ಧರ್ಮ ನಿಮ್ಮದು ಮಗನೆ ಬರಿಯ ವಿ
ಕರ್ಮವೆಮ್ಮದು ತನ್ನ ಮಕ್ಕಳು
ದುರ್ಮತಿಗಳನ್ಯಾಯಶೀಲರಸಾಧುಸಂಗತರು
ನಿರ್ಮಳರು ನೀವೈವರಾಹವ
ಧರ್ಮಕುಶಲರು ಲೋಕ ಮೆಚ್ಚಲು
ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೫೬ ಪದ್ಯ)
ತಾತ್ಪರ್ಯ:
ಗಾಂಧಾರಿಯು, ಮಗನೇ, ಧರ್ಮಿಷ್ಠರು ನೀವು, ನನ್ನ ಮಕ್ಕಳು ವಿಕರ್ಮಪರರು, ದುರ್ಮತಿಗಳು, ಅನ್ಯಾಯಶೀಲರು, ಅಸಾಧುಗಳೊಡನಾಟ ಮಾಡಿದವರು. ನೀವೈವರೂ ನಿರ್ಮಲರು, ಧರ್ಮಯುದ್ಧ ಕುಶಲರು, ನೀವು ಧರ್ಮಿಷ್ಠರೆಂದು ಲೋಕವೇ ಒಪ್ಪುತ್ತದೆ ಎಂದು ಹೇಳಿದಳು.
ಅರ್ಥ:
ಧರ್ಮ: ಧಾರಣೆ ಮಾಡಿದುದು; ಮಗ: ಸುತ; ಬರಿ: ಕೇವಲ; ವಿಕರ್ಮ: ಕೆಟ್ಟ ಕೆಲಸ; ಮಕ್ಕಳು: ಸುತರು; ದುರ್ಮತಿ: ಕೆಟ್ಟ ಬುದ್ಧಿ; ಅನ್ಯಾಯ: ಯೋಗ್ಯವಲ್ಲದ; ಶೀಲ: ನಡತೆ, ಸ್ವಭಾವ; ಸಾಧು: ಒಳ್ಳೆಯದು; ಸಂಗತ: ಒಟ್ಟಿಗೆ ಸೇರಿಸುವುದು; ನಿರ್ಮಳ: ಶುದ್ಧತೆ, ಸ್ವಚ್ಛತೆ; ಆಹವ: ಯುದ್ಧ; ಕುಶಲ: ಚಾತುರ್ಯ; ಲೋಕ: ಜಗತ್ತು; ಮೆಚ್ಚು: ಪ್ರಶಂಶಿಸು; ತಲೆ: ಶಿರ; ಕುತ್ತು: ಹೊಡೆತ, ಪೆಟ್ಟು;
ಪದವಿಂಗಡಣೆ:
ಧರ್ಮ +ನಿಮ್ಮದು+ ಮಗನೆ +ಬರಿಯ +ವಿ
ಕರ್ಮವ್+ಎಮ್ಮದು +ತನ್ನ +ಮಕ್ಕಳು
ದುರ್ಮತಿಗಳ್+ಅನ್ಯಾಯಶೀಲರ್+ಅಸಾಧು+ಸಂಗತರು
ನಿರ್ಮಳರು +ನೀವೈವರ್+ಆಹವ
ಧರ್ಮಕುಶಲರು +ಲೋಕ +ಮೆಚ್ಚಲು
ಧರ್ಮ+ ನಿಮಗಿನ್ನೆನುತ +ತಲೆಗುತ್ತಿದಳು +ಗಾಂಧಾರಿ
ಅಚ್ಚರಿ:
(೧) ಪಾಂಡವರನ್ನು ಹೊಗಳಿದ ಪರಿ – ನಿರ್ಮಳರು ನೀವೈವರಾಹವ ಧರ್ಮಕುಶಲರು
(೨) ಕೌರವರನ್ನು ಬಯ್ಯುವ ಪರಿ – ತನ್ನ ಮಕ್ಕಳು ದುರ್ಮತಿಗಳನ್ಯಾಯಶೀಲರಸಾಧುಸಂಗತರು