ಪದ್ಯ ೨೬: ಸಂಜಯನಿಗೆ ವ್ಯಾಸರು ಯಾವ ಅಪ್ಪಣೆ ನೀಡಿದರು?

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ (ಗದಾ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಷ್ಟು ಬೇಗದಿಂದ ವೇದವ್ಯಾಸ ಮುನಿಗಳು ಪ್ರಕಟವಾಗಿ ನನ್ನ ಕೊರಳಿಗೆ ಹೂಡಿದ್ದ ಕತ್ತಿಯನ್ನು ಹಿಡಿದುಕೊಂಡರೋ ತಿಳಿಯಲಿಲ್ಲ. ಸಾವು ತಪ್ಪಿತು. ಬಾದರಾಯಣನು ಪ್ರೀತಿಯಿಂದ ನನ್ನ ಮೈದಡವಿ ಕೌರವನನ್ನು ಹುಡುಕು ಎಂದು ಅಪ್ಪಣೆಕೊಟ್ಟನು.

ಅರ್ಥ:
ವಹಿಲ: ಬೇಗ, ತ್ವರೆ; ಆವಿರ್ಭಾವ: ಹುಟ್ಟುವುದು, ಪ್ರಕಟವಾಗುವುದು; ಅರಿ: ತಿಳಿ; ಮುನಿ: ಋಷಿ; ಅಡ್ಡೈಸು: ಅಡ್ಡ ಬಂದು; ಹಿಡಿ: ಗ್ರಹಿಸು; ಕೊರಳು: ಗಂಟಲು ಆಯುಧ: ಶಸ್ತ್ರ; ಸಾವು: ಮರಣ; ಕೃಪೆ: ದಯೆ; ಮೈದಡವಿ: ನೇವರಿಸು; ಸಂಭಾವಿಸು: ತೃಪ್ತಿಪಡಿಸು, ಗೌರವಿಸು; ಅರಸು: ಹುಡುಕು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆವ+ ವಹಿಲದೊಳ್+ಆದುದ್+ಆವಿ
ರ್ಭಾವವೆಂದ್+ಆನ್+ಅರಿಯೆನ್+ಆಗಳೆ
ದೇವಮುನಿ+ಅಡ್ಡೈಸಿ +ಹಿಡಿದನು +ಕೊರಳಡ್+ಆಯುಧವ
ಸಾವು +ತಪ್ಪಿತು +ಬಾದರಾಯಣನ್
ಓವಿ+ ಕೃಪೆಯಲಿ +ಮೈದಡವಿ +ಸಂ
ಭಾವಿಸುತ +ಕುರುಪತಿಯನ್+ಅರಸ್+ಎಂದೆನಗೆ +ನೇಮಿಸಿದ

ಅಚ್ಚರಿ:
(೧) ಅ ಕಾರದ ಪದಗಳ ಬಳಕೆ – ಆವ ವಹಿಲದೊಳಾದುದಾವಿರ್ಭಾವವೆಂದಾನರಿಯೆನಾಗಳೆ
(೨) ವ್ಯಾಸರನ್ನು ಕರೆದ ಪರಿ – ಬಾದರಾಯಣ, ದೇವಮುನಿ

ಪದ್ಯ ೧೦: ಹಿರಿಯರಿಗೆ ಯಾವುದು ಸಹಜವೆಂದು ದುರ್ಯೋಧನನು ಹೇಳಿದನು?

ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವ ಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾ ವಿ
ರ್ಭಾವ ಹಿರಿಯರಲುಂಟಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿಸಿದ ಶಿರವ (ಸಭಾ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ದುಃಖದ ಕಥೆಯನ್ನು ಮುಂದುವರೆಸುತ್ತಾ, ನಾವೇ ತಾನೆ ನಿಮಗೆ ಹೊರಗಿನವರು, ಅವರ ಹೆಂಡತಿಗೆ ಮಾನ ಹೋಗುವಂತೆ ಮಾಡಿದೆವು, ಅವರ ಉಸಿರೊಂದನ್ನು ಬಿಟ್ಟು ಅವರಲ್ಲಿದ್ದ ಎಲ್ಲವನ್ನೂ ನಾವು ಗೆದ್ದಿದ್ದೆವು, ನೀವು ಕರುಣೆಯಿಂದ ಅವೆಲ್ಲವನ್ನೂ ಅವರಿಗೆ ದಯಪಾಲಿಸಿದಿರಿ, ಹಿರಿಯರಿಗೆ ಇದು ಸಹಜ, ಇದರಲ್ಲಿ ತಪ್ಪೇನು ತಪ್ಪೇನು ಎಂದು ತನ್ನ ತಲೆಯನ್ನು ಆಲ್ಲಾಡಿಸುತ್ತಾ ಹೇಳಿದನು.

ಅರ್ಥ:
ಹೊರಗೆ: ಬಾಹಿರ; ಹೆಂಡಿರ: ಹೆಂಡತಿ; ಹೇವ: ಮಾನ; ಕೆಡಿಸು: ಹಾಳುಮಾಡು; ಸೋಲು: ಪರಾಭವ; ಜೀವ: ಉಸಿರು; ಮಾತ್ರ: ಕೇವಲ; ಉಳಿಹು: ಬಿಟ್ಟು; ಸೆಳೆ: ಪಡೆ; ಸಕಲ: ಎಲ್ಲಾ; ವಸ್ತು: ಪದಾರ್ಥ, ದ್ರವ್ಯ; ಕರುಣಿಸು: ದಯಪಾಲಿಸು; ಕೃಪ: ದಯೆ; ಆವಿರ್ಭಾವ: ಪ್ರಕಟವಾಗುವುದು; ಹಿರಿಯರು: ದೊಡ್ಡವರು; ಉಂಟು: ಇರುತ್ತದೆ; ತಪ್ಪು: ಸರಿಯಲ್ಲದ್ದು; ಅಲ್ಲಾಡಿಸು: ತೂಗು; ಶಿರ: ತಲೆ;

ಪದವಿಂಗಡಣೆ:
ನಾವಲೇ +ಹೊರಗ್+ಅವರ +ಹೆಂಡಿರ
ಹೇವಗೆಡಿಸಿದೆವ್+ಅವರ +ಸೋಲಿಸಿ
ಜೀವ+ ಮಾತ್ರವನ್+ಉಳುಹಿ +ಸೆಳೆದೆವು +ಸಕಲ +ವಸ್ತುಗಳ
ನೀವು +ಕರುಣಿಸಿದಿರಿ +ಕೃಪ +ಆವಿ
ರ್ಭಾವ +ಹಿರಿಯರಲ್+ಉಂಟಲೇ+ ತ
ಪ್ಪಾವುದೈ+ ತಪ್ಪಾವುದ್+ಎನುತ್+ಅಲ್ಲಾಡಿಸಿದ +ಶಿರವ

ಅಚ್ಚರಿ:
(೧) ನಿಮ್ಮದೇನು ತಪ್ಪಿಲ್ಲ ಎಂದು ಹೇಳುವ ಪರಿ – ಹಿರಿಯರಲುಂಟಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿಸಿದ ಶಿರವ
(೨) ಮಾನ ಕಳೆದೆವು ಎಂದು ಹೇಳುವ ಪರಿ – ಹೆಂಡಿರ ಹೇವಗೆಡಿಸಿದೆವವರ
(೩) ಹ ಕಾರದ ತ್ರಿವಳಿ ಪದ – ಹೊರಗವರ ಹೆಂಡಿರ ಹೇವಗೆಡಿಸಿದೆವವರ