ಪದ್ಯ ೫: ಭೀಮನು ಯಾರನ್ನು ಯುದ್ಧಕ್ಕೆ ಕರೆದನು?

ಕಣೆಗೆದರಿ ದ್ರುಪದಾಂಕ ಗುರುವನು
ಕೆಣಕಿದನು ತತ್ತನುಜ ಭೀಷ್ಮನ
ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು
ರಣಕೆ ಕರೆದನು ಕೌರವಾನುಜ
ಗಣವನನಿಲತನೂಜನಿತ್ತಲು
ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ (ಭೀಷ್ಮ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ದೃಪದನು ಬಾಣವನ್ನು ಹೂಡಿ ದ್ರೋಣನನ್ನು ಕೆಣಕಿದನು. ಧೃಷ್ಟದ್ಯುಮ್ನ, ಭೀಷ್ಮ, ಲಕ್ಷಣ, ಅಭಿಮನ್ಯು, ಭಗದತ್ತ, ಘಟೋತ್ಕಚರು ಪರಸ್ಪರ ಎದುರಾಗಿ ಕಾಳಗಕ್ಕೆ ನಿಂತರು. ಭೀಮನು ಕೌರವನ ತಮ್ಮಂದಿರನ್ನು ಮೂದಲಿಸಿ ಯುದ್ಧಕ್ಕೆ ಕರೆದನು.

ಅರ್ಥ:
ಕಣೆ: ಬಾಣ; ಕೆದರು: ಹರಡು; ಅಂಕ: ಯುದ್ಧ; ಗುರು: ಆಚಾರ್ಯ; ಕೆಣಕು: ರೇಗಿಸು, ಪ್ರಚೋದಿಸು; ತನುಜ: ಮಗ; ಸೆಣಸು: ಹೋರಾಡು; ಮೂದಲಿಸು: ಹಂಗಿಸು; ರಣ: ಯುದ್ಧ; ಕರೆ: ಬರೆಮಾಡು; ಅನುಜ: ತಮ್ಮ; ಗಣ: ಗುಂಪು; ಅನಿಲ: ವಾಯು; ತನೂಜ: ಮಗ; ಹೆಣಗು: ಹೋರಾಡು; ಅವಗಡಿಸು: ಕಡೆಗಣಿಸು, ಸೋಲಿಸು;

ಪದವಿಂಗಡಣೆ:
ಕಣೆ+ಕೆದರಿ +ದ್ರುಪದ+ಅಂಕ+ ಗುರುವನು
ಕೆಣಕಿದನು +ತತ್ತ್+ಅನುಜ +ಭೀಷ್ಮನ
ಸೆಣಸಿದನು +ಮೂದಲಿಸಿದನು +ಲಕ್ಷಣನನ್+ಅಭಿಮನ್ಯು
ರಣಕೆ +ಕರೆದನು +ಕೌರವ+ಅನುಜ
ಗಣವನ್+ಅನಿಲ+ತನೂಜನ್+ಇತ್ತಲು
ಹೆಣಗಿದರು +ಭಗದತ್ತ+ ಭೀಮ+ಕುಮಾರರ್+ಅವಗಡಿಸಿ

ಅಚ್ಚರಿ:
(೧) ಯುದ್ಧವನ್ನು ವಿವರಿಸಲು ಬಳಸಿದ ಪದಗಳು – ಕೆಣಕಿದನು, ಸೆಣಸಿದನು, ಮೂದಲಿಸಿದನು, ಕರೆದನು, ಹೆಣಗಿದರು, ಅವಗಡಿಸು

ಪದ್ಯ ೧೭: ಧರ್ಮರಾಯನು ಶಲ್ಯನಿಗೆ ಏನು ಹೇಳಿದನು?

ಆದೊಡಾ ಕರ್ಣಂಗೆ ಸಾರಥಿ
ಯಾದಿರಾದೊಡೆ ಸಮರ ಮುಖದಲಿ
ವಾದ ತೇಜೋವಧೆಯ ಮಾಡುವುದವನನವಗಡಿಸಿ
ಕಾದಿ ಕೊಡುವುದು ನಾವು ಗೆಲುವವೊ
ಲಾದರಿಸುವುದು ನಮ್ಮನೆಂದಾ
ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿಸಿದನು (ಉದ್ಯೋಗ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶಲ್ಯನು ತಾನು ದುರ್ಯೋಧನನ ಬಳಿ ಸೇರಬೇಕೆಂದು ತನ್ನ ನಿಸ್ಸಾಹಯತೆಯನ್ನು ಹೇಳಿಕೊಳ್ಳಲು, ಧರ್ಮರಾಯನು ಹಾಗಾದರೆ ನೀವು ಮುಂದೆ ಯುದ್ಧಕಾಲದಲ್ಲಿ ಕರ್ಣನಿಗೆ ಸಾರಥಿಯಾದರೆ ಅವನೊಡನೆ ವಾದವನ್ನು ಮಾಡಿ ಅವನನ್ನು ಅವಮಾನ ಮಾಡಿರಿ, ಹೀಗೆ ಮಾಡಿದರೆ ನಮ್ಮನ್ನು ಯುದ್ಧದಲ್ಲಿ ಗೆಲಿಸಿದ ಹಾಗಾಗುತ್ತದೆ ಎಂದು ಧರ್ಮರಾಯನು ಹೇಳಿ ಶಲ್ಯನಿಗೆ ಸತ್ಕರಿಸಿ ಕಳುಹಿಸಿದನು.

ಅರ್ಥ:
ಆದೊಡಾ: ಹಾಗಾದರೆ; ಸಾರಥಿ: ರಥ ಓಡಿಸುವವ; ಸಮರ: ಯುದ್ಧ; ಮುಖದಲಿ: ಕಾಲದಲಿ; ವಾದ: ಮಾತು, ಪ್ರತಿಮಾತು; ತೇಜೋವಧೆ:ಅವಮಾನ; ಅವಗಡಿಸು: ಕಡೆಗಣಿಸು; ಕಾದಿ: ಜಗಳ; ಗೆಲುವು: ಜಯ; ಆದರಿಸು: ಸತ್ಕರಿಸು; ಮೇದಿನೀಪತಿ: ರಾಜ; ಸತ್ಕರಿಸು: ಗೌರವಿಸು; ಕಳುಹಿಸು: ಬೀಳ್ಕೊಡು;

ಪದವಿಂಗಡಣೆ:
ಆದೊಡಾ +ಕರ್ಣಂಗೆ +ಸಾರಥಿ
ಯಾದಿರ್+ಆದೊಡೆ +ಸಮರ +ಮುಖದಲಿ
ವಾದ +ತೇಜೋವಧೆಯ+ ಮಾಡುವುದ್+ಅವನನ್+ಅವಗಡಿಸಿ
ಕಾದಿ +ಕೊಡುವುದು +ನಾವು +ಗೆಲುವವೊಲ್
ಆದರಿಸುವುದು +ನಮ್ಮನ್+ಎಂದ್+ಆ
ಮೇದಿನೀಪತಿ+ ಶಲ್ಯನನು+ ಸತ್ಕರಿಸಿ +ಕಳುಹಿಸಿದನು

ಅಚ್ಚರಿ:
(೧) ಆದೊಡಾ, ಆದೊಡೆ – ಪದಗಳ ಬಳಕೆ
(೨) ಮಾಡುವುದು, ಕೊಡುವುದು, ಆದರಿಸುವುದು – ಪದಗಳ ಬಳಕೆ

ಪದ್ಯ ೩೪: ದ್ರೌಪದಿಯು ಅರ್ಜುನನ ಬಳಿ ಬಂದಾಗ ಅವಳಿಲ್ಲಿ ಮೂಡಿದ ಭಾವನೆಗಳಾವುವು?

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತ ಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ (ಆದಿ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸುಂದರವಾದ ಮಧುರಭಾವದಿಂದ ಕೂಡಿದ ಕಡೆಗಣ್ಣಿನನೋಟದಿಂದ ಅರ್ಜುನನನ್ನು ಎಷ್ಟು ಬಾರಿ ನೋಡಿದರು ಆ ಕಣ್ಣುಗಳಿಗೆ ಅದು ತಣಿಯಲೇಯಿಲ್ಲ. ರೋಮಾಂಚನಗೊಂಡ ಅವಳ ಸ್ವೇದಗಳಿಂದ ಆಕೆಯ ಮೈ ಒದ್ದೆಯಾಯಿತು. ನಾಚಿಕೆಯ ಭಾರಕ್ಕೆ ಅವಳ ಮನಸ್ಸು ಕುಗ್ಗಿತು, ಮನಸ್ಸು ಒಳ್ಳೆಯ ಭಾವನೆಗಳಿಂದ ಆವೃತಗೊಂಡಿತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಮಧುರ: ಸಿಹಿಯಾದ, ಸವಿ; ಅಪಾಂಗ: ಕಡೆಗಣ್ಣು; ಮುಕ್ಕುಳಿಸಿ: ಹೊರಹೊಮ್ಮು; ತಣಿ:ತೃಪ್ತಿಹೊಂದು, ಸಮಾಧಾನಹೊಂದು; ಕಂಗಳು: ಕಣ್ಣುಗಳು; ಉಬ್ಬಿದ: ಅಗಲವಾದ; ಪುಳಕ: ರೋಮಾಂಚನ; ಜಲ: ನೀರು; ಮುಳುಗು: ಒಳಸೇರು, ಕಾಣದಾಗು; ಮೂಡು: ತೋರು; ಮೈ: ಅಂಗ; ನಿತಂಬಿನಿ: ಚೆಲುವೆ; ತಳಿತ: ಹೊಂದು; ಲಜ್ಜ: ನಾಚಿಕೆ; ಭರ:ತುಂಬ; ಕುಸಿ: ಕೆಳಗೆ ಬೀಳು; ಅವ್ವಳಿಸು: ಅವ್ವಳಿಸು, ನುಗ್ಗು, ಪೀಡಿಸು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಆಂಗಿಕ:ಶರೀರಕ್ಕೆ ಸಂಬಂಧಿಸಿದ; ಉಳಿ:ಬಿಡು; ಸಾತ್ವಿಕ: ಒಳ್ಳೆಯ ಗುಣ; ಭಾವ: ಸಂವೇದನೆ, ಭಾವನೆ; ಅವಗಡಿಸು: ವ್ಯಾಪಿಸು, ಹರಡು; ಮಾನಿನಿ: ಹೆಂಗಸು, ಚೆಲುವೆ;

ಪದವಿಂಗಡಣೆ:
ಲಲಿತ +ಮಧುರ+ಅಪಾಂಗದಲಿ+ ಮು
ಕ್ಕುಳಿಸಿ+ ತಣಿಯವು +ಕಂಗಳ್+ಉಬ್ಬಿದ
ಪುಳಕ+ ಜಲದಲಿ +ಮುಳುಗಿ +ಮೂಡಿತು +ಮೈ +ನಿತಂಬಿನಿಯ
ತಳಿತ+ ಲಜ್ಜಾ+ಭರಕೆ+ ಕುಸಿದ
ವ್ವಳಿಸಿತ್+ಅಂತಃಕರಣವ್+ಆಂಗಿಕಲ್
ಉಳಿತ+ ಸಾತ್ವಿಕ+ ಭಾವವ್+ಅವಗಡಿಸಿತ್ತು +ಮಾನಿನಿಯ

ಅಚ್ಚರಿ:
(೧) ಮಾನಿನಿ, ಲಲಿತ – ಹೆಂಗಸನ್ನು ವರ್ಣಿಸುವ ಪದ, ಪದ್ಯದ ಮೊದಲ ಮತ್ತು ಕೊನೆ ಪದ
(೨) ಪ್ರಿಯನನ್ನು ನೋಡಿದಾಗ ಮೈಯಲ್ಲಿ ಮೂಡುವ ಭಾವನೆಗಳ ಸ್ಪಷ್ಟ ಚಿತ್ರಣ
(೩) ಮುಳುಗಿ, ಅವ್ವಳಿಸಿ, ಮೂಡು, ಮುಕ್ಕುಳಿಸಿ, ತಣಿ,ಅವಗಡಿಸು – ಭಾವನೆಗಳನ್ನು ಇಮ್ಮಡಿಗೊಳಿಸುವ ಪದಗಳ ಬಳಕೆ