ಪದ್ಯ ೧೦: ವೈರಿ ಸೈನ್ಯವನ್ನು ಹೇಗೆ ನಿರ್ನಾಮ ಮಾಡಿದರು?

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ (ಶಲ್ಯ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬತ್ತು ಹೋಗುತ್ತಿದ್ದ ಸಮಯದಲ್ಲಿ, ನಿನ್ನ ಮಗ ಬಹಳ ಶೌರ್ಯದಿಂದ ಮುನ್ನುಗ್ಗಿದನು. ಐವತ್ತು ಸಾವಿರ ಕುದುರೆಗಳೊಡನೆ ಶಕುನಿಯು ಯುದ್ಧಕ್ಕೆ ಮುಂದಾದನು. ಆಯುಧಗಳನ್ನು ಹಿಡಿದು ಆನೆಗಳ ಮೇಲೆ ಬರುತ್ತಿದ್ದ ಸೈನಿಕರು ಕೈ ಸನ್ನೆ ಕೊಡುವ ಮೊದಲೇ ವೈರಿ ಸೈನ್ಯವನ್ನು ನಿರ್ನಾಮ ಮಾಡಿದವು.

ಅರ್ಥ:
ಸಮಯ: ಕಾಲ; ಬಹಳ: ತುಂಬ; ಶೌರ್ಯ: ಪರಾಕ್ರಮ; ಆವೇಶ: ರೋಷ; ನೂಕು: ತಳ್ಳು; ಸಾವಿರ: ಸಹಸ್ರ; ತುರಗ: ಕುದುರೆ; ದಳ: ಗುಂಪು; ಸಹಿತ: ಜೊತೆ; ಕೇಸುರಿ: ಕೆಂಪು ಉರಿ; ಕರ್ಬೊಗೆ: ಕಪ್ಪಾದ ಧೂಮ; ನಿಟ್ಟಾಸಿ: ಭಯಂಕರವಾದ; ಆಯುಧ: ಶಸ್ತ್ರ; ಆನೆ: ಕರಿ, ಗಜ; ಕೈವೀಸು: ಕೈ ಸನ್ನೆಮಾಡು; ಮುನ್ನ: ಮುಂಚೆ; ಮೊಗೆ:ನುಂಗು, ಕಬಳಿಸು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಆ +ಸಮಯದಲಿ +ಬಹಳ +ಶೌರ್ಯ
ಆವೇಶದಲಿ +ನಿನ್ನಾತ +ನೂಕಿದನ್
ಆ+ ಶಕುನಿ+ಐವತ್ತು +ಸಾವಿರ +ತುರಗದಳ +ಸಹಿತ
ಕೇಸುರಿಯ +ಕರ್ಬೊಗೆಯವೊಲು +ನಿ
ಟ್ಟಾಸಿನ್+ಆಯುಧದ್+ಆನೆಗಳು +ಕೈ
ವೀಸುವಲ್ಲಿಂ +ಮುನ್ನ +ಮೊಗೆದುವು +ವೈರಿ+ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೇಸುರಿಯ ಕರ್ಬೊಗೆಯವೊಲು

ಪದ್ಯ ೬೬: ಭೀಮನು ದ್ರೋಣರನ್ನು ಹೇಗೆ ಮೂದಲಿಸಿದನು?

ಈಸು ಭರದಲಿ ಭೂತಹಿಂಸಾ
ದೋಷವನು ನೆರೆ ಮಾಡಿ ಮಕ್ಕಳಿ
ಗೋಸುಗವಲೇ ಹಣವ ಗಳಿಸುವುದಾತ ತಾನಳಿಯೆ
ಆಸೆಯಿದರೊಳಗೇಕೆ ಧುರದಾ
ವೇಶವಳಿಯದು ಶಿವ ಶಿವಾ ಸುತ
ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ (ದ್ರೋಣ ಪರ್ವ, ೧೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ಇಷ್ಟು ಆವೇಶದಿಂದ ಪ್ರಾಣಿ ಹಿಂಸೆಯನ್ನು ಮಾಡಿ ಹಣವನ್ನು ಗಳಿಸುವುದು ಮಕ್ಕಳಿಗಾಗಿ ತಾನೇ? ಮಗನು ಹೋದರೂ ಯುದ್ಧದ ಆವೇಶ ಆಶೆ ತಗ್ಗಲಿಲ್ಲ. ಪುತ್ರನಾಶವನ್ನೂ ಇವನು ಲೆಕ್ಕಿಸಲಿಲ್ಲ ಎಂದು ಭೀಮನು ನಗುತ್ತ ದ್ರೋಣರನ್ನು ಮೂದಲಿಸಿದನು.

ಅರ್ಥ:
ಈಸು: ಇಷ್ಟು; ಭರ: ವೇಗ; ಭೂತ: ಪ್ರಾಣಿವರ್ಗ; ಹಿಂಸೆ: ನೋವು; ದೋಷ: ತಪ್ಪು; ನೆರೆ: ಗುಂಪು; ಮಕ್ಕಳು: ಪುತ್ರ; ಓಸುಗ: ಓಸ್ಕರ; ಹಣ: ಐಶ್ವರ್ಯ; ಗಳಿಸು: ಪಡೆ; ಅಳಿ: ನಾಶ; ಆಸೆ: ಇಚ್ಛೆ; ಧುರ: ಯುದ್ಧ, ಕಾಳಗ; ಆವೇಶ: ರೋಷ; ಅಳಿ: ನಾಶ; ಸುತ: ಪುತ್ರ; ನಾಶ: ಹಾಳು; ಬಗೆ; ರೀತಿ; ಪವನಸುತ: ವಾಯುಪುತ್ರ; ನಗು: ಹರ್ಷ;

ಪದವಿಂಗಡಣೆ:
ಈಸು +ಭರದಲಿ +ಭೂತ+ಹಿಂಸಾ
ದೋಷವನು +ನೆರೆ +ಮಾಡಿ +ಮಕ್ಕಳಿಗ್
ಓಸುಗವಲೇ +ಹಣವ +ಗಳಿಸುವುದ್+ಆತ +ತಾನಳಿಯೆ
ಆಸೆಯಿದರೊಳಗೇಕೆ +ಧುರದ್
ಆವೇಶವಳಿಯದು +ಶಿವ+ ಶಿವಾ+ ಸುತ
ನಾಶವನು +ಬಗೆಗೊಳ್ಳನೆಂದನು +ಪವನಸುತ +ನಗುತ

ಅಚ್ಚರಿ:
(೧) ಹಂಗಿಸುವ ಪರಿ – ಸುತ ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ