ಪದ್ಯ ೫: ಅಬಲೆಯರು ತಮ್ಮ ಯಜಮಾನರನ್ನು ಹೇಗೆ ಹುಡುಕುತ್ತಿದ್ದರು?

ಸೂಸಿತಬಲವೃಂದ ಕೆದರಿದ
ಕೇಶಪಾಶದ ತೆಳುವಸುರ ನಿ
ಟ್ಟಾಸುರದ ಹೊಯ್ಲುಗಳ ಲೊಚನವಾರಿಧಾರೆಗಳ
ಆಸುರಾಕ್ರಂದನದ ಶೋಕಾ
ವೇಶ ಬಹಳದ ಬಾಲೆಯರು ಪ್ರಾ
ಣೇಶ ಮೈದೋರೆನುತ ಹೊಕ್ಕರಿಸಿದರು ಕಳನೊಳಗೆ (ಗದಾ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ರಣರಂಗಕ್ಕೆ ಬಂದ ಸ್ತ್ರೀಯರು ತಲೆಗೆದರಿಕೊಂಡು, ತಮ್ಮ ಹೊಟ್ಟೆಗಳ ಮೇಲೆ ಹೊಡೆದುಕೊಳ್ಳುತ್ತಾ, ಕರ್ಕಶವಾಗಿ ಕೂಗಿಕೊಳ್ಳುತ್ತಾ, ಕಣ್ಣೀರಧಾರೆಯನ್ನು ಸುರಿಸುತ್ತಾ ಶೋಕಾವೇಶದಿಂದ ಪ್ರಾಣೇಶ, ನಿನ್ನ ಮೈದೋರಿಸು ಎನ್ನುತ್ತಾ ತಮ್ಮ ಪತಿಗಳನ್ನು ಹುಡುಕುತ್ತಿದ್ದರು.

ಅರ್ಥ:
ಸೂಸು: ಎರಚು, ಚಲ್ಲು; ಅಬಲ: ಸ್ತ್ರೀ; ವೃಂದ: ಗುಂಪು; ಕೆದರು: ಹರಡು; ಕೇಶ: ಕೂದಲು; ಪಾಶ: ಹಗ್ಗ, ಮಿಣಿ; ತೆಳುವಸುರು: ತೆಳುವಾದ ಹೊಟ್ಟೆ; ನಿಟ್ಟಾಸುರ: ಬಲುಭಯಂಕರವಾದ; ಹೊಯ್ಲು: ಏಟು, ಹೊಡೆತ; ಲೋಚನ: ಕಣ್ಣು; ವಾರಿ: ನೀರು; ಧಾರೆ: ವರ್ಷ; ಅಸುರ: ರಾಕ್ಷಸ; ಆಕ್ರಂದನ: ಗಟ್ಟಿಯಾಗಿ ಅಳುವುದು, ರೋದನೆ; ಶೋಕ: ದುಃಖ; ಆವೇಶ: ಅಧಿಕ, ರಭಸ; ಬಹಳ: ತುಂಬ; ಬಾಲೆ: ಹೆಣ್ಣು; ಪ್ರಾಣೇಶ: ಯಜಮಾನ; ಮೈದೋರು: ಕಾಣಿಸು; ಹೊಕ್ಕು: ಸೇರು; ಅರಸು: ಹುಡುಕು; ಕಳ: ಯುದ್ಧಭೂಮಿ;

ಪದವಿಂಗಡಣೆ:
ಸೂಸಿತ್+ಅಬಲವೃಂದ +ಕೆದರಿದ
ಕೇಶ+ಪಾಶದ +ತೆಳುವಸುರ +ನಿ
ಟ್ಟಾಸುರದ +ಹೊಯ್ಲುಗಳ +ಲೊಚನ+ವಾರಿ+ಧಾರೆಗಳ
ಆಸುರ+ಆಕ್ರಂದನದ+ ಶೋಕ
ಆವೇಶ+ ಬಹಳದ +ಬಾಲೆಯರು+ ಪ್ರಾ
ಣೇಶ +ಮೈದೋರೆನುತ+ ಹೊಕ್ಕ್+ಅರಿಸಿದರು +ಕಳನೊಳಗೆ

ಅಚ್ಚರಿ:
(೧) ದುಃಖವನ್ನು ಚಿತ್ರಿಸುವ ಪರಿ – ಕೆದರಿದ ಕೇಶಪಾಶದ, ತೆಳುವಸುರ ನಿಟ್ಟಾಸುರದ ಹೊಯ್ಲುಗಳ ಲೊಚನವಾರಿಧಾರೆಗಳ, ಆಸುರಾಕ್ರಂದನದ ಶೋಕಾವೇಶ ಬಹಳದ ಬಾಲೆಯರು
(೨) ನಿಟ್ಟಾಸುರ, ಆಸುರ; ಆವೇಶ, ಪ್ರಾಣೇಶ – ಪ್ರಾಸ ಪದ

ಪದ್ಯ ೨: ಪಾಂಡವರು ಹೇಗೆ ಭಾವೋದ್ವೇಗದಲಿ ಮುಳುಗಿದರು?

ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನಧ್ವನಿಯ (ಕರ್ಣ ಪರ್ವ, ೧೮ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಜೋರಾಗಿ ಅಳುತ್ತಾ ಅಣ್ಣನನ್ನು ತನ್ನೆಡೆಗೆ ತಿರುಗಿಸಿಕೋಂಡು ಪಾದಗಳಿಗೆ ಬೀಳಲು, ಧರ್ಮಜನು ಗೋಳಾಡುತ್ತಾ ಅರ್ಜುನನನ್ನು ಅಪ್ಪಿಕೊಂಡನು. ಕಣ್ಣೀರು ಸುರಿಸುತ್ತಾ ದ್ರೌಪದಿಯು ಮರುಗಿದಳು. ನಕುಲ ಸಹದೇವರ ಆಕ್ರಂದನಕ್ಕೆ ಹೋಲಿಕೆಯನ್ನು ಕೊಡಲಾರೆ ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಅರಸ: ರಾಜ; ಮುರುಚು: ಹಿಂದಿರುಗಿಸು; ಅಡಿಗೆರಗಿ: ನಮಸ್ಕರಿಸು; ಕೈ: ಕರ, ಹಸ್ತ; ಅವನಿಪತಿ: ರಾಜ; ಮುರಿ: ಬಾಗು; ಎರಗು: ನಮಸ್ಕರಿಸು; ಸೇರಿ: ಜೊತೆ; ತಕೈಸು: ಅಪ್ಪಿಕೊಳ್ಳು; ಗೋಳು: ಅಳು; ಮರುಗು:ಕನಿಕರಿಸು, ಸಂಕಟ; ದೃಗಂಬು: ಕಣ್ಣೀರು; ಒರತೆ: ನೀರು ಜಿನುಗುವ ತಗ್ಗು, ಚಿಲುಮೆ; ಅರಿ: ತಿಳಿ; ಉಪಮಿಸು: ಹೋಲಿಸು, ಒಳಪಡಿಸು; ಬಹುಳ: ತುಂಬ; ಆಕ್ರಂದನ: ಅಳು; ಧ್ವನಿ: ಶಬ್ದ;

ಪದವಿಂಗಡಣೆ:
ಒರಲುತ್+ಅರಸನ +ಮುರುಚಿಕೊಂಡ್+ಅಡಿ
ಗೆರಗೆ +ಕೈಯೊಡನ್+ಅವನಿಪತಿ +ಮುರಿದ್
ಎರಗಿ+ ಪಾರ್ಥನ +ಸೇರಿ +ತಕ್ಕೈಸಿದನು +ಗೋಳಿಡುತ
ಮರುಗಿದಳು +ದ್ರೌಪದಿ + ದೃಗ್+ಅಂಬುಗಳ್
ಒರತೆಯಲಿ +ಸಹದೇವ +ನಕುಳರಲ್
ಅರಿಯೆನ್+ಉಪಮಿಸಲ್+ಅವರ +ಬಹುಳ+ಆಕ್ರಂದನ+ಧ್ವನಿಯ

ಅಚ್ಚರಿ:
(೧) ದೃಗಂಬು, ಆಕ್ರಂದನ, ಗೋಳಿಡು, ಒರಲು, ಒರತೆ, ಮರುಗು – ಭಾವಪರವಶತೆಯನ್ನು ಚಿತ್ರಿಸುವ ಪದಗಳು
(೨) ಅರಸ, ಅವನಿಪತಿ – ಸಮನಾರ್ಥಕ ಪದಗಳು

ಪದ್ಯ ೬: ಹಸ್ತಿನಾಪುರದ ಸ್ಥಿತಿ ಏನಾಯಿತು?

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನ ಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನಕವಾಟತತಿ ಗಾಳಾಯ್ತು ಗಜನಗರ (ಕರ್ಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸುದ್ದಿ ತಿಳಿಯುತ್ತಿದ್ದಂತೆ ರಾಣೀವಾಸದಲ್ಲಾದ ಅವ್ಯವಸ್ಥೆಯನ್ನು ನಾನು ಹೇಗೆ ಹೇಳಲಿ ಜನಮೇಜಯ. ಕರ್ಣನೇ ಮೊದಲಾದವರ ಪತ್ನಿಯೂ ಜೋರಾಗಿ ಅಳಲು ಪ್ರಾರಂಭಿಸಿದರು. ಈ ಅವ್ಯವಸ್ಥೆಯ ನಡುವೆ ಹಸ್ತಿನಾವತಿಯ ಊರೊಳಗಿನ ಕೊಳ್ಳೆಹೊಡೆಯುವವರು ಮುಂದಾದರು. ಕೋಟೆ ಕಾವಲಿನವರು ಗುಜುಗುಜು ಎಂದು ಮಾತಾಡಲು, ಮನೆ ಬಾಗಿಲುಗಲು ಮುಚ್ಚಿದವು, ಹಸ್ತಿನಾವತಿ ಕೆಟ್ಟು ಹೋಯಿತು.

ಅರ್ಥ:
ರವ: ಶಬ್ದ; ರವಕುಳ: ಅವ್ಯವಸ್ಥೆ, ಆಕ್ರಂದನ; ಹೇಳು: ತಿಳಿಸು; ಅವನಿ: ಭೂಮಿ; ಅವನಿಪತಿ: ರಾಜ; ಮೊದಲಾದ: ಮುಂತಾದ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಬಹಳ: ತುಂಬ; ಆಕ್ರಂದನ: ಅಳುವ ಧ್ವನಿ; ಧ್ವನಿ: ಶಬ್ದ; ಕವಿದು: ಆವರಿಸು; ಸೂರೆ: ಕೊಳ್ಳೆ, ಲೂಟಿ; ಒಳ: ಆಂತರ್ಯ; ಕೋಟೆ: ದುರ್ಗ; ತವಕಿಗ: ಉತ್ಸಾಹಿ, ಆತುರಗಾರ; ಗುಜುಗುಜು: ಬಿಸುಗುನುಡಿ; ಬಿಗಿ: ಬಂಧನ; ಭವನ: ಅರಮನೆ; ಕವಾಟ: ಬಾಗಿಲು; ಗಾಳ: ಕೊಕ್ಕೆ, ಕುತಂತ್ರ; ಗಜ: ಆನೆ; ನಗರ: ಊರು; ಗಜನಗರ: ಹಸ್ತಿನಾಪುರ; ತತಿ: ಗುಂಪು, ಸಮೂಹ;

ಪದವಿಂಗಡಣೆ:
ರವಕುಳವ +ನಾನೇನ +ಹೇಳುವೆನ್
ಅವನಿಪತಿಯಾ +ಕರ್ಣ +ಮೊದಲಾ
ದವರ+ ರಾಣೀವಾಸ +ಬಹಳ+ಆಕ್ರಂದನ +ಧ್ವನಿಯ
ಕವಿದುದ್+ಒಳಸೂರೆಗರು+ ಕೋಟೆಯ
ತವಕಿಗರು+ ಗುಜುಗುಜಿಸೆ +ಬಿಗಿದವು
ಭವನ+ ಭವನ+ಕವಾಟ+ತತಿ +ಗಾಳಾಯ್ತು +ಗಜನಗರ

ಅಚ್ಚರಿ:
(೧) ರಾಜನ ಅಳಿವಿನ ಬಳಿಕ ಯಾವ ರೀತಿ ಅರಾಜಕತೆ ಶುರುವಾಗುತ್ತದೆ ಎಂದು ತಿಳಿಸುವ ಪದ್ಯ
(೨) ಬ ಕಾರದ ತ್ರಿವಳಿ ಪದ – ಬಿಗಿದವು ಭವನ ಭವನಕವಾಟತತಿ