ಪದ್ಯ ೧೭: ಭೀಷ್ಮರು ದುರ್ಯೋಧನನನ್ನು ಹೇಗೆ ಬರೆಮಾಡಿಕೊಂಡರು?

ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದು ಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತ ವಚನದಲಿ (ಭೀಷ್ಮ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕಂಬಿಹಿಡಿದ ದೂತರು ರಾಜನ ಆಗಮನವನ್ನು ಮೊದಲೇ ಭೀಷ್ಮನಿಗೆ ತಿಳಿಸಲು, ಭೀಷ್ಮನು ಎದುರುಬಂದು ಕಳಾಹೀನನಾಗಿದ್ದ ದುರ್ಯೋಧನನ ಮುಖವನ್ನು ನೋಡಿ, ಆತನನ್ನು ಆಲಂಗಿಸಿ ಉಚಿತವಾದ ಹಿತನುಡಿಗಳಿಂದ ಮಾತನಾಡಿಸಿ ಅರಮನೆಯೊಳಗೆ ಕರೆತಂದನು.

ಅರ್ಥ:
ಮುಂದೆ: ಅಗ್ರಭಾಗ; ಹರಿ: ಚಲಿಸು; ಕೈ: ಹಸ್ತ; ಕಂಬಿ: ಉಕ್ಕಿನ ಸಲಾಕಿ; ಸಂದಣಿ: ಗುಂಪು; ಪಡೆ: ಸೈನ್ಯ, ಬಲ, ಗುಂಪು; ನಂದನ: ಮಗ; ಹದ: ಸ್ಥಿತಿ; ಅರುಹು: ತಿಳಿಸು; ಇದಿರು: ಎದುರು; ಕಂದು: ಕಳಾಹೀನ, ಮಸಕಾಗು; ಮೋರೆ: ಮುಖ; ರಾಯ: ರಾಜ; ತೆಗೆ: ಸೆಳೆ; ಅಂದಣ:ಪಲ್ಲಕ್ಕಿ, ಮೇನೆ; ಆಲಿಂಗಿಸು: ಅಪ್ಪಿಕೋ; ನಲವು: ಸಂತೋಷ; ಮನ್ನಿಸು: ಗೌರವಿಸು; ಅರಮನೆ: ರಾಜರ ಆಲಯ; ಉಚಿತ: ಸರಿಯಾದ; ವಚನ: ಮಾತು;

ಪದವಿಂಗಡಣೆ:
ಮುಂದೆ +ಹರಿದರು +ಕೈಯ +ಕಂಬಿಯ
ಸಂದಣಿಯ +ಪಡೆವಳರು +ಗಂಗಾ
ನಂದನಂಗ್+ಈ+ ಹದನನ್+ಅರುಹಲು +ಬಂದನ್+ಇದಿರಾಗಿ
ಕಂದು +ಮೋರೆಯ +ರಾಯನನು+ ತೆಗೆದ್
ಅಂದಣದೊಳ್+ಆಲಿಂಗಿಸುತ+ ನಲ
ವಿಂದ +ಮನ್ನಿಸಿ +ತಂದನ್+ಅರಮನೆಗ್+ಉಚಿತ +ವಚನದಲಿ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಂದು ಮೋರೆಯ ರಾಯ