ಪದ್ಯ ೨೨: ದ್ರೌಪದಿಯು ಯಾರನ್ನು ಭಜಿಸಿದಳು?

ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇ ಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿಯುಪ
ದೇಶ ಮಮ್ತ್ರದ ಬಲದಿ ಭಾವಿಸಿ ನೆನೆದಳಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪರಿವಾರದ ಬ್ರಾಹ್ಮಣರ ಕಳವಳ, ಧರ್ಮಜನ ಸಂಕಟ, ಭೀಮನ ಆಕ್ರೋಶ, ಅರ್ಜುನನ ಸೋಗು, ನಕುಲ ಸಹದೇವರ ಮನಸ್ಸಿನ ಕಿರುಕುಳ ಇವೆಲ್ಲವನ್ನೂ ಕಮಲಮುಖಿಯಾದ ದ್ರೌಪದಿಯು ಬೇಸರದಿಂದ ನೋಡಿ, ಧೌಮ್ಯರು ಉಪದೇಶಿಸಿದ ಮಂತ್ರವನ್ನು ಶ್ರೀಕೃಷ್ಣನ ಸ್ಮರಣೆ ಮಾಡುತ್ತಾ ಜಪಿಸಿದಳು.

ಅರ್ಥ:
ಭೂಸುರ: ಬ್ರಾಹ್ಮಣ; ಕಳವಳ: ಗೊಂದಲ; ನೃಪ: ರಾಜ; ಕ್ಲೇಶ: ದುಃಖ, ಸಂಕಟ; ಪವಮಾನ: ವಾಯು; ಸುತ: ಮಗ; ಆಕ್ರೋಶ: ಕೋಪ; ನರ:ಅರ್ಜುನ; ಉಪಟಳ: ಕಿರುಕುಳ; ಆಟ: ಸೋಗು; ಸರೋಜಾನನೆ: ಕಮಲದಂತ ಮುಖವುಳ್ಳ; ನಿರೀಕ್ಷೆ: ನೋಡುವುದು; ಆಸುರ: ಬೇಸರ; ದುಃಖ: ದುಗುಡ; ಮುನಿ: ಋಷಿ; ಉಪದೇಶ: ಬೋಧಿಸುವುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಲ: ಶಕ್ತಿ; ಭಾವಿಸು: ಧ್ಯಾನಿಸು; ನೆನೆ: ಜ್ಞಾಪಿಸಿಕೊ; ಅಚ್ಯುತ: ನ್ಯೂನ್ಯತೆಯಿಲ್ಲದವ, ಕೃಷ್ಣ;

ಪದವಿಂಗಡಣೆ:
ಭೂಸುರರ +ಕಳವಳವ +ನೃಪನಾ
ಕ್ಲೇಶವನು +ಪವಮಾನ+ಸುತನ
ಆಕ್ರೋಶವನು +ನರನ+ಆಟವನು +ಮಾದ್ರೇಯರ್+ ಉಪಟಳವ
ಆ +ಸರೋಜಾನನೆ +ನಿರೀಕ್ಷಿಸುತ
ಆಸುರದ +ದುಃಖದಲಿ+ ಮುನಿ+ಉಪ
ದೇಶ +ಮಂತ್ರದ+ ಬಲದಿ +ಭಾವಿಸಿ +ನೆನೆದಳ್+ಅಚ್ಯುತನ

ಅಚ್ಚರಿ:
(೧) ಕಳವಳ, ಕ್ಲೇಶ, ಆಟ, ಆಕ್ರೋಶ, ಉಪಟಳಾ, ಆಸುರ – ಕಳವಳವನ್ನು ವಿವರಿಸುವ ಪದಗಳು

ಪದ್ಯ ೪೭: ಶಕುನಿಯು ಧರ್ಮಜನನ್ನು ಹೇಗೆ ಆಡಲು ಆಹ್ವಾನಿಸಿದನು?

ಆಟವಾರಂಭಿಸದು ಬರಿಬೊ
ಬ್ಬಾಟವೇತಕೆ ವಿಜಯ ಸಿರಿವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತ ಕೌಶಲವ
ತೋಟಿ ಬೇಕೆ ಕೈಯ ಹೊಯ್
ಬೂತಾಟವೇತಕೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ (ಸಭಾ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ದಾಳವನ್ನು ಆಡಿ ಬೊಬ್ಬಿರಿಯುತ್ತಾ ಯುಧಿಷ್ಠಿರ ಆಟವನ್ನು ಆರಂಭಿಸು, ಕೇವಲ ಮಾತಾಡುವುದರಿಂದ ಏನು ಸಾಧಿಸಲಾಗದು, ಬಾಯಿಬಡುಕರಿಗೆ ವಿಜಯವೊಲಿಯುವುದೇ? ಸೆಣಸಲು ಕೈಯಿಂದ ಆರಂಭಿಸಬೇಕು, ಕುಚೋದ್ಯ ಸಲ್ಲದು, ಧರ್ಮಜನು ಆಟವನ್ನು ಬಲ್ಲವನಲ್ಲವೇ ಎಂದು ಶಕುನಿ ನಗುತ್ತಾ ಹೇಳಿದನು.

ಅರ್ಥ:
ಆಟ: ಕ್ರೀಡೆ; ಆರಂಭ: ಪ್ರಾರಂಭ; ಬರಿ: ಕೇವಲ; ಬೊಬ್ಬಾಟ: ಆರ್ಭಟ; ವಿಜಯ: ಗೆಲುವು; ಸಿರಿ: ಐಶ್ವರ್ಯ; ವಾಚ: ಮಾತು; ವಾಚಾಟ: ಮಾತಾಡುವವ; ಮೆಚ್ಚು: ಒಲಿ, ಇಷ್ಟ; ತೋರು: ಪ್ರದರ್ಶಿಸು; ದ್ಯೂತ: ಜೂಜು; ಕೌಶಲ: ಜಾಣತನ, ಚದುರು; ತೋಟಿ: ಕಲಹ, ಜಗಳ; ಕೈ: ಹಸ್ತ; ಬೂತು: ಕುಚೋದ್ಯ; ನಂದನ: ಮಗ; ಒಳ್ಳಿತು: ಸರಿಯಾದ; ಬಲ್ಲೆ: ತಿಳಿ; ನಗು: ಹಾಸ್ಯ;

ಪದವಿಂಗಡಣೆ:
ಆಟವ್+ಆರಂಭಿಸ್+ಅದು +ಬರಿಬೊ
ಬ್ಬಾಟವೇತಕೆ+ ವಿಜಯ +ಸಿರಿ+ವಾ
ಚಾಟರಿಗೆ+ ಮೆಚ್ಚುವಳೆ +ತೋರಾ +ದ್ಯೂತ +ಕೌಶಲವ
ತೋಟಿ +ಬೇಕೆ +ಕೈಯ+ ಹೊಯ್
ಬೂತಾಟವೇತಕೆ+ ಧರ್ಮನಂದನನ್
ಆಟವೊಳ್ಳಿತು+ ಬಲ್ಲೆನೆಂದನು+ ಶಕುನಿ +ನಸುನಗುತ

ಅಚ್ಚರಿ:
(೧) ಗೆಲುವು ಯಾರಿಗೆ ಒಲಿಯುವುದಿಲ್ಲ – ವಿಜಯ ಸಿರಿವಾಚಾಟರಿಗೆ ಮೆಚ್ಚುವಳೆ
(೨) ಪ್ರಾಸ ಪದಗಳು – ಆಟ, ಬೊಬ್ಬಾಟ, ವಾಚಾಟ, ಬೂತಾಟ

ಪದ್ಯ ೧೭: ಕೃಷ್ಣನು ಯಾವ ರೀತಿಯ ಗುಣವಳ್ಳವನು ಎಂದು ಭೀಷ್ಮರು ಹೇಳಿದರು?

ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂದಿ ಹರಹಿನಲಿ
ಬೇಟದಲಿ ಮೂವಣ್ಣದಬ್ಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ಲೋಟಿಸುವ ನಿಜದಿಟ್ಟ ಬೊಮ್ಮವಿದೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭಯರಹಿತವಾದ ಬ್ರಹ್ಮವು ಸುತ್ತಲೂ ನೋಡುತ್ತದೆ. ತನಗೆ ಬೇಕಾದರೆ ಮಾತಾಡುವಂತೆ ತೋರುತ್ತದೆ, ಹರಿದಾಡುವಂತೆ ತೋರುತ್ತದೆ. ಇದು ಹೇಗೆ ಸುಳಿಯುವುದೆಂದರೆ ಬಹುದೊಡ್ಡದಾದರೂ ಹಿಡಿಯೊಳಗೆ ಸಿಲುಕುವ ರೀತಿ ಕಾಣುತ್ತದೆ, ಇಲ್ಲವಾದರೆ ಎಲ್ಲೆಲ್ಲೂ ಹರಡಿರುತ್ತದೆ. ಮಾಯೆಯೊಡನೆ ಮೂರುಜನ ಅಣ್ಣಂದಿರಾದ ಹರಿ ಹರ ಬ್ರಹ್ಮರ ತಾಯಿ ಬೇಟವಾಡುವಂತೆ ಕೂಡಿದಂತೆ ಕಂಡರೂ ಸಾಕ್ಷಿಯಾಗಿರುತ್ತದೆ. ಕೃಷ್ಣನು ಎಂದೆಂದೂ ಉರುಳದ ಅದ್ವಿತೀಯ ವಸ್ತುವಾಗಿದ್ದಾನೆ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ನೋಟ: ವೀಕ್ಷಣೆ; ಸುತ್ತ: ಎಲ್ಲಾಕಡೆ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಹರಿ: ಚಲಿಸು, ಸಾಗು, ಪ್ರವಹಿಸು; ಬಳಕೆ: ಉಪಯೋಗಿಸುವಿಕೆ, ಬಳಸುವಿಕೆ; ಮಾತು: ವಾಣಿ; ಸುಳಿವು: ಗುರುತು, ಕುರುಹು; ಅಗ್ಗ: ಶ್ರೇಷ್ಠ; ಹಿಡಿ: ಬಂಧಿಸು; ಹರಹು: ವಿಸ್ತಾರ, ವೈಶಾಲ್ಯ; ಬೇಟ: ಪ್ರಣಯ; ಆಸೆ; ಮೂವಣ್ಣ: ಮೂರು ಅಣ್ಣಂದಿರು; ಅಣ್ಣ: ಹಿರಿಯ ಸಹೋದರ; ಅಬ್ಬೆ: ತಾಯಿ, ಅವ್ವೆ; ಕೂಟ: ಜೊತೆ, ಗುಂಪು; ಕುರುಹು: ಚಿಹ್ನೆ, ಗುರುತು; ಮಿಗೆ: ಮತ್ತು; ನಿರ್ಲೋಟಿಸು: ಎಲ್ಲೆಲ್ಲಿಯೂ ಸಂಚರಿಸು; ನಿಜ: ನೈಜ, ದಿಟ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ಬೊಮ್ಮ: ಬ್ರಹ್ಮ;

ಪದವಿಂಗಡಣೆ:
ನೋಟ +ಸುತ್ತಲು +ಬೇಹುದೇ +ಹರಿದ್
ಆಟವಗಲಕೆ +ಬಳಕೆಯಲಿ +ಮಾ
ತಾಟ+ ಸುಳಿವಿನೊಳ್+ಅಗ್ಗಳದ+ ಹಿಡಿಬಂದಿ+ ಹರಹಿನಲಿ
ಬೇಟದಲಿ +ಮೂವಣ್ಣದ್+ಅಬ್ಬೆಯ
ಕೂಟದಲಿ+ ಕುರುಹಾಗಿ+ ಮಿಗೆ +ನಿ
ಲೋಟಿಸುವ+ ನಿಜದಿಟ್ಟ+ ಬೊಮ್ಮವಿದೆಂದನಾ +ಭೀಷ್ಮ

ಅಚ್ಚರಿ:
(೧) ನೋಟ, ಆಟ, ಕೂಟ, ಬೇಟ, ಮಾತಾಟ – ಪ್ರಾಸ ಪದಗಳು

ಪದ್ಯ ೧೭: ಕೌರವರ ಪಾಂಡವರ ವೈರಶಿಖಿ ಯನ್ನು ನೋಡಿ ಭೀಷ್ಮ ಏನು ಯೋಚಿಸಿದನು?

ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ (ಆದಿ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇವರಿಬ್ಬರ ಜಗಳ ಮುಂದೆ ಬರುವ ಆಪತ್ತಿಗೆ ಮುನ್ಸೂಚನೆಯಂತೆ ಭೀಷ್ಮನಿಗೆ ಕಂಡಿತು. ಮೊದಲು ಇಬ್ಬರು ಆಟಗಳಲ್ಲಿ ತೊಡಗಿದ್ದರು, ಬಾಲ್ಯ ಸಹಜ ಆಟದಲ್ಲಿ ತೊಡಗಿದ ನಂತರ ಪರಸ್ಪರ ಕಲಹದಲ್ಲಿ ತೊಡಗಿದರು. ಹೀಗೆ ಬಿಟ್ಟರೆ ಇದು ಮುಂದೆ ದೊಡ್ಡ ಜಗಳದಲ್ಲಿ ಮಾರ್ಪಾಡಾಗುವುದು ಖಂಡಿತ, ಇವರನ್ನು ಶಸ್ತ್ರಾಸ್ತ್ರ ಅಭ್ಯಾಸದಲ್ಲಿ ತೊಡಗಿಸಿ ಇವರನ್ನು ಈ ಜಗಳದಿಂದ ಬಿಡಿಸಬೇಕು, ಇದು ಹೀಗೆ ಮುಂದುವರೆದರೆ ಮುಂದೆ ಇದು ಮೃತ್ಯುವಿನ ಔತಾಣದಲ್ಲಿ ಕೊನೆಗೊಳ್ಳುತ್ತದೆ ಎಂದು ಭೀಷ್ಮನು ಬಹಳವಾಗಿ ಚಿಂತಿಸತೊಡಗಿದನು.

ಅರ್ಥ:
ಆಟ: ಕ್ರೀಡೆ; ತೊಡಗು: ಪಾಲ್ಗೊಳ್ಳು, ಸೆಣಸು, ಹೋರಾಡು
ಮೊದಲು: ಆದಿ; ಸಾಕಿತ: ಸಾಕಿದ, ಸಲಹಿದ
ತೋಟಿ: ಯುಧ್ಧ, ಜಗಳ; ಕಾಲಾಟ: ರಭಸ, ಹೊಡೆತ, ಪ್ರಹಾರ
ನಿಲಿಸು: ತಡೆ; ಶಸ್ತ್ರಾಸ್ತ್ರ: ಆಯುಧ
ಪ್ರಸಂಗ: ಕೂಟ, ಸಂಪರ್ಕ, ಘಟನೆ
ಮೃತ್ಯು: ಸಾವು; ಕರೆಕರೆಗುಂದು: ವಿಶೇಷವಾಗಿ ವ್ಯಥೆಗೊಳ್ಳು
ಕರೆ: ಸುರಿಸು, ಕೂಗು; ಬರಿ: ಬದಿ, ಪಕ್ಕ
ಬಿಡು: ತೊರೆ, ತ್ಯಜಿಸು; ವಿಕರಿಸು: ಬೇರೆ ರೂಪ ತಾಳು, ಬದಲಾಗು

ಅಚ್ಚರಿ:
(೧) ೧,೩,೪ ಸಾಲಿನ ಮೊದಲ ಪದ “ಆಟ” , ೨ ಮತ್ತು ೫ ಸಾಲಿನ ಮೊದಲ ಪದ “ತೋಟಿ”
(೨) ಜೋಡಿ ಪದಗಳು: ಶಸ್ತ್ರಾಸ್ತ್ರ, ಕರೆಕರೆ
(೩) ಮೊದಲಲಿ, ಪ್ರಸಂಗದಲಿ (೧, ೩ ಸಾಲಿನ ಕೊನೆ ಪದಗಳು)