ಪದ್ಯ ೬೧: ಜೀವಜಾತಕ್ಕೆ ಯಾರು ಒಡೆಯರೆಂದು ದ್ರೋಣರು ಹೇಳಿದರು?

ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ (ದ್ರೋಣ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕಾಯುವ ಯೋಗ್ಯತೆ ನನಗಿಲ್ಲ. ಅರ್ಜುನನಿಗೆ ಕೊಲ್ಲುವ ಯೋಗ್ಯತೆಯೂ ಇಲ್ಲ. ಕಾಪಾಡಲೂ ಕೊಲ್ಲಲೂ ಶ್ರೀಕೃಷ್ಣನೊಬ್ಬನೇ ಸಮರ್ಥ. ಜೀವಜಾತಕ್ಕೆ ಅವನೇ ಒಡೆಯ. ಅಹಂಕರಿಸಿ ಈ ಜಗತ್ತು ಕೆಡುತ್ತಿದೆ ಎಂದು ದ್ರೋಣರು ಹೇಳಿದರು.

ಅರ್ಥ:
ಕಾವು: ಕಾಯು, ರಕ್ಷಿಸು; ಮೇಣ್: ಅಥವ; ಗಾಂಡೀವಿ: ಅರ್ಜುನ; ಕೊಲು: ಸಾಯಿಸು; ಸಮರ್ಥ: ಯೋಗ್ಯ; ಸಿದ್ಧ: ಸಾಧಿಸಿದವನು; ವೇದ: ಶೃತಿ; ಜೀವ: ಪ್ರಾಣ; ಒಡೆಯ: ರಾಜ; ರಾಜೀವನಾಭ: ನಾಭಿಯಲ್ಲಿ ಕಮಲವುಳ್ಳವ (ವಿಷ್ಣು); ಬರಿ: ಕೇವಲ; ಅಹಂಕಾರ: ಗರ್ವ; ಅವಲಂಬನ: ಆಶ್ರಯ; ಕೆಡು: ಹಾಳು; ಅಖಿಳ: ಎಲ್ಲಾ; ಜಗ: ಪ್ರಪಂಚ;

ಪದವಿಂಗಡಣೆ:
ಕಾವಡ್+ಎನ್ನಳವಲ್ಲ+ ಮೇಣ್ +ಗಾಂ
ಡೀವಿ +ಕೊಲುವವನಲ್ಲ +ಕೃಷ್ಣನು
ಕಾವರೆಯು +ಕೊಲುವರೆ +ಸಮರ್ಥನು +ವೇದಸಿದ್ಧವಿದು
ಜೀವಜಾತಕ್+ಒಡೆಯನಾ +ರಾ
ಜೀವನಾಭನು +ಬರಿ+ಅಹಂಕಾರ
ಅವಲಂಬನದಿಂದ +ಕೆಡುತಿಹುದ್+ಅಖಿಳ +ಜಗವೆಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಜೀವಜಾತಕ್ಕೊಡೆಯನಾ ರಾಜೀವನಾಭನು

ಪದ್ಯ ೫೧: ಯಾರಿಗೆ ಪಾಪಲೇಪವಿರುವುದಿಲ್ಲ?

ಕೊಂದೆ ನಾನೆನಗಾಯ್ತು ಪಾತಕ
ವೆಂದು ಮನದಲಿ ಮರುಗುವಾತನ
ಬಂದಿಯಲಿ ಹೊಣೆಗೊಂಬವಾಹಂಕಾರ ಮಮಕಾರ
ಕಂದು ಕಲೆ ತನಗೆತ್ತಣದು ನಿ
ರ್ದ್ವಂದ್ವಕನು ಮೃತಜಾತ ತಾನ
ಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ (ಭೀಷ್ಮ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ನಾನು ಕೊಂದೆ, ನನಗೆ ಪಾಪ ಬಮ್ತು ಎಂದು ದುಃಖಿಸುವವನನ್ನು ಅಹಂಕಾರ ಮಮಕಾರಗಳು ಸೆರೆಗೊಳ್ಳುತ್ತವೆ, ನಾನು ದ್ವಂದ್ವಾತೀತ, ಶೀತ, ಉಷ್ಣ, ಇಚ್ಛೆ ದ್ವೇಷ, ಸುಖ ದುಃಕ, ಹುಟ್ಟು ಸಾವು ಮೊದಲಾದವು ದ್ವಂದ್ವಗಳು. ನನಗೆ ಕೊರತೆ ದೋಷ, ಹುಟ್ಟು ಸಾವುಗಳಿಲ್ಲ ಎಂಬ ಅನುಭವ ಬಂದವನಿಗೆ ಪಾಪಲೇಪವಿಲ್ಲ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ಕೊಂದೆ: ಸಾಯಿಸು; ಪಾತಕ: ಪಾಪಪ್; ಮನ: ಮನಸ್ಸು; ಮರುಗು: ತಳಮಳ, ಸಂಕಟ; ಬಂದಿ: ಸೆರೆ, ಬಂಧನ; ಹೊಣೆ: ಜವಾಬ್ದಾರಿ; ಅಹಂಕಾರ: ದರ್ಪ, ಗರ್ವ; ಮಮಕಾರ: ಮೋಹ, ಪ್ರೀತಿ, ವಾತ್ಸಲ್ಯ; ಕಂದು: ಬಣ್ಣಗೆಡು; ಕಲೆ: ಗುರುತು; ಎತ್ತಣ: ಎಲ್ಲಿಯ; ದ್ವಂದ್ವ: ಕಲಹ, ಸಂಶಯ; ಮೃತ: ಸತ್ತವ; ಜಾತ: ಹುಟ್ಟು; ಕಂಡು: ನೋಡು; ಪಾಪ: ಪುಣ್ಯವಲ್ಲದ ಕಾರ್ಯ;

ಪದವಿಂಗಡಣೆ:
ಕೊಂದೆ +ನಾನ್+ಎನಗಾಯ್ತು +ಪಾತಕ
ವೆಂದು +ಮನದಲಿ +ಮರುಗುವ್+ಆತನ
ಬಂದಿಯಲಿ +ಹೊಣೆಗೊಂಬವ+ಅಹಂಕಾರ +ಮಮಕಾರ
ಕಂದು +ಕಲೆ +ತನಗ್+ಎತ್ತಣದು +ನಿ
ರ್ದ್ವಂದ್ವಕನು +ಮೃತ+ಜಾತ+ ತಾನ
ಲ್ಲೆಂದು +ಕಂಡರ್+ಅವಂಗೆ+ ಪಾಪ+ವಿಲೇಪವಿಲ್ಲೆಂದ

ಅಚ್ಚರಿ:
(೧) ಯಾರಿಗೆ ಪಾಪವಿಲೇಪವಿಲ್ಲ – ನಿರ್ದ್ವಂದ್ವಕನು ಮೃತಜಾತ ತಾನಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ

ಪದ್ಯ ೪೮: ಆತ್ಮದ ಗುಣವೆಂತಹುದು?

ನಿನಗೆ ಸಾವವನಲ್ಲ ನಿನ್ನಂ
ಬಿನಲಿ ನೋವವನಲ್ಲ ದಿಟ ನೀ
ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ
ತನುವಿನೀ ಗುಣಧರ್ಮ ಕರ್ಮದ
ಹೊನಲು ಹೊಗುವುದೆ ನಿತ್ಯನಿರ್ಮಲ
ಚಿನುಮಯಾತ್ಮನನೆಲೆ ವೃಥಾಹಂಕಾರವೇಕೆಂದ (ಭೀಷ್ಮ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಆತ್ಮನಿಗೆ ನಿನ್ನ ಬಾಣದಿಂದ ನೋವೂ ಆಗುವುದಿಲ್ಲ, ಅವನು ಸಾಯುವವನೂ ಅಲ್ಲ, ಆಕಾಶವನ್ನು ಆಯುಧದಿಂದ ಇರಿದರೆ ಆಕಾಶಕ್ಕೇನಾದರೂ ನೊವಾಗುವುದೇ? ಅದು ಹೆದರುವುದೇ? ನಿತ್ಯ ನಿರ್ಮಲ ಚಿನ್ಮಯನಾದ ಆತ್ಮನಿಗೆ ದೇಹದ ಗುಣ, ಧರ್ಮ, ಕರ್ಮಗಳ ಪ್ರವಾಹದ ಲೇಪವಿದ್ದೀತೇ? ನೀನು ವೃಥಾ ಅಹಂಕರಿಸುತ್ತಿರುವೆ.

ಅರ್ಥ:
ಸಾವು: ಮರಣ; ಅಂಬು: ಬಾಣ; ನೋವು: ಪೆಟ್ಟು; ದಿಟ: ಸತ್ಯ; ಮುನಿ: ಕೋಪ; ಗಗನ: ಆಗಸ; ಅಲಗು: ಆಯುಧಗಳ ಹರಿತವಾದ ಅಂಚು; ಉಗಿ: ಹೊರಹಾಕು; ಅಳುಕು: ಹೆದರು; ತನು: ದೇಹ; ಗುಣ: ನಡತೆ, ಸ್ವಭಾವ; ಧರ್ಮ: ಧಾರಣ ಮಾಡಿದುದು; ಕರ್ಮ: ಕಾರ್ಯ, ಕೆಲಸ; ಹೊನಲು: ಬೆಳಕು; ಹೊಗು: ಪ್ರವೇಶಿಸು; ನಿತ್ಯ; ಯಾವಾಗಲು; ನಿರ್ಮಲ: ಶುದ್ಧ; ಚಿನುಮಯ: ಪರಬ್ರಹ್ಮ; ವೃಥ: ಸುಮ್ಮನೆ; ಅಹಂಕಾರ: ಅಹಂ, ಗರ್ವ;

ಪದವಿಂಗಡಣೆ:
ನಿನಗೆ+ ಸಾವವನಲ್ಲ+ ನಿನ್ನ್
ಅಂಬಿನಲಿ +ನೋವವನಲ್ಲ+ ದಿಟ+ ನೀ
ಮುನಿದು +ಗಗನಕ್+ಅಲಗನ್+ಉಗಿದಡೆ +ಗಗನವ್+ಅಳುಕುವುದೇ
ತನುವಿನ್+ಈ+ ಗುಣಧರ್ಮ +ಕರ್ಮದ
ಹೊನಲು +ಹೊಗುವುದೆ +ನಿತ್ಯ+ನಿರ್ಮಲ
ಚಿನುಮಯಾತ್ಮನನ್+ಎಲೆ +ವೃಥ+ಅಹಂಕಾರವೇಕೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀ ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ

ಪದ್ಯ ೫೦: ಜೀಮೂತನು ಭೀಮನನ್ನು ಹೇಗೆ ಎದುರಿಸಿದನು?

ದಿಟ್ಟನಹೆ ಬಾಣಸಿನ ಮನೆಯೊಳ
ಗಟ್ಟ ಕೂಳನು ತಿಂದು ದೇಹದೊ
ಳಟ್ಟೆಯಲಿ ಶಿರವಿರಲಹಂಕಾರದಲಿ ಬೆರೆತಿರುವೆ
ಕಟ್ಟಳವಿಗೈದೆನುತಲುರೆ ಕೂ
ಗಿಟ್ಟು ತಾ ಜೀಮೂತ ಮಲ್ಲನು
ಮೆಟ್ಟಿ ಹೊಕ್ಕನು ತೋಳ ತೆಕ್ಕೆಯ ಮಲ್ಲಗಾಳಗಕೆ (ವಿರಾಟ ಪರ್ವ, ೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಡುಗೆ ಮನೆಯಲ್ಲಿ ಮಾಡಿದ ಕೂಳನ್ನು ತಿಂದು, ದಿಟ್ಟತನದಿಂದ ಕೆಳಗೆ ಕಾಲು ಮೇಲೆ ತಲೆಯಿದೆಯೆಂಬ ಗರ್ವದಿಂದ ಸೊಕ್ಕಿರುವೆ. ಈಗ ಮುಖಾಮುಖಿ ಕಾಳಗಕ್ಕೆ ಬಾ ಎಂದು ಜೀಮೂತನು ಅಬ್ಬರಿಸಿ ನೆಲವನ್ನು ಮೆಟ್ಟಿ ಭೀಮನನ್ನು ಹಿಡಿದನು.

ಅರ್ಥ:
ದಿಟ್ಟ: ಧೈರ್ಯಶಾಲಿ, ಸಾಹಸಿ; ಬಾಣಸಿ: ಅಡುಗೆಯವ; ಮನೆ: ಆಲಯ; ಅಟ್ಟ: ಅಂಗುಳು; ಕೂಳು: ಊಟ; ತಿಂದು: ಊಟಮಾಡಿ; ದೇಹ: ಶರೀರ; ಅಟ್ಟೆ: ತಲೆಯಿಲ್ಲದ ದೇಹ; ಶಿರ: ತಲೆ; ಅಹಂಕಾರ: ದರ್ಪ; ಬೆರೆತು: ಕೂಡು; ಅಳವಿ: ಶಕ್ತಿ; ಐದು: ಬಂದುಸೇರು; ಉರೆ: ಹೆಚ್ಚು, ಅಧಿಕ; ಕೂಗು: ಗರ್ಜಿಸು; ಮಲ್ಲ: ಜಟ್ಟಿ; ಮೆಟ್ಟು: ಹೆಜ್ಜೆ ಇಡು, ನಡೆ; ಹೊಕ್ಕು: ಸೇರು; ತೋಳ: ಬಾಹು; ತೆಕ್ಕೆ: ಅಪ್ಪುಗೆ, ಆಲಿಂಗನ; ಕಾಳಗ: ಯುದ್ಧ;

ಪದವಿಂಗಡಣೆ:
ದಿಟ್ಟನಹೆ +ಬಾಣಸಿನ +ಮನೆಯೊಳಗ್
ಅಟ್ಟ +ಕೂಳನು +ತಿಂದು +ದೇಹದೊಳ್
ಅಟ್ಟೆಯಲಿ +ಶಿರವಿರಲ್+ಅಹಂಕಾರದಲಿ +ಬೆರೆತಿರುವೆ
ಕಟ್ಟಳವಿಗ್+ಐದೆನುತಲ್+ಉರೆ +ಕೂ
ಗಿಟ್ಟು +ತಾ +ಜೀಮೂತ +ಮಲ್ಲನು
ಮೆಟ್ಟಿ +ಹೊಕ್ಕನು +ತೋಳ +ತೆಕ್ಕೆಯ +ಮಲ್ಲ+ಕಾಳಗಕೆ

ಅಚ್ಚರಿ:
(೧) ಭೀಮನನ್ನು ಬಯ್ದ ಪರಿ – ದಿಟ್ಟನಹೆ ಬಾಣಸಿನ ಮನೆಯೊಳಗಟ್ಟ ಕೂಳನು ತಿಂದು ದೇಹದೊ
ಳಟ್ಟೆಯಲಿ ಶಿರವಿರಲಹಂಕಾರದಲಿ ಬೆರೆತಿರುವೆ

ಪದ್ಯ ೩೮: ಊರ್ವಶಿಯು ಹೇಗೆ ಕೋಪಕ್ಕೆ ಶರಣಾದಳು?

ಕೆತ್ತಿದುವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ (ಅರಣ್ಯ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಊರ್ವಶಿಯ ತುಟಿಗಳು ನಡುಗಿತು, ಕೆನ್ನೆಯ ಮೇಲೆ ತನ್ನ ಕೈಯಿಟ್ಟು ತಲೆದೂಗಿದಳು, ಅವಳ ಕಣ್ಣುಗಳಲ್ಲಿ ರೋಷಾಯುಧವು ಮಸೆದಿತು, ಉದ್ವೇಗದ ವಿಕಾರವು ಮೇಲೆ ಮೀರಿ, ಚಿತ್ತ ಬುದ್ಧಿ ಮನಸ್ಸುಗಳು ಅಹಂಕಾರದಲ್ಲಿ ಜೋಡಾದವು, ಆಕೆಯ ಅಹಂಕಾರ, ಅಭಿಮಾನಕ್ಕೆ ಪೆಟ್ಟು ಬೀಳಲು, ಊರ್ವಶಿಯು ರೋಷಕ್ಕೆ ತುತ್ತಾದಳು.

ಅರ್ಥ:
ಕೆತ್ತು: ನಡುಕ, ಸ್ಪಂದನ; ತುಟಿ: ಅಧರ; ಕದಪು: ಕೆನ್ನೆ; ಕೈ: ಹಸ್ತ; ಹತ್ತಿಸು: ಅಂಟು, ಸೇರು; ತೂಗು: ಅಲ್ಲಾಡು; ಶಿರ: ತಲೆ; ತತ್ತು: ಅಪ್ಪು, ಆಲಂಗಿಸು; ರೋಷ: ಕೋಪ; ಆಯುಧ: ಶಸ್ತ್ರ; ಮಸೆ:ಹರಿತವಾದುದು, ಚೂಪಾದುದು, ಕಾಂತಿ; ಧಾರೆ: ಪ್ರವಾಹ; ಕಂಗಳು: ನಯನ, ಕಣ್ಣು; ಎತ್ತು: ಹೆಚ್ಚಾಗು; ಉದ್ವೇಗ: ವೇಗದಿಂದ ಹೋಗುವುದು, ಭಯ; ವಿಕಾರ: ಮನಸ್ಸಿನ ವಿಕೃತಿ, ಕುರೂಪ; ಚಿತ್ತ: ಮನಸ್ಸು; ಬುದ್ಧಿ: ತಿಳಿವು, ಅರಿವು; ಆತ್ಮ: ಜೀವ; ಜೊತ್ತು: ಆಸರೆ, ನೆಲೆ; ಅದ್ಭುತ: ಆಶ್ಚರ್ಯ, ವಿಸ್ಮಯ; ಅಹಂಕಾರ: ಗರ್ವ; ಕಾಮಿನಿ: ಹೆಣ್ಣು;

ಪದವಿಂಗಡಣೆ:
ಕೆತ್ತಿದುವು+ ತುಟಿ +ಕದಪಿನಲಿ+ ಕೈ
ಹತ್ತಿಸುತ +ತೂಗಿದಳು +ಶಿರವನು
ತತ್ತ+ರೋಷಾಯುಧವ+ ಮಸೆದಳು +ಧಾರೆ+ಕಂಗಳಲಿ
ಎತ್ತಿದ್+ಉಬ್ಬೇಗದ +ವಿಕಾರದ
ಚಿತ್ತ +ಬುದ್ಧಿ+ಮನಂಗಳ್+ಆತ್ಮನ
ಜೊತ್ತಿಸಿದವ್+ಅದ್ಭುತದ್+ಅಹಂಕಾರದಲಿ +ಕಾಮಿನಿಯ

ಅಚ್ಚರಿ:
(೧) ಊರ್ವಶಿಯ ಕೋಪವನ್ನು ಚಿತ್ರಿಸುವ ಪರಿ – ಕೆತ್ತಿದುವು ತುಟಿ ಕದಪಿನಲಿ ಕೈ ಹತ್ತಿಸುತ ತೂಗಿದಳು ಶಿರವನು ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
(೨) ಕೋಪವು ಆಕೆಯನ್ನು ಆವರಿಸಿದ ಬಗೆ – ವಿಕಾರದ ಚಿತ್ತ ಬುದ್ಧಿಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ

ಪದ್ಯ ೨೩: ಅಹಂಕಾರಕ್ಕೆ ಮಕ್ಕಳಾರು?

ಪರಮತತ್ತ್ವವೆ ತದ್ವಚನಗೋ
ಚರವವಿದ್ಯಾಶಕ್ತಿ ಬೊಮ್ಮದ
ವರಮಹತ್ತೆಂದೆನಿಸಿತಾತನ ಮಗನಹಂಕಾರ
ಸ್ಪುರದಹಂಕಾರಕ್ಕೆ ಮಕ್ಕಳು
ಮೆರೆದರಿವರು ಭೂತವೆಸರೊಳು
ಹರಹಿದಾವನ ದೆಸೆಯೊಳುದಿಸಿದುದಾತ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇವನ ಮಾತೇ ಪರಮತತ್ತ್ವವು, ಇದು ಮಾತಿಗೆ ಸಿಲುಕದು, ಮಾತಿಗೆ ಸಿಲುಕುವುದು ಅವಿದ್ಯಾಶಕ್ತಿ. ಇದು ಬ್ರಹ್ಮನ ಮಹತತ್ವವೆನಿಸಿಕೊಂಡಿತು, ಈ ಮಹಾತತ್ವಕ್ಕೆ ಮಗನಾದವನೇ ಅಹಂಕಾರ, ಜಗತ್ತಿನಲ್ಲಿ ಈ ವಿಚಾರ ಯಾರ ದೆಸೆಯಿಂದಾಯಿತೋ ಅವನೇ ಇವನು (ಕೃಷ್ಣ) ಅಹಂಕಾರಕ್ಕೆ ಮಕ್ಕಳು ಪಂಚಮಹಾ ಭೂತಗಳು ಎಂದು ವಿವರ ಕೃಷ್ಣನ ಪರಮತತ್ವ ವಿಚಾರವನ್ನು ವಿವರಿಸಿದ.

ಅರ್ಥ:
ಪರಮ: ಶ್ರೇಷ್ಠ; ತತ್ತ್ವ: ಸಿದ್ಧಾಂತ; ವಚನ: ನುಡಿ, ಮಾತು; ಗೋಚರ: ಕಾಣುವ; ವಿದ್ಯ: ಜ್ಞಾನ; ಶಕ್ತಿ: ಬಲ; ಬೊಮ್ಮ: ಬ್ರಹ್ಮ; ವರ: ಅನುಗ್ರಹ; ಮಹತ್ತು: ಶ್ರೇಷ್ಠ; ಮಗ: ಸುತ; ಅಹಂಕಾರ: ದರ್ಪ; ಸ್ಪುರ: ಎದ್ದುಕಾಣುವ; ಮಕ್ಕಳು: ಸುತರು; ಮೆರೆ: ಹೊಳೆ; ಭೂತ: ಚರಾಚರಾತ್ಮಕ ಜೀವರಾಶಿ; ಹರಹು:ವಿಸ್ತಾರ, ವೈಶಾಲ್ಯ; ದೆಸೆ: ದಿಕ್ಕು; ಉದಿಸು: ಹುಟ್ಟು; ನೋಡು: ವೀಕ್ಷಿಸು;

ಪದವಿಂಗಡಣೆ:
ಪರಮ+ತತ್ತ್ವವೆ +ತದ್+ವಚನ+ಗೋ
ಚರವ್+ಅವಿದ್ಯಾಶಕ್ತಿ+ ಬೊಮ್ಮದ
ವರ+ಮಹತ್ತೆಂದ್+ಎನಿಸಿತ್+ಆತನ +ಮಗನ್+ಅಹಂಕಾರ
ಸ್ಪುರದ್+ಅಹಂಕಾರಕ್ಕೆ +ಮಕ್ಕಳು
ಮೆರೆದರ್+ಇವರು +ಭೂತವೆಸರೊಳು
ಹರಹಿದ್+ಆವನ +ದೆಸೆಯೊಳ್+ಉದಿಸಿದುದ್+ಆತ +ನೋಡೀತ