ಪದ್ಯ ೪೪: ಧರ್ಮಜನು ತಮ್ಮ ಗೆಲುವಿಗೆ ಕಾರಣವನ್ನು ಹೇಗೆ ವಿವರಿಸಿದನು?

ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ (ಗದಾ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ಧರ್ಮಜನು, ನಿಮ್ಮ ಮಕ್ಕಲಲ್ಲಿ ಎಂತಹ ಅವಗುಣ? ನಮ್ಮ ಅನೇಕ ಜನ್ಮಗಲ ಸಂಚಿತ ಕರ್ಮಫಲವೇ ಅವನಿಂದ ಇಂತಹದನ್ನು ಮಾಡಿಸಿತು. ರಾಜ್ಯ ಭ್ರಷ್ಟರಾದೆವು. ಅನೇಕ ಜನ್ಮಗಳ ಸಂಚಿತ ಸುಕೃತ ಫಲವೇ ನಮ್ಮನ್ನು ಗೆಲ್ಲಿಸಿತು ಎಂದು ಧರ್ಮಜನು ನುಡಿದನು.

ಅರ್ಥ:
ಅವಗುಣ: ದುರ್ಗುಣ, ದೋಷ; ಚಿರಂತನ: ಯಾವಾಗಲು; ಭವ: ಇರುವಿಕೆ, ಅಸ್ತಿತ್ವ; ಕಿಲ್ಭಿಷ: ಪಾಪ; ಕರ್ಮಪಾಕ: ಕರ್ಮಫಲ; ಪ್ರವರ: ಪೀಳಿಗೆ, ವಂಶ; ಸವ್ಯ: ದಕ್ಷಿಣ ಭಾಗ, ತೆಂಕಣ ದಿಕ್ಕು; ಮಾತ್ರ: ಸವ್ಯಪದೇಶ: ಕಪಟ, ಸಂಚಿಕೆ; ರಚಿಸು: ನಿರ್ಮಿಸು; ರಾಜ್ಯ: ರಾಷ್ಟ್ರ; ವಿಭ್ರಂಶ: ಕೆಳಕ್ಕೆ ಬೀಳುವುದು, ಪತನ; ಸುಕೃತ: ಒಳ್ಳೆಯ; ಉದಯ: ಹುಟ್ಟು; ಪ್ರಭಾವ: ಬಲ, ಪರಾಕ್ರಮ; ತಿರುಗು: ಸುತ್ತು; ನಯ: ನುಣುಪು, ಮೃದುತ್ವ; ಸುತ: ಮಗ; ನುಡಿ: ವಚನ;

ಪದವಿಂಗಡಣೆ:
ಅವರೊಳ್+ಅವಗುಣವೇ +ಚಿರಂತನ
ಭವದ +ಕಿಲ್ಬಿಷ +ಕರ್ಮಪಾಕ
ಪ್ರವರ +ದುರಿಯೋಧನನ +ಸವ್ಯಪದೇಶ+ಮಾತ್ರದಲಿ
ಎವಗೆ +ರಚಿಸಿತು +ರಾಜ್ಯ+ವಿಭ್ರಂ
ಶವನು +ತತ್+ಸುಕೃತೋದಯ+ಪ್ರಾ
ಭವವೆ+ ತಿರುಗಿಸಿತೆಂದು+ ನಯದಲಿ +ಧರ್ಮಸುತ +ನುಡಿದ

ಅಚ್ಚರಿ:
(೧) ದುರ್ಯೋಧನನ ಸ್ವಭಾವದ ಕಾರಣ – ಚಿರಂತನ ಭವದ ಕಿಲ್ಬಿಷ ಕರ್ಮಪಾಕ ಪ್ರವರ ದುರಿಯೋಧನನ ಸವ್ಯಪದೇಶ

ಪದ್ಯ ೪೩: ಧೃತರಾಷ್ಟ್ರನು ಧರ್ಮಜನಿಗೆ ಏನೆಂದು ಉಪದೇಶಿಸಿದನು?

ಕುರುಮಹೀಪತಿ ನಮ್ಮ ಪೂರ್ವಜ
ರರಸು ತತ್ಸಂತಾನ ಪಾರಂ
ಪರೆಯನಳಿವಡೆ ಕೆಲಬರಾದರು ಹೋದರವರಿಂದು
ಭರತಕುಲವನು ಹೊರೆದು ಮಿಗೆ ವಿ
ಸ್ತರಿಸು ಮಗನೆ ಸುಯೋಧನಾದ್ಯರ
ದುರುಳುತನದವಗುಣವನೆಮ್ಮನು ನೋಡಿ ಮರೆಯೆಂದ (ಗದಾ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ನಮ್ಮ ಪೂರ್ವಜರಲ್ಲಿ ಕುರು ಮಹಾರಾಜನು ಪ್ರಸಿದ್ಧನಾದವನು. ಪರಂಪರೆಯಿಂದ ಬೆಳೆದ ಅವನ ವಮ್ಶವನ್ನು ಕೆಡಿಸಲು ಕೆಲವರು ಯತ್ನಿಸಿದರು. ಅವರೆಲ್ಲರೂ ಈಗ ಕಾಲಾತೀತರಾಗಿದ್ದಾರೆ; ಧರ್ಮಜ, ನಮ್ಮನ್ನು ನೋಡಿ ಕೌರವನ ದುರ್ಗುಣಗಳನ್ನು ಮರೆತು/ಕ್ಷಮಿಸಿ ವಂಶವನ್ನು ಬೆಳೆಸು ಎಂದು ಧೃತರಾಷ್ಟ್ರನು ಧರ್ಮಜನಿಗೆ ಹೇಳಿದನು.

ಅರ್ಥ:
ಮಹೀಪತಿ: ರಾಜ; ಪೂರ್ವಜ: ಹಿಂದಿನವರು; ಅರಸು: ರಾಜ; ಸಂತಾನ: ಮಕಳು; ಪಾರಂಪರೆ: ಅನೂಚಾನವಾಗಿ ಬಂದಿರುವುದು, ಸಂಪ್ರದಾಯ; ಕೆಲಬರ: ಕೆಲವರು; ಹೋಗು: ತೆರಳು; ಕುಲ: ವಂಶ; ಹೊರೆ: ರಕ್ಷಿಸು; ಮಿಗೆ: ಅಧಿಕ; ವಿಸ್ತರ: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಮಗ: ಪುತ್ರ; ಆದಿ: ಮುಂತಾದ; ದುರುಳ: ದುಷ್ಟ; ಅವಗುಣ: ದುರ್ಗುಣ, ದೋಷ; ನೋಡು: ವೀಕ್ಷಿಸು; ಮರೆ: ನೆನಪಿನಿಂದ ದೂರವಿಡು; ಅಳಿ: ನಾಶ;

ಪದವಿಂಗಡಣೆ:
ಕುರು+ಮಹೀಪತಿ+ ನಮ್ಮ +ಪೂರ್ವಜರ್
ಅರಸು +ತತ್ಸಂತಾನ +ಪಾರಂ
ಪರೆಯನ್+ಅಳಿವಡೆ+ ಕೆಲಬರ್+ಆದರು +ಹೋದರವರಿಂದು
ಭರತಕುಲವನು +ಹೊರೆದು +ಮಿಗೆ +ವಿ
ಸ್ತರಿಸು+ ಮಗನೆ +ಸುಯೋಧನಾದ್ಯರ
ದುರುಳುತನದ್+ಅವಗುಣವನ್+ಎಮ್ಮನು+ ನೋಡಿ +ಮರೆಯೆಂದ

ಅಚ್ಚರಿ:
(೧) ಧೃತರಾಷ್ಟ್ರನು ಕ್ಷಮೆಯನ್ನು ಕೇಳುವ ಪರಿ – ಸುಯೋಧನಾದ್ಯರ ದುರುಳುತನದವಗುಣವನೆಮ್ಮನು ನೋಡಿ ಮರೆಯೆಂದ
(೨) ಮಹೀಪತಿ, ಅರಸು – ಸಮಾನಾರ್ಥಕ ಪದ

ಪದ್ಯ ೩೩: ಮೈತ್ರೇಯ ಮುನಿಗಳು ಕೌರವನಿಗೆ ಯಾವ ಶಾಪ ನೀಡಿದ್ದರು?

ಎಣಿಸಬಹುದೇ ನಿಮ್ಮ ನೃಪನವ
ಗುಣವನನ್ಯಾಯ ಪ್ರಬಂಧಕೆ
ಗಣನೆಯುಂಟೇ ಭೀಮಗಡ ಖಂಡಿಸಿದ ತೊಡೆಗಳನು
ಕೆಣಕಿದನು ಮೈತ್ರೇಯನನು ನೃಪ
ನಣಕಿಸಲು ಶಪಿಸಿದನು ತೊಡೆಗಳ
ಹಣಿದವಾಡಲಿಯೆಂದನದು ತಪ್ಪುವುದೆ ಋಷಿವಚನ (ಗದಾ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವನ ಅವಗುಣ ಒಂದೇ ಎರಡೇ ಅವು ಎಣಿಸಲಾರದಷ್ಟಿವೆ. ಭೀಮ ತೊಡೆಗಳನ್ನು ಮುರಿದ ತಾನೆ? ಕೌರವನು ಮೈತ್ರೇಯನನ್ನು ಅಣಕಿಸಿದಾಗ ಅವನು “ನಿನ್ನ ತೊಡೆಗಳು ಮುರಿದುಬೀಳಲಿ” ಎಂದು ಶಪಿಸಿದ್ದನ್ನು ಮರೆತೆಯಾ? ಋಷಿವಾಕ್ಯವು ತಪ್ಪಾಗಲು ಸಾಧ್ಯವೇ ಎಂದು ಪ್ರಶ್ನಿಸಿದನು.

ಅರ್ಥ:
ಎಣಿಸು: ಲೆಕ್ಕಹಾಕು; ನೃಪ: ರಾಜ; ಅವಗುಣ: ಕೆಟ್ಟ ನಡತೆ; ಪ್ರಬಂಧ: ಬಾಂಧವ್ಯ, ಕಟ್ಟು, ವ್ಯವಸ್ಥೆ; ಗಣನೆ:ಲೆಕ್ಕ; ಗಡ: ಅಲ್ಲವೆ, ತ್ವರಿತವಾಗಿ; ಖಂಡಿಸು: ಕಡಿ, ಕತ್ತರಿಸು; ತೊಡೆ: ಜಂಘೆ; ಕೆಣಕು: ರೇಗಿಸು; ಅಣಕಿಸು: ಹಂಗಿಸು; ಶಪಿಸು: ನಿಂದಿಸು, ತೆಗಳು; ಹಣಿ: ಬಾಗು, ಮಣಿ; ತಪ್ಪುವುದೆ: ನಡೆಯದೇ ಇರುವುದೆ; ವಚನ: ಮಾತು;

ಪದವಿಂಗಡಣೆ:
ಎಣಿಸಬಹುದೇ+ ನಿಮ್ಮ+ ನೃಪನ್+ಅವ
ಗುಣವನ್+ಅನ್ಯಾಯ +ಪ್ರಬಂಧಕೆ
ಗಣನೆಯುಂಟೇ +ಭೀಮಗಡ+ ಖಂಡಿಸಿದ +ತೊಡೆಗಳನು
ಕೆಣಕಿದನು+ ಮೈತ್ರೇಯನನು +ನೃಪನ್
ಅಣಕಿಸಲು +ಶಪಿಸಿದನು +ತೊಡೆಗಳ
ಹಣಿದವಾಡಲಿ+ಎಂದನ್+ಅದು +ತಪ್ಪುವುದೆ +ಋಷಿವಚನ

ಅಚ್ಚರಿ:
(೧) ಎಣಿಸಬಹುದೇ, ಗಣನೆಯುಂಟೆ – ಸಾಮ್ಯಾರ್ಥ ಪದ

ಪದ್ಯ ೨೮: ಧೃಷ್ಟದ್ಯುಮ್ನನು ಸಾತ್ಯಕಿಯನ್ನು ಹೇಗೆ ಹಳಿದನು?

ತನ್ನೊಳಿದ್ದವಗುಣವ ನೋಡದೆ
ಚುನ್ನವಾಡುವನಿದಿರನೆಲವೋ
ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ
ನಿನ್ನೆ ಶಸ್ತ್ರವ ಬಿಸುಟ ಯೋಗವಿ
ಪನ್ನನನು ನೀನೇನ ಮಾಡಿದೆ
ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ (ದ್ರೋಣ ಪರ್ವ, ೧೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ತನ್ನ ಅವಗುಣವನ್ನು ನೋಡಿಕೊಳ್ಳದೇ ಪರರನ್ನು ಹೀಗಳೆದು ಮಾತಾಡುತ್ತೀಯಾ? ಎಲೋ ಬಾಹಿರ ನಿನ್ನಮ್ಥ ಭಂಡರು ಭೂಮಿಯ ಮೇಲೆ ಯಾರಿದ್ದಾರೆ? ಶಸ್ತ್ರವನ್ನು ಬಿಟ್ಟು ಯೋಗದಲ್ಲಿದ್ದ ಭೂರಿಶ್ರವನನ್ನು ನೀನು ನಿನ್ನೆಯ ದಿನ ಏನು ಮಾದಿದೆ? ನಿನ್ನನ್ನು ಪರೀಕ್ಷಿಸಿಕೊಳ್ಳದೆ ಪರರನ್ನು ಏಕೆ ಹಳೆಯುತ್ತಿರುವೆ ಎಂದನು.

ಅರ್ಥ:
ಅವಗುಣ: ದುರ್ಗುಣ, ದೋಷ; ನೋಡು: ವೀಕ್ಷಿಸು; ಚುನ್ನ: ನಿಂದೆ, ಬಯ್ಗಳು; ಇದಿರು: ಎದುರು; ಹೋಲು: ಸದೃಶವಾಗು; ಬಾಹಿರ: ಹೊರಗಿನವ; ಭಂಡ: ನಾಚಿಕೆ, ಲಜ್ಜೆ; ಅವನಿ: ಭೂಮಿ; ಶಸ್ತ್ರ: ಆಯುಧ; ಬಿಸುಟು: ಹೊರಹಾಕು; ಯೋಗ: ಏಕಾಗ್ರತೆ, ಧ್ಯಾನ, ಉಪಾಸನಾ ಭಾಗ; ವಿಪನ್ನ: ದುರ್ಗತಿಯಲ್ಲಿರುವವನು; ಶೋಧಿಸು: ಚೊಕ್ಕಟಗೊಳಿಸು, ಶುದ್ಧಿಮಾಡು; ಬಳಿಕ: ನಂತರ; ಪರ: ದೂರವಾದುದು; ಹಳಿ: ನಿಂದೆ;

ಪದವಿಂಗಡಣೆ:
ತನ್ನೊಳಿದ್ದ್+ಅವಗುಣವ +ನೋಡದೆ
ಚುನ್ನವಾಡುವನ್+ಇದಿರನ್+ಎಲವೋ
ನಿನ್ನ+ ಹೋಲುವರಾರು +ಬಾಹಿರ +ಭಂಡರ್+ಅವನಿಯಲಿ
ನಿನ್ನೆ +ಶಸ್ತ್ರವ +ಬಿಸುಟ +ಯೋಗ+ವಿ
ಪನ್ನನನು +ನೀನ್+ಏನ +ಮಾಡಿದೆ
ನಿನ್ನ +ಶೋಧಿಸಿ +ಬಳಿಕ +ಪರರನು+ ಹಳಿವುದೇನೆಂದ

ಅಚ್ಚರಿ:
(೧) ಶುಭಾಷಿತ ನುಡಿ – ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ

ಪದ್ಯ ೨೬: ಕರ್ಣನು ಏಕೆ ದುಃಖಿಸಿದನು?

ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣಶತವ ನೋಡದೆ ನಿಮ್ಮ ಮೆರೆಯೆಂದ (ದ್ರೋಣ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಪರಾಕ್ರಮದ ಗರ್ವವು ಸರಿಸಮಾನ ಸ್ಕಂಧರಲ್ಲಿ ಒಪ್ಪತಕ್ಕದ್ದು. ವಾದ ಜಗಳವೂ ಸರಿಯಾದುದು, ಆದರೆ ಗುರುವಿನಲ್ಲಿ ದೈವದಲ್ಲಿ ನಾನು ತಾನೆಂಬ ಸೆಣಸು ಸರಿಯಲ್ಲ. ಕ್ರಮ, ಹಿರಿಮೆಗಳ ನೀತಿಯನ್ನರಿಯದೆ ಸಭೆಯಲ್ಲಿ ನಿಮ್ಮನ್ನು ಹೀಯಾಳಿಸಿ ಅಪಮಾನಿಸಿದೆ, ಈ ಖೂಳನ ನೂರು ಅವಗುಣಗಳನ್ನು ಮನಸ್ಸಿಗೆ ತಂದುಕೊಳ್ಳದೆ, ನಿಮ್ಮ ಹಿರಿಮೆಯನ್ನು ತೋರಿಸೆ ನನ್ನನ್ನು ಕ್ಷಮಿಸಬೇಕು ಎಂದು ಕರ್ಣನು ಭೀಷ್ಮನನ್ನು ಬೇಡಿಕೊಂಡನು.

ಅರ್ಥ:
ಆಳುತನ: ಪರಾಕ್ರಮ; ದೊಠಾರ: ಬಲಿಷ್ಠ; ಆಳು: ಸೇವಕ; ಸೆಣಸು: ಸ್ಪರ್ಧೆ, ಪೈಪೋಟಿ; ಒಳ್ಳಿತು: ಒಪ್ಪು; ಮೇಳ: ಗುಂಪು; ಗುರು: ಆಚಾರ್ಯ; ದೈವ: ಭಗವಂತ; ಕಟ್ಟು: ಬಂಧಿಸು; ಬಿರುದು: ಗೌರವ ಸೂಚಕ ಪದ; ಹಾಳಿ: ಕ್ರಮ, ರೀತಿ, ಪ್ರಕಾರ; ಹಸುಗೆ: ವಿಭಾಗ, ಹಂಚಿಕೆ, ಪಾಲು; ಅರಿ: ತಿಳಿ; ಹೀಹಾಳಿ: ತೆಗಳಿಕೆ, ಅವಹೇಳನ; ಹಸುಗೆ: ವಿಭಾಗ, ಹಂಚಿಕೆ, ಪಾಲು; ಕೆಡಿಸು: ಹಾಳುಮಾದು; ಸಭೆ: ದರ್ಬಾರು; ಖೂಳ: ದುಷ್ಟ; ಅವಗುಣ: ದುರ್ಗುಣ, ದೋಷ; ಶತ: ನೂರು; ನೋಡು: ವೀಕ್ಶಿಸು; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಆಳುತನದ +ದೊಠಾರತನ+ ಸರಿ
ಆಳಿನಲಿ+ ಸೆಣಸಾದೊಡ್+ಒಳ್ಳಿತು
ಮೇಳವೇ +ಗುರು +ದೈವದಲಿ +ಕಟ್ಟುವರೆ+ ಬಿರುದುಗಳ
ಹಾಳಿ +ಹಸುಗೆಯನ್+ಅರಿಯದ್+ಆ+ ಹೀ
ಹಾಳಿ+ಕೆಡಿಸಿದೆನ್+ಅಂದು +ಸಭೆಯಲಿ
ಖೂಳನ್+ಅವಗುಣ+ಶತವ +ನೋಡದೆ +ನಿಮ್ಮ +ಮೆರೆಯೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಳಿ ಹಸುಗೆಯನರಿಯದಾ ಹೀಹಾಳಿಗೆಡಿಸಿದೆ

ಪದ್ಯ ೭೨: ಕೃಷ್ಣನ ಸ್ಥಾನ ಎಂತಹುದು?

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವಾದಾವುದ ಕಡೆಗೆ ಹಲುಬುವೆನು (ಭೀಷ್ಮ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ನಾನೋ ಸಣ್ಣ ಕೀಟ, ಕೃಷ್ಣನೋ ಮೇರು ಪರ್ವತ, ನಾನೋ ಮಿಂಚುಹುಳ, ಕೃಷ್ಣನೋ ಕೋಟಿ ಸೂರ್ಯರ ಪ್ರಕಾಶವುಳ್ಳವನು. ನರಮೃಗಾಧಮನಾದ ನಾನೆಲ್ಲಿ, ಪರಮತತ್ವವಾದ ಅವನೆಲ್ಲಿ? ಹುಚ್ಚನಾದ ನನ್ನ ಅವಗುಣವನ್ನು ಹೇಗೆ ಹಳಿದುಕೊಳ್ಳಲಿ, ಏನೆಂದು ಬೇಡಲಿ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಮಹತ್ವ: ಮುಖ್ಯವಾದ; ಗಿರಿ: ಬೆಟ್ಟ; ಮಿಂಚುಬುಳು: ಮಿಂಚುಹುಳ; ಕಿರಣ: ಪ್ರಕಾಶ; ಹೊಳಹು: ಕಾಂತಿ; ಸೂರಿಯರು: ಸೂರ್ಯ, ರವಿ; ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು; ಉನ್ನತ: ಎತ್ತರದ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ; ಅಕಟ: ಅಯ್ಯೋ; ಮರುಳು: ಮೂಢ; ಅವಗುಣ: ದುರ್ಗುಣ, ದೋಷ; ಕಡೆಗೆ: ಕೊನೆಗೆ; ಹಲುಬು: ಬೇಡಿಕೋ, ದುಃಖಪಡು;

ಪದವಿಂಗಡಣೆ:
ನೊರಜು +ತಾನೆತ್ತಲು +ಮಹತ್ವದ
ಗಿರಿಯದೆತ್ತಲು +ಮಿಂಚುಬುಳುವಿನ
ಕಿರಣವೆತ್ತಲು +ಹೊಳಹಿದೆತ್ತಲು +ಕೋಟಿಸೂರಿಯರ
ನರ+ಮೃಗ+ಅಧಮನ್+ಎತ್ತಲ್+ಉನ್ನತ
ಪರಮತತ್ವವಿದ್+ಎತ್ತಲ್+ಅಕಟಾ
ಮರುಳು+ ನನ್ನ್+ಅವಗುಣವ್+ಅದಾವುದ +ಕಡೆಗೆ +ಹಲುಬುವೆನು

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜು ತಾನೆತ್ತಲು ಮಹತ್ವದ ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ

ಪದ್ಯ ೧೨: ಶಿಶುಪಾಲನು ಭೀಷ್ಮರ ನಾಲಗೆಯನ್ನು ಏಕೆ ಸುಡಬೇಕೆಂದನು?

ಅವಗುಣದೊಳುದ್ಭಾವಿಸುವೆ ಗುಣ
ನಿವಹವನು ರಾಜಾಧಮರು ಯಾ
ದವರು ಪೂಜಾರುಹರೆ ಸುಡು ಸುಡು ನಿನ್ನ ನಾಲಗೆಯ
ಸವಿನುಡಿಯ ದುರ್ವ್ಯಸನಿ ತೊಂಡಿನ
ತವರು ಮನೆ ಬಾಹಿರರಿಗಾಶ್ರಯ
ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ (ಸಭಾ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲವೋ ಭೀಷ್ಮ, ಎಲ್ಲಿ ಗುಣಗಳಿಲ್ಲವೋ ಅಲ್ಲಿ ನೀನು ಗುಣಗಳನ್ನು ಕಾಣುತ್ತಿರುವೆ ಅದನ್ನು ಎತ್ತಿ ಹಿಡಿಯುತ್ತಿರುವೆ, ಯಾದವರು ರಾಜರೆಲ್ಲೆಲ್ಲಾ ಅಧಮರು, ಅವರು ಅಗ್ರಪೂಜೆಗೆ ಅರ್ಹರೇ? ನಿನ್ನ ನಾಲಗೆಯನ್ನು ಸುಡಬೇಕು, ಅಧಮರನ್ನು ಹೊಗಳುವ ದುಶ್ಚಟ ನಿನಗಿದೆ, ಸೊಕ್ಕಿನ ಮಾತಿಗೆ ನೀನೇ ತವರುಮನೆ, ಯಾವುದಕ್ಕೂ ಸಲ್ಲದವರಿಗೆ ಆಶ್ರಯನೀಡುವ ಮೆನೆ ಆಗಿದೆ. ನಿನ್ನನ್ನು ಇಲ್ಲಿ ಕೊಲ್ಲುವವರಿಲ್ಲವಲ್ಲಾ ಎಂದು ಭೀಷ್ಮರನ್ನು ತೆಗಳಿದನು.

ಅರ್ಥ:
ಅವಗುಣ: ಗುಣಹೀನತೆ; ಗುಣ: ಸ್ವಭಾವ; ಉದ್ಭಾವಿಸು: ಚೆನ್ನಾಗಿ ತಿಳಿ; ನಿವಹ: ಗುಂಪು; ರಾಜ: ನೃಪ; ಅಧಮ: ಕೀಳು ೨ ನೀಚ; ಪೂಜ: ಆರಾಧನೆ; ಅರುಹ: ಅರ್ಹ; ಸುಡು: ದಹಿಸು; ನಾಲಗೆ: ಜಿಹ್ವೆ; ಸವಿ: ಒಳ್ಳೆಯ; ನುಡಿ: ಮಾತು; ದುರ್ವ್ಯಸನಿ: ಕೆಟ್ಟ ಅಭ್ಯಾಸ; ತೊಂಡು: ಉದ್ಧಟತನ, ದುಷ್ಟತನ; ತವರು: ಹುಟ್ಟಿದ ಮನೆ; ಮನೆ: ಆಲಯ; ಬಾಹಿರ: ಹೊರಗೆ; ಆಶ್ರಯ: ಆಸರೆ, ಅವಲಂಬನೆ; ಭವನ: ಆಲಯ; ಖಳ: ದುಷ್ಟ; ಅಧಿದೈವ: ಆರಾಧ್ಯ ಭಗವಂತ; ಕೊಲು: ಸಾಯಿಸು;

ಪದವಿಂಗಡಣೆ:
ಅವಗುಣದೊಳ್+ಉದ್ಭಾವಿಸುವೆ +ಗುಣ
ನಿವಹವನು+ ರಾಜ+ಅಧಮರು +ಯಾ
ದವರು +ಪೂಜ+ಅರುಹರೆ +ಸುಡು +ಸುಡು +ನಿನ್ನ +ನಾಲಗೆಯ
ಸವಿನುಡಿಯ +ದುರ್ವ್ಯಸನಿ+ ತೊಂಡಿನ
ತವರು+ ಮನೆ +ಬಾಹಿರರಿಗ್+ಆಶ್ರಯ
ಭವನ +ಖಳರ್+ಅಧಿದೈವ +ಭೀಷ್ಮನ +ಕೊಲುವರಿಲ್ಲೆಂದ

ಅಚ್ಚರಿ:
(೧) ಭೀಷ್ಮರನ್ನು ಬಯ್ಯುವ ಪರಿ – ಸುಡು ಸುಡು ನಿನ್ನ ನಾಲಗೆಯ, ಸವಿನುಡಿಯ ದುರ್ವ್ಯಸನಿ ತೊಂಡಿನ ತವರು ಮನೆ, ಬಾಹಿರರಿಗಾಶ್ರಯ ಭವನ ಖಳರಧಿದೈವ
(೨) ಮನೆ, ಭವನ – ಸಮನಾರ್ಥಕ ಪದ
(೩) ಅವಗುಣ, ಗುಣ – ವಿರುದ್ಧ ಪದ – ೧ ಸಾಲಿನ ಮೊದಲ ಮತ್ತು ಕೊನೆ ಪದಗಳು

ಪದ್ಯ ೪೨: ಯಾವ ಆಚಾರವು ಸತ್ಪುರುಷರಿಗೆ ಸಮ್ಮತ?

ಪರರು ಮಾಡಿದ ಸದ್ಗುಣಂಗಳ
ಮರೆಯೆಯೆಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮರೆಯೆಯೆಲೆ ನೀ ಮಾಡಿದು‍ಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಪರರು ಮಾಡಿದ ಸತ್ಕಾರ್ಯವನ್ನು, ಉಪಕಾರಗಳನ್ನು ಮರೆಯುದುವಿಲ್ಲ ತಾನೆ? ಪರರ ಅವಗುಣಗಳನ್ನು ಮರೆಯುವೆ ತಾನೆ? ಮಾನ್ಯರಾದವರಿಗೆ ನೀನು ಮಾಡಿದ ಅಪಚಾರವನ್ನು ಮರೆಯುವುದಿಲ್ಲ ತಾನೆ? ನೀನು ಪರರಿಗೆ ಮಾಡಿದ ಉಚಿತಾಚಾರವನ್ನು ಮರೆತುಬಿಡುವೆ ತಾನೆ, ಈ ಆಚಾರವು ಸತ್ಪುರುಷರಿಗೆ ಸಮ್ಮತವಾಗಿವೆ.

ಅರ್ಥ:
ಪರರು: ಬೇರೆಯವರು; ಮಾಡಿದ: ನಿರ್ವಹಿಸಿದ; ಸದ್ಗುಣ: ಒಳ್ಲೆಯ ನಡತೆ, ಕಾರ್ಯ; ಮರೆಯದೆ: ನೆನಪಿನಿಂದ ದೂರ ಮಾಡದೆ; ಅವಗುಣ: ಕೆಟ್ಟಗುಣ; ಮಾನ್ಯ: ಶ್ರೇಷ್ಠ; ಆಚಾರ:ಕಟ್ಟುಪಾಡು, ಸಂಪ್ರದಾಯ; ಸತ್ಪುರುಷ: ಒಳ್ಳೆಯ ವ್ಯಕ್ತಿ; ಅಭಿಮತ: ಅಭಿಪ್ರಾಯ; ಭೂಪಾಲ: ರಾಜ;

ಪದವಿಂಗಡಣೆ:
ಪರರು +ಮಾಡಿದ +ಸದ್ಗುಣಂಗಳ
ಮರೆಯೆಯೆಲೆ +ಪರರ್+ಅವಗುಣಂಗಳ
ಮರೆದು +ಕಳೆವಾ +ಮಾನ್ಯರಿಗೆ +ನೀ +ಮಾಡಿದ್+ಅವಗುಣವ
ಮರೆಯೆಯೆಲೆ +ನೀ +ಮಾಡಿದ್+ಉಚಿತವ
ಮರೆದು +ಕಳೆವ+ಆಚಾರವಿದು+ ಸ
ತ್ಪುರುಷರ್+ಅಭಿಮತವಿದು +ಕಣಾ +ಭೂಪಾಲ +ಕೇಳೆಂದ

ಅಚ್ಚರಿ:
(೧) ಮರೆ- ೨-೫ ಸಾಲಿನ ಮೊದಲ ಪದ
(೨) ಮರೆದು – ೩,೫ ಹಾಗು, ಮರೆಯೆಯೆಲೆ: ೨,೪ ಸಾಲಿನ ಮೊದಲ ಪದ
(೩) ಸದ್ಗುಣ, ಅವಗುಣ – ವಿರುದ್ಧ ಪದಗಳು