ಪದ್ಯ ೧೬: ಕೃಷ್ಣನನ್ನು ಭೀಷ್ಮನು ಹೇಗೆ ಸ್ವಾಗತಿಸಿದನು?

ಅರಸಿ ಹೊಗಲಾಮ್ನಾಯನಿಕರಕೆ
ತೆರಹುಗುಡದ ಪರಸ್ವರೂಪನು
ಕುರುಹುಗೊಂಡರೆ ಮಂದಿವಾಲವೆ ದೇವ ನೀನೊಲಿದು
ಅರಸಿಕೊಂಡೈತರಲು ತಾನೈ
ಸರವನಾಗಲಿ ನಿನ್ನ ಭೃತ್ಯನ
ಹೊರೆವ ಪರಿಯಿದು ಕೃಷ್ಣ ಜಯಜಯಯೆನುತ ನಿಡುಗೆಡೆದ (ಭೀಷ್ಮ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಿನ್ನನ್ನು ಹುಡುಕಿಕೊಂಡು ವೇದಗಳು ಬರಲು, ಅವನ್ನು ಒಳ ಹೊಗಿಸಿಕೊಳ್ಳದಿದ್ದ ಪರಮಾತ್ಮನಾದ ನೀನು ನನ್ನನ್ನು ಬಂದು ಕಾಣುವುದು ಸಾಮಾನ್ಯವೇ? ನನ್ನನ್ನು ಹುಡುಕಿಕೊಂಡು ಬಂದಿರುವೆಯೆಲ್ಲಾ ನಾನೆಷ್ಟರವನು? ನಿನ್ನ ಸೇವಕನನ್ನು ಸಲಹುವ ರೀತಿಯಿದು, ಕೃಷ್ಣ ನಿನಗೆ ಜಯವಾಗಲಿ, ಎಂದು ಭೀಷ್ಮನು ಹೊಗಳಿ ನಮಸ್ಕರಿಸಿದನು.

ಅರ್ಥ:
ಅರಸು: ಹುಡುಕು; ಆಮ್ನಾಯ: ವೇದ; ನಿಕರ: ಗುಂಪು; ತೆರಹು: ಬಿಚ್ಚು; ಪರ: ಪರಮಾತ್ಮ, ಸರ್ವೋತ್ತಮ; ಸ್ವರೂಪ: ನಿಜವಾದ ರೂಪ; ಕುರುಹು: ಗುರುತು, ಚಿಹ್ನೆ; ಮಂದಿ: ಜನಸಮೂಹ; ಒಲಿ: ಬಯಸು; ಐತರು: ಬಂದು ಸೇರು; ಐಸರವ: ಎಷ್ಟರವನು; ಭೃತ್ಯ: ಸೇವಕ; ಹೊರೆ: ಭಾರ; ಪರಿ: ವಿಧವಾಗಿ, ಬಗೆಯ; ಜಯ: ಉಘೇ; ನಿಡುಗೆಡೆ: ಉದ್ದವಾಗಿ ಬೀಳು;

ಪದವಿಂಗಡಣೆ:
ಅರಸಿ +ಹೊಗಲ್+ಆಮ್ನಾಯ+ನಿಕರಕೆ
ತೆರಹುಗುಡದ +ಪರಸ್ವರೂಪನು
ಕುರುಹುಗೊಂಡರೆ+ ಮಂದಿವಾಳವೆ +ದೇವ +ನೀನೊಲಿದು
ಅರಸಿಕೊಂಡ್+ಐತರಲು +ತಾನೈ
ಸರವನಾಗಲಿ +ನಿನ್ನ +ಭೃತ್ಯನ
ಹೊರೆವ +ಪರಿಯಿದು +ಕೃಷ್ಣ +ಜಯಜಯ+ಎನುತ +ನಿಡುಗೆಡೆದ

ಅಚ್ಚರಿ:
(೧) ಕೃಷ್ಣನ ಗುಣಗಾನ – ಅರಸಿ ಹೊಗಲಾಮ್ನಾಯನಿಕರಕೆ ತೆರಹುಗುಡದ ಪರಸ್ವರೂಪನು

ಪದ್ಯ ೩೦: ಭಗವಂತನ ದಯೆ ಎಂತಹುದು?

ಅರಸುತಾಯಾಮ್ನಾಯ ತತಿಕು
ಕ್ಕುರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯಗದುಗಿನ ವೀರನಾರಣನ (ಅರಣ್ಯ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವೇದಗಳು ಭಗವಂತನನ್ನು ಹುಡುಕಲು ಹೊರಟು ಮುಂದೆ ಹೋಗಲು ದಾರಿ ಕಾಣದೇ ಸೋತು ಕುಳಿತುಬಿಟ್ಟವು, ಮುನಿಗಳು ಸಮಾಧಿ ಸ್ಥಿತಿಯನ್ನು ಹೋದುವರಲ್ಲಾ, ಅದನ್ನು ಕಂಡು ನಮಗೇನೂ ಹೊಟ್ಟೆಕಿಚ್ಚಿಲ್ಲ, ಆದರೆ ಅವರಿಗೆ ಭಗವಂತನ ಉಗುರುಗಳ ತುದಿಯೂ ಕಾಣಲಿಲ್ಲಾ, ಶ್ರೀ ಹರಿಯು ತನ್ನ ಭಕ್ತರನ್ನು ತಾನೆ ಮುಂದೆ ಬಂದು ಸಲಹುತ್ತಾನೆ, ಭಕ್ತರ ಮೇಲೆ ವೀರನಾರಾಯಣನ ಕರುಣೆ ಎಷ್ಟೋ ಯಾರು ಬಲ್ಲರು ಎಂದು ಜನಮೇಜಯ ರಾಜನಿಗೆ ವೈಶಂಪಾಯನರು ತಿಳಿಸಿದರು.

ಅರ್ಥ:
ಅರಸು: ಹುಡುಕು; ಆಮ್ನಾಯ: ಶೃತಿ; ತತಿ: ಸಮೂಹ; ಕುಕ್ಕುರಿಸು; ಕುಳಿತುಕೊಳ್ಳು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ಕರುಬು: ಹೊಟ್ಟೆಕಿಚ್ಚು ಪಡು; ಕಾಣು: ತೋರು; ನಖ: ಉಗುರು; ಕೊನೆ: ತುದಿ; ಅರಸ: ರಾಜ; ಹರಿಹರಿದು: ಮುಂದೆ ಬಂದು, ಚಲಿಸು; ಎರಕ: ಪ್ರೀತಿ, ಅನುರಾಗ; ಬಿಡು: ತೊರೆ; ಸಲಹು: ಕಾಪಾಡು; ಕರುಣ: ದಯೆ; ರಾಯ: ರಾಜ;

ಪದವಿಂಗಡಣೆ:
ಅರಸುತಾ+ಆಮ್ನಾಯ +ತತಿ+ಕು
ಕ್ಕುರಿಸಿದವು +ಮುನಿಗಳ +ಸಮಾಧಿಗೆ
ಕರುಬುವವರಾವಲ್ಲ+ ಕಾಣರು +ನಖದ +ಕೊನೆಗಳನು
ಅರಸ+ ತಾನೇ +ಹರಿಹರಿದು +ತನ್
ಎರಕದವರನು +ಬಿಡದೆ+ ಸಲಹುವ
ಕರುಣವೆಂತುಟೊ +ರಾಯ+ಗದುಗಿನ+ ವೀರನಾರಣನ

ಅಚ್ಚರಿ:
(೧) ಭಗವಂತನ ದಯೆ – ತಾನೇ ಹರಿಹರಿದು ತನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ

ಪದ್ಯ ೩೦: ಪಾಶುಪತದ ಮಹಿಮೆ ಎಂತಹುದು?

ಪಾಶುಪತಶರ ಭುವನದೂರ್ಧ್ವ
ಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ (ಅರಣ್ಯ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವು ಲೋಕವನ್ನೇ ನಾಶ ಮಾಡಬಲ್ಲ ಶಕ್ತಿಯುಳ್ಳದ್ದೆಮ್ದು ನೀವು ಶಾಸ್ತ್ರಗಳಲ್ಲಿ ಕೇಳಿರುವಿರಿ, ಅದು ನನಗೆ ವಶವಾಯಿತು. ಅಲ್ಲಿಂದ ಅಮರಾವತಿಗೆ ಹೋದಾಗ ದೇವೇಂದ್ರನು ನನ್ನನ್ನು ಪ್ರೀತಿಯಿಮ್ದ ಮನ್ನಿಸಿದನು ಎಂದು ಅರ್ಜುನನು ಹೇಳಿದನು.

ಅರ್ಥ:
ಶರ: ಬಾಣ; ಭುವನ: ಭೂಮಿ; ಊರ್ಧ್ವ: ಮೇಲ್ಭಾಗ; ಊರ್ಧ್ವಶ್ವಾಸ: ಮೇಲುಸಿರು; ಅತಿ: ಬಹಳ; ಕೋವಿದ: ತಿಳಿದವ; ಚಿತ್ತೈಸು: ಗಮನವಿಟ್ಟು ಕೇಳು; ಬಲ್ಲಿರಿ: ತಿಳಿದಿರಿ; ಆಮ್ನಾಯ: ವೇದ, ವಂಶ; ವೀಧಿ: ಮಾರ್ಗ; ಸೇರು: ಕೂಡು; ಮಹೇಶ: ಶಿವ; ಬಳಿಕ: ನಂತರ; ಸುರೇಶ: ಇಂದ್ರ; ಮನ್ನಿಸು: ಗೌರವಿಸು; ಅಮರಾವತಿ: ಸ್ವರ್ಗ ಲೋಕ; ಒಲವು: ಪ್ರೀತಿ;

ಪದವಿಂಗಡಣೆ:
ಪಾಶುಪತ+ಶರ+ ಭುವನದ್+ಊರ್ಧ್ವ
ಶ್ವಾಸವತಿ +ಕೋವಿದವಲೇ +ಚಿ
ತ್ತೈಸಿ +ಬಲ್ಲಿರಿ +ನಿಮ್ಮಡಿಗಳ್+ಆಮ್ನಾಯ +ವೀಧಿಯಲಿ
ಆ +ಶರವಲೇ +ಸೇರಿತೆನಗೆ+ ಮ
ಹೇಶನಿಂದ್+ಅಲ್ಲಿಂದ +ಬಳಿಕ +ಸು
ರೇಶನ್+ಅತಿ +ಮನ್ನಿಸಿದನ್+ಅಮರಾವತಿಯೊಳ್+ಒಲವಿನಲಿ

ಅಚ್ಚರಿ:
(೧) ಪಾಶುಪತದ ಹಿರಿಮೆ – ಪಾಶುಪತಶರ ಭುವನದೂರ್ಧ್ವಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ

ಪದ್ಯ ೨೧: ಧರ್ಮರಾಯನು ಕೃಷ್ಣನನ್ನು ಕಂಡಾಗ ಹೇಳಿದ ಮಾತುಗಳಾವುವು?

ಇದಿರುವಂದನು ಧರ್ಮಸುತ ಹರಿ
ಪದ ಪಯೋಜದೊಳೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂತರಣ
ಕುದಿದು ಮರುಗಿದವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವದೆಂದ (ಸಭಾ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧರ್ಮರಾಜನು ಶ್ರೀಕೃಷ್ಣನ ಮುಂದೆ ಬಂದು, ಅವನ ಪಾದಾರವಿಂದಗಳಿಗೆ ನಮಸ್ಕರಿಸಿ, “ಸದಾ ಮುಕ್ತನಾಗಿರುವ ನಿನಗೆ, ನಿನ್ನ ಭಕ್ತರ ರಕ್ಷಣೆ ವಿನೋದವಲ್ಲವೇ? ಭಕ್ತರನ್ನು ಸಂತೈಸುವಉದು, ಪಾರುಮಾಡುವುದು ನಿನ್ನ ಲೀಲೆಯಲ್ಲವೇ? ನಿನ್ನನ್ನು ಹುಡುಕಿ ನಿನ್ನನ್ನು ಕಾಣದೆ ಶೃತಿಗಳು ದುಃಖಿಸುತ್ತಿವೆ. ನೀನೆ ನಮ್ಮ ಮನೆಯಲ್ಲಿರುವುದರಿಂದ, ನಮ್ಮ ಮನೆಯು ಶೃತಿಗಳನ್ನು ಅಣಕಿಸುತ್ತಿವೆ, ಎಂದು ಹೇಳಿದನು.

ಅರ್ಥ:
ಇದಿರು: ಎದುರು; ಇದಿರುವಂದು: ಎದುರು ಬಂದು; ಪದ: ಪಾದ; ಪಯ: ನೀರು; ಪಯೋಜ: ಕಮಲ; ಎರಗು: ನಮಸ್ಕರಿಸು; ವಿನೋದ: ಸಂತೋಷ, ಹಾಸ್ಯ; ವಿಮುಕ: ಮುಕ್ತನಾಗಿರುವ; ಭಕ್ತ: ಆರಾಧಕ; ಸಂತರಿಸು: ಪಾರುಮಾಡು; ಕುದಿ: ಸಂಕಟ; ಮರುಗು:ತಳಮಳ; ಅರಸು: ಹುಡುಕು; ಕಾಣದೆ: ದೊರಕದೆ, ಸಿಗದೆ; ಶ್ರುತಿ: ವೇದ; ಸದನ: ಮನೆ; ಅಖಿಳ: ಎಲ್ಲಾ; ಆಮ್ನಾಯ: ವೇದ, ಶೃತಿ; ನಿಕರ: ಗುಂಪು, ಜೊತೆ; ಏಡಿಸು: ಅವಹೇಳನ ಮಾಡು, ನಿಂದಿಸು;

ಪದವಿಂಗಡಣೆ:
ಇದಿರು+ವಂದನು +ಧರ್ಮಸುತ +ಹರಿ
ಪದ +ಪಯೋಜದೊಳ್+ಎರಗಿದನು+ ನಿನ
ಗಿದು +ವಿನೋದವಲೇ +ವಿಮುಕ್ತಗೆ+ ಭಕ್ತ +ಸಂತರಣ
ಕುದಿದು +ಮರುಗಿದವರಸಿ +ನಿನ್ನಯ
ಪದವ +ಕಾಣದೆ +ಶ್ರುತಿಗಳ್+ಎಮ್ಮಯ
ಸದನವ್+ಅಖಿಳ +ಆಮ್ನಾಯ +ನಿಕರವನ್+ಏಡಿಸುವದೆಂದ

ಅಚ್ಚರಿ:
(೧) ನಿನ್ನ ಆಗಮನದಿಂದ ಮನೆಯೇ ಶೃತಿಗಳನ್ನು ಅವಹೇಳನ ಮಾಡುತ್ತಿವೆ ಎಂದು ಹೇಳಿರುವುದು – ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ ಸದನವಖಿಳಾಮ್ನಾಯ ನಿಕರವನೇಡಿಸುವದೆಂದ
(೨) ಕಮಲ ಪದಕ್ಕೆ ಪಯೋಜ ಎಂದು ಪ್ರಯೋಗ
(೩) ಪದ – ೨, ೫ ಸಾಲಿನ ಮೊದಲ ಪದ
(೪) ಆಮ್ನಾಯ, ಶೃತಿ – ವೇದ ಪದದ ಸಮನಾರ್ಥಕ ಪದಗಳು