ಪದ್ಯ ೬೬: ಮಾದ್ರೀದೇವಿಗೆ ಎಷ್ಟು ಮಕ್ಕಳು ಹುಟ್ಟಿದರು?

ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ನಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ (ಆದಿ ಪರ್ವ, ೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ಅವರಿಬ್ಬರೂ ಭೂಮಿಗೆ ಬಂದು ಮಾದ್ರಿಗೆ ಮಕ್ಕಳನ್ನು ಕರುಣಿಸಿ ಆಕಾಶಕ್ಕೆ ಹೋದರು. ಅರ್ಜುನನು ಜನಿಸಿದ ಒಂದು ವರ್ಷದ ನಂತರ ಮಾದ್ರಿಗೆ ಇಬ್ಬರು ಅವಳಿ ಮಕ್ಕಳು ಹುಟ್ಟಿದರು. ಋಷಿಗಳು ಅವರನ್ನು ಹೊಗಳಿದರು.

ಅರ್ಥ:
ಬಂದು: ಆಗಮಿಸು; ಮಹೀತಳ: ಭೂಮಿ; ಇಂದುವದನೆ: ಸುಂದರಿ, ಸ್ತ್ರಿ; ಸುತ: ಮಕ್ಕಳು; ಮಂದಗಮನೆ: ನಿಧಾನವಾಗಿ ಚಲಿಸುವ, ಸುಂದರಿ; ಕಳುಹಿ: ಬೀಳ್ಕೊಂಡು; ಹಾಯ್ದು: ಹಾರು; ಗಗನಮಂಡಲ: ಆಗಸ; ಮಂಡಲ: ವರ್ತುಲಾಕಾರ; ವರುಷ: ಸಂವತ್ಸರ; ಬಳಿಕ: ನಂತರ; ಅವತರಿಸು: ಹುಟ್ಟು; ವೃಂದ: ಗುಂಪು; ನೆರೆ: ಪಕ್ಕ, ಪಾರ್ಶ್ವ; ಪತಿಕರಿಸು: ಅನುಗ್ರಹಿಸು; ಕೊಂಡಾಡು: ಹೊಗಳು; ಕುಮಾರ: ಮಕ್ಕಳು;

ಪದವಿಂಗಡಣೆ:
ಬಂದರ್+ಅವರಿಬ್ಬರು+ ಮಹೀತಳಕ್
ಇಂದುವದನೆಗೆ +ಸುತರನ್+ಇತ್ತರು
ಮಂದಗಮನೆಯ +ಕಳುಹಿ +ಹಾಯ್ದರು+ ಗಗನ +ಮಂಡಲಕೆ
ಒಂದು +ವರುಷಕೆ +ಕಿರಿಯರ್+ಅರ್ಜುನ
ನಿಂದ+ ಬಳಿಕ್+ಅವತರಿಸಿದರು +ಮುನಿ
ವೃಂದ +ನೆರೆ +ಪತಿಕರಿಸಿ +ಕೊಂಡಾಡಿತು +ಕುಮಾರಕರ

ಅಚ್ಚರಿ:
(೧) ಮಾದ್ರೀ ದೇವಿಯನ್ನು ಕರೆದ ಪರಿ – ಇಂದುವದನೆ, ಮಂದಗಮನೆ

ಪದ್ಯ ೩೦: ಯೋಜನಗಂಧಿಯಲ್ಲಿ ಯಾರು ಜನಿಸಿದರು?

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ (ಆದಿ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಯೋಜನಗಂಧಿಗೆ ಸಂತನುವಿನಿಂದ ಚಂದ್ರವಮ್ಶಕ್ಕೆ ಕಲ್ಪವೃಕ್ಷದಂತಿರುವವರೂ, ಅಗ್ನಿಜ್ವಾಲೆಯಂತೆ ತೇಜಸ್ಸುಳ್ಳವರೂ ಆದ ಇಬ್ಬರು ಮಕ್ಕಳು ಜನಿಸಿದರು. ಅವರಿಗೆ ಜಾತಕರ್ಮವನ್ನು ಮಾಡಿ ಚಿತ್ರಾಂಗದ, ವಿಚಿತ್ರವೀರ್ಯ ಎಂಬ ಹೆಸರುಗಳನ್ನಿಟ್ಟರು.

ಅರ್ಥ:
ಬಳಿಕ: ನಂತರ; ಮಕ್ಕಳು: ಪುತ್ರ, ಸುತ; ಅವತರಿಸು: ಹುಟ್ಟು; ದೀಪ್ತ: ಪ್ರಕಾಶಉಳ್ಳ; ಜ್ವಲ: ಅಗ್ನಿಜ್ವಾಲೆ; ತೇಜ: ಪ್ರಕಾಶ; ಕಲ್ಪಭೂಜ: ಕಲ್ಪವೃಕ್ಷ: ಭೂಜ: ವೃಕ್ಷ; ಹಿಮಕರ: ಚಂದ್ರ; ಅನ್ವಯ: ವಂಶ; ಲಲಿತ: ಚೆಲುವು; ಮಂಗಳ: ಶುಭ; ಜಾತಕರ್ಮ: ಹುಟ್ಟಿದ ಮಗುವಿಗೆ ಮಾಡುವ ಒಂದು ಸಂಸ್ಕಾರ; ಆವಳಿ: ಸಾಲು; ನೃಪ: ರಾಜ; ತಿಲಕ: ಶ್ರೇಷ್ಠ; ನೆಗಳು: ಆಚರಿಸು, ಸಂಭವಿಸು; ನಾಮಕರಣ: ಹೆಸರಿಡುವುದು;

ಪದವಿಂಗಡಣೆ:
ಬಳಿಕ +ಯೋಜನಗಂಧಿಯಲಿ +ಮ
ಕ್ಕಳುಗಳ್+ಅವತರಿಸಿದರು +ದೀಪ್ತ
ಜ್ವಲನತೇಜರು +ಕಲ್ಪಭೂಜರು +ಹಿಮಕರಾನ್ವಯಕೆ
ಲಲಿತ +ಮಂಗಳ +ಜಾತಕರ್ಮಾ
ವಳಿಯ+ ಚಿತ್ರಾಂಗದನನ್+ಆ+ ನೃಪ
ತಿಲಕ +ನೆಗಳೆ +ವಿಚಿತ್ರವೀರ್ಯನ +ನಾಮಕರಣದಲಿ

ಅಚ್ಚರಿ:
(೧) ಮಕ್ಕಳನ್ನು ಹೊಗಳುವ ಪರಿ – ದೀಪ್ತಜ್ವಲನತೇಜರು ಕಲ್ಪಭೂಜರು ಹಿಮಕರಾನ್ವಯಕೆ

ಪದ್ಯ ೩೦: ವಂದಿ ಮಾಗಧರು ಏನೆಂದು ಹೊಗಳಿದರು?

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಮ್ದುದು ವಂದಿಜನಜಲಧಿ (ಶಲ್ಯ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಂದಿಗಳು ನುಡಿಯುತ್ತಾ ಜೀಯಾ, ಬುಧ, ಪುರೂರವ ಅವನ ಮಗ ಆಯು, ನಹುಷ, ಯಯಾತಿಗಳು ಅನುಭವಿಸಿದ ರಾಜ್ಯಭೋಗವನ್ನು ಅನುಭವಿಸಲು ನೀನು ಭೂಮಿಯಲ್ಲಿ ಅವತರಿಸಿರುವೆ. ಜೂಜಿನಲ್ಲಿ ಸೋತೆ, ಯುದ್ಧದಲ್ಲಿ ಕೌರವನು ಸೋಲುತ್ತಾನೆ, ನಿನ್ನ ಘನತೆಯನ್ನು ಯುದ್ಧದಲ್ಲಿ ತೋರಿಸು ಎಂದು ವಂದಿ ಮಾಗಧರು ಹೊಗಳಿದರು.

ಅರ್ಥ:
ಜೀಯ: ಒಡೆಯ; ಸುತ: ಮಗ; ಭೋಗ: ಸುಖವನ್ನು ಅನುಭವಿಸುವುದು; ನಿಧಿ: ಐಶ್ವರ್ಯ; ಅವತರಿಸು: ಕಾಣಿಸು; ಧರೆ: ಭೂಮಿ; ಜೀಯ: ಒಡೆಯ; ಜೂಜು: ಜುಗಾರಿ, ಸಟ್ಟ; ರಣ: ಯುದ್ಧ; ಆಯತಿ: ವಿಸ್ತಾರ; ಸಂಭಾಸಿವು: ಯೋಚಿಸು, ಯೋಚಿಸು; ವಂದಿ: ಹೊಗಳುಭಟ್ಟ; ಜಲಧಿ: ಸಾಗರ; ಜನ: ಮನುಷ್ಯ; ಜೇಯ: ಗೆಲುವು;

ಪದವಿಂಗಡಣೆ:
ಜೀಯ +ಬುಧನ +ಪುರೂರವನ+ ಸುತನ್
ಆಯುವಿನ +ನಹುಷನ+ ಯಯಾತಿಯದ್
ಆಯಭಾಗದ+ ಭೋಗ+ನಿಧಿ+ಅವತರಿಸಿದೈ+ ಧರೆಗೆ
ಜೇಯನ್+ಎನಿಸಿದೆ +ಜೂಜಿನಲಿ +ರಣ
ಜೇಯನಹನ್+ಈ +ಕೌರವನು+ ನಿನ್ನ್
ಆಯತಿಯ +ಸಂಭಾವಿಸೆಂದುದು +ವಂದಿ+ಜನಜಲಧಿ

ಅಚ್ಚರಿ:
(೧) ಜೇಯ ಪದದ ಬಳಕೆ – ೪, ೫ ಸಾಲು
(೨) ಬಹಳ ಹೊಗಳುಭಟರು ಎಂದು ಹೇಳಲು – ವಂದಿಜನಜಲಧಿ ಪದದ ಬಳಕೆ