ಪದ್ಯ ೫೯: ಭೀಮನು ಗಾಂಧಾರಿಗೆ ಏನೆಂದು ಬಿನ್ನೈಸಿದನು?

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ (ಗದಾ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾಯೇ, ಹೊರಬೇಕೆಂದರೆ ನಾವು ದುಷ್ಕೀರ್ತಿಯನ್ನು ಹೊರುತ್ತೇವೆ. ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು, ಈ ಅನ್ಯಾಯವನ್ನು ನಾವು ಮಾಡಿರುವುದು ಜಗತ್ತಿಗೇ ಗೊತ್ತಿದೆ, ನೀವು ಮನಸ್ಸನ್ನು ಮುರಿದುಕೊಳ್ಳದೆ ಕೇಳುವುದಾದರೆ ಬಿನ್ನೈಸುತ್ತೇವೆ ಎಂದು ಭೀಮನು ಗಾಂಧಾರಿಗೆ ನುಡಿದನು.

ಅರ್ಥ:
ಹೊರಿಸು: ಧರಿಸು, ಭಾರವನ್ನು ಹೇರು; ದುಷ್ಕೀರ್ತಿ: ಅಪಕೀರ್ತಿ; ನಾಭಿ: ಹೊಕ್ಕಳು; ಎರಗು: ಬೀಳು; ಸಲ್ಲದು: ಸರಿಹೊಂದು, ಒಪ್ಪಿಗೆಯಾಗು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಅರಿಕೆ: ವಿಜ್ಞಾಪನೆ; ಅನ್ಯಾಯ: ಸರಿಯಲ್ಲದ; ಜಗ: ಪ್ರಪಂಚ; ಅರಿ: ತಿಳಿ; ಮನ: ಮನಸ್ಸು; ಮುರಿ: ಸೀಳು; ಅವಧರಿಸು: ಮನಸ್ಸಿಟ್ಟು ಕೇಳು; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಹೊರಿಸುವಡೆ +ದುಷ್ಕೀರ್ತಿ +ನಮ್ಮಲಿ
ಹೊರಿಗೆಯಾಯಿತು +ನಾಭಿಯಿಂ +ಕೆಳಗ್
ಎರಗುವುದು +ಗದೆಯಿಂದ +ಸಲ್ಲದು+ ಶಸ್ತ್ರವಿದ್ಯೆಯಲಿ
ಅರಿಕೆಯಿಂದ್+ಅನ್ಯಾಯವೀ +ಜಗವ್
ಅರಿಯೆ +ನಮ್ಮದು +ತಾಯೆ +ನೀ +ಮನ
ಮುರಿಯದ್+ಅವಧರಿಸುವಡೆ +ಬಿನ್ನಹವೆಂದನಾ+ ಭೀಮ

ಅಚ್ಚರಿ:
(೧) ಹೊರಿ, ಅರಿ – ೧-೨, ೪,೫ ಸಾಲಿನ ಮೊದಲ ಪದ
(೨) ಅರಿ, ಮುರಿ – ಪ್ರಾಸ ಪದ

ಪದ್ಯ ೪೦: ದುರ್ಯೋಧನನು ಬೇಡಿದುದಕ್ಕೆ ದ್ರೋಣನೇನೆಂದನು?

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ (ದ್ರೋಣ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ, ಮರಣ ಮಂತ್ರವನ್ನು ಅನುಗ್ರಹಿಸಿ ಎಂದು ಕೇಳಬಹುದೇ? ಮಗೂ< ಅರ್ಜುನನ ಪರಾಕ್ರಮವು ನಿನಗೆ ಗೊತ್ತಿಲ್ಲವೇ? ಧರ್ಮಜನನ್ನು ಹಿಡಿಯಲು ಅವನು ಬಿಡುವನೇ? ಅಸಾಧ್ಯವಾದುದನ್ನು ಬೇಡಿದೆ, ಆಗಲಿ ಎಂದು ಒಪ್ಪಿ ಅದನ್ನು ಮಾಡದಿರುವ ಬಾಹಿರರು ನಾವಲ್ಲ, ದ್ರೋಣನು ಹೀಗೆ ಹೇಳಲು ಕೌರವನು ಉತ್ತರಿಸಿದನು.

ಅರ್ಥ:
ಮರಣ: ಸಾವು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅನುಗ್ರಹ: ಕೃಪೆ, ದಯೆ; ಧರಿಸು: ಹೊರು; ಮಗ: ಸುತ; ಪರಿ: ರೀತಿ; ಅರಿ: ತಿಳಿ; ಹಿಡಿ: ಬಂಧಿಸು; ಬೇಡು: ಕೇಳು; ನೂಕು: ತಳ್ಳು; ವಚನ: ಮಾತು; ಬಾಹಿರ: ಹೊರಗಿನವ; ರಾಯ: ರಾಜ;

ಪದವಿಂಗಡಣೆ:
ಮರಣ +ಮಂತ್ರ+ಅನುಗ್ರಹವನ್+ಅವ
ಧರಿಸಬಹುದೇ +ಮಗನೆ +ಪಾರ್ಥನ
ಪರಿಯನ್+ಅರಿಯಾ +ಹಿಡಿಯಲೀವನೆ+ ಧರ್ಮನಂದನನ
ಅರಿದ+ ಬೇಡಿದೆ +ತನಗೆ +ನೂಕದ
ವರವ+ ವಚನಿಸಿ +ಮಾಡದಿಹ +ಬಾ
ಹಿರರು +ನಾವಲ್ಲ್+ಎನಲು +ಕೌರವರಾಯನ್+ಇಂತೆಂದ

ಅಚ್ಚರಿ:
(೧) ದುರ್ಯೋಧನನು ಬೇಡಿದ ವರವು ಹೇಗಿತ್ತು – ಮರಣ ಮಂತ್ರಾನುಗ್ರಹವನವಧರಿಸಬಹುದೇ ಮಗನೆ

ಪದ್ಯ ೫೭: ಧರ್ಮಜನಿಗೆ ಯುದ್ಧಕ್ಕೆ ಸಿದ್ಧನಾಗಲು ಯಾರು ಹೇಳಿದರು?

ಅವಧರಿಸು ಧೃತರಾಷ್ಟ್ರ ಗಂಗಾ
ಭವನ ನೇಮದಲಂದು ಮಹದಾ
ಹವಕೆ ನಡೆದುದು ಕಟಕವಲ್ಲಿಯುಲೂಕನೆಂಬುವನು
ಇವರು ಕಳುಹಿದೊಡವನು ರಿಪು ಪಾಂ
ಡವರ ಹೊರಗೈತಂದನಿನ್ನಾ
ಹವಕೆ ನಿಂದಿರು ಧರ್ಮಪುತ್ರ ವಿಳಂಬವೇಕೆಂದ (ಭೀಷ್ಮ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವೃತ್ತಾಂತವನ್ನು ವಿವರಿಸುತ್ತಾ, ಧೃತರಾಷ್ಟ್ರ ಕೇಳು, ಸೈನ್ಯವು ಮಹಾಸಮರಕ್ಕೆ ಹೊರಟಿತು, ಕೌರವನು ಉಲೂಕನನ್ನು ಪಾಂಡವರ ಬಳಿಗೆ ಕಳಿಸಿದನು. ಉಲೂಕನು ಧರ್ಮಜನ ಬಳಿಗೆ ಬಂದು, ಹೇ ಧರ್ಮಜ ಇನ್ನು ತಡವೇಕೆ? ಯುದ್ಧಕ್ಕೆ ಸಿದ್ಧನಾಗು ಎಂದು ಹೇಳಿದನು.

ಅರ್ಥ:
ಅವಧರಿಸು: ಮನಸ್ಸಿಟ್ಟು ಕೇಳು; ಗಂಗಾಭವ: ಭೀಷ್ಮ; ನೇಮ: ನಿಯಮ; ಆಹವ: ಯುದ್ಧ; ನಡೆ: ಚಲಿಸು, ಮುಂದುವರಿಸು; ಕಟಕ: ಗುಂಪು, ಸೈನ್ಯ; ಕಳುಹು: ತೆರಳು; ರಿಪು: ವೈರಿ; ನಿಲ್ಲು: ಸ್ಥಿತವಾಗಿರು; ಪುತ್ರ: ಮಗ; ವಿಳಂಬ: ನಿಧಾನ;

ಪದವಿಂಗಡಣೆ:
ಅವಧರಿಸು+ ಧೃತರಾಷ್ಟ್ರ +ಗಂಗಾ
ಭವನ +ನೇಮದಲ್+ಅಂದು +ಮಹದ್
ಆಹವಕೆ +ನಡೆದುದು +ಕಟಕವಲ್ಲಿ+ಉಲೂಕನೆಂಬುವನು
ಇವರು+ ಕಳುಹಿದೊಡ್+ಅವನು +ರಿಪು +ಪಾಂ
ಡವರ +ಹೊರಗೈತಂದನ್+ಇನ್ನ್
ಆಹವಕೆ +ನಿಂದಿರು +ಧರ್ಮಪುತ್ರ +ವಿಳಂಬವೇಕೆಂದ

ಅಚ್ಚರಿ:
(೧) ಭೀಷ್ಮರನ್ನು ಗಂಗಾಭವನ ಎಂದು ಕರೆದಿರುವುದು

ಪದ್ಯ ೨: ವಿದುರನು ಧೃತರಾಷ್ರನಿಗೆ ಬ್ರಹ್ಮವಿದ್ಯೆಯನ್ನು ಕಲಿಯುವ ಬಗ್ಗೆ ಏನು ಹೇಳಿದ?

ಅವಧರಿಸು ಪರತತ್ತ್ವ ವಿದ್ಯಾ
ವಿವರ ಭೇದವನನ್ಯ ಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೊದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಕೋರಿಕೆಗೆ ವಿದುರನು ವಿನಮ್ರನಾಗಿ, ರಾಜ ನಾನು ಅನ್ಯಜಾತಿಯವ, ಬ್ರಹ್ಮವಿದ್ಯೆಯ ಬಗ್ಗೆ ನಾನು ಹೇಳುವುದು ತಪ್ಪು. ಶ್ರೇಷ್ಠನಾದ ಮುನಿಯಿಂದಲೇ ಬ್ರಹ್ಮತತ್ತ್ವವು ತಿಳಿದು ಬಂದೀತು. ಅವರಿವರ ಮುಖದಿಂದ ಇದು ಬರಲಾರದು. ಬ್ರಹ್ಮೋಪದೇಶದ ವಿಸ್ತಾರವನ್ನು ಬಲ್ಲವರಾದರೂ ಯಾರು ಎಂದು ವಿದುರನು ಹೇಳಿದ.

ಅರ್ಥ:
ಅವಧರಿಸು:ಮನಸ್ಸಿಟ್ಟು ಕೇಳು; ಪರತತ್ತ್ವ; ಬ್ರಹ್ಮವಿದ್ಯೆ; ವಿದ್ಯ: ಜ್ಞಾನ; ವಿವರ: ವಿಚಾರ; ಭೇದ: ಮುರಿಯುವುದು; ಅನ್ಯ: ಬೇರೆ; ಜಾತಿ: ಕುಲ; ಸಲುವುದು:ಯೋಗ್ಯವಾಗು;ಮುನಿ: ಋಷಿ; ವರ: ಶ್ರೇಷ್ಠ; ಕರುಣೆ: ದಯೆ; ಉದಯ: ಹುಟ್ಟು; ಅವರಿವರು: ತಿಳಿಯದ, ಯಾರ್ಯಾರೋ; ಮುಖ: ಆನನ; ಸಂಭವಿಸು: ಒದಗಿಬರು; ಬ್ರಹ್ಮೋಪದೇಶ: ಪರತತ್ತ್ವದ ಉಪದೇಶ; ಉಪದೇಶ: ಬೋಧಿಸುವುದು; ಹವಣಿಸು: ಸಿದ್ಧಮಾಡು; ಬಲ್ಲವ: ತಿಳಿದವ; ಕೇಳು: ಆಲಿಸು;

ಪದವಿಂಗಡಣೆ:
ಅವಧರಿಸು +ಪರತತ್ತ್ವ +ವಿದ್ಯಾ
ವಿವರ +ಭೇದವನ್+ಅನ್ಯ +ಜಾತಿಗಳ್
ಎವಗೆ +ಸಲುವುದೆ +ಮುನಿವರನ +ಕರುಣೊದಯದಲ್+ಅಹುದು
ಅವರಿವರುಗಳ+ ಮುಖದಲಿದು +ಸಂ
ಭವಿಸುವುದೆ +ಬ್ರಹ್ಮೋಪದೇಶದ
ಹವಣ+ ಬಲ್ಲವನ್+ಆವನೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಅವಧರಿಸು, ಕೇಳು – ಸಮನಾರ್ಥಕ ಪದ

ಪದ್ಯ ೩೧: ದುರ್ಯೋಧನನು ಕೃಷ್ಣನ ಸಲಹೆಗೆ ಏನು ಹೇಳಿದನು?

ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ಪಾ
ರ್ಥಿವರ ಪಂಥದ ಕದನವಿದ್ಯಾ ಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು (ಉದ್ಯೋಗ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಕೃಷ್ಣನ ಬೋಧನೆಗೆ ಉತ್ತರಿಸುತ್ತಾ, ಕೃಷ್ಣ ನೀನು ಮನಸಿಟ್ಟು ಕೇಳು, ನಾವು ನಿನ್ನ ಬಳಿ ಬಂದಿರುವುದು ನಿನ್ನ ಧರ್ಮ ಪ್ರವಚನ ಕೇಳುವುದಕ್ಕಲ್ಲ. ಕ್ಷತ್ರಿಯೋಚಿತವಾದ ಯುದ್ಧ ಮಾಡುವ ಬಯಕೆಯಿಂದ ನಿನ್ನ ನೆರವನ್ನು ಕೇಳಲು ಬಂದಿದ್ದೇವೆ. ನಾವಿಬ್ಬರೂ ನಿನಗೆ ಸರಿಸಮಾನರಾದ ಬಂಧುಗಳು, ವಿಶ್ವಾಸಿಗಳು. ನೀನು ಪಾಂಡವರಿಗೂ ನಮಗೂ ಮನಬಿಚ್ಚಿ ಸಹಾಯ ಮಾಡು ಎಂದನು.

ಅರ್ಥ:
ಅವಧರಿಸು:ಮನಸ್ಸಿಟ್ಟು ಕೇಳು; ಮುರವೈರಿ: ಕೃಷ್ಣ; ವೈರಿ: ಶತ್ರ; ಧರ್ಮ: ಧಾರಣ ಮಾಡಿದುದು; ಶ್ರವಣ: ಕೇಳಿಸಿಕೊ; ಬಾರೆವಾವ್: ಬಂದವರಲ್ಲ; ಪಾರ್ಥಿವ: ಕ್ಷತ್ರಿಯ; ಪಂಥ: ಮಾರ್ಗ; ಕದನ: ಕಾಳಗ, ಯುದ್ಧ; ಕಾಮ: ಆಸೆ; ತಂಡ: ಗುಂಪು; ಮನ: ಮನಸ್ಸು; ಒಲವು: ಪ್ರೀತಿ; ಬಲ: ಶಕ್ತಿ;

ಪದವಿಂಗಡಣೆ:
ಅವಧರಿಸು +ಮುರವೈರಿ +ಧರ್ಮ
ಶ್ರವಣ+ಕೋಸುಗ+ ಬಾರೆವಾವ್+
ಪಾರ್ಥಿವರ+ ಪಂಥದ +ಕದನವಿದ್ಯಾ +ಕಾಮವ್+ಎಮಗಾಯ್ತು
ನಿವಗೆ +ನಾವಿತ್ತಂಡ+ ಸರಿ+ ಪಾಂ
ಡವರಿಗೆಯು +ಮನದ್+ಒಲವಿನಲಿ +ಕೌ
ರವರಿಗೆಯು +ಬಲವಾಗ+ಬೇಕೆಂದನು +ಸುಯೋಧನನು

ಅಚ್ಚರಿ:
(೧) ದುರ್ಯೋಧನನ ದರ್ಪವನ್ನು ಮೊದಲ ಪದದಲ್ಲಿ ಹೇಳಿರುವುದು – ಅವಧರಿಸು, ಧರ್ಮಶ್ರವಣಗೋಸುಗ ಬಾರೆವಾವ್
(೨) ಪಾಂ, ಕೌ – ೪, ೫ ಸಾಲಿನ ಕೊನೆಯ ಅಕ್ಷರ

ಪದ್ಯ ೬: ಕೀಚಕನನ್ನು ಹೇಗೆ ಸಂಹರಿಸಲಾಯಿತು?

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದೊಳಗೆ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹಕೆ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ (ವಿರಾಟ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ದೂತನು ಮುಂದುವರೆಸುತ್ತಾ, ‘ಒಡೆಯ ನಾನು ಹೇಳಿದುದು ದಿಟ, ಗಂಧರ್ವ ಸ್ತ್ರೀಯೊಬ್ಬಳು ವಿರಾಟನ ರಾಣಿಯ ಸೇವಕಿಯಾಗಿದ್ದಳು. ಕೀಚಕನು ಅವಳನ್ನು ಮೋಹಿಸಿದನು. ನಾಟ್ಯ ಗೃಹಕ್ಕೆ ಬರುವಂತೆ ಸೂಚನೆ ಕೊಟ್ಟು ಗಂಧರ್ವರು ಕೀಚಕನನ್ನು ಉಪಕೀಚಕರನ್ನು ಸಂಹರಿಸಿದರು” ಎಂದು ಹೇಳಿದನು.

ಅರ್ಥ:
ಅಹುದು: ಹೌದು, ಸರಿ; ಜೀಯ: ದೊರೆ, ಅವಧರಿಸು: ಕೇಳು; ಒಡೆಯ; ದಿವಿಜ: ದೇವತೆ; ಮಹಿಳೆ: ಸ್ರೀ; ಓಲೈಸು: ಸೇವೆಮಾಡು, ಉಪಚರಿಸು; ಬಳಿಕ: ನಂತರ; ಓಲಗ: ವಾಸಸ್ಥಾನ; ಸತಿ: ಸ್ತ್ರೀ; ಕುಹಕಿ: ಮೋಸಗಾರ; ಕಂಡಳು: ನೋಡು; ನಾಟ್ಯ: ನೃತ್ಯ; ಗೃಹ: ಮನೆ; ಸೂಚನೆ: ನಿರ್ದೇಶನೆ; ನಿಮಿಷ: ಕಾಲದ ಒಂದು ಪ್ರಮಾಣ; ರಹ: ಗುಟ್ಟು, ಆಶ್ಚರ್ಯ; ಸವರು: ಸಾಯಿಸು; ಅಖಿಳ: ಸರ್ವ, ಎಲ್ಲಾ;

ಪದವಿಂಗಡಣೆ:
ಅಹುದು +ಜೀಯ+ಅವಧರಿಸು +ದಿವಿಜರ
ಮಹಿಳೆ+ಓಲೈಸಿದಳು+ ಮತ್ಸ್ಯನ
ಮಹಿಳೆಯನು +ಬಳಿಕ+ಆಕೆಯ+ಓಲಗದೊಳಗೆ+ ಸತಿಯಿರಲು
ಕುಹಕಿ+ ಕಂಡಳುಪಿದರೆ+ ನಾಟ್ಯದ
ಗೃಹಕೆ+ ಸೂಚನೆಗೊಟ್ಟು +ನಿಮಿಷಕೆ
ರಹವ+ ಮಾಡಿದರ್+ಅವರು +ಸವರಿದರ್+ಅಖಿಳ +ಕೀಚಕರ

ಅಚ್ಚರಿ:
(೧) ಸತಿ, ಮಹಿಳೆ – ಸಮನಾರ್ಥಕ ಪದ
(೨) ಮಹಿಳೆ – ೨, ೩ ಸಾಲಿನ ಮೊದಲ ಪದ