೨: ದುರ್ಯೋಧನನಿಗೆ ಯಾವುದರ ಫಲ ದೊರೆಯಿತು?

ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯದಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ (ಗದಾ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಖೂಳರ ರಾಜನೇ, ನಿಮ್ಮೂರಿಗೆ ನಮ್ಮೈವರನ್ನು ಕರೆಸಿ, ಜೂಜಾಡಿ, ಮೋಸದ ಲೆಕ್ಕದಿಂದ ನಮ್ಮನ್ನು ಸೋಲಿಸಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಕೈಹಾಕಿದ ಫಲ ದೊರಕಿತೇ ಹೇಳು ಎಂದು ಭೀಮನು ದುರ್ಯೊಧನನನ್ನು ಕೇಳಿದನು.

ಅರ್ಥ:
ರಾಯ: ರಾಜ; ಆಸ್ಥಾನ: ದರ್ಬಾರು; ಖೂಳ: ದುಷ್ಟ; ಭಂಗ: ಮುರಿ; ನವಾಯ: ಹೊಸದಾದ; ಊರು: ಪಟ್ಟಣ; ಕರಸು: ಬರೆಮಾಡು; ವಾಯ: ಮೋಸ, ಕಪಟ; ಜೂಜು: ಪಗಡೆಯಾಟ; ಕಪಟ: ಮೋಸ; ದಾಯ: ಪಗಡೆಯ ಗರ; ಸೋಲಿಸು: ಪರಾಭವವಾಗು; ಅರಸಿ: ರಾಣಿ; ಸುಲಿ: ತೆಗೆ, ಕಳಚು; ಫಲ: ಪ್ರಯೋಜನ; ಹೇಳು: ತಿಳಿಸು;

ಪದವಿಂಗಡಣೆ:
ರಾಯನ್+ಆಸ್ಥಾನದಲಿ +ಖೂಳರ
ರಾಯ +ನೀನೇ +ಭಂಗಪಡಿಸಿ +ನ
ವಾಯದಲಿ +ನಿಮ್ಮೂರಿಗ್+ಎಮ್ಮೈವರನು +ನೀ +ಕರಸಿ
ವಾಯದಲಿ +ಜೂಜಾಡಿ +ಕಪಟದ
ದಾಯದಲಿ +ಸೋಲಿಸಿ +ಯುಧಿಷ್ಠಿರ
ರಾಯನ್+ಅರಸಿಯ +ಸುಲಿಸಿತಕೆ +ಫಲವಾಯ್ತೆ+ ಹೇಳೆಂದ

ಅಚ್ಚರಿ:
(೧) ನವಾಯ, ವಾಯ, ದಾಯ, ರಾಯ – ಪ್ರಾಸ ಪದಗಳು
(೨) ದುರ್ಯೋಧನನನ್ನು ಖೂಳರ ರಾಯ ಎಂದು ಕರೆದಿರುವುದು

ಪದ್ಯ ೧೮: ಧರ್ಮಜನ ಆಸ್ಥಾನವೇಕೆ ಶೋಭಿಸದು?

ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಗಂಡನಿಲ್ಲದ ಹೆಂಡತಿ, ನಾಯಕರತ್ನವಿಲ್ಲದ ಪದಕ, ದೈವಸ್ತುತಿಯಿಲ್ಲದ ಕಾವ್ಯ ರಚನೆಯಂತೆ ಅಭಿಮನ್ಯುವಿಲ್ಲದ ನಿನ್ನ ಆಸ್ಥಾನ ಶೋಭಿಸದು, ಎಲೈ ರಾಜನೇ ನನ್ನ ಮಗನ ಸುದ್ದಿಯೇನೆಂದು ಹೆಳು ಎಂದು ಅರ್ಜುನನು ಬೇಡಿದನು.

ಅರ್ಥ:
ಪತಿ: ಗಂಡ; ಅಳಿ: ಸಾವು, ಇಲ್ಲದ; ಸತಿ: ಹೆಣ್ಣು, ಹೆಂಡತಿ; ನಾಯಕ: ಒಡೆಯ; ರತುನ: ರತ್ನ, ಮಣಿ; ಪದಕ: ಬಿಲ್ಲೆ; ದೈವ: ಭಗವಂತ; ಸ್ತುತಿ: ನಾಮಸ್ಮರಣೆ; ಕಾವ್ಯ: ಕವನ; ರಚನೆ: ನಿರ್ಮಿಸು; ಭಾವ: ಅಂತರ್ಗತ ಅರ್ಥ; ಕೃತಕ: ನೈಜವಲ್ಲದ; ಕ್ಷಿತಿಪ: ದೊರೆ, ರಾಜ; ಆಸ್ಥಾನ: ಓಲಗ; ಮೆರೆ: ಶೋಭಿಸು; ಸುತ: ಮಗ; ಸುದ್ದಿ: ವಿಚಾರ; ಮರುಗು: ತಳಮಳ, ಸಂಕಟ; ಹೇಳು: ತಿಳಿಸು;

ಪದವಿಂಗಡಣೆ:
ಪತಿಯಳಿದ +ಸತಿ+ಇರವು +ನಾಯಕ
ರತುನವಿಲ್ಲದ +ಪದಕ +ದೈವ
ಸ್ತುತಿಗಳಿಲ್ಲದ +ಕಾವ್ಯ +ರಚನಾ +ಭಾವದಂದದಲಿ
ಕೃತಕವಲ್+ಅಭಿಮನ್ಯುವಿಲ್ಲದೆ
ಕ್ಷಿತಿಪ +ನಿನ್ನಾಸ್ಥಾನ +ಮೆರೆಯದು
ಸುತನ +ಸುದ್ದಿಯದೇನು +ಮರುಗಿಸಬೇಡ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪತಿಯಳಿದ ಸತಿಯಿರವು ನಾಯಕ ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ

ಪದ್ಯ ೩೨: ಭೀಮನ ರೌದ್ರಾವತಾರವು ಸಭೆಯನ್ನು ಹೇಗೆ ಆವರಿಸಿತು?

ಹೆದರು ಹೊಕ್ಕುದು ಸಭೆಗೆ ಕೌರವ
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ
ಹದನಹುದು ಹಾ ಎನುತಲಿದ್ದರು
ವಿದುರ ಭೀಷ್ಮದ್ರೋಣರಿತ್ತಲು
ಕೆದರುಗೇಶದ ಕಾಂತೆ ಹುದಿದಳು ಹರ್ಷಪುಳಕದಲಿ (ಸಭಾ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಗರ್ಜನೆ ಮತ್ತು ಕೋಪದ ರೂಪವನ್ನು ಕಂಡು ಸಭೆಯಲ್ಲಿದ್ದವರು ಹೆದರಿದರು. ದುರ್ಯೋಧನನ ಎದೆ ಒಡೆಯಿತು. ಆಸ್ಥಾನ ಸಮುದ್ರವು ಕದಡಿಹೋಯಿತು. ಧರ್ಮಜನು ಬೆರಗಿನಿಂದ ಭೀಮನ ರೂಪವನ್ನು ನೋಡಿ ದಿಗ್ಭ್ರಾಂತನಾದನು. ವಿದುರ, ಭೀಷ್ಮ, ದ್ರೋಣರು ಆಹಾ ಇದೇ ಸರಿ ಎನ್ನುತ್ತಿದ್ದರು. ಕೂದಲುಗಳನ್ನು ಕೆದರಿಕೊಂಡಿದ್ದ ದ್ರೌಪದಿಯು ಭೀಮನ ರೂಪವನ್ನು ಕಂಡು ಹರ್ಷದಿಂದ ರೋಮಾಂಚನಗೊಂಡಳು.

ಅರ್ಥ:
ಹೆದರು: ಬೆದರು; ಹೊಕ್ಕು: ಸೇರು; ಸಭೆ: ಓಲಗ; ಎದೆ: ವಕ್ಷಸ್ಥಳ; ಬಿರಿ: ಬಿರುಕು, ಸೀಳು; ಆಸ್ಥಾನ: ದರ್ಬಾರು, ಓಲಗ; ಜಲನಿಧಿ: ಸಮುದ್ರ; ಕದಡು: ಕಲಕು; ಉಕ್ಕು: ಹಿಗ್ಗುವಿಕೆ, ಉತ್ಸಾಹ; ಬೆರಗು: ವಿಸ್ಮಯ, ಸೋಜಿಗ; ಬೆಳ್ಳಾಗು: ಮೂಢನಾಗು; ಅವನೀಶ: ರಾಜ; ಹದ: ಸರಿಯಾದ ಸ್ಥಿತಿ; ಕೆದರು: ಹರಡು; ಕೇಶ: ಕೂದಲು; ಕಾಂತೆ: ಹೆಣ್ಣು; ಹುದು: ಕೂಡುವಿಕೆ; ಹರ್ಷ: ಸಂತಸ; ಪುಳಕ:ಮೈನವಿರೇಳುವಿಕೆ, ರೋಮಾಂಚನ;

ಪದವಿಂಗಡಣೆ:
ಹೆದರು +ಹೊಕ್ಕುದು +ಸಭೆಗೆ +ಕೌರವನ್
ಎದೆ +ಬಿರಿದುದ್+ಆಸ್ಥಾನ +ಜಲನಿಧಿ
ಕದಡಿತ್+ಉಕ್ಕಿದ +ಬೆರಗಿನಲಿ +ಬೆಳ್ಳಾದನ್+ಅವನೀಶ
ಹದನ್+ಅಹುದು +ಹಾ+ ಎನುತಲ್+ಇದ್ದರು
ವಿದುರ+ ಭೀಷ್ಮ+ದ್ರೋಣರ್+ಇತ್ತಲು
ಕೆದರು+ಕೇಶದ +ಕಾಂತೆ +ಹುದಿದಳು+ ಹರ್ಷಪುಳಕದಲಿ

ಅಚ್ಚರಿ:
(೧) ದ್ರೌಪದಿಯನ್ನು ಕೆದರುಗೇಶದ ಕಾಂತೆ ಎಂದು ಕರೆದಿರುವುದು
(೨) ಪದ್ಯದ ಆದಿ ಮತ್ತು ಅಂತ್ಯ ಹ ಕಾರದ ಜೋಡಿ ಪದಗಳು – ಹೆದರು ಹೊಕ್ಕುದು, ಹುದಿದಳು ಹರ್ಷಪುಳಕದಲಿ
(೩) ದುರ್ಯೋಧನ, ಧರ್ಮರಾಯನ ಸ್ಥಿತಿ – ಕೌರವನೆದೆ ಬಿರಿದುದ್; ಬೆರಗಿನಲಿ ಬೆಳ್ಳಾದನವನೀಶ
(೪) ಆಸ್ಥಾನವನ್ನು ಹೋಲಿಸುವ ಪರಿ – ಆಸ್ಥಾನ ಜಲನಿಧಿ ಕದಡಿತುಕ್ಕಿದ

ಪದ್ಯ ೨೫ : ಕೃಷ್ಣನ ವಿಶ್ವರೂಪ ದರ್ಶನ ಹೇಗಿತ್ತು?

ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿ ಶತ
ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನತೇ
ಜದಲಹರಿಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ (ಉದ್ಯೋಗ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರನು ಹೀಗೆ ಕೃಷ್ಣನ ಮಹಿಮೆಯನ್ನು ಹೇಳುತ್ತಿರಲು, ಕೃಷ್ಣನು ತನ್ನ ಪ್ರಕಾಶಮಾನವಾದ ದೇಹವನ್ನು ಕೊಡವಿ ನೆಟ್ಟನೆ ನಿಂತನು, ಮಿಂಚಿನ ಬಳ್ಳಿಗಳು ಹುರಿಗೊಂಡವೋ ಎಂಬಂತೆ ನೂರು ಸೂರ್ಯರು ಅವನ ದೇಹದಿಂದ ಉದುರಿದವು ಆ ತೇಜಸ್ಸಿನ ಹೊಳೆಯು ಆಸ್ಥಾನದ ಕಣ್ಣು ಕುಕ್ಕಿಸಿತು. ಶ್ರೀ ಕೃಷ್ಣನು ಆ ಮಹಾಸಭೆಗೆ ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಿಂಚು: ಹೊಳಪು, ಕಾಂತಿ; ಹೊದರು:ಬಿರುಕು; ಹುರಿಗೊಳ್ಳು:ಹೊಂದಿಕೊಳ್ಳು; ರವಿ: ಭಾನು, ಸೂರ್ಯ; ಶತ: ನೂರು; ಉದುರು: ಕೆಳಗೆ ಬೀಳು; ಮೈ: ತನು; ಮುರಿ:ಸೀಳು; ನಿಂದಡೆ: ನಿಲ್ಲು; ದೇವ: ಭಗವಂತ; ರಂಗ: ಸಭೆ; ಸದೆ: ಹೊಡೆ; ಆಸ್ಥಾನ: ಸಭೆ, ದರ್ಬಾರು; ಘನತೆ: ಪ್ರತಿಷ್ಠೆ; ತೇಜ: ಕಾಂತಿ; ಲಹರಿ: ಚುರುಕು, ಪ್ರಭೆ; ಲೀಲೆ:ಆನಂದ; ಹರಿ: ವಿಷ್ಣು; ತೋರು: ಕಾಣಿಸು; ನಿರುಪಮ:ಸಾಟಿಯಿಲ್ಲದ, ಅತಿಶಯವಾದ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಮಹಾ: ಶ್ರೇಷ್ಠ;

ಪದವಿಂಗಡಣೆ:
ವಿದುರನ್+ಇಂತೆನುತಿರಲು +ಮಿಂಚಿನ
ಹೊದರು +ಹುರಿಗೊಂಡಂತೆ+ ರವಿ +ಶತ
ಉದುರಿದವು+ ಮೈ +ಮುರಿದು +ನಿಂದಡೆ +ದೇವ+ರಂಗದಲಿ
ಸದೆದುದ್+ಆಸ್ಥಾನವನು +ಘನ+ತೇ
ಜದ+ಲಹರಿ+ಲೀಲೆಯಲಿ +ಹರಿ +ತೋ
ರಿದನು +ನಿರುಪಮ +ವಿಶ್ವರೂಪವನಾ +ಮಹಾಸಭೆಗೆ

ಅಚ್ಚರಿ:
(೧) ಸಭೆ, ಆಸ್ಥಾನ, ರಂಗ – ಸಮಾನಾರ್ಥಕ ಪದ