ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು

ಪದ್ಯ ೨೧: ಧರ್ಮಜನು ಭೀಷ್ಮರ ಬಳಿ ಏನನ್ನು ಕೇಳಿದನು?

ಆಕೆವಾಳರು ಭೀಮ ಪಾರ್ಥರು
ನೂಕದಾಹವವುಳಿದ ಸೇನಾ
ನೀಕವೇ ನಿಮ್ಮಿಂದ ಸವೆದುದು ಹಲವು ಮಾತೇನು
ಸಾಕುವರೆ ಮೇಣ್ ಮುನಿದು ಕೊಲುವರೆ
ಬೇಕು ಬೇಡೆಂಬವರ ಕಾಣೆನು
ಕಾಕನಾಡೆನು ಬೆಸಸಿ ನಿಮ್ಮಭಿಮತವನೆನಗೆಂದ (ಭೀಷ್ಮ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪಿತಾಮಹರೇ, ಭೀಮಾರ್ಜುನರು ಮಹಾಪರಾಕ್ರಮಶಾಲಿಗಳು, ಆದರೆ ಯುದ್ಧವನ್ನು ನಿಭಾಯಿಸುವುದು ಅವರಿಗೆ ಅಸಾಧ್ಯ, ಉಳಿದ ಸೈನ್ಯವೆಲ್ಲಾ ನಿಮ್ಮ ಹೊಡೆತದಿಮ್ದ ಸವೆದು ಹೋಯಿತು. ಹೆಚ್ಚು ಮಾತಿನಿಂದೇನು, ನಮ್ಮನ್ನು ನೀವು ಉಳಿಸಿದರೂ ಸಂಹರಿಸಿದರೂ ಬೇಕು ಬೇಡ ಎನ್ನುವವರಿಲ್ಲ, ನಾನು ಸುತ್ತು ಬಳಸಿ ಹೇಳುತ್ತಿಲ್ಲ, ನಿಮ್ಮ ಅಭಿಮತವೇನೆಂಬುದನ್ನು ತಿಳಿಸಿ ಎಂದು ಯುಧಿಷ್ಠಿರನು ಹೇಳಿದನು.

ಅರ್ಥ:
ಆಕೆವಾಳ: ಪರಾಕ್ರಮಿ; ನೂಕು: ತಳ್ಳು; ಆಹವ: ಯುದ್ಧ; ಉಳಿದ: ಮಿಕ್ಕ; ಸವೆ: ಕಳೆ, ನೀಗು; ಹಲವು: ಹಲವಾರು; ಮಾತು: ನುಡಿ; ಸಾಕು: ಕೊನೆ; ಮುನಿ: ಕೋಪ; ಕೊಲು: ಸಾಯಿಸು; ಕಾಣು: ತೋರು; ಕಾಕನಾಡು: ಸುಳ್ಳುಮಾತನಾಡು; ಬೆಸಸು: ಆಜ್ಞಾಪಿಸು; ಅಭಿಮತ: ಅಭಿಪ್ರಾಯ; ಸೇನಾನೀಕ: ಸೈನ್ಯದ ಗುಂಪು;

ಪದವಿಂಗಡಣೆ:
ಆಕೆವಾಳರು+ ಭೀಮ +ಪಾರ್ಥರು
ನೂಕದ್+ಆಹವವ್+ಉಳಿದ +ಸೇನಾ
ನೀಕವೇ+ ನಿಮ್ಮಿಂದ +ಸವೆದುದು+ ಹಲವು+ ಮಾತೇನು
ಸಾಕುವರೆ +ಮೇಣ್ +ಮುನಿದು +ಕೊಲುವರೆ
ಬೇಕು +ಬೇಡೆಂಬವರ +ಕಾಣೆನು
ಕಾಕನಾಡೆನು +ಬೆಸಸಿ +ನಿಮ್ಮಭಿಮತವನ್+ಎನಗೆಂದ

ಅಚ್ಚರಿ:
(೧) ಸುಳ್ಳನ್ನಾಡುವುದಿಲ್ಲ ಎಂದು ಹೇಳುವ ಪರಿ – ಕಾಕನಾಡೆನು ಬೆಸಸಿ ನಿಮ್ಮಭಿಮತವನೆನಗೆಂದ

ಪದ್ಯ ೨೪: ದುರ್ಯೋಧನನಿಗೆ ಭೀಷ್ಮರು ಯಾವ ಬುದ್ಧಿಮಾತನ್ನು ಹೇಳಿದರು?

ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವೊಡೆ
ಬೇಕು ಬೇಡೆಂಬವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಗು ಈ ಮಾತು ಹಾಗಿರ್ಲೈ, ಅರ್ಜುನನು ಕೊಲ್ಲಲು ಬಂದರೆ ಬೇಕು ಬೇಡವೆನ್ನುವವರಿಲ್ಲ, ಕಾಳಗವನ್ನು ಗೆಲ್ಲಲಾಗುವುದಿಲ್ಲ. ಪಾಂಡವರನ್ನು ಕರೆಸಿ ವೀರರಮುಂದೆ ಸಂಧಿಯನ್ನು ಮಾಡಿಕೊಂಡರೆ ಈ ಲೋಕದಲ್ಲಿ ನಿನ್ನ ಸರಿಸಮಾನರಿಲ್ಲದಂತಾಗುತ್ತದೆ ಎಂದು ದುರ್ಯೋಧನನಿಗೆ ಹೇಳಿದರು

ಅರ್ಥ:
ಸಾಕು: ಕೊನೆ, ಅಂತ್ಯ; ಕಾಳಗ: ಯುದ್ಧ; ನೂಕು: ತಳ್ಳು; ಅರಿ: ತಿಳಿ; ಕೊಲು: ಸಾಯಿಸು; ಬೇಡ: ಸಲ್ಲದು, ಕೂಡದು; ಬೇಕು: ಯಾಚನೆ, ಬೇಡು; ಕಾಣು: ತೋರು; ಹಲವು: ಬಹಳ; ಮಾತು: ವಾಣಿ; ಕುಮಾರ: ಮಕ್ಕಳು; ಕರೆಸು: ಬರೆಮಾಡು; ಸಂಧಿ: ರಾಜಿ, ಒಡಂಬಡಿಕೆ; ಆಕೆವಾಳ: ವೀರ, ಪರಾಕ್ರಮಿ; ಮುಂದೆ: ಎದುರು; ಲೋಕ: ಜಗತ್ತು; ಕೇಳು: ಆಲಿಸು;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು +ಕಾಳಗ
ನೂಕಲ್+ಅರಿಯದು +ಪಾರ್ಥ +ಕೊಲುವೊಡೆ
ಬೇಕು +ಬೇಡೆಂಬವರ+ ಕಾಣೆನು +ಹಲವು +ಮಾತೇನು
ಆ +ಕುಮಾರರ +ಕರೆಸಿ+ ಸಂಧಿಯನ್
ಆಕೆವಾಳರ +ಮುಂದೆ +ಮಾಡಲು
ಲೋಕದಲಿ+ ನಿನಗಿಲ್ಲ+ ಸರಿ+ ಕುರುರಾಯ +ಕೇಳೆಂದ

ಅಚ್ಚರಿ:
(೧) ಭೀಷ್ಮರ ಸಲಹೆ: ಆ ಕುಮಾರರ ಕರೆಸಿ ಸಂಧಿಯ ನಾಕೆವಾಳರ ಮುಂದೆ ಮಾಡಲು ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ

ಪದ್ಯ ೪೭: ಧರ್ಮಜನೇಕೆ ನಿಟ್ಟುಸಿರಿಟ್ಟನು?

ಸಾಕು ಜೀಯ ಹಸಾದವೆಂದವಿ
ವೇಕನಿಧಿ ಬೀಳ್ಕೊಂಡನೀಶನ
ನೀ ಕುಮಾರರು ವನದೊಳಿರ್ದರು ಖತಿಯ ಭಾರದಲಿ
ನೂಕು ನೂಕಾಡುವ ವಿಪತ್ತಿನ
ವೈಕೃತಿಗೆ ನಾನೊಬ್ಬನೇ ದಿಟ
ವಾಕೆವಾಳನೆ ಶಿವಶಿವಾಯೆಂದರಸ ಬಿಸುಸುಯ್ದ (ಅರಣ್ಯ ಪರ್ವ, ೨೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಜಯದ್ರಥನು ಶಿವನ ಮಾತುಗಳನ್ನು ಕೇಳಿ, ಸ್ವಾಮೀ ನನಗೆ ನೀವು ನೀಡಿದ ವರವು ಮಹಾ ಪ್ರಸಾದ ಎಂದು ಹೇಳಿ ಅವಿವೇಕಿಯಾದ ಅವನು ಹಿಂದಿರುಗಿದನು. ಇತ್ತ ಪಾಂಡವರು ದುಃಖ ಕೋಪಗಳ ಅತಿರೇಕದಿಂದ ಕುಗ್ಗಿ ಕಾಡಿನಲ್ಲಿದ್ದರು. ಧರ್ಮಜನು ವಿಪತ್ತು ಮತ್ತೆ ಮತ್ತೆ ಬಂದು ನಮ್ಮನ್ನು ನೂಕಾಡುತ್ತಿರುವುದನ್ನು ಅನುಭವಿಸಿ ನನಗೆ ಸಾಕು ಸಾಕಾಗಿದೆ, ಈ ವಿಪತ್ತುಗಳೊಡನೆ ಮತ್ತೆ ಮತ್ತೆ ಹೋರಾಡಲು ನಾನೊಬ್ಬನೇ ವೀರನಿರಬಹುದೇ ಎಂದು ಯೋಚಿಸಿ ನಿಟ್ಟುಸಿರಿಟ್ಟನು.

ಅರ್ಥ:
ಸಾಕು: ನಿಲ್ಲಿಸು, ತಡೆ; ಜೀಯ: ಒಡೆಯ; ಹಸಾದ: ಪ್ರಸಾದ; ಅವಿವೇಕ: ತಿಳುವಳಿಕೆ ಇಲ್ಲದವ; ಬೀಳ್ಕೊಂಡು: ತೆರಳು; ಈಶ: ಶಂಕರ; ಕುಮಾರ: ಪುತ್ರರು; ವನ: ಕಾಡು; ಖತಿ: ದುಷ್ಟ; ಭಾರ: ಹೊರೆ; ನೂಕು: ತಳ್ಳು; ವಿಪತ್ತು: ಆಪತ್ತು; ವೈಕೃತಿ: ವಿಕಾರ; ಆಕೆವಾಳ: ವೀರ, ಪರಾಕ್ರಮಿ; ಬಿಸುಸುಯ್: ನಿಟ್ಟಿಸುರು; ಅರಸ: ರಾಜ;

ಪದವಿಂಗಡಣೆ:
ಸಾಕು +ಜೀಯ +ಹಸಾದವೆಂದ್+ಅವಿ
ವೇಕ+ನಿಧಿ+ ಬೀಳ್ಕೊಂಡನ್+ಈಶನನ್
ಈ+ ಕುಮಾರರು+ ವನದೊಳಿರ್ದರು+ ಖತಿಯ+ ಭಾರದಲಿ
ನೂಕು +ನೂಕಾಡುವ +ವಿಪತ್ತಿನ
ವೈಕೃತಿಗೆ+ ನಾನೊಬ್ಬನೇ +ದಿಟವ್
ಆಕೆವಾಳನೆ+ ಶಿವಶಿವಾ+ಎಂದ್+ಅರಸ+ ಬಿಸುಸುಯ್ದ

ಅಚ್ಚರಿ:
(೧) ಜಯದ್ರಥನನ್ನು ಬಯ್ಯುವ ಪರಿ – ಅವಿವೇಕನಿಧಿ
(೨) ಧರ್ಮಜನು ತನ್ನನ್ನೇ ಹೊಗಳುವ ಪರಿ – ನೂಕು ನೂಕಾಡುವ ವಿಪತ್ತಿನ ವೈಕೃತಿಗೆ ನಾನೊಬ್ಬನೇ ದಿಟವಾಕೆವಾಳನೆ

ಪದ್ಯ ೧೭: ಕರ್ಣನು ಯಾರ ಮೇಲೆ ಬಾಣಗಳನ್ನು ಬಿಟ್ಟನು?

ನೂಕಿದನು ಗಂಧರ್ವ ಸೇನೆಯೊ
ಳಾಕೆವಾಳರ ಮುಂದೆ ತಾನವಿ
ವೇಕಿಯೇ ದೊರೆತನದಲಿದ್ದನು ಸಕಲ ದಳ ಸಹಿತ
ಸೋಕಬಹುದೇ ಕರ್ಣ ಕೆಲಬಲ
ದಾಕೆವಾಳರ ಕೊಂಬನೇ ನೆರೆ
ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ (ಅರಣ್ಯ ಪರ್ವ, ೨೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ತನ್ನ ಸೈನ್ಯದಲ್ಲಿ ವೀರರಾದವರನ್ನು ಯುದ್ಧಕ್ಕೆ ಕಳಿಸಿದನು. ಮೂಢನಲ್ಲದ ಚಿತ್ರಸೇನನು ತಾನು ನಾಯಕನಾಗಿ ಹಿಂದೆ ನಿಂತನು. ತನ್ನ ಮೇಲೆ ಗಂಧರ್ವ ವೀರರು ಬರುವುದನ್ನು ಕರ್ಣನು ನೋಡಿದನು. ಕರ್ಣನಿಗೆ ಇವರು ಸಮಾನರೇ? ಅವನನ್ನು ಮುಟ್ಟಲು ಸಹ ಅವರಿಗೆ ಸಾಧ್ಯವೇ? ಗಂಧರ್ವರ ಶಕ್ತಿಯ ಸಮುದ್ರದ ಮೇಲೆ ಅವನು ಬಾಣಗಳನ್ನು ಬಿಟ್ಟನು.

ಅರ್ಥ:
ನೂಕು: ತಳ್ಳು; ಗಂಧರ್ವ: ಖಚರ, ದೇವತೆಗಳ ವರ್ಗ; ಸೇನೆ: ಸೈನ್ಯ; ಆಕೆವಾಳ: ವೀರ, ಪರಾಕ್ರಮಿ; ಮುಂದೆ: ಎದುರು; ಅವಿವೇಕಿ: ಮೂಢ; ದೊರೆ: ರಾಜ; ಸಕಲ: ಎಲ್ಲಾ; ದಳ: ಸೈನ್ಯ; ಸಹಿತ: ಜೊತೆ; ಸೋಕು: ಮುಟ್ಟುವಿಕೆ, ಸ್ಪರ್ಶ; ಕೆಲ: ಸ್ವಲ್ಪ, ಪಕ್ಕ, ಮಗ್ಗುಲು; ಬಲ: ಸೈನ್ಯ; ಕೊಂಬು: ನೆತ್ತಿ; ನೆರೆ: ಜೊತೆಗೂಡು; ತೋಕು: ಎಸೆ, ಬಾಣ ಪ್ರಯೋಗಿಸು; ಬಲ: ಶಕ್ತಿ; ಜಲಧಿ: ಸಾಗರ; ನಿಮಿಷ: ಕ್ಷಣ;

ಪದವಿಂಗಡಣೆ:
ನೂಕಿದನು+ ಗಂಧರ್ವ +ಸೇನೆಯೊಳ್
ಆಕೆವಾಳರ +ಮುಂದೆ +ತಾನ್+ಅವಿ
ವೇಕಿಯೇ +ದೊರೆತನದಲ್+ಇದ್ದನು +ಸಕಲ +ದಳ +ಸಹಿತ
ಸೋಕಬಹುದೇ +ಕರ್ಣ +ಕೆಲ+ಬಲದ್
ಆಕೆವಾಳರ +ಕೊಂಬನೇ +ನೆರೆ
ತೋಕಿದನು +ಗಂಧರ್ವ +ಬಲ+ಜಲಧಿಯನು +ನಿಮಿಷದಲಿ

ಅಚ್ಚರಿ:
(೧) ಕರ್ಣನ ಪರಾಕ್ರಮ – ನೆರೆ ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ

ಪದ್ಯ ೪: ಕೌರವರು ಗಂಧರ್ವರ ಜೊತೆ ಹೇಗೆ ಯುದ್ಧ ಮಾಡಿದರು?

ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರುವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಹೊಕ್ಕು ತಿವಿದರು ಬೆರಸಿ ಸುರಬಲವ (ಅರಣ್ಯ ಪರ್ವ, ೨೦ ಸಂಧಿ, ೪ ಪದ್ಯ)

ತಾತ್ಪರ್ಯ:
ಅಗ್ರಭಾಗದಲ್ಲಿದ್ದ ಯೋಧರು ಕಾಡಿನ ಎದುರಿನಲ್ಲಿದ್ದ ಗಂಧರ್ವರನ್ನು ಹೊಡೆದರು. ಶತ್ರುಗಳಾದ ದೇವತೆಗಳನ್ನು ಕೊಂದು ಅವರ ಈಟಿಗಳ ಹೊಡೆತವನ್ನು ತಿಂದರು. ವೀರರಾದ ಕರ್ಣ, ಶಕುನಿಗಳು ಸುಮ್ಮನಿರುವವರೇ? ಅವರೂ ಸಹ ಆಕ್ರಮಣ ಮಾಡಿದರು, ಅನೇಕ ಬಿರುದಾವಳಿಗಳನ್ನೊಳಗೊಂಡ ವೀರ ಸೈನಿಕರು ಶತ್ರು ಸೈನ್ಯದೊಳಕ್ಕೆ ಹೊಕ್ಕು ಗಂಧರ್ವ ಸೈನ್ಯವನ್ನು ತಿವಿದರು.

ಅರ್ಥ:
ನೂಕು: ತಳ್ಳು; ಮುಂಗುಡಿ: ಮುಂಭಾಗ; ಬನ: ಕಾದು; ಹೊಯ್ದು: ಹೊಡೆ; ವಿರೋಧಿ: ಶತ್ರು; ದಿವೌಕಸ: ದೇವತೆ; ಇಕ್ಕು: ಇರಿಸು, ಇಡು; ಸಿಕ್ಕ: ಎದುರು ಬಮ್ದ; ಉರು: ಶ್ರೇಷ್ಠ; ಸಬಳ: ಈಟಿ, ಭರ್ಜಿ; ಆಕೆವಾಳ: ವೀರ, ಪರಾಕ್ರಮಿ; ನಿಲು: ತಡೆ; ಬಿರಿ: ಬಿರುಕು, ಸೀಳು; ಪಾಡು: ಸ್ಥಿತಿ; ಅನೇಕ: ಬಹಳ; ಭಟ: ಸೈನಿಕ; ಹೊಕ್ಕು: ಸೇರು; ತಿವಿ: ಚುಚ್ಚು; ಬೆರಸು: ಮಿಶ್ರಮಾಡು, ಕೂಡಿಸು; ಸುರ: ದೇವತೆ; ಬಲ: ಸೈನ್ಯ;

ಪದವಿಂಗಡಣೆ:
ನೂಕಿದರು +ಮುಂಗುಡಿಯವರು+ ಬನ
ದಾಕೆಯಲಿ +ಹೊಯ್ದರು +ವಿರೋಧಿ +ದಿ
ವೌಕಸರನ್+ಇಕ್ಕಿದರು +ಸಿಕ್ಕಿದರ್+ಉರುವ +ಸಬಳದಲಿ
ಆಕೆವಾಳರು +ಕರ್ಣ +ಶಕುನಿಗಳ್
ಏಕೆ +ನಿಲುವರು +ಬಿರಿದು +ಪಾಡಿನ್
ಅನೇಕ+ ಭಟರ್+ಒಳಹೊಕ್ಕು +ತಿವಿದರು +ಬೆರಸಿ +ಸುರಬಲವ

ಅಚ್ಚರಿ:
(೧) ನೂಕಿದರು, ಇಕ್ಕಿದರು, ಹೊಯ್ದರು, ತಿವಿದರು – ಪದಗಳ ಬಳಕೆ
(೨) ದೇವತೆಗಳನ್ನು ದಿವೌಕಸರ ಎಂದು ಕರೆದಿರುವುದು
(೩) ಸಬಳ, ಸುರಬಲ – ಪದಗಳ ಬಳಕೆ

ಪದ್ಯ ೨೬: ಅರ್ಜುನನ ಮೇಲೆ ಯಾವ ದೂರನ್ನು ಹೇಳಿದರು?

ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳನು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು (ಅರಣ್ಯ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೈತ್ಯರ ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆಯೊಳಕ್ಕೆ ಹೋಗುವಂತೆ ಮಾಡಿದೆನು. ನೊಂದ ಅವರು ನಿವಾತಕವಚರಿಗೆ ನನ್ನ ಮೇಲೆ ದೂರು ಹೇಳಿದರು. ಒಡೆಯ, ಯುದ್ಧಕ್ಕೆ ಬಂದವನು ದೇವತೆಗಳಂತೆ ತೋರುವುದಿಲ್ಲ, ಅವನು ವೀರ, ಯುದ್ಧ ವ್ಯಾಕರಣದ ಪಂಡಿತ ಎಂದು ವರ್ಣಿಸಿದರು.

ಅರ್ಥ:
ನೂಕು: ತಳ್ಳು; ದೈತ್ಯ: ರಾಕ್ಷಸ; ಚೂಣಿ: ಮುಂಭಾಗ; ಮುರಿ: ಸೀಳು; ಔಕು: ಒತ್ತು; ದುರ್ಗ: ಕೋಟೆ; ಹೊಗಿಸು: ಹೋಗು, ತೆರಳು; ವ್ಯಾಕುಲ: ದುಃಖ, ವ್ಯಥೆ; ಸೂಸು: ಎರಚು, ಚಲ್ಲು; ಭಯ: ಅಂಜಿಕೆ; ಆಕೆವಾಳ: ಪರಾಕ್ರಮಿ; ಜೀಯ: ಒಡೆಯ; ದಿವೌಕ: ದೇವತೆ; ಪರಿ: ರೀತಿ; ಯುದ್ಧ: ಕಾಳಗ; ವ್ಯಾಕರಣ: ನಿಯಮ; ಪಾಂಡಿತ್ಯ: ತಿಳಿದವ, ವಿದ್ವತ್ತು; ದೂರು: ಆರೋಪ ಮಾಡು, ಆಕ್ಷೇಪಿಸು;

ಪದವಿಂಗಡಣೆ:
ನೂಕಿ +ದೈತ್ಯರ +ಚೂಣಿಯನು +ಮುರಿದ್
ಔಕಿ+ ದುರ್ಗವ+ ಹೊಗಿಸಿದೆನು +ಸ
ವ್ಯಾಕುಲರು +ಸೂಸಿದರು+ ಭಯವ +ನಿವಾತಕವಚರಿಗೆ
ಆಕೆವಾಳನು+ ಜೀಯ +ನಮ್ಮ +ದಿ
ವೌಕಸರ+ ಪರಿಯಲ್ಲ+ ಯುದ್ಧ
ವ್ಯಾಕರಣ+ ಪಾಂಡಿತ್ಯವುಂಟ್+ಎಂದೆನ್ನ+ ದೂರಿದರು

ಅಚ್ಚರಿ:
(೧) ಸುರರಿಗೆ ದಿವೌಕಸರ ಪದದ ಬಳಕೆ
(೨) ಪರಾಕ್ರಮಿ ಎಂದು ಹೇಳುವ ಪರಿ – ದಿವೌಕಸರ ಪರಿಯಲ್ಲ ಯುದ್ಧವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು

ಪದ್ಯ ೩೮: ಶಿಶುಪಾಲನು ಭೀಷ್ಮರನ್ನು ಹೇಗೆ ಹಂಗಿಸಿದ?

ಈ ಕುರುಕ್ಷಿತಿ ಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸುಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪ ಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ (ಸಭಾ ಪರ್ವ, ೧೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶಿಶುಪಾಲನು ಭೀಷ್ಮರನ್ನು ಉದ್ದೇಶಿಸುತ್ತಾ, ಕುರುವಂಶದ ರಾಜರಲ್ಲೆಲ್ಲಾ ನೀನು ಮಹಾಸಾಮರ್ಥ್ಯವುಳ್ಲವನಲ್ಲವೇ? ವಯಸ್ಸೂ ಬಹಳ ಆಗಿದೆ, ಅನುಭವವುಳ್ಲವನು. ಇಷ್ಟುದಿನ ಓದಿ ಅಭ್ಯಾಸಮಾಡಿ ನೀನು ಕಲಿತದ್ದು ಇದೇ ಏನು? ಕ್ಷುಲ್ಲಕವಾದುದನ್ನು ಹೊಗಳಿ, ಗೋಕುಲದಲ್ಲಿ ನಡೆದ ಪ್ರಸಂಗಗಳನ್ನು ಬಿಡಿಬಿಡಿಯಾಗಿ ಹೊಗಳುವ ಪಾಂಡಿತ್ಯ, ನಿನ್ನಲ್ಲಿ ಕಾಣುತ್ತಿದೆಯಲ್ಲಾ ಎಂದು ಭೀಷ್ಮರನ್ನು ಹಂಗಿಸಿದನು.

ಅರ್ಥ:
ಕ್ಷಿತಿ: ಭೂಮಿ; ಕ್ಷಿತಿಪಾಲ: ರಾಜ; ಆಕೆವಾಳ: ವೀರ, ಪರಾಕ್ರಮಿ; ಗಡ: ಅಲ್ಲವೆ; ವಯಃ: ವಯಸ್ಸು; ಪರಿಪಾಕ: ಹೆಚ್ಚು, ಪಕ್ವ; ಈಸು: ಇಷ್ಟು; ಕಾಲ: ಸಮಯ; ಓದು: ಅಭ್ಯಾಸ, ತಿಳಿ; ಅರಿ: ತಿಳುವಳಿಕೆ; ಕಾಕ: ಕಾಗೆ, ಕ್ಷುಲ್ಲಕ; ಉರೆ: ಹೆಚ್ಚು; ಕೊಂಡಾಡು: ಹೊಗಳು; ಗೊಲ್ಲರ: ಗೋಪಾಲಕ; ಗೋಕುಲ: ಗೋವುಗಳ ಹಿಂಡು; ಗೋಪ:ದನಗಾಹಿ, ಗೊಲ್ಲ; ಪ್ರಸಂಗ: ಮಾತುಕತೆ; ಸಂದರ್ಭ; ವ್ಯಾಕರಣ: ನಿಯಮ; ಪಾಂಡಿತ್ಯ: ವಿದ್ವತ್; ಮೆರೆ: ತೋರು;

ಪದವಿಂಗಡಣೆ:
ಈ +ಕುರು+ಕ್ಷಿತಿಪಾಲರಲಿ +ನೀನ್
ಆಕೆವಾಳನು +ಗಡ +ವಯಃ+ಪರಿ
ಪಾಕವುಳ್ಳವನ್+ಈಸು+ಕಾಲದಲ್+ಓದಿದ್+ಅರಿತವಿದೆ
ಕಾಕನುರೆ+ ಕೊಂಡಾಡಿ +ಗೊಲ್ಲರ
ಗೋಕುಲದ +ಗೋಪ +ಪ್ರಸಂಗ
ವ್ಯಾಕರಣ+ ಪಾಂಡಿತ್ಯ +ಮೆರೆದುದು +ಭೀಷ್ಮ +ನಿನಗೆಂದ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗೊಲ್ಲರ ಗೋಕುಲದ ಗೋಪ
(೨) ವ್ಯಾಕರಣ ಪಾಂಡಿತ್ಯ – ಪದಗಳ ಬಳಕೆ

ಪದ್ಯ ೬೩: ಭೀಮನು ದುಶ್ಯಾಸನನನ್ನು ಹೇಗೆ ಹಂಗಿಸಿದನು?

ಆಕೆವಾಳರು ಕರ್ಣಗುರುಸುತ
ರೀ ಕೃಪಾಚಾರಿಯರು ತಾವೇ
ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ
ಏಕೆ ತರುಬಿದಿರಿವರನಾಹವ
ಭೀಕರರನವಿವೇಕಿಗಳು ಇವ
ರೇಕೆ ನೀವೇಕೆಂದು ದುಶ್ಯಾಸನನ ನೋಡಿದನು (ಕರ್ಣ ಪರ್ವ, ೧೯ ಸಂಧಿ, ೬೩ ಪದ್ಯ)

ತಾತ್ಪರ್ಯ:
ಶೂರರಾದ ಕರ್ಣ, ಅಶ್ವತ್ಥಾಮ, ಕೃಪಾಚಾರ್ಯರು, ಪ್ರತಿಯೊಬ್ಬರು ಏಕೈಕ ವೀರರಾಗಿದ್ದೂ ಸಹ ನಿನ್ನೊಬ್ಬನನ್ನು ನನಗೆ ಒಪ್ಪಿಸಿ ಸುಮ್ಮನಿದ್ದಾರೆ. ಇವರನ್ನೆಲ್ಲಾ ನಿಮ್ಮ ಸೈನ್ಯದಲ್ಲಿ ಏಕೆ ಕೂಡಿಹಾಕಿಕೊಂಡಿರಿ? ಇವರು ವೀರರಂತೆ! ಏನೇ ಇರಲಿ ಇವರು ಅವಿವೇಕಿಗಳು, ನೀವು ಇವರನ್ನೇಕೆ ಸೇರಿಸಿಕೊಂಡಿರಿ ಎಂದು ದುಶ್ಯಾಸನನನ್ನು ನೋಡುತ್ತಾ ಭೀಮನು ಹಂಗಿಸಿದನು.

ಅರ್ಥ:
ಆಕೆವಾಳ: ವೀರ, ಪರಾಕ್ರಮಿ; ಸುತ: ಪುತ್ರ; ಏಕೈಕ: ಒಂದೇ ಒಂದಾದ; ವೀರ: ಶೂರ; ಒಪ್ಪು: ಸಮ್ಮತಿಸು, ಅಂಗೀಕರಿಸು; ತರುಬು:ತಡೆ, ನಿಲ್ಲಿಸು; ಆಹವ: ಯುದ್ಧ; ಭೀಕರ: ಭಯಾನಕತೆ; ಅವಿವೇಕಿ: ಯುಕ್ತಾಯುಕ್ತ ವಿಚಾರವಿಲ್ಲದವ;

ಪದವಿಂಗಡಣೆ:
ಆಕೆವಾಳರು +ಕರ್ಣ+ಗುರುಸುತರ್
ಈ+ ಕೃಪಾಚಾರಿಯರು +ತಾವ್+
ಏಕೈಕ+ವೀರರು +ನಿನ್ನನ್+ಒಬ್ಬನನ್+ಒಪ್ಪುಗೊಟ್ಟರಲಾ
ಏಕೆ+ ತರುಬಿದಿರ್+ಇವರನ್+ಆಹವ
ಭೀಕರರನ್+ಅವಿವೇಕಿಗಳು+ ಇವ
ರೇಕೆ+ ನೀವೇಕೆಂದು +ದುಶ್ಯಾಸನನ +ನೋಡಿದನು

ಅಚ್ಚರಿ:
(೧) ಆಕೆವಾಳ, ವೀರ – ಸಮನಾರ್ಥಕ ಪದ

ಪದ್ಯ ೨೫: ಕೃಪಾಚಾರ್ಯರು ಕರ್ಣನ ಸೇನಾಧಿಪಟ್ಟಕ್ಕೆ ಏನು ಹೇಳಿದರು?

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ
ಸಾಕಿ ಸಲಹಿದ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ (ಕರ್ಣ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿದ ಕೃಪಾಚಾರ್ಯರು, ಚರ್ಚೆ ಸಾಕು, ವೀರರನ್ನು ಸೇನಾಧಿಪತ್ಯಕ್ಕೆ ಕೂಡಿಸು, ಭೀಷ್ಮ, ದ್ರೋಣರೆಂಬ ಅತಿಶಯ ಪುಣ್ಯಶಾಲಿಗಳ ಮಾತೇಕೆ? ನೀನು ಕರ್ಣನನ್ನು ಸಾಕಿ ಸಲಹಿದವನು ಅದರಲ್ಲಿ ಮತ್ಸರವೇಕೆ? ಸೇನಾಧಿಪತ್ಯದ ಹೊಣೆ ಹೊರಲು ಸಮರ್ಥನಾಗಿದ್ದಾನೆ ಎಂದು ಹೇಳಿದರು.

ಅರ್ಥ:
ಸಾಕು: ನಿಲ್ಲಿಸು; ಅದಂತಿರಲಿ: ಹಾಗಿರಲಿ; ಥಟ್ಟು: ಸೈನ್ಯ, ಮೋಹರ; ಆಕೆವಾಳ: ಶೂರ, ಪರಾಕ್ರಮಿ; ಅಸ್ತೋಕ: ಅಧಿಕವಾದ; ಪುಣ್ಯ: ಸದಾಚಾರ; ಮಾತು: ನುಡಿ; ಗುರು: ಆಚಾರ್ಯ (ದ್ರೋಣ); ನದೀಸುತ: ಭೀಷ್ಮ; ಸುತ: ಮಗ; ಸಾಕು: ಬೆಳೆಸು, ಪೋಷಿಸು; ಸಲಹು: ಕಾಪಾಡು; ಹುರುಡು: ಪೈಪೋಟಿ, ಸ್ಪರ್ಧೆ; ಗುಣ: ನಡತೆ, ಸ್ವಭಾವ; ಅನೀಕ: ಸೈನ್ಯ; ಭಾರ: ಹೊಣೆ; ಹೊರಿಗೆ: ಹೊರಲು; ಗಹನ: ಗೌರವಸ್ಥ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು +ಥಟ್ಟಿಂಗ್
ಆಕೆವಾಳರ+ ಮಾಡು +ಸಾಕ್
ಅಸ್ತೋಕ+ಪುಣ್ಯರ +ಮಾತದೇತಕೆ+ ಗುರು +ನದೀಸುತರ
ಸಾಕಿ +ಸಲಹಿದ +ಕರ್ಣನನು +ಹುರು
ಡೇಕೆ +ಗುಣದೊಳಗ್+ಈತ +ಸೇನ
ಅನೀಕ+ಭಾರದ +ಹೊರಿಗೆ+ಗಹನೆಂದನು+ ಕೃಪಾಚಾರ್ಯ

ಅಚ್ಚರಿ:
(೧) ಸಾಕ್ – ೩ ಬಾರಿ ಪ್ರಯೋಗ
(೨) ಅಸ್ತೋಕ, ಆಕೆವಾಳ, ಅನೀಕ – ಪದಗಳ ಬಳಕೆ