ಪದ್ಯ ೫೮: ಭೀಷ್ಮಾರ್ಜುನರ ಯುದ್ಧ ಹೇಗೆ ನಡೆಯಿತು?

ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ (ವಿರಾಟ ಪರ್ವ, ೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅರ್ಜುನನ ದೇಹದಿಂದ ರಕ್ತವು ರಭಸದಿಂದ ಹರಿಯಿತು. ಅದನ್ನು ತಡೆದುಕೊಂಡು ಅರ್ಜುನನು ಮಹಾಬಾಣವೊಂದನ್ನು ಬಿಡಲು ಭೀಷ್ಮನು ಗರ್ಜಿಸಿ ಆ ಬಾಣವನ್ನು ಮಧ್ಯದಲ್ಲೇ ಕಡಿದು ಹಾಕಿದನು. ಅರ್ಜುನನು ಆಗ್ನೇಯಾಸ್ತ್ರವನ್ನು ಬಿಡಲು ಕೌರವ ಸೇನೆಯು ಗೊಂದಲಕ್ಕೀಡಾಯಿತು.

ಅರ್ಥ:
ಒರೆ: ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒಡಲು: ದೇಹ; ದುರುದುರಿಸಿ: ರಭಸ; ಸುರಿ: ಹರಿ; ಅರುಣ: ಕೆಂಪು; ಜಲ: ನೀರು; ನೆರವಣಿಗೆ: ಪರಿಪೂರ್ಣತೆ; ನಿಂದು: ನಿಲ್ಲು; ತೊಟ್ಟು: ತೊಡು; ನರ: ಅರ್ಜುನ; ಮಹಾಶರ: ಶ್ರೇಷ್ಠವಾದ ಬಾಣ; ತರಿ: ಕಡಿ, ಕತ್ತರಿಸು; ಉರೆ: ಹೆಚ್ಚು; ಬೊಬ್ಬಿರಿ: ಕೂಗು, ಗಟ್ಟಿಯಾಗಿ ಹೇಳು, ಉದ್ಘೋಷಿಸು; ಬಳಿಕ: ನಂತರ; ಆಗ್ನಿ: ಬೆಂಕಿ; ಬಾಣ: ಶರ; ಗರಿ: ಪುಕ್ಕ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಹೂಡು: ತೊಡು; ಕಳವಳ: ಗೊಂದಲ;

ಪದವಿಂಗಡಣೆ:
ಒರೆತುದ್+ಅರ್ಜುನನ್+ಒಡಲಿನಲಿ+ ದುರು
ದುರಿಸಿ +ಸುರಿದುದು +ಅರುಣಮಯ +ಜಲ
ನೆರವಣಿಗೆಯಲಿ +ನಿಂದು+ ತೊಟ್ಟನು+ ನರ +ಮಹಾ+ಶರವ
ತರಿದನ್+ಎಡೆಯಲಿ +ಭೀಷ್ಮನ್+ಉರೆ +ಬೊ
ಬ್ಬಿರಿದು +ಬಳಿಕ್+ಆಗ್ನೇಯ +ಬಾಣದ
ಗರಿಯ +ಮಂತ್ರಿಸಿ +ಹೂಡಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ರಕ್ತ ಹರಿಯಿತು ಎಂದು ಹೇಳುವ ಪರಿ – ಒರೆತುದರ್ಜುನನೊಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ

ಪದ್ಯ ೩೫: ಕರ್ಣನು ಯಾವ ಬಾಣವನ್ನು ಹೂಡಿದನು?

ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯನಟ್ಟವಿಗಳಿಗೆ ಪಾಡಹಿರಿ ತುಡುಕುವೊಡೆ
ಅರಸು ಪರಿಯಂತೇಕೆ ನಿಮಗೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ (ಅರಣ್ಯ ಪರ್ವ, ೨೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕರ್ಣನು ಗಂಧರ್ವರ ಸೈನ್ಯವನ್ನು ಎದುರಿಸುತ್ತಾ, ಎಲೈ ಶೂರರೇ, ನೀವು ಅಮರಾವತಿಯ ನಟುವರಲ್ಲವೇ, ನೀವು ದುರ್ಯೋಧನನ ಅರಮನೆಯ ನಾಟ್ಯ ಮಾಡುವವರೊಡನೆ ಯುದ್ಧ ಮಾಡಲು ಸಾಧ್ಯ, ನಿಮಗೆ ರಾಜನವರೆಗೆ ಮಾತೇಕೆ, ಎನ್ನುತ್ತಾ ಆಗ್ನೇಯ, ವಾರುಣ, ನಿರಋತಿ ಮೊದಲಾದ ಮಂತ್ರಾಸ್ತ್ರಗಳನ್ನು ಕವಿಸಿದನು.

ಅರ್ಥ:
ಗರುವ: ಬಲಶಾಲಿ, ಶೂರ; ಸುರಪ: ಇಂದ್ರ; ಪುರ: ಊರು; ನಟುವ: ನರ್ತನ ಮಾಡುವವನು; ಅರಮನೆ: ರಾಜರ ಆಲಯ; ತುಡುಕು: ಹೋರಾಡು, ಸೆಣಸು; ಅರಸು: ರಾಜ; ಪರಿ: ಚಲಿಸು, ನಡೆ; ಅರಿಭಟ: ಶತ್ರುಸೈನ್ಯ; ಅಸ್ತ್ರ: ಆಯುಧ, ಶಸ್ತ್ರ; ಚಯ: ಸಮೂಹ, ರಾಶಿ; ಕವಿಸು: ಆವರಿಸು;

ಪದವಿಂಗಡಣೆ:
ಗರುವರೇ +ನೀವ್+ಎಲವೊ +ಸುರಪನ
ಪುರದ +ನಟ್ಟವಿಗರು +ಸುಯೋಧನನ್
ಅರಮನೆಯನ್+ಅಟ್ಟವಿಗಳಿಗೆ+ ಪಾಡಹಿರಿ +ತುಡುಕುವೊಡೆ
ಅರಸು+ ಪರಿಯಂತೇಕೆ+ ನಿಮಗೆನುತ್
ಅರಿ+ಭಟರಿಗ್+ಆಗ್ನೇಯ +ವಾರುಣ
ನಿರುತಿ+ ಮೊದಲಾದ್+ಅಸ್ತ್ರಚಯವನು +ಕವಿಸಿದನು +ಕರ್ಣ

ಅಚ್ಚರಿ:
(೧) ಕರ್ಣನು ಬಿಟ್ಟ ಬಾಣ – ಆಗ್ನೇಯ, ವಾರುಣ, ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ

ಪದ್ಯ ೬೫: ಧರ್ಮಜನ ಕೋರಿಕೆ ಅರ್ಜುನನು ಹೇಗೆ ಉತ್ತರಿಸಿದನು?

ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣ ವೈಂದ್ರ ಕೌಬೇರಾಸ್ತ್ರಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ (ಅರಣ್ಯ ಪರ್ವ, ೧೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅಣ್ಣಾ ಪಾಶುಪತಾಸ್ತ್ರವನ್ನು ಪ್ರದರ್ಶಿಸುತ್ತೇನೆ, ಅದೊಂದೇ ಏಕೆ, ಆಗ್ನೇಯ, ವಾರುಣ, ಐಂದ್ರ, ಕೌಬೇರಾಸ್ತ್ರಗಳನ್ನು ಪ್ರದರ್ಶಿಸುತ್ತೇನೆ. ಆದರೆ ಈ ಹೊತ್ತು ಸರಿಯಲ್ಲ. ಸೂರ್ಯನ ಕುದುರೆಗಳು ಈಗ ಪಶ್ಚಿಮ ದಿಕ್ಕಿನ ಬೆಟ್ಟದ ತಪ್ಪಲಲ್ಲಿರುವ ಲಾಯವನ್ನು ಸೇರಿವೆ ಎಂದು ಹೇಳಿದನು.

ಅರ್ಥ:
ಜೀಯ: ಒಡೆಯ; ಅರ್ತಿ: ಪ್ರೀತಿ, ಸಂತೋಷ; ಶಂಭು: ಶಂಕರ; ಆಯುಧ: ಶಸ್ತ್ರ; ಸಲಿಸು:ಪೂರೈಸು; ಕೌಶಲ: ಜಾಣತನ, ಚದುರು; ಆಯತ: ಉಚಿತವಾದ ಕ್ರಮ, ವಾಸಸ್ಥಾನ; ಅನಾಯತ: ತಪ್ಪುಕೆಲಸ; ತೋರಿಸು: ಪ್ರದರ್ಶಿಸು; ತುರಗ: ಕುದುರೆ; ರಾಜಿ: ಗುಂಪು; ಲಾಯ: ಅಶ್ವಶಾಲೆ; ಪಶ್ಚಿಮ: ಪಡುವಣ; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಕೆಳಗಿರುವ ಸಮತಟ್ಟು ಪ್ರದೇಶ;

ಪದವಿಂಗಡಣೆ:
ಜೀಯ +ನಿಮ್ಮ್+ಅರ್ತಿಯನು +ಶಂಭುವಿನ್
ಆಯುಧದಲೇ+ ಸಲಿಸಿದಪೆನ್
ಆಗ್ನೇಯ +ವಾರುಣವ್ + ಐಂದ್ರ+ ಕೌಬೇರಾಸ್ತ್ರ+ಕೌಶಲವ
ಆಯತವ +ತೋರಿಸುವೆನ್+ಈಗಳ್
ಅನಾಯತವು +ರವಿ +ತುರಗರಾಜಿಗೆ
ಲಾಯ +ನೀಡಿತು +ಪಶ್ಚಿಮಾಶಾ+ಗಿರಿಯ +ತಪ್ಪಲಲಿ

ಅಚ್ಚರಿ:
(೧) ಸೂರ್ಯ ಮುಳುಗಿದನು ಎಂದು ಹೇಳುವ ಪರಿ – ರವಿ ತುರಗರಾಜಿಗೆ ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ
(೨) ಆಯತ, ಅನಾಯತ – ಪದಗಳ ಬಳಕೆ

ಪದ್ಯ ೩೧: ದೇವತೆಗಳೇಕೆ ಆಶ್ಚರ್ಯಚಕಿತರಾದರು?

ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವ ನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ (ಕರ್ಣ ಪರ್ವ, ೨೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಆಗ್ನೇಯಾಸ್ತ್ರವನ್ನು ಹೂಡಿ ಬಿಡಲು ಅದು ಹೆದೆಯನ್ನೊದೆದು ಮುಂದೆ ಹೋಯಿತು. ಅದಕ್ಕೆ ವಾಯುವಿನ ಬೆಂಬಲವೂ ಒದಗಿತು. ಅದರ ಮುಖದಿಂದ ದಟ್ಟವಾದ ಕಪ್ಪುಹೊಗೆ ಕಿಡಿಗಳು, ದಳ್ಳುರಿಗಳು ಹಬ್ಬುತ್ತಿದ್ದವು. ಅದನ್ನು ನೋಡಿ ದೇವತೆಗಳು ಬಾಯಿಬಿಟ್ಟರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಅಭಿಮಂತ್ರಿಸಿದ: ಮಂತ್ರದಿಂದ ಆಶೀರ್ವದಿಸಿದ; ಆಗ್ನೇಯ: ಅಗ್ನಿ;ಹೂಡು: ತೊಡು; ಸುರಕುಲ: ದೇವತೆಗಳ ವಂಶ; ಬಾಯಬಿಡು: ಆಶ್ಚರ್ಯ;ಅಂಬು: ಬಾಣ; ಹಾಯ್ದು: ಹಾರು; ಬಿಲುದಿರುವ: ಬಿಲ್ಲಿನ ಹಗ್ಗ; ಒದೆ: ತಳ್ಳು; ವಾಯು: ಗಾಳಿ; ಪಡಿಬಲ: ವೈರಿಸೈನ್ಯ, ಬೆಂಬಲ, ಸಹಾಯ; ಕಿಡಿ: ಬೆಂಕಿ; ಬಾಯಿಧಾರೆ: ಮೊನೆಯಾದ ಅಲಗು; ಹೊದರು:ತೊಡಕು, ತೊಂದರೆ, ಗುಂಪು; ಕರ್ಬೊಗೆ: ಕಪ್ಪು ಹೊಗೆ; ಲವಣಿ: ಕಾಂತಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಇರುಳು: ರಾತ್ರಿ; ಚೂಣಿ: ಮೊದಲು;

ಪದವಿಂಗಡಣೆ:
ರಾಯ +ಕೇಳ್+ಅಭಿಮಂತ್ರಿಸಿದನ್
ಆಗ್ನೇಯವನು +ಹೂಡಿದನು +ಸುರಕುಲ
ಬಾಯಬಿಡಲ್+ಅಂಬುಗ್+ಇದು+ ಹಾಯ್ದುದು +ಬಿಲುದಿರುವನ್ +ಒದೆದು
ವಾಯು +ಪಡಿಬಲವಾಗೆ +ಕಿಡಿಗಳ
ಬಾಯಿಧಾರೆಯ +ಹೊದರ +ಕರ್ಬೊಗೆ
ಲಾಯದಲಿ +ಲವಣಿಸುವ+ ದಳ್ಳುರಿದಿರುಳ+ ಚೂಣಿಯಲಿ

ಅಚ್ಚರಿ:
(೧) ಆಗ್ನೇಯಾಸ್ತ್ರದ ಪ್ರಭಾವ – ಕಿಡಿಗಳ ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ