ಪದ್ಯ ೪: ಧರ್ಮಜನು ಯಾವ ಯಾತ್ರೆಯನ್ನು ಕೈಗೊಂಡನು?

ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡ ಪುಳಕದ
ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜಪರಿವಾರವವನೀದೇವಕುಲ ಸಹಿತ (ಅರಣ್ಯ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಮತ್ತೆ ಮತ್ತೆ ಅರ್ಜುನನ ಕ್ಷೇಮ ಕುಶಲಗಳನ್ನು ವಿಚಾರಿಸಿ ರೋಮಾಂಚನಗೊಂಡನು. ಅತೀವ ಸಂತೋಷ ಭರಿತನಾದನು, ಪುಳಕಜಲವು ಹರಿಯಲಾರಂಭಿಸಿತು, ತನ್ನ ಪರಿವಾರದವರು ಮತ್ತು ಬ್ರಾಹ್ಮಣರೊಡನೆ ಧರ್ಮಜನು ವನವನಗಳಲ್ಲಿ ತೊಳಲುತ್ತಾ ತೀರ್ಥಯಾತ್ರೆಯನ್ನು ಮಾಡಿದನು.

ಅರ್ಥ:
ನುಡಿ: ಮಾತು; ಕ್ಷೇಮ: ನೆಮ್ಮದಿ, ಸುಖ; ಕುಶಲ: ಕ್ಷೇಮ; ಅಡಿಗಡಿಗೆ: ಮತ್ತೆ ಮತ್ತೆ; ಬೆಸಗೊಳ್: ಕೇಳು; ಪುಳಕ: ರೋಮಾಂಚನ; ಗುಡಿಕಟ್ಟು: ಸಂತೋಷಗೊಳ್ಳು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪೂರ್ಣ: ತುಂಬ; ಹರುಷ: ಸಂತೋಷ; ಪೊಡವಿ: ಪೃಥ್ವಿ, ಭೂಮಿ; ಅಧಿಪತಿ: ಒಡೆಯ; ಬಳಿಕ: ನಂತರ; ತೊಳಲು: ಅಲೆದಾಡು, ತಿರುಗಾಡು; ಅಡವಿ: ಕಾಡು; ತೀರ್ಥಯಾತ್ರೆ: ಪವಿತ್ರ ಸ್ಥಳಗಳ ದರ್ಶನಕ್ಕಾಗಿ ಮಾಡುವ ಯಾತ್ರೆ; ಮಡದಿ: ಹೆಂಡತಿ; ಪರಿವಾರ: ಸುತ್ತಲಿನವರು, ಪರಿಜನ; ಅವನೀದೇವ: ಬ್ರಾಹ್ಮಣ; ಕುಲ: ವಂಶ; ಸಹಿತ: ಜೊತೆ;

ಪದವಿಂಗಡಣೆ:
ನುಡಿನುಡಿಗೆ +ಸುಕ್ಷೇಮ +ಕುಶಲವನ್
ಅಡಿಗಡಿಗೆ +ಬೆಸಗೊಂಡ +ಪುಳಕದ
ಗುಡಿಯಬೀಡಿನ+ ರೋಮ +ಪುಳಕದ+ ಪೂರ್ಣ +ಹರುಷದಲಿ
ಪೊಡವಿ+ಅಧಿಪತಿ+ ಬಳಿಕ+ ತೊಳಲಿದನ್
ಅಡವಿ+ಅಡವಿಯ +ತೀರ್ಥಯಾತ್ರೆಗೆ
ಮಡದಿ +ನಿಜಪರಿವಾರವ್+ಅವನೀದೇವ+ಕುಲ ಸಹಿತ

ಅಚ್ಚರಿ:
(೧) ಬ್ರಾಹ್ಮಣ ಎಂದು ಹೇಳಲು ಅವನೀದೇವ ಪದದ ಬಳಕೆ
(೨) ಸಂತೋಷಗೊಂಡ ಎಂದು ತಿಳಿಸಲು – ಪುಳಕದ ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
(೩) ರಾಜನೆಂದು ಹೇಳಲು – ಪೊಡವಿಯಧಿಪತಿ
(೪) ಜೋಡಿ ಪದಗಳು: ಅಡಿಗಡಿ, ಅಡವಿಯಡವಿ, ನುಡಿನುಡಿ