ಪದ್ಯ ೨೫: ಅಶ್ವತ್ಥಾಮನನ್ನು ಯಾರು ಹಿಡಿದರು?

ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು (ಗದಾ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಶ್ವತ್ಥಾನ ಕುಶಿಕಾಸ್ತ್ರವು ವಿಫಲವಾಯಿತು. ಶ್ರೀಕೃಷ್ಣನೂ ಮತ್ತು ಅಶ್ವತ್ಥಾಮ ಇಬ್ಬರೂ ಒಬ್ಬೊರನ್ನೊಬ್ಬರು ರೋಷಾತಿರೇಕದಿಂದ ಶಪಿಸಿದರು. ದ್ರೌಪದಿಯ ಅಂತರಂಗವನ್ನು ಸುಡುವ ಬೆಂಕಿಯನ್ನು ಇವನ ತಲೆಯೆಮ್ಬ ನೀರಿನಿಂದ ಆರಿಸಬೇಕೆಂದು ಭೀಮಾರ್ಜುನರು ಅಶ್ವತ್ಥಾಮನನ್ನು ಹಿಡಿದರು.

ಅರ್ಥ:
ತೀರು: ಅಂತ್ಯ, ಮುಕ್ತಾಯ; ಕುಶಿಕ: ಕುಡ, ಗುಳ, ವಿಶ್ವಾಮಿತ್ರನ ತಂದೆ; ಘಾತಿ: ಪೆಟ್ಟ; ಮುರಾರಿ: ಕೃಷ್ಣ; ಸುತ: ಪುತ್ರ; ವೀರ: ಶೂರ; ಪಣ: ಪ್ರತಿಜ್ಞೆ, ಶಪಥ, ಪಂದ್ಯ; ಶಪಿಸು: ನಿಂದಿಸು; ನಾರಿ: ಹೆಣ್ಣು; ಅಂತಸ್ತಾಪ: ಒಳಮನಸ್ಸಿನ ನೋವು; ವಹ್ನಿ: ಬೆಂಕಿ; ನಿವಾರಣ: ಹೋಗಲಾಡಿಸು; ಜಲ: ನಿರು; ಆಚಾರಿ: ಗುರು; ನಂದನ: ಮಗ; ಹಿಡಿ: ಬಂಧಿಸು;

ಪದವಿಂಗಡಣೆ:
ತೀರಿತೈ +ಕುಶಿಕಾಸ್ತ್ರ+ಘಾತಿ +ಮು
ರಾರಿ +ಗುರುಸುತರ್+ಒಬ್ಬರೊಬ್ಬರ
ವೀರಪಣವಾಸಿಯಲಿ +ಶಪಿಸಿದರ್+ಅಧಿಕ+ರೋಷದಲಿ
ನಾರಿ+ಅಂತಸ್ತಾಪ+ವಹ್ನಿ+ ನಿ
ವಾರಣಕೆ +ಜಲವ್+ಈತನೆಂದ್+
ಆಚಾರಿಯನ +ನಂದನನ +ಹಿಡಿದರು +ಭೀಮ+ಫಲುಗುಣರು

ಅಚ್ಚರಿ:
(೧) ದ್ರೌಪದಿಯ ನೋವನ್ನು ಹೋಗಲಾಡಿಸುವ ಪರಿ – ನಾರಿಯಂತಸ್ತಾಪವಹ್ನಿ ನಿವಾರಣಕೆ ಜಲವೀತನೆಂದಾಚಾರಿಯನ ನಂದನನ ಹಿಡಿದರು
(೨) ಅಶ್ವತ್ಥಾಮನನ್ನು ಕರೆದ ಪರಿ – ಗುರುಸುತ, ಆಚಾರಿಯನ ನಂದನ

ಪದ್ಯ ೧೨: ಕದ್ದು ಕೊಲ್ಲುವ ಬಗ್ಗೆ ಕೃತವರ್ಮನ ಅಭಿಪ್ರಾಯವೇನು?

ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ (ಗದಾ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೃತವರ್ಮನು ನಗುತ್ತಾ, ಕೃಪಾಚಾರ್ಯರು ಹೇಳುವ ಮಾತು ನಿಜವಾಗುತ್ತದೆ, ಅದು ತಪ್ಪುವುದಿಲ್ಲ. ಮುಂದೆ ಏನಾಗುವುದೋ ಅದನ್ನು ದೈವಾಜ್ಞೆಯೆಂದೇ ಸ್ವೀಕರಿಸಬೇಕು. ರಾತ್ರಿಯ ಹೊತ್ತು ಕದ್ದು ಕೊಲ್ಲುವುದು ವೀರರಿಗೆ ಒಪ್ಪುವುದಿಲ್ಲ. ಒಂದು ಪಕ್ಷ ನಾವು ಕೊಲ್ಲಲು ಹೋದರೂ ಕೃಷ್ಣನು ಪಾಂಡವರನ್ನು ಉಳಿಸುತ್ತಾನೆ ಎಂದು ಹೇಳಿದನು.

ಅರ್ಥ:
ತಪ್ಪು: ಸರಿಯಲ್ಲದ್ದು; ಆಚಾರಿ: ಗುರು; ನುಡಿ: ಮಾತು; ಮೇಲಪ್ಪುದು: ಮುಂದೆ ನಡೆವುದು; ಅಭಿಯೋಗ: ಆಸಕ್ತಿ, ಒತ್ತಾಯ; ಒಪ್ಪು: ಒಪ್ಪಿಗೆ, ಸಮ್ಮತಿ; ರಜನಿ: ರಾತ್ರಿ; ಕಳ್ಳ: ಚೋರ; ಕದನ: ಯುದ್ಧ; ಒಪ್ಪು: ಸಮ್ಮತಿಸು; ಸೌಭಟ: ಪರಾಕ್ರಮಿ; ವಿಧಾನ: ರೀತಿ; ರಿಪು: ವೈರಿ; ಅಸುರಾರಿ: ಕೃಷ್ಣ; ನಗು: ಹರ್ಷ;

ಪದವಿಂಗಡಣೆ:
ತಪ್ಪದ್+ಆಚಾರಿಯನ +ನುಡಿ +ಮೇ
ಲಪ್ಪುದನು+ ದೈವಾಭಿಯೋಗದೊಳ್
ಒಪ್ಪವಿಡುವುದು +ರಜನಿಯಲಿ +ಕಳ್ಳೇರ+ ಕದನದಲಿ
ಒಪ್ಪದಿದು +ಸೌಭಟ +ವಿಧಾನಕೆ
ನೊಪ್ಪಿತಹುದ್+ಇದರಿಂದ +ರಿಪುಗಳ
ತಪ್ಪಿಸುವನ್+ಅಸುರಾರಿ+ಎಂದನು +ನಗುತ +ಕೃತವರ್ಮ

ಅಚ್ಚರಿ:
(೧) ಪರಾಕ್ರಮಿಗಳಿಗೆ ಶೋಭೆ ತರದ ಸಂಗತಿ: ರಜನಿಯಲಿ ಕಳ್ಳೇರ ಕದನದಲಿ ಒಪ್ಪದಿದು ಸೌಭಟ ವಿಧಾನಕೆ

ಪದ್ಯ ೩೯: ದುರ್ಯೋಧನನು ತನ್ನನ್ನು ಅರಗೆಲಸಿ ಎಂದೇಕೆ ಹೇಳಿದನು?

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ (ಗದಾ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ನಿಮ್ಮ ಮಾತು ನಿಜ, ನೀವು ಶ್ರೇಷ್ಠರು. ಉಭಯ ರಾಜರ ಗುರುಗಳು, ಕೃಪನು ನಮ್ಮ ಹಿರಿಯಗುರು. ಯಾದವರಲ್ಲಿ ಕೃತವರ್ಮನು ಅಗ್ರಗಣ್ಯ. ನೀವು ಯುದ್ಧದಲ್ಲಿ ಅರ್ಹರಲ್ಲ ಎನ್ನುತ್ತಿಲ್ಲ, ನಾವು ಅರೆ ಬರೆ ಪುಣ್ಯಶಾಲಿಗಳೆಂಬುದೇ ಕೊರತೆ, ನಿಮ್ಮಲ್ಲಿ ಏನೂ ನ್ಯೂನ್ಯತೆಗಳಿಲ್ಲ ಎಂದು ಕೌರವನು ನುಡಿದನು.

ಅರ್ಥ:
ಖರೆ: ನಿಜ; ಉಭಯ: ಎರದು; ರಾಯ: ರಾಜ; ಗುರು: ಆಚಾರ್ಯ; ಕುಂದು: ಕೊರತೆ, ನ್ಯೂನ್ಯತೆ; ಹಿರಿ: ದೊಡ್ಡವ; ಆಚಾರಿ: ಗುರು; ಗರುವ: ಹಿರಿಯ, ಶ್ರೇಷ್ಠ; ರಣ: ಯುದ್ಧ; ಬಾಹಿರ: ಬಹಿಷ್ಕೃತವಾದ, ಹೊರತಾದುದು; ಸಾಕು: ಅಗತ್ಯ ಪೂರೈಸಿತು; ಸುಕೃತ: ಒಳ್ಳೆಯ ಕೆಲಸ; ಅರಗೆಲಸಿ: ಅರೆ ಬರೆ; ಕೊರತೆ: ನ್ಯೂನ್ಯತೆ;

ಪದವಿಂಗಡಣೆ:
ಖರೆಯರೈ +ನೀವ್+ಉಭಯ +ರಾಯರ
ಗುರುಗಳ್+ಅದು +ಕುಂದಿಲ್ಲ +ಕೃಪನೇ
ಹಿರಿಯನ್+ಆಚಾರಿಯನು +ಯಾದವರೊಳಗೆ+ ಕೃತವರ್ಮ
ಗರುವರೈ+ ನೀವಿಲ್ಲಿ+ ರಣ+ಬಾ
ಹಿರರೆ+ ಸಾಕ್+ಅಂತಿರಲಿ +ಸುಕೃತದೊಳ್
ಅರಗೆಲಸಿಗಳು +ನಾವೆ +ನಿಮ್ಮಲಿ +ಕೊರತೆಯಿಲ್ಲೆಂದ

ಅಚ್ಚರಿ:
(೧) ದುರ್ಯೋಧನನು ತನ್ನನ್ನು ನಿಂದಿಸುವ ಪರಿ – ಸುಕೃತದೊಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ

ಪದ್ಯ ೬೨: ಭೀಷ್ಮನ ಪರಾಕ್ರಮವು ಎಂತಹುದು?

ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮಧೈರ್ಯನಾಚಾರಿಯನ ಪರಿಣತಿಯ
ಬಂದ ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ (ವಿರಾಟ ಪರ್ವ, ೯ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತರನು ನುಡಿಯುತ್ತಾ, ಹಿಂದೆ ಕರ್ಣನ ಕೌಶಲ್ಯ, ಅಶ್ವತ್ಥಾಮನ ಬಿಲ್ಲುಗಾರಿಕೆ, ಮಂದರ ಪರ್ವತದಂತೆ ಉನ್ನತಿಯುಳ್ಳ ದ್ರೋಣನ ಚಾಕಚಕ್ರತೆ, ಕೃಪನ ಹಿರಿಮೆಗಳನ್ನು ನಾನು ನೋಡಿದೆ, ಈ ಭೀಷ್ಮನ ಪರಾಕ್ರಮವು ಇವರೆಲ್ಲರನ್ನು ಮೀರಿಸಿದ್ದು ಎಂದು ಉತ್ತರನು ಅರ್ಜುನನಿಗೆ ಹೇಳಿದನು.

ಅರ್ಥ:
ಹಿಂದೆ: ಪೂರ್ವದಲ್ಲಿ; ಕೈಮೆ:ಕೈಚಳಕ; ನಂದನ: ಮಗ; ಗುರು: ಆಚಾರ್ಯ; ಬಿಲುಗಾರ: ಬಿಲ್ವಿದ್ಯೆಯಲ್ಲಿ ಪರಿಣತಿ ಹೊಂದಿದವ; ಮಂದರ: ಬೆಟ್ಟದ ಹೆಸರು; ಉಪಮೆ: ಹೋಲಿಕೆ; ಧೈರ್ಯ: ಎದೆಗಾರಿಕೆ; ಆಚಾರಿ: ಆಚಾರ್ಯ, ಗುರು; ಬಂದ: ಆಗಮಿಸು; ಅಗ್ಗಳಿಕೆ: ಶ್ರೇಷ್ಠತೆ; ನಲವು: ಸಂತೋಷ; ಕಂಡು: ನೋಡು; ಪರಿ: ರೀತಿ; ಉರವಣೆ: ಆತುರ, ಅಬ್ಬರ;

ಪದವಿಂಗಡಣೆ:
ಹಿಂದೆ +ಕರ್ಣನ +ಕೈಮೆಯನು +ಗುರು
ನಂದನನ +ಬಿಲುಗಾರತನವನು
ಮಂದರ+ಉಪಮ+ಧೈರ್ಯನ್+ಆಚಾರಿಯನ +ಪರಿಣತಿಯ
ಬಂದ +ಕೃಪನ್+ಅಗ್ಗಳಿಕೆಯನು +ನಲ
ವಿಂದ +ಕಂಡೆನ್+ಇದಾರ +ಪರಿಯ
ಲ್ಲೆಂದನ್+ಉತ್ತರನ್+ಅರ್ಜುನಗೆ +ಗಾಂಗೇಯನ್+ಉರವಣೆಯ

ಅಚ್ಚರಿ:
(೧)ದ್ರೋಣನ ಧೈರ್ಯವನ್ನು ವಿವರಿಸುವ ಪರಿ – ಮಂದರೋಪಮಧೈರ್ಯನಾಚಾರಿಯನ ಪರಿಣತಿಯ

ಪದ್ಯ ೪೬: ಯಾರನ್ನು ದೂರವಿಟ್ಟಿರಬೇಕು?

ಬಿಸುಟು ಕಳೆವುದು ನೀತಿಶಾಸ್ತ್ರವ
ನುಸಿರದಾಚಾರಿಯನ ವೇದ
ಪ್ರಸರವಿಲ್ಲದ ಋತ್ವಿಜನ ರಕ್ಷಿಸದ ಭೂಭುಜನ
ಒಸಯದಬಲೆಯನೂರೊಳಾಡುವ
ಪಶುವಕಾವನನಡವಿಗುರಿಯಹ
ನುಸಿಯ ನಾಪಿತನಿಂತರುವರನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ಎಂತಹ ಮನುಷ್ಯರನ್ನು ದೂರವಿಡಬೇಕೆಂದು ವಿದುರ ಈ ಪದ್ಯದಲ್ಲಿ ತಿಳಿಸುತ್ತಾರೆ. ನೀತಿಶಾಸ್ತ್ರವನ್ನು ಹೇಳಿಕೊಡದ ಗುರುವನ್ನು, ವೇದಾಧ್ಯತನವಿಲ್ಲದ ಋತ್ವಿಜನನ್ನು, ಪ್ರಜೆಗಳನ್ನು ಕಾಪಾಡದ ರಾಜನನ್ನು, ಪ್ರೀತಿಸದ ಹೆಣ್ಣನ್ನೂ, ಊರಿನಲ್ಲೇ ಆಡುವ ದನಕಾಯುವವನನ್ನು, ಊರಲ್ಲಿಲ್ಲದೆ ಕಾಡಿನಲ್ಲಿ ಅಲೆಯುವ ನಾಪಿತನನ್ನು ತಿರಸ್ಕರಿಸಿ ದೂರವಿಡಬೇಕೆಂದು ವಿದುರನು ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ಬಿಸುಟ: ತ್ಯಜಿಸಿದ; ಕಳೆವು: ಹರಣ; ನೀತಿ:ಮಾರ್ಗ ದರ್ಶನ; ಶಾಸ್ತ್ರ:ತತ್ವ; ಉಸುರು: ಹೇಳು; ಆಚಾರಿ: ಗುರು; ವೇದ: ಜ್ಞಾನ; ಪ್ರಸರ: ಹರಡುವುದು; ಋತ್ವಿಜ: ಯಜ್ಞ ಮಾಡುವವ; ರಕ್ಷಿಸು: ಕಾಪಾಡು; ಭೂಭುಜ: ರಾಜ; ಒಸಯ:ಪ್ರೀತಿ; ಅಬಲೆ: ಹೆಣ್ಣು; ಊರು: ಪುರ; ಆಡುವ: ವ್ಯವಹರಿಸು; ಪಶು: ಪ್ರಾಣಿ; ಕಾವನ: ಕಾವಲುಗಾರ; ಅಡವಿ: ಕಾಡು; ಉರಿ: ನುಸಿ:ನುಸುಳು, ತೂರು, ಅಲ್ಪ, ಕ್ಷುದ್ರ; ನಾಪಿತ: ಕ್ಷೌರ ಮಾಡುವವನು

ಪದವಿಂಗಡಣೆ:
ಬಿಸುಟು +ಕಳೆವುದು +ನೀತಿಶಾಸ್ತ್ರವನ್
ಉಸಿರದ್+ಆಚಾರಿಯನ +ವೇದ
ಪ್ರಸರವಿಲ್ಲದ+ ಋತ್ವಿಜನ+ ರಕ್ಷಿಸದ+ ಭೂಭುಜನ
ಒಸಯದ್+ಅಬಲೆಯನ್+ಊರೊಳ್+ಆಡುವ
ಪಶುವಕಾವನನ್+ಅಡವಿಗ್+ಉರಿಯಹ
ನುಸಿಯ +ನಾಪಿತನ್+ಇಂತರುವರನು +ರಾಯ +ಕೇಳೆಂದ

ಅಚ್ಚರಿ:
(೧) ೬ ರೀತಿಯ ಜನರನ್ನು ದೂರವಿಡಬೇಕೆಂದು ಹೇಳುವ ವಿದುರ ನೀತಿ
(೨) ರಾಯ, ಭೂಭುಜ – ಸಮನಾರ್ಥಕ ಪದ

ಪದ್ಯ ೪೨: ಯಾರ ಉಪಕಾರವನ್ನು ಮರೆಯಬಾರದು?

ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರಿಯನನನುವರ
ದೊಳಗೆ ತಲೆಗಾಯ್ದವನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನ ನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ರಿಳಿವರೈ ಕುಲಕೋಟಿ ಸಹಿತ ಮಹಾಂಧ ನರಕದೊಳು (ಉದ್ಯೋಗ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸಲಹಿದ ಒಡೆಯನನ್ನು, ದಿವ್ಯ ಮಂತ್ರವನ್ನು ಹೇಳಿಕೊಟ್ಟ ಗುರುವನ್ನು, ಯುದ್ಧದಲ್ಲಿ ಪ್ರಾಣವನ್ನುಳಿಸಿದವನನ್ನು, ಕಷ್ಟಕಾಲದಲ್ಲಿ ಅನ್ನವನ್ನು ನೀಡಿ ಸಲಹಿದವನನ್ನು, ನೀರಿನಲ್ಲಿ ಮುಳುಗಿದಾಗ ರಕ್ಷಿಸಿದವನನ್ನು, ಬೆಂಕಿಯಿಂದ ಪಾರುಮಾಡಿದವನನ್ನು ಯಾರಾದರೂ ಮರೆತರೆ, ಅವರು ತಮ್ಮ ಕುಲಕೋಟಿಯೊಂದಿಗೆ ಮಹಾಂಧ ನರಕಕ್ಕೆ ಜಾರುತ್ತಾರೆ.

ಅರ್ಥ:
ಸಲಹು: ಕಾಪಾಡು; ಒಡೆಯ: ದೊರೆ, ಯಜಮಾನ; ದಿವ್ಯ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕಲಿಸು: ಹೇಳಿಕೊಡು; ಆಚಾರಿ: ಗುರು; ಅನುವರ: ಯುದ್ಧ; ತಲೆ: ಶಿರ; ಕಾಯ್ದ: ಕಾಪಾಡಿದ; ದುರ್ಭಿಕ್ಷ: ಕಷ್ಟಕಾಲ; ಜಲ: ನೀರು; ಆಳ್ದ: ಕಾಪಾಡು; ನೆತ್ತಿ: ತಲೆಯ ಭಾಗ, ಹಾಕಿದ;ಉರಿ: ಬೆಂಕಿ; ಪರಿಹರಿಸು: ಕಾಪಾಡು; ಮರೆ: ನೆನಪಿನಿಂದ ದೂರವಿಡು; ಇಳಿ: ಜಾರು; ಕುಲ: ವಂಶ; ಸಹಿತ: ಜೊತೆ; ಅಂಧ: ಕತ್ತಲು;

ಪದವಿಂಗಡಣೆ:
ಸಲಹಿದ್+ಒಡೆಯನ +ದಿವ್ಯ+ಮಂತ್ರವ
ಕಲಿಸಿದ್+ಆಚಾರಿಯನನ್+ಅನುವರ
ದೊಳಗೆ +ತಲೆಗಾಯ್ದವನ +ದುರ್ಭಿಕ್ಷದಲಿ+ ಸಲಹಿದನ
ಜಲದೊಳ್+ಆಳ್ದನ +ನೆತ್ತಿದನನ್+ಉರಿ
ಯೊಳಗೆ+ ಪರಿಹರಿಸಿದನ+ ಮರೆದವರ್
ಇಳಿವರೈ +ಕುಲಕೋಟಿ +ಸಹಿತ +ಮಹಾಂಧ +ನರಕದೊಳು

ಅಚ್ಚರಿ:
(೧) ೬ ರೀತಿಯ ಸಹಾಯವನ್ನು ಮರೆಯಬಾರದೆಂದು ಹೇಳುವ ಪದ್ಯ