ಪದ್ಯ ೫೮: ಭಾರಧ್ವಾಜರು ದ್ರೋಣರಿಗೆ ಏನನ್ನು ಉಪದೇಶಿಸಿದರು?

ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ (ದ್ರೋಣ ಪರ್ವ, ೧೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅವಿವೇಕದಿಂದ ವೇದವು ವಿಧಿಸಿರುವ ಸನ್ಮಾರ್ಗವನ್ನು ಮೀರಿ ನಡೆದಿರುವೆ, ನೀರೆಲ್ಲಾ ಹರಿದು ಹೋದ ಮೇಲೆ ಕಟ್ಟೆಯನ್ನು ಕಟ್ಟಿದರೇನು ಫಲ. ಇದುವರೆಗೆ ಆದದ್ದೆಲ್ಲಾ ಆಯಿತು, ಇನ್ನಾದರೂ ಈ ದುರಾಗ್ರಹವನ್ನು ಬಿಡು, ಆಯುಧಗಳನ್ನೆಸೆದು, ಸಮಾಧಿಯೋಗದಿಮ್ದ ನಿನ್ನ ನಿಜವನ್ನು ನೀನು ಸಾಧಿಸು, ದೇಹವನ್ನು ಬಯಸಬೇಡ ಎಂದು ಭಾರಧ್ವಾಜರು ಉಪದೇಶಿಸಿದರು.

ಅರ್ಥ:
ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಪಥ: ಮಾರ್ಗ; ವೈದಿಕ: ವೇದಗಳನ್ನು ಬಲ್ಲವನು; ಅತಿಕ್ರಮಣ: ಕ್ರಮವನ್ನು ಉಲ್ಲಂಘಿಸುವುದು; ಗತ: ಕಳೆದ, ಆಗಿ ಹೋದ; ಉದಕ: ನೀರು; ಉರೆ: ಅತಿಶಯವಾಗಿ; ಸೇತು: ಸೇತುವೆ, ಸಂಕ; ಸಂಬಂಧ: ಸಂಪರ್ಕ, ಸಹವಾಸ; ಫಲ: ಪ್ರಯೋಜನ; ದುರಾಗ್ರಹ: ಹಟಮಾರಿತನ; ನಿಲಲಿ: ನಿಲ್ಲು, ತಡೆ; ಹಾಯಿಕು: ಕಳಚು, ತೆಗೆ; ಕೈದು: ಆಯುಧ; ಸಮಾಧಿ: ಏಕಾಗ್ರತೆ, ತನ್ಮಯತೆ; ಯೋಗ: ರೀತಿ, ವಿಧಾನ; ನಿಜ: ದಿಟ; ದೇಹ: ಶರೀರ; ನಿಸ್ಪೃಹ: ಆಸೆ ಇಲ್ಲದವ;

ಪದವಿಂಗಡಣೆ:
ಆದುದ್+ಅವಿವೇಕದಲಿ +ಸತ್ಪಥ
ವೈದಿಕ+ಅತಿಕ್ರಮಣವ್+ಇನ್ನು +ಗತ
ಉದಕದಲ್+ಉರೆ +ಸೇತು+ಸಂಬಂಧದಲಿ +ಫಲವೇನು
ಈ +ದುರಾಗ್ರಹ +ನಿಲಲಿ +ಹಾಯಿಕು
ಕೈದುವನು +ಸುಸಮಾಧಿ +ಯೋಗದಲ್
ಐದು +ನಿಜವನು +ದೇಹ +ನಿಸ್ಪೃಹನಾಗು +ನೀನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗತೋದಕದಲುರೆ ಸೇತುಸಂಬಂಧದಲಿ ಫಲವೇನು

ಪದ್ಯ ೨೦: ಧರ್ಮಜನೇಕೆ ಭಯಗೊಂಡ?

ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ (ಅರಣ್ಯ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಆ ದೊಡ್ಡ ಮರವನ್ನು ನೋಡಿ ಧರ್ಮಜನು ಭಯಗೊಂಡನು. ನಾವು ಹಿಂದೆ ಮಾಡಿದ ದುಷ್ಕೃತ್ಯದ ಫಲವಾಗಿ ಇಂದು ಈ ಪರಿಸ್ಥಿತಿ ಬಂದೊದಗಿದೆ, ಭೀಮನು ವಿಚಾರಮಾಡದೆ ಅವಿವೇಕದಿಂದ ಈ ಹಣ್ನನ್ನು ಕಿತ್ತನು. ಇದನ್ನು ಮರಕ್ಕೇರಿಸಲು ಸಾಧ್ಯವಿಲ್ಲ, ಶಿವನೇ ಇದರ ಆಗುಹೋಗನ್ನು ಬಲ್ಲ ಎಂದು ಭಯದಿಂದ ನುಡಿದನು.

ಅರ್ಥ:
ಕಂಡು: ನೋಡು; ಸುತ: ಮಗ; ಅತಿ: ಬಹಳ; ಭಯ: ಅಂಜಿಕೆ; ಖಂಡ: ತುಂಡು, ಚೂರು; ಪರಶು: ಕೊಡಲಿ; ಖಂಡಪರಶು: ಶಿವ; ಬಲ್ಲ: ತಿಳಿದವ; ಮುಂಕೊಂಡು: ಹಿಂದೆ ಮಾಡಿದ; ದುಷ್ಕೃತ: ಕೆಟ್ಟ ಕೆಲಸ; ಫಲ: ಹಣ್ಣು, ಫಲಿತಾಂಶ; ಬಿಸುಸುಯ್: ನಿಟ್ಟುಸಿರು ಬಿಟ್ಟು; ಚಂಡವಿಕ್ರಮ: ಪರಾಕ್ರಮಿ, ಶೂರ; ಕೈಕೊಂಡು: ಕೈಯ್ಯಾರ ಮಾಡಿದ; ಅವಿವೇಕ: ವಿವೇಚನೆವಿಲ್ಲದೆ; ಉದ್ದಂಡ: ದರ್ಪ, ಗರ್ವ; ಹತ್ತಿಸು: ಮೇಲೇರಿಸು; ಅರಿ: ತಿಳಿ;

ಪದವಿಂಗಡಣೆ:
ಕಂಡು +ಯಮಸುತನ್+ಅತಿ +ಭಯದಿನ್+ಇದ
ಖಂಡಪರಶುವೆ+ ಬಲ್ಲ+ ನಾವ್+ ಮುಂ
ಕೊಂಡು +ಮಾಡಿದ +ದುಷ್ಕೃತದ +ಫಲವೆನುತ+ ಬಿಸುಸುಯ್ದ
ಚಂಡವಿಕ್ರಮ+ ಭೀಮನ್+ಅದ ಕೈ
ಕೊಂಡು +ತಾನ್+ಅವಿವೇಕದಲಿ
ಉದ್ದಂಡತನದಿಂ +ತಂದ +ಹತ್ತಿಸಲ್+ಅರಿದು+ ನಮಗೆಂದ

ಅಚ್ಚರಿ:
(೧) ಭೀಮನನ್ನು ಹೊಗಳುವ ಹಾಗು ತೆಗಳುವ ಬಗೆ – ಚಂಡವಿಕ್ರಮ ಭೀಮನದ ಕೈಕೊಂಡು ತಾನವಿವೇಕದಲಿ