ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು

ಪದ್ಯ ೨೩: ವಿರಾಟನೇಕೆ ಅವಿವೇಕನಾದ?

ಈಕೆ ಯಾರಿವರಾರೊ ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯಬಾರದು ಕಾಲು ಕೀಲುಗಳ
ಏಕೆ ನಮಗೀ ಚಿಂತೆಯೆನುತವಿ
ವೇಕಿಯಿರೆ ಬಳಿಕಿತ್ತ ಪುರದೊಳು
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ (ವಿರಾಟ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ವಿರಾಟನು ಇವಳ ಮಾತುಗಳನ್ನು ಕೇಳಿ, ಇವಳು ಯಾರು, ಸನ್ಯಾಸಿ ಯಾರು, ನಾಟ್ಯ ವಿಶಾರದನಾದ ಬೃಹನ್ನಳೆ ಯಾರು, ಇವಳಿಗೆ ಬೃಹನ್ನಳೆ, ಸನ್ಯಾಸಿ ಏನಾಗಬೇಕು ಇದರ ಆಳ ಅಡಿಯನ್ನು ತಿಳಿಯುವುದಕ್ಕೆ ವಿರಾಟನು ಚಿಂತಿಸಲೇಯಿಲ್ಲ, ನಮಗೇಕೆ ಅವರ ಚಿಂತೆೆ ಎನ್ನುತ್ತಾ ಅವಿವೇಕತನವನ್ನು ಪ್ರದರ್ಶಿಸಿದ. ಇತ್ತ ಮತ್ಸ್ಯಪುರದಲ್ಲಿ ಉತ್ತರನನ್ನು ನೋಡಲು ಜನರ ನುಕುನುಗ್ಗಲು ಆರಂಭವಾಯಿತು.

ಅರ್ಥ:
ನಾಟ್ಯ: ನರ್ತನ; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಂಡಿತ: ವಿದ್ವಾಂಸ; ಅರಿ: ತಿಳಿ; ಕಾಲು ಕೀಲು: ಅಡಿ, ಆಳ; ಚಿಂತೆ: ಯೋಚನೆ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಬಳಿಕ: ನಂತಾ; ಪುರ: ಊರು; ನೂಕು: ತಳ್ಳು; ನೋಡು: ವೀಕ್ಷಿಸು; ನೆರ: ಒತ್ತಾಸೆ, ಸಹಾಯ, ಬೆಂಬಲ;

ಪದವಿಂಗಡಣೆ:
ಈಕೆ +ಯಾರ್+ಇವರಾರೊ+ ನಾಟ್ಯ
ವ್ಯಾಕರಣ+ ಪಂಡಿತ +ಬೃಹನ್ನಳೆ
ಯೀಕೆಗ್+ಏನಹನ್+ಅರಿಯಬಾರದು+ ಕಾಲು+ ಕೀಲುಗಳ
ಏಕೆ +ನಮಗೀ +ಚಿಂತೆಯೆನುವ್+ಅವಿ
ವೇಕಿಯಿರೆ +ಬಳಿಕಿತ್ತ+ ಪುರದೊಳು
ನೂಕು +ನೂಕಾಯಿತ್ತು +ನೋಡುವ +ನೆರವಿಯುತ್ತರನ

ಅಚ್ಚರಿ:
(೧)ನ ಕಾರದ ಸಾಲು ಪದ – ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ
(೨) ಬೃಹನ್ನಳೆಯನ್ನು ಕರೆಯುವ ಪರಿ – ನಾಟ್ಯ ವ್ಯಾಕರಣ ಪಂಡಿತ

ಪದ್ಯ ೩೨: ಆಗಸವಾಣಿಯು ಏನು ಹೇಳಿತು?

ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ (ಅರಣ್ಯ ಪರ್ವ, ೨೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಕಾಶವಾಣಿಯು ಮುಂದುವರೆಸುತ್ತಾ, ನಿನ್ನ ತಮ್ಮಂದಿರು ಅವಿವೇಕಿದಗಳು, ತಿಳಿದವರಲ್ಲಿ ನೀನು ಹೆಚ್ಚಿನವನು. ನನ್ನ ಮಾತಿಗುತ್ತರವನ್ನಿತ್ತು ಬಳಿಕ ನಿನ್ನ ದೇಹದ ಬಾಯಾರಿಕೆಯನ್ನು ನಂದಿಸು ಎಂದು ಹೇಳಲು, ಧರ್ಮಜನು ಈ ವಾಣಿಯನ್ನು ಕೇಳಿ, ತನ್ನ ಬಾಯಾರಿಕೆಯನ್ನು ಸಹಿಸಿ ಯಾರು ಈ ವಾಣಿಯನ್ನಾಡಿದವರು ಎಂದು ಯೋಚಿಸಿದನು.

ಅರ್ಥ:
ಅನುಜ: ತಮ್ಮ; ಅವಿವೇಕ: ವಿವೇಚನೆ ಇಲ್ಲದ; ಪರಿಣತ: ಪ್ರೌಢನಾದ; ಅಧಿಕ: ಹೆಚ್ಚು; ನಿಧಾನಿಸು: ತಡೆ, ಸಾವಕಾಶ; ಮಾರುತ್ತರ: ಪ್ರತ್ಯುತ್ತರ; ನಿರಂತರ: ಯಾವಾಗಲು; ಆಯ: ಉದ್ದೇಶ; ತನು: ದೇಹ; ಆಪ್ಯಾಯನ: ಸುಖ, ಹಿತ; ಕೇಳು: ಆಲಿಸು; ಢಗೆ: ಬಾಯಾರಿಕೆ; ಸೈರಿಸು: ತಾಳು, ಸಹನೆ; ಘನ: ಮೋಡ, ಮುಗಿಲು; ಪಥ: ದಾರಿ; ನುಡಿ: ಮಾತು; ಅವನೀಶ: ರಾಜ; ಆಲಿಸು: ಕೇಳು;

ಪದವಿಂಗಡಣೆ:
ಅನುಜರ್+ಅವಿವೇಕಿಗಳು +ಪರಿಣತ
ಜನದಲ್+ಅಧಿಕನು+ ನೀ +ನಿಧಾನಿಸಿ
ನನಗೆ +ಮಾರುತ್ತರವನಿತ್ತು+ ನಿರಂತರಾಯದಲಿ
ತನುವಿಗ್+ಆಪ್ಯಾಯನವ +ಮಾಡುವುದ್
ಎನಲು +ಕೇಳಿದು +ಢಗೆಯ +ಸೈರಿಸಿ
ಘನಪಥದ +ನುಡಿ +ಯಾರದೆಂದ್+ಅವನೀಶನ್+ಆಲಿಸಿದ

ಅಚ್ಚರಿ:
(೧) ಆಗಸವನ್ನು ಘನಪಥ ಎಂದು ಕರೆದಿರುವುದು

ಪದ್ಯ ೧೦೧: ಅವಿವೇಕಿಗಳ ಲಕ್ಷಣವೇನು?

ಲೋಕಸಮ್ಮತವಾವುದದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಜಗತ್ತು ಒಪ್ಪಿರುವುದನ್ನು, ಪರಂಪರೆಯಿಂದ ಒಪ್ಪಿಕೊಂಡು ಬಂದಿರುವುದನ್ನು ಅಲ್ಲಗಳೆಯುವವರು ಲೋಕದಲ್ಲಿ ಮಹಾಶೂರರೋ? ಅವರು ಮೊದಲಿಗೆ ತಮ್ಮ ನಡತೆಯನ್ನು ತಾವು ಅರಿತುಕೊಂಡಿರುವವರೇ? ಅವಿವೇಕಿಗಳೂ ಅಪ್ರಮಾಣಿಕರೂ ಆಗಿರುವವರು ಅಂತಹ ಮಾತುಗಳನ್ನಾಡುತ್ತಾರೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಲೋಕ: ಜಗತ್ತು; ಸಮ್ಮತ: ಒಪ್ಪಿರುವ; ನಿರಾಕರಿಸು: ಅಲ್ಲಗಳೆ; ಆಕೆವಾಳ: ಶೂರ; ಜಗ: ಲೋಕ, ಜಗತ್ತು; ಬಲ್ಲವ: ತಿಳಿ; ಬೇಕು: ಪಡೆ, ಆಸೆ; ಬೇಡ: ಅಪೇಕ್ಷೆಯಿಲ್ಲ; ಅವಿವೇಕಿ:ವಿವೇಚನೆ ಇಲ್ಲದಿರುವವ; ಮೊದಲು: ಆದಿ; ಪ್ರಾಮಾಣಿಕ: ನಂಬಿಕಸ್ತ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಲೋಕ+ಸಮ್ಮತವಾವುದ್+ಅದನು +ನಿ
ರಾಕರಿಸುವವರುಗಳು +ತಾವೇನ್
ಆಕೆವಾಳರೆ +ಜಗಕೆ+ ತಮ್ಮನದ್+ಆರು +ಬಲ್ಲವರು
ಬೇಕು +ಬೇಡೆಂಬುದಕೆ+ ತಾವ್+ಅವಿ
ವೇಕಿಗಳು +ಮೊದಲಿಂಗೆ +ಪ್ರಾಮಾ
ಣೀಕರುಗಳ್+ಅವರಲ್ಲ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಬೇಕು ಬೇಡ – ವಿರುದ್ಧ ಪದಗಳು
(೨) ಲೋಕ, ಜಗತ್ತು – ಸಮಾನಾರ್ಥಕ ಪದ