ಪದ್ಯ ೬೦: ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಹೇಗೆ ಎದುರಿಸಿತು?

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತಭೈರವನ (ದ್ರೋಣ ಪರ್ವ, ೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಆವರಿಸಿತು. ಆನೆ, ಕುದುರೆ, ರಥ, ಕಾಲಾಳುಗಳು ಮುನ್ನುಗ್ಗಿದರು. ಶಸ್ತ್ರಗಳ ಮಳೆ ಸುರಿಸಿದರು. ಚಮೂಪತಿಗಳ ಸನ್ನೆಯಂತೆ ಶತ್ರುಗಳಿಗೆ ಕಲ್ಪಾಂತ ಭೈರವನಂತಿದ್ದ ಅಭಿಮನುವನ್ನು ಎದುರಿಸಿದರು.

ಅರ್ಥ:
ಕುಮಾರ: ಮಗ; ಸೇನೆ: ಸೈನ್ಯ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ನೂಕು: ತಳ್ಳು; ಉರವಣೆ: ಆತುರ, ಅವಸರ; ತುರಗ: ಅಶ್ವ; ಆನೀಕ; ಸೈನ್ಯ, ಸಮೂಹ; ಇಭ; ಆನೆ; ತತಿ: ಗುಂಪು; ತೂಳು: ಆವೇಶ, ಉನ್ಮಾದ; ತುಡುಕು: ಹೋರಾಡು, ಸೆಣಸು; ರಥ:ಬಂಡಿ, ತೇರು; ನಿಕರ: ಗುಂಪು; ತೋಕು: ಎಸೆ, ಪ್ರಯೋಗಿಸು; ಕೈದು: ಆಯುಧ; ಮಳೆ: ವರ್ಷ; ರಣ: ಯುದ್ಧ; ಆಕೆವಾಳ: ವೀರ, ಪರಾಕ್ರಮಿ; ಸನ್ನೆ: ಗುರುತು; ಸಮರ: ಯುದ್ಧ; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಯುಗದ ಅಂತ್ಯ; ಭೈರವ: ಈಶ್ವರನ ಸ್ವರೂಪ;

ಪದವಿಂಗಡಣೆ:
ಆ +ಕುಮಾರನ +ಸೇನೆ +ಗಡಣಿಸಿ
ನೂಕಿತ್+ಉರವಣಿಸಿದುದು +ತುರಗ
ಆನೀಕವ್+ಇಭ+ತತಿ +ತೂಳಿದವು +ತುಡುಕಿದವು +ರಥನಿಕರ
ತೋಕಿದವು +ಕೈದುಗಳ +ಮಳೆ +ರಣದ್
ಆಕೆವಾಳರ +ಸನ್ನೆಯಲಿ +ಸಮ
ರಾಕುಳರು +ಕೆಣಕಿದರು +ರಿಪು+ಕಲ್ಪಾಂತ+ಭೈರವನ

ಅಚ್ಚರಿ:
(೧) ತೂಳಿದವು, ತುಡುಕಿದವು, ತೋಕಿದವು – ಪದಗಳ ಬಳಕೆ
(೨) ರಣ, ಸಮರ; ತತಿ, ನಿಕರ – ಸಮಾನಾರ್ಥಕ ಪದ

ಪದ್ಯ ೩೭: ದ್ರೋಣನ ಆಕ್ರಮಣ ಹೇಗಿತ್ತು?

ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿವ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ (ದ್ರೋಣ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ನಾಗಾಲೋಟದಿಂದ ಬರುವ ಕುದುರೆಗಳ ನಾಲ್ಕು ಗೊರಸುಗಳನ್ನು ಕತ್ತರಿಸಿದನು. ಆನೆಗಳು ಬೀಳುವಂತೆ ಹೊಡೆದನು. ತೇರುಗಳ ಸಮೂಹವನ್ನು ಚದುರಿಹೋಗುವಂತೆ ಮಾಡಿದನು. ತಲೆವರಿಗೆಗಳನ್ನು ಹಿಡಿದು ಬರುವ ಕಾಲಾಳುಗಲನ್ನು ಸೀಳಿದನು. ಪಾಂಡವ ಸೈನ್ಯ ಸಾಗರವನ್ನು ಜಯ ಸಮುದ್ರನಾದ ದ್ರೋಣನು ಕಲಕಿದನು.

ಅರ್ಥ:
ನೂಕು: ತಳ್ಳು; ಹರಿತ: ಚೂಪಾಗಿರುವಿಕೆ; ತೇಜಿ: ಕುದುರೆ; ಖುರ: ಕುದುರೆಗಳ ಕಾಲಿನ ಗೊರಸು; ನಾಕ: ನಾಲ್ಕು; ಖಂಡಿಸು: ಕಡಿ, ಕತ್ತರಿಸು; ಕವಿ: ಆವರಿಸು; ನಾಗ: ಆನೆ; ಆನೀಕ: ಗುಂಪು; ನೆರೆ: ಗುಂಪು; ಕೆಡಹು: ಬೀಳಿಸು; ತೇರು: ಬಂಡಿ; ಹೊದರು: ಗುಂಪು, ಸಮೂಹ; ಹರೆ:ವ್ಯಾಪಿಸು, ವಿಸ್ತರಿಸು; ಕಡಿ: ಕತ್ತರಿಸು; ಔಕು: ತಳ್ಳು; ತಲೆವರಿಗೆ: ಗುರಾಣಿ; ತೆರಳು: ಹೋಗು, ನಡೆ; ಅನೇಕ: ಬಹಳ; ಸುಭಟ: ಪರಾಕ್ರಮಿ; ಸೀಳು: ಚೂರು, ತುಂಡು; ಜಯ: ಗೆಲುವು; ರತ್ನಾಕರ: ಸಮುದ್ರ; ಕಲಕು: ಅಲ್ಲಾಡಿಸು; ಸಾಗರ: ಸಮುದ್ರ;

ಪದವಿಂಗಡಣೆ:
ನೂಕಿ +ಹರಿತಹ +ತೇಜಿಗಳ +ಖುರ
ನಾಕ +ಖಂಡಿಸಿ +ಕವಿವ +ನಾಗ
ಆನೀಕವನು +ನೆರೆ +ಕೆಡಹಿ +ತೇರಿನ +ಹೊದರ +ಹರೆ+ಕಡಿದು
ಔಕಿ +ತಲೆವರಿಗೆಯಲಿ +ತೆರಳಿದ್
ಅನೇಕ +ಸುಭಟರ +ಸೀಳಿ +ಜಯ +ರ
ತ್ನಾಕರನು +ಕಲಕಿದನು +ಪಾಂಡವ +ಸೈನ್ಯ+ಸಾಗರವ

ಅಚ್ಚರಿ:
(೧) ನೂಕಿ, ಔಕಿ – ಪ್ರಾಸ ಪದಗಳು
(೨) ರೂಪಕದ ಪ್ರಯೋಗ – ಜಯ ರತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ

ಪದ್ಯ ೪೨: ದುರ್ಯೋಧನನು ದ್ರೋಣನಿಗೆ ಏನು ಹೇಳಿದನು?

ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ (ದ್ರೋಣ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಈ ಮಾತು ಸಾಕು, ಬಿಲ್ವಿದ್ಯೆಯ ತಂತ್ರದಲ್ಲಿ ಶಿವನಾದ ದ್ರೋಣನು ಆಡಿದ ಮಾತುಗಳು ತಪ್ಪಿಯಾವೇ? ಎಂದು ದುರ್ಯೋಧನನು ಕೃಪಚಾರ್ಯರೇ ಮೊದಲಾದ ಪ್ರಧಾನರನ್ನು ಕಳುಹಿಸಿದನು. ಅಷ್ಟರ ಹೊತ್ತಿಗೆ ಸೂರ್ಯೋದಯವಾಯಿತು.

ಅರ್ಥ:
ಸಾಕು: ನಿಲ್ಲು; ಚಾಪ: ಬಿಲ್ಲು; ತಂತ್ರ: ವಿಧಾನ; ಪಿನಾಕ: ಶಿವನ ತ್ರಿಶೂಲ, ಶಿವನ ಬಿಲ್ಲು; ಪಿನಾಕಿ: ಶಿವ; ನುಡಿ: ಮಾತು; ಕಾಕ: ಸುಳ್ಳು; ಅವನೀಶ: ರಾಜ; ಹರುಷ: ಸಂತೋಷ; ಪ್ರಧಾನ: ಮುಖ್ಯ; ಕಳುಹು: ತೆರಳು; ಮನೆ: ಗೃಹ; ದಿವಾಕರ: ಸೂರ್ಯ; ಹೆಡತಲೆ: ಹಿಂದಲೆ; ಹಗರು: ತಲೆಯ ಹೊಟ್ಟು, ಹುರುಪು; ಚಂದ್ರ: ಶಶಿ;
ಆನೀಕ: ಸೈನ್ಯ, ಸಮೂಹ;

ಪದವಿಂಗಡಣೆ:
ಸಾಕಿದ್+ಒಳ್ಳಿತು +ಚಾಪ+ತಂತ್ರ +ಪಿ
ನಾಕಿ+ಏರಿಸಿ +ನುಡಿದ +ನುಡಿಗಳು
ಕಾಕಹುದೆ+ ಕೈಕೊಂಡೆವ್+ಎನುತ್+ಅವನೀಶ+ ಹರುಷದಲಿ
ಆ +ಕೃಪ+ಆದಿ +ಮಹಾ+ಪ್ರಧಾನ
ಆನೀಕವನು +ಕಳುಹಿದನು +ಮನೆಗೆ +ದಿ
ವಾಕರನು +ಹೆಡತಲೆಗೆ +ಹಗರಿಕ್ಕಿದನು +ಚಂದ್ರಮನ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳುವ ಪರಿ – ದಿವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ