ಪದ್ಯ ೨೬: ಜಲಕ್ರೀಡೆಗೆ ಯಾರು ಬಂದರು?

ರಾಯಕುವರರು ಸಚಿವ ಮಂತ್ರಿ ಪ
ಸಾಯಿತರ ಮಕ್ಕಳು ಚಮೂಪರ
ನಾಯಕರ ನಂದನರು ವಿಟರು ವಿನೋದಿಗಳು ಪುರದ
ಆಯತಾಕ್ಷಿಯರೊಡನೆ ರಾವುತ
ಪಾಯಕರ ಸುತರೋಳಿ ಮೇಳ ನ
ವಾಯಿಗಳ ನಾಗರಿಕರೈದಿತು ಕೋಟಿ ಸಂಖ್ಯೆಯಲಿ (ಅರಣ್ಯ ಪರ್ವ, ೧೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ರಜಪುತ್ರರು, ಅಮಾತ್ಯರು, ಮಂತ್ರಿಗಳು, ಸಾಮಂತ ರಾಜನ ಮಕ್ಕಳು, ಸೇನಾಪತಿಗಳ ಮಕ್ಕಳು, ವಿಟರು, ವಿನೋದವನ್ನು ಮಾಡುವವರು, ಹಸ್ತಿನಾಪುರದ ಚೆಲುವೆಯರೊಡನೆ ಬಂದರು, ರಾವುತರು, ಕಾಲಾಳುಗಳ ಮಕ್ಕಳು, ನಾಗರೀಕರು, ಲೆಕ್ಕವಿಲ್ಲದಷ್ಟು ಜನ ಜಲಕ್ರೀಡೆಗೆ ಬಂದರು.

ಅರ್ಥ:
ರಾಯ: ರಾಜ; ಕುವರ: ಮಕ್ಕಳು; ಸಚಿವ: ಅಮಾತ್ಯ; ಮಂತ್ರಿ: ಸಚಿವ; ಚಮೂಪ: ಸೇನಾಪತಿ; ಮಕ್ಕಳು: ಕುಮಾರರು; ಪಸಾಯಿತ: ಸಾಮಂತ ರಾಜ; ನಂದನ: ಮಕ್ಕಳು; ವಿಟ: ವಿದೂಷಕ; ವಿನೋದ: ಹರ್ಷ, ಹಿಗ್ಗು; ಪುರ: ಊರು; ಆಯತಾಕ್ಷಿ: ವಿಶಾಲವಾದ ಕಣ್ಣುಳ್ಳವಳು (ಚೆಲುವೆ); ಒಡನೆ: ಜೊತೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಪಾಯಕ: ಕಾಲಾಳು, ಸೇವಕ; ಸುತ: ಮಗ; ಮೇಳ: ಗುಂಪು; ನವಾಯಿ: ಹೊಸರೀತಿ, ಠೀವಿ; ನಾಗರಿಕ: ನಗರದ ಜನ; ಐದು: ಬಂದು ಸೇರು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ರಾಯ+ಕುವರರು +ಸಚಿವ +ಮಂತ್ರಿ +ಪ
ಸಾಯಿತರ +ಮಕ್ಕಳು +ಚಮೂಪರ
ನಾಯಕರ+ ನಂದನರು+ ವಿಟರು +ವಿನೋದಿಗಳು +ಪುರದ
ಆಯತಾಕ್ಷಿಯರೊಡನೆ+ ರಾವುತ
ಪಾಯಕರ +ಸುತರ್+ಓಳಿ+ಮೇಳ +ನ
ವಾಯಿಗಳ +ನಾಗರಿಕರ್+ಐದಿತು +ಕೋಟಿ +ಸಂಖ್ಯೆಯಲಿ

ಅಚ್ಚರಿ:
(೧) ನಾಯಕರ, ಪಾಯಕರ – ಪ್ರಾಸ ಪದ
(೨) ಮಕ್ಕಳು, ಕುವರರು, ಸುತ – ಸಮಾನಾರ್ಥ ಪದಗಳು

ಪದ್ಯ ೩೨: ಧರ್ಮಜನು ಯಾರನ್ನು ನೆನೆದನು?

ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ನೆನೆದನು ಕಲಿ ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ತಾನರಿಯೆನಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ (ಅರಣ್ಯ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ರಾಜನು ಮೆಚ್ಚಿ, ಮುಂದಿನ ಚಾರಣದ ಉಪಾಯವೇನು ಎಂದು ಯೋಚಿಸುತ್ತಾ, ಘಟೋತ್ಕಚನನ್ನು ನೆನೆದನು. ಜನಮೇಜಯ ರಾಜ ಕೇಳು, ವಿಷ್ಣು ಮಾಯೆಯೋ ಏನೋ ತಿಳಿಯದು ನೆನೆದೊಡನೆ ಘಟೋತ್ಕಚನು ವಾಯುವೇಗದಿಂದ ಬಂದು ಆಕಾಶದಿಂದಿಳಿದನು.

ಅರ್ಥ:
ಆಯತಾಕ್ಷಿ: ಅಗಲವಾದ ಕಣ್ಣುಳ್ಳವಳು (ಸುಂದರಿ); ನುಡಿ: ಮಾತು; ರಾಯ: ರಾಜ; ಮೆಚ್ಚು: ಪ್ರಶಂಶಿಸು; ಗಮನ: ನಡೆಯುವುದು, ನಡಗೆ; ಉಪಾಯ: ಯುಕ್ತಿ; ನೆನೆ: ಜ್ಞಾಪಿಸಿಕೊಳ್ಳು; ಕಲಿ: ಶೂರ; ರಾಯ: ರಾಜ; ಕೇಳು: ಆಲಿಸು; ಕಮಲನಾಭ: ವಿಷ್ಣು; ಮಾಯೆ: ಇಂದ್ರಜಾಲ; ಅರಿ: ತಿಳಿ; ಆಕ್ಷಣ: ಕೂಡಲೆ; ವಾಯು: ಗಾಳಿ; ವೇಗ: ರಭಸ; ಅಭ್ರ: ಆಗಸ; ಇಳಿ: ಕೆಳೆಗೆ ಬಾ; ಅಮರಾರಿ: ದೇವತೆಗಳ ವೈರಿ;

ಪದವಿಂಗಡಣೆ:
ಆಯತಾಕ್ಷಿಯ+ ನುಡಿಗೆ+ ಪಾಂಡವ
ರಾಯ +ಮೆಚ್ಚಿದನ್+ಇನ್ನು +ಗಮನೋ
ಪಾಯವೆಂತೆಂದ್+ಎನುತ+ ನೆನೆದನು +ಕಲಿ +ಘಟೋತ್ಕಚನ
ರಾಯ +ಕೇಳೈ +ಕಮಲನಾಭನ
ಮಾಯೆಯೋ +ತಾನರಿಯೆನ್+ಆ ಕ್ಷಣ
ವಾಯುವೇಗದಲ್+ಅಭ್ರದಿಂದ್+ಇಳಿತಂದನ್+ಅಮರಾರಿ

ಅಚ್ಚರಿ:
(೧) ದ್ರೌಪದಿಯನ್ನು ಆಯತಾಕ್ಷಿ; ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೧೨: ಕರ್ಣನು ದ್ರೌಪದಿಯನ್ನು ಎಲ್ಲಿ ಇಡಬೇಕೆಂದು ಹೇಳಿದನು?

ಜೀಯ ಮಾತೇನಿವಳೊಡನೆ ರಿಪು
ರಾಯರಿಗೆ ದಾಸತ್ವವಾಗಲು
ಬಾಯ ಬಡಿಕೆಯದಾರೊಡವೆ ತದ್ದಾಸ ಧನವಲ್ಲ
ಆಯತಾಕ್ಷಿಯನಿನ್ನು ನಿಮ್ಮಪ
ಸಾಯಿತೆಯರಲಿ ಕೂಡು ತೊತ್ತಿರ
ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ (ಸಭಾ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನು ದುರ್ಯೊಧನನಿಗೆ, ಜೀಯ ಇವಳ ಹತ್ತಿರ ಏನು ಮಾತಾಡುವುದು, ಶತ್ರುರಾಜರು ನಿನಗೆ ದಾಸರಾದರು, ಅವರ ಪತ್ನಿ ನಿನಗೆ ದಾಸಧನವಾಗಲಿಲ್ಲವೇ? ಇವಳನ್ನು ನೀನು ನಿನ್ನ ಆಪ್ತಸಖಿಯರ ಜೊತೆಯಲ್ಲಿಡು, ದಾಸಿಯರ ಮನೆಯಲ್ಲಿ ಕೂಡಬೇಡ ಎನ್ನುವುದು ನನ್ನ ಪ್ರಾರ್ಥನೆ ಎಂದು ಹೇಳಿ ನಮಸ್ಕರಿಸಿದನು.

ಅರ್ಥ:
ಜೀಯ: ಒಡೆಯ; ಮಾತು: ನುಡಿ; ರಿಪು: ವೈರಿ; ರಾಯ: ರಾಜ; ದಾಸ: ಸೇವಕ; ಬಾಯಬಡಿಕೆ: ವೃಥಾ ಮಾತಾಡು; ತದ್ದಾಸ: ಆ ಸೇವಕ; ಧನ: ಐಶ್ವರ್ಯ; ಆಯತಾಕ್ಷಿ: ವಿಶಾಲವಾದ ಕಣ್ಣುಳ್ಳವಳು; ಅಪಸಾಯಿತೆ: ಆಪ್ತ ಸಹಾಯಕಿ; ಕೂಡು: ಸೇರಿಸು; ತೊತ್ತು: ದಾಸಿ; ಲಾಯ: ವಾಸಸ್ಥಾನ; ಬೇಡ: ಸಲ್ಲದು; ಉಪಕಾರ: ಸಹಾಯ; ಎರಗು: ನಮಸ್ಕರಿಸು; ಕಲಿ: ಶೂರ;

ಪದವಿಂಗಡಣೆ:
ಜೀಯ +ಮಾತೇನ್+ಇವಳೊಡನೆ+ ರಿಪು
ರಾಯರಿಗೆ +ದಾಸತ್ವವಾಗಲು
ಬಾಯ +ಬಡಿಕೆಯದಾರೊಡವೆ +ತದ್ದಾಸ +ಧನವಲ್ಲ
ಆಯತಾಕ್ಷಿಯನ್+ಇನ್ನು +ನಿಮ್ಮ್+ಅಪ
ಸಾಯಿತೆಯರಲಿ +ಕೂಡು +ತೊತ್ತಿರ
ಲಾಯ+ಬೇಡ್+ಉಪಕಾರವೆಂದ್+ಎರಗಿದನು +ಕಲಿಕರ್ಣ

ಅಚ್ಚರಿ:
(೧) ಜೀಯ, ರಾಯ – ಸಾಮ್ಯಾರ್ಥ ಪದ
(೨) ಜೀಯ, ರಾಯ, ಲಾಯ, ಬಾಯ, ಆಯ – ಪ್ರಾಸ ಪದಗಳು

ಪದ್ಯ ೩೪: ಸೋತನಂತರ ಶಕುನಿ ಯುಧಿಷ್ಠಿರನಿಗೆ ಏನು ಹೇಳಿದನು?

ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡ ಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದು ಮಾಡಲಾವ
ನ್ಯಾಯ ವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲ್ಲವನ್ನು ದ್ಯೂತದಲ್ಲಿ ಸೋತ ಧರ್ಮರಾಯನನ್ನು ನೋಡಿ ಶಕುನಿಯು, ರಾಜ ನಾವು ನ್ಯಾಯದಿಂದ ನಡೆಯುವವರು, ನೀವು ನಿಮ್ಮ ಸಹೋದರರು ಮೊದಲು ಸೋತಿರಿ, ನಂತರ ನಿಮ್ಮನ್ನು ಮತ್ತು ನಿಮ್ಮ ಪತ್ನಿಯನ್ನು ಸೋತಿರಿ, ಆದುದರಿಂದ ಈಗ ದುರ್ಯೋಧನನು ತನಗೆ ತಿಳಿದಂತೆ ಮಾಡಲಿ. ನಾವು ಅನ್ಯಾಯದಿಂದ ನಡೆಯುವವರಲ್ಲ, ಈಗ ನೀನೇ ಅಪ್ಪಣೆಕೊಡು ಎಂದು ಶಕುನಿ ನುಡಿದನು.

ಅರ್ಥ:
ನ್ಯಾಯ: ನಿಯಮ, ಕಟ್ಟಳೆ; ಮುನ್ನ: ಮೊದಲು; ಸೋಲು: ಪರಾಭವ; ಜೀಯ: ಒಡೆಯ; ಒಡಹುಟ್ಟಿದ: ಜೊತೆಯಲ್ಲಿ ಜನಿಸು, ತಮ್ಮಂದಿರು; ಸಹಿತ: ಜೊತೆ; ಆಯತಾಕ್ಷಿ: ವಿಶಾಲವಾದ ಕಣ್ಣುಳ್ಳ, ಹೆಣ್ಣು (ದ್ರೌಪದಿ); ಬಳಿಕ: ನಂತರ; ಬಲುಹು: ಪರಾಕ್ರಮ; ರಾಯ: ರಾಜ; ಒಲಿ: ಬಯಸು; ನ್ಯಾಯವರ್ತಿ: ನಿಯಮದಡಿ ನಡೆಯುವವ; ಬೆಸ: ಅಪ್ಪಣೆ, ಕಾರ್ಯ; ಕೈ: ಕರ, ಹಸ; ಮುಗಿ: ನಮಸ್ಕರಿಸು;

ಪದವಿಂಗಡಣೆ:
ನ್ಯಾಯವೆಮ್ಮದು +ಮುನ್ನ +ಸೋತಿರಿ
ಜೀಯ +ನಿಮ್+ಒಡಹುಟ್ಟಿದರು+ ಸಹಿತ
ಆಯತಾಕ್ಷಿಯ +ಬಳಿಕ+ ಸೋತಿರಿ+ ಬಲುಹ+ ಮಾಡೆವೆಲೆ
ರಾಯನ್+ಒಲಿದುದು +ಮಾಡಲಾವ್
ಅನ್ಯಾಯ +ವರ್ತಿಗಳಲ್ಲಲೇ+ ಬೆಸ
ಸಾ +ಯುಧಿಷ್ಠಿರ+ಎನುತ +ಕೈಗಳ +ಮುಗಿದನಾ +ಶಕುನಿ

ಅಚ್ಚರಿ:
(೧) ದುಷ್ಟರ ಶಿಷ್ಟ ವರ್ತನೆ – ಅನ್ಯಾಯ ವರ್ತಿಗಳಲ್ಲಲೇ ಬೆಸಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ
(೨) ಜೀಯ, ರಾಯ – ಸಮನಾರ್ಥಕ ಪದ