ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು

ಪದ್ಯ ೪೮: ದ್ರೋಣನೆದುರಿಗೆ ಮೊದಲು ಯಾರು ಅಡ್ಡಬಂದರು?

ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಲಗಳ್ಳಿರಿಯೆ ನೂಕಿದರು ತೇರುಗಳ (ದ್ರೋಣ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಆಪತ್ತು ಬರುವ ಮೊದಲೇ ನಾನು ಸಾಯಬೇಕು, ಎಂದು ನಿಶ್ಚಯಿಸಿ ವಿರಾಟನು ಬಂಧುಗಳೊಡನೆ ಅಡ್ಡ ಬಂದನು. ಇವರಿಗೆ ಮೊದಲು ನಾವೇ ದ್ರೋಣನಿಂದ ನೋಯಬೇಕು ಎಂದು ಪಂಚಕೈಕೆಯರು, ಆಯುಧಗಳು ಹೊಳೆಯುತ್ತಿರಲು ತಮ್ಮ ರಥಗಳಲ್ಲಿ ದ್ರೋಣನಿಗೆದುರಾದರು.

ಅರ್ಥ:
ರಾಯ: ರಾಜ; ಆಪತ್ತು: ಅಪಾಯ; ಮುನ್ನ: ಮೊದಲು; ಸಾಯು: ಸಾವು; ಅಡಹಾಯಿ: ಅಡ್ಡಬರು; ಕಲಿ: ಶೂರ; ಮತ್ಸ್ಯನೃಪ: ವಿರಾಟ; ನಿಜ: ತನ್ನ; ಬಂಧು: ಸಂಬಂಧಿಕ; ಸಹಿತ: ಜೊತೆ; ನೋವು: ಪೆಟ್ಟು; ಮುನ್ನ: ಮೊದಲು; ಆಯತಿಕೆ: ಪ್ರಭಾವ, ಘನತೆ; ಆಯುಧ: ಶಸ್ತ್ರ; ಬೆಳಗು: ಹೊಳೆ; ನೂಕು: ತಳ್ಳು; ತೇರು: ಬಂಡಿ;

ಪದವಿಂಗಡಣೆ:
ರಾಯನ್+ಆಪತ್ತಿಂದ +ಮುನ್ನವೆ
ಸಾಯಬೇಹುದು +ತನಗ್+ಎನುತಲ್+ಅಡ
ಹಾಯಿದನು +ಕಲಿ +ಮತ್ಸ್ಯ+ನೃಪ +ನಿಜಬಂಧುಗಳ+ ಸಹಿತ
ನೋಯಬೇಹುದು +ಮುನ್ನ +ತಾವೆನುತ್
ಆಯತಿಕೆಯಲಿ +ಪಂಚ ಕೈಕೆಯರ್
ಆಯುಧದ +ಬೆಳಗಳ್+ಇರಿಯೆ +ನೂಕಿದರು+ ತೇರುಗಳ

ಪದ್ಯ ೩೦: ಕೃಷ್ಣನು ದ್ರೌಪದಿಗೆ ಯಾವ ಭರವಸೆಯನ್ನು ನೀಡಿದನು?

ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನಿ
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ (ಅರಣ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ದ್ರೌಪದಿಯ ಮಾತಿಗೆ ಉತ್ತರಿಸುತ್ತಾ, ಆಯಿತು ತಾಯೆ ಮೇಲೇಳು, ನೀನು ಮಹಾ ಕಷ್ಟಗಳನ್ನು ಅನುಭವಿಸಲೆಂದೇ ಜನ್ಮ ತಾಳಿರುವೆ, ಧರ್ಮಜನ ಭಾಷೆಯಂತೆ ಈ ಕಷ್ಟಕರವಾದ ವನವಾಸವು ಕಳೆಯಲಿ, ಆ ಮೇಲೆ ಭೀಮನೇ ನಿನ್ನ ಪ್ರತಿಜ್ಞೆಯನ್ನು ನೆರವೇರಿಸುತ್ತಾನೆ, ಅದರ ಹೊಣೆ ನನ್ನದು ಎಂದು ಹೇಳಿ ದ್ರೌಪದಿಗೆ ಭರವಸೆಯನ್ನು ನೀಡಿದನು.

ಅರ್ಥ:
ತಂಗಿ: ಸಹೋದರಿ; ಪಿರಿದು: ಹಿರಿಯ, ದೊಡ್ಡ; ಆಯಸ: ಕಷ್ಟ, ತೊಂದರೆ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ, ಅನುಭಾವ; ಉದಿಸು: ಹುಟ್ಟು; ರಾಯ: ರಾಜ; ಆಡಿದ: ನುಡಿದ; ಭಾಷೆ: ಮಾತು; ಸಲಲಿ: ನೆರವೇರಿಸಲಿ; ವನ: ಕಾಡು; ಪ್ರವಾಸ: ಸಂಚಾರ; ವಾಯುತನುಜ: ವಾಯುಪುತ್ರ, ಅನಿಲಸುತ (ಭೀಮ); ಕೈ: ಹಸ್ತ; ಆಯತಿಕೆ: ಪ್ರಭಾವ, ಘನತೆ; ಪ್ರತಿಜ್ಞೆ: ಮಾತು, ಭಾಷೆ, ಆಣೆ; ಹೊಣೆ: ಜವಾಬ್ದಾರಿ; ಕೊಟ್ಟು: ನೀಡು; ಸತಿ: ಹೆಂಗಸು; ನಂಬುಗೆ: ಭರವಸೆ;

ಪದವಿಂಗಡಣೆ:
ಆಯಿತ್+ಏಳೌ +ತಂಗಿ +ನೀ +ಪಿರಿದ್
ಆಯಸವನ್+ಅನುಭವಿಸಲ್+ಉದಿಸಿದೆ
ರಾಯನಾಡಿದ+ ಭಾಷೆ +ಸಲಲಿ+ ವನ+ಪ್ರವಾಸದಲಿ
ವಾಯು+ತನುಜನ +ಕೈಯಲೇ +ನಿನ್ನ್
ಆಯತಿಕೆಯಹುದ್+ಆ +ಪ್ರತಿಜ್ಞೆಗೆ
ತಾಯೆ+ ತಾ+ ಹೊಣೆಯೆಂದು +ಕೊಟ್ಟನು +ಸತಿಗೆ+ ನಂಬುಗೆಯ

ಅಚ್ಚರಿ:
(೧) ದ್ರೌಪದಿಯನ್ನು ತಂಗಿ, ತಾಯೆ ಎಂದು ಕರೆದಿರುವುದು
(೨) ಅಭಯವನ್ನು ನೀಡುವ ಪರಿ – ಆ ಪ್ರತಿಜ್ಞೆಗೆ ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ

ಪದ್ಯ ೮: ಅರ್ಜುನನು ಕರ್ಣನಿಗೆ ಅವನ ಸಾವನ್ನು ನೋಡಲು ಯಾರನ್ನ ಕರೆಯಲು ಹೇಳಿದ?

ಬಾಯಿಬಡಿಕನಲಾ ವೃಥಾ ರಾ
ಧೇಯ ಮದವೇಕಿನ್ನು ನಿನಗಹಿ
ಸಾಯಕದ ಸಾವಿನಲಿ ನೀರಿಳಿಸುವೆನು ನೆತ್ತರಲಿ
ತಾಯ ಬಸುರಿಂಬಿಲ್ಲ ನೀನುಳಿ
ವಾಯತಿಕೆಯಿನ್ನೆಂತು ಕೌರವ
ರಾಯ ನೋಡಲಿ ಕರೆಯೆನುತ ತೆಗೆದೆಚ್ಚನಾ ಪಾರ್ಥ (ಕರ್ಣ ಪರ್ವ, ೨೬ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನು ಮಾತಾಡುತ್ತಿರುವುದನ್ನು ಕಂಡು ಅರ್ಜುನನು, ಏಕೆ ಕರ್ಣ ಸುಮ್ಮನೆ ಮಾತಾಡುತ್ತಿರುವೆ, ಅದರಲ್ಲೇನಾದರು ಸತ್ವ ವಿದೆಯೇ? ನಿನ್ನ ಸರ್ಪಾಸ್ತ್ರವು ಕಳೆಗುಂದಿದೆ, ನಿನ್ನ ಮದವನ್ನು ಇಳಿಸಲು ರಕ್ತದ ನೀರಿಳಿಸುತ್ತೇನೆ, ಈಗ ನೀನು ಹೋಗಿ ಅಡಗಿಕೊಳ್ಳಲು ನಿನ್ನ ತಾಯಿಯ ಬಸಿರಿನಲ್ಲಿ ಜಾಗ ಸಾಲದು, ನೀನು ಉಳಿಯುವುದಾದರು ಹೇಗೆ? ಕೌರವನನ್ನು ಕರೆ, ನಿನ್ನ ಅಂತ್ಯವನ್ನು ನೋಡಲಿ ಎಂದು ಹೇಳುತ್ತಾ ಅರ್ಜುನನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಬಾಯಿಬಡಿಕು: ಒಂದೇ ಸಮನೆ ಮಾತಾಡುವ; ವೃಥ: ಸುಮ್ಮನೆ; ರಾಧೇಯ: ಕರ್ಣ; ಮದ: ಅಹಂಕಾರ; ಅಹಿ: ಸರ್ಪ; ಸಾಯಕ: ಬಾಣ; ಸಾವು: ಮರಣ; ನೀರಿಳಿಸು: ಆಯಾಸಗೊಳಿಸು, ಸೋಲಿಸು; ನೆತ್ತರು: ರಕ್ತ; ಬಸುರು: ಗರ್ಭ; ಆಯತಿಕೆ: ಅತಿಶಯ, ಆಧಿಕ್ಯ; ಉಳಿವು: ಬದುಕು;
ರಾಯ: ರಾಜ; ನೋಡು: ವೀಕ್ಷಿಸು; ಕರೆ: ಬರೆಮಾಡು; ಎಚ್ಚು: ಬಾಣಬಿಡು;

ಪದವಿಂಗಡಣೆ:
ಬಾಯಿಬಡಿಕನಲಾ +ವೃಥಾ +ರಾ
ಧೇಯ +ಮದವೇಕ್+ಇನ್ನು +ನಿನಗ್+ಅಹಿ
ಸಾಯಕದ +ಸಾವಿನಲಿ +ನೀರಿಳಿಸುವೆನು +ನೆತ್ತರಲಿ
ತಾಯ +ಬಸುರಿಂಬಿಲ್ಲ+ ನೀನ್+ಉಳಿವ್
ಆಯತಿಕೆ+ಇನ್ನೆಂತು +ಕೌರವ
ರಾಯ +ನೋಡಲಿ +ಕರೆಯೆನುತ +ತೆಗೆದೆಚ್ಚನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಕಠೋರ ನುಡಿಗಳು – ನೀರಿಳಿಸುವೆನು ನೆತ್ತರಲಿ; ತಾಯ ಬಸುರಿಂಬಿಲ್ಲ ನೀನುಳಿವಾಯತಿಕೆಯಿನ್ನೆಂತು