ಪದ್ಯ ೩೩: ಆಗಸವಾಣಿಯು ಯಾರೆಂದು ಪರಿಚಯಿಸಿಕೊಂಡಿತು?

ಬಿಸುಟನುದಕವನಾ ನುಡಿಯನಾ
ಲಿಸಿದ ನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾಂ ಯಕ್ಷನೀಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ (ಅರಣ್ಯ ಪರ್ವ, ೨೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನು ಆಗಸವಾಣಿಯನ್ನು ಕೇಳಿದ ಮೇಲೆ ತನ್ನ ಕೈಯಲ್ಲಿದ್ದ ನೀರನ್ನು ಚೆಲ್ಲಿದನು, ಆಗಸದ ಮಾತಿಗೆ ಉತ್ತರಿಸುತ್ತಾ, ನೀನು ಯಾರು? ಆಕಾಶದಲ್ಲೇಕಿರುವೆ? ನೀನು ರಾಕ್ಷಸನೋ, ಕಿನ್ನರನೋ, ದೇವತೆಯೋ ಹೇಳೆ ಎಂದು ಕೇಳಲು, ಆಗಸ ವಾಣಿಯು, ನಾನು ಯಕ್ಷ, ಈ ಸರೋವರ ನನ್ನದು, ನಿನ್ನ ತಮ್ಮಂದಿರ ಪ್ರಾಣವನ್ನು ತೆಗೆದವನು ನಾನೇ ಎಂದು ಉತ್ತರಿಸಿತು.

ಅರ್ಥ:
ಬಿಸುಟು: ಹೊರಹಾಕು; ನುಡಿ: ಮಾತು; ಆಲಿಸು: ಕೇಳು; ಆಗಸ: ಅಭ್ರ; ಅಸುರ: ರಾಕ್ಷಸ; ಕಿನ್ನರ: ದೇವತೆಗಳ ಒಂದು ವರ್ಗ; ನಿರ್ಜರ: ದೇವತೆ; ಉಸುರು: ಹೇಳು; ಸಾರಸ: ಸರೋವರ; ಅಸು: ಪ್ರಾಣ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೇಳು: ಆಲಿಸು; ಸುತ: ಪುತ್ರ;

ಪದವಿಂಗಡಣೆ:
ಬಿಸುಟನ್+ಉದಕವನ್+ಆ+ ನುಡಿಯನ್
ಆಲಿಸಿದನ್ + ಆರೈ +ನೀನು+ ನಿನಗ್
ಆಗಸದಲ್+ಇರವ್+ಏನ್+ಅಸುರನೋ +ಕಿನ್ನರನೊ+ ನಿರ್ಜರನೊ
ಉಸುರೆನಲು+ ತಾಂ +ಯಕ್ಷನ್+ಈ+ಸಾ
ರಸವು +ನನ್ನದು +ನಿನ್ನ +ತಮ್ಮದಿರ್
ಅಸುವನ್+ಎಳೆದವ+ ನಾನು +ಕೇಳೈ +ಧರ್ಮಸುತಯೆಂದ

ಅಚ್ಚರಿ:
(೧) ಹೇಳು ಎನಲು ಉಸುರು ಪದದ ಬಳಕೆ
(೨) ನೊ ಪದದ ಬಳಕೆ – ಅಸುರನೊ, ಕಿನ್ನರನೊ, ನಿರ್ಜರನೊ