ಪದ್ಯ ೨೦: ಭೀಮನು ಯಾರನ್ನು ತೆರಳಲು ಸೂಚಿಸಿದನು?

ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು (ದ್ರೋಣ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹೆದರುಪುಕ್ಕರಾದ ಸಾಮಮ್ತರ, ಹೊಟ್ಟೆ ಬೆಳೆಸಿದವರ, ಕಟವಾಯಿಗಳನ್ನು ಕೊಯ್ದುಹಾಕು, ಇವರು ತಲೆಗಳ್ಳರು, ತಲೆಯನ್ನುಳಿಸಿಕೊಳ್ಳಲು ಯುದ್ಧದಿಂದ ತಪ್ಪಿಸಿಕೊಳ್ಳಲು ಹವಣಿಸುವವರು, ಬಾಯಿಗೆ ಬಂದಮ್ತೆ ಕೂಗುವ ಇವರನ್ನು ಹೋಗಲು ಹೇಳು ಎನ್ನುತ್ತಾ ಭೀಮನು ಬಿಲ್ಲಿಗೆ ಹೆದೆಯೇರಿಸಿ ಯುದ್ಧಕ್ಕೆ ಬರಲು, ದ್ರುಪದ ನಕುಲ ಯುಧಿಷ್ಠಿರರೇ ಮೊದಲಾದವರೂ ಮುಂದೆ ಬಂದರು.

ಅರ್ಥ:
ಅಳ್ಳೆದೆ: ನಡುಗುವ ಎದೆ; ಮನ್ನೆಯ: ಮೌನ, ಗೌರವಕ್ಕೆ ಪಾತ್ರವಾದವ; ಒಗ್ಗು: ಗುಂಪು; ಡೊಳ್ಳು: ಹೊಟ್ಟೆ ಬೆಳಸಿದವ, ಚರ್ಮದ ವಾದ್ಯ, ಡೋಲು; ಕಟವಾಯಿ: ಬಾಯ ಕೊನೆ; ಕೊಯ್: ಸೀಳು; ತಲೆ: ಶಿರ; ಅರಿ: ಕತ್ತರಿಸು; ತರಚು: ಒರಟಾಗಿ ಕೀಳು, ಕೊಯ್ಯು, ತರಿ; ಕೆಡೆ: ಬೀಳು, ಕುಸಿ; ಹೋಗು: ತೆರಳು; ಹೇಳು: ತಿಳಿಸು; ಬಿಲ್ಲ: ಚಾಪ; ಚೌಪಟಮಲ್ಲ: ಪರಾಕ್ರಮ; ಹೊಕ್ಕು: ಸೇರು; ಭಟ: ಪರಾಕ್ರಮ, ಸೈನಿಕ; ಕವಿ: ಆವರಿಸು; ಆದಿ: ಮುಂತಾದ;

ಪದವಿಂಗಡಣೆ:
ಅಳ್ಳೆದೆಯ+ ಮನ್ನೆಯರನ್+ಒಗ್ಗಿನ
ಡೊಳ್ಳುಗರ +ಕಟವಾಯ +ಕೊಯ್ +ತಲೆ
ಗಳ್ಳರ್+ಇವದಿರು +ತರಿಚು+ಕೆಡೆವರ+ ಹೋಗ +ಹೇಳೆನುತ
ಬಿಲ್ಲಗೊಲೆಗ್+ಏರಿಸುತ +ಚೌಪಟ
ಮಲ್ಲ +ಹೊಕ್ಕನು +ಭೀಮ +ಭಟರ
ಲ್ಲಲ್ಲಿ+ ಕವಿದುದು +ದ್ರುಪದ +ನಕುಲ +ಯುಧಿಷ್ಠಿರಾದಿಗಳು

ಅಚ್ಚರಿ:
(೧) ಯುದ್ಧಕ್ಕೆ ಪ್ರಯೋಜನವಲ್ಲದವರು – ಅಳ್ಳೆದೆಯ, ಮನ್ನೆಯರ್, ಒಗ್ಗಿನ ಡೊಳ್ಳುಗರ, ಕಟವಾಯ

ಪದ್ಯ ೧೧: ಅರ್ಜುನನಿಗೇಕೆ ಅಳ್ಳೆದೆಯಾಯಿತು?

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ (ಕರ್ಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ದುಃಖವನ್ನು ತಡೆಯಲಾರದೆ, ನಮ್ಮ ಸೇನೆ ಸೋತು ಹಿಂದಿರುಗಲಿ, ಕೌರವನ ದುಮ್ಮಾನವಳಿದು ಸಂತೋಷ ಉಕ್ಕಲಿ, ನನ್ನ ಮನಸ್ಸಿನಲ್ಲಿ ಯಾವ ಅಸಂತೋಷವಿಲ್ಲ, ಹಸ್ತಿನಾವತಿಯಲ್ಲಿ ವಿಜಯಧ್ವಜವನ್ನು ಕೌರವನೇ ಕಟ್ಟಲಿ ನನಗೆ ಚಿಂತೆಯಿಲ್ಲ. ನಮ್ಮ ಅಣ್ಣನ ಸಿರಿಮುಖದಲ್ಲಿ ದುಃಖ ಮೂಡಿತೋ ಸ್ವರ್ಗದ ಸಂಧಾನವೋ ನಾನು ತಿಳಿಯೆನು, ಅಳ್ಳೆದೆಯಿಂದ ತೋಳಲುತ್ತಿದ್ದೇನೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸೇನೆ: ಸೈನ್ಯ; ಮುರಿ: ಸೀಳು; ದುಮ್ಮಾನ: ಚಿತ್ತಕ್ಷೋಭೆ, ದುಃಖ; ಹರಿ: ಕೊನೆಗೊಳ್ಳು; ಚಿತ್ತ: ಮನಸ್ಸು; ಗ್ಲಾನಿ: ಅಸಂತೋಷ, ಅವನತಿ; ಕಟ್ಟು: ನಿರ್ಮಿಸು; ಗುಡಿ: ಮನೆ, ಆಲಯ; ಗಜನಗರ: ಹಸ್ತಿನಾಪುರ; ನರೇಂದ್ರ: ರಾಜ; ಮೊಗ: ಮುಖ; ಸಿರಿ: ಐಶ್ವರ್ಯ; ಸಿರಿಮೊಗ: ಚಿನ್ನದಂತ ಮುಖ; ಮೇಣ್: ಮತ್ತು; ಸುರಪುರ: ಸ್ವರ್ಗ; ಸಂಧಾನ: ಹೊಂದಿಸುವುದು, ಸಂಯೋಗ; ಅಳ್ಳೆದೆ: ಹೆದರಿಕೆ, ನಡುಗುವ ಎದೆ; ಅರಿ: ತಿಳಿ;

ಪದವಿಂಗಡಣೆ:
ಸೇನೆ+ ಮುರಿಯಲಿ +ಕೌರವನ +ದು
ಮ್ಮಾನ +ಹರಿಯಲಿ +ನನಗೆ +ಚಿತ್ತ
ಗ್ಲಾನಿಯೆಳ್+ಅನಿತಿಲ್ಲ+ ಕಟ್ಟಲಿ +ಗುಡಿಯ +ಗಜನಗರ
ಆ +ನರೇಂದ್ರನ +ಸಿರಿಮೊಗಕೆ +ದು
ಮ್ಮಾನವೋ +ಮೇಣ್ +ಸುರಪುರಕೆ+ ಸಂ
ಧಾನವೋ +ನಾನರಿಯೆನ್+ಅಳ್ಳೆದೆಯಾದುದ್+ಎನಗೆಂದ

ಅಚ್ಚರಿ:
(೧) ದುಮ್ಮಾನವೋ, ಸಂಧಾನವೋ; ಮುರಿಯಲಿ, ಹರಿಯಲಿ – ಪ್ರಾಸ ಪದಗಳು
(೨) ಪರಾಕ್ರಮಿಯಾದ ಅರ್ಜುನನಿಗೂ ಅಳ್ಳೆದೆಯಾದುದು ಎಂದು ತಿಳಿಸುವ ಪದ್ಯ