ಪದ್ಯ ೧೮: ಅಶ್ವತ್ಥಾಮನು ಭೀಮನಿಗೆ ಹೇಗೆ ಉತ್ತರಿಸಿದನು?

ಎಲವೊ ಶರಸಂನ್ಯಾಸವನು ಕುರು
ತಿಲಿಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿಕಾರ್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ (ಗದಾ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ಎಲೇ ಭೀಮ ಕೌರವನ ಪ್ರಾಣವು ಹೋಗಲು, ನಾನು ಶಸ್ತ್ರ ಸಂನ್ಯಾಸವನ್ನು ಮಾಡಿದ್ದೇನೆ. ಈಗ ಅತ್ತು ಫಲವೇನು. ನಿನ್ನವರ ತಲೆಗಲನ್ನು ಹೊಯ್ದೆ, ನೀವು ಬೆದರಿ ಅಡಗಿಕೊಂಡು ಜೀವವನ್ನುಳಿಸಿಕೊಂದಿರಿ. ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುತ್ತಿದ್ದೆ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಶರ: ಬಾಣ; ಸಂನ್ಯಾಸ: ವಿರಕ್ತಿ, ವೈರಾಗ್ಯ; ತಿಲಕ: ಶ್ರೇಷ್ಠ; ಅವಸಾನ: ಸಾವು; ಅಳಲು: ದುಃಖಿಸು; ಫಲ: ಪ್ರಯೋಜನ; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತಲೆ: ಶಿರ; ಹೊಯ್ದೆ: ಹೊಡೆ; ಅಳುಕು: ಹೆದರು; ರಣ: ಯುದ್ಧ; ಅಡಗು: ಬಚ್ಚಿಟ್ಟುಕೋ; ಜೀವನ: ಪ್ರಾಣ; ಉಳುಹಿ: ಕಾಪಾಡು; ಕೊಲು: ಸಾಯಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಎಲವೊ +ಶರ+ಸಂನ್ಯಾಸವನು+ ಕುರು
ತಿಲಿಕನ್+ಅವಸಾನದಲಿ +ಮಾಡಿದೆನ್
ಅಳಲಿದಡೆ +ಫಲವೇನು+ ನಮ್ಮೀ +ಸ್ವಾಮಿಕಾರ್ಯದಲಿ
ತಲೆಯ +ಹೊಯ್ದೆನು +ನಿನ್ನವರ+ ನೀವ್
ಅಳುಕಿ +ರಣದೊಳಗ್+ಅಡಗಿ +ಜೀವವನ್
ಉಳುಹಿಕೊಂಡಿರಿ +ಕೊಲುವೆನ್+ಅಲ್ಲದೊಡ್+ಎಂದನಾ +ದ್ರೌಣಿ

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ನೀವಳುಕಿ ರಣದೊಳಗಡಗಿ ಜೀವವನುಳುಹಿಕೊಂಡಿರಿ
(೨) ದುರ್ಯೋಧನನನ್ನು ಕುರುತಿಲಕ ಎಂದು ಕರೆದಿರುವುದು

ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೮: ಧರ್ಮಜನೇಕೆ ನೊಂದುಕೊಂಡ?

ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ (ವಿರಾಟ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಧರ್ಮಜನು ಹನ್ನೆರಡು ವರ್ಷ ಕಾಲ ಕಾಡಿನಲ್ಲಿ ಕಂಗಾಲಾಗಿ ತಿರುಗಿದಿರಿ, ಈಗಲೋ ಸಾರ್ವಭೌಮರಾಗಿರಬೇಕಾದ ನೀವು, ಪರರು ಹೇಳಿದ ಕೆಲಸವನ್ನು ಮಾಡಬೇಕಾಗಿದೆ. ನೀವು ಬಹುವಾಗಿ ಬಳಲಿದ್ದೀರಿ, ನಿಮ್ಮನ್ನು ಈ ಕಷ್ಟಕ್ಕೀಡುಮಾದಿದ ನನಗಿಂತಲೂ ಹೆಚ್ಚಿನ ಪಾಪಿಗಳು ಈ ಲೋಕದಲ್ಲಿರುವವರೇ ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ತೊಳಲು: ಬವಣೆ, ಸಂಕಟ; ವರುಷ: ಸಂವತ್ಸರ; ಹಳುವು: ಕಾಡು; ಸೊಂಪು: ಸೊಗಸು; ಅಡಗು: ಅವಿತುಕೊಳ್ಳು, ಮರೆಯಾಗು; ಪರರು: ಬೇರೆಯವರು; ಕೆಲಸ: ಕಾರ್ಯ; ಓಲಗ: ಸೇವೆ; ಸಾರ್ವಭೌಮ: ರಾಜ; ಬಳಲು: ಆಯಾಸಗೊಳ್ಳು; ಹಿರಿ: ದೊಡ್ಡವ; ಅಳಲಿಸು: ನೋಯಿಸು; ಪಾಪಿ: ದುಷ್ಟ; ಭುವನ: ಭೂಮಿ; ಸೂನು: ಮಗ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ತೊಳಲಿದಿರಿ +ಹನ್ನೆರಡು +ವರುಷವು
ಹಳುವದಲಿ+ ಸೊಂಪಡಗಿ+ ಪರರೊಡ
ನುಳಿ+ಕೆಲಸದ್+ಓಲಗವಿದೆಂತೈ+ ಸಾರ್ವಭೌಮರಿಗೆ
ಬಳಲಿದಿರಿ+ ಹಿರಿದಾಗಿ+ ನಿಮ್ಮುವನ್
ಅಳಲಿಸಿದೆನ್+ಎನ್ನಿಂದ +ಪಾಪಿಗಳ್
ಒಳರೆ +ಭುವನದೊಳೆಂದು +ಕುಂತೀ+ಸೂನು +ಬಿಸುಸುಯ್ದ

ಅಚ್ಚರಿ:
(೧) ತೊಳಲಿ, ಬಳಲಿ, ಅಳಲಿ – ಪ್ರಾಸ ಪದಗಳು