ಪದ್ಯ ೪೭: ಕೌರವ ಸೇನೆಯವರು ಹೇಗೆ ಮಾತಾಡಿಕೊಂಡರು?

ಎಲೆಲೆ ಕರ್ಣದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ (ವಿರಾಟ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕೌರವನ ಸೇನೆಯವರು ಮಾತಾಡಿಕೊಳ್ಳುತ್ತಿದ್ದರು. ಎಲಾ ಕರ್ಣ, ದ್ರೋಣ, ಅಶ್ವತ್ಥಾಮ, ಕೃಪ ಇವರೆಲ್ಲರೂ ಅರ್ಜುನನೊಡನೆ ಸೆಣಸಿ ಸೋತು ಹೋದರು. ಅರ್ಜುನನ ಹಿರಿಮೆಯು ಎಷ್ಟಿದೆಯೋ ಏನೋ? ಗೆಲ್ಲುವವನು ಅವನೊಬ್ಬನು. ನಮ್ಮ ಸೈನ್ಯದ ವೀರರು ಅವನನ್ನೆದುರಿಸಿ ಹಿಂಜರಿಯುವವರು. ಆಹಾ ನಮಗೆ ಸೋಲು ಎಂಬುದು ಎಷ್ಟು ಸುಲಭ ಎಂದು ಮಾತಾಡಿಕೊಂಡರು.

ಅರ್ಥ:
ಅಲಘು: ಭಾರವಾದ; ಭುಜಬಲ: ಪರಾಕ್ರಮ; ಹೊಕ್ಕು: ಸೇರು; ಇರಿ: ಚುಚ್ಚು; ಅಳುಕು: ಹೆದರು, ನಡುಗು; ಮಝ: ಭಲೇ; ಭಾಪು: ಕೊಂಡಾಟದ ಒಂದು ಮಾತು; ಅಗ್ಗಳಿಕೆ: ಶ್ರೇಷ್ಠತೆ; ಗೆಲುವು: ಜಯ; ಬಲ: ಶಕ್ತಿ; ನಿಲುಕು: ಚಾಚುವಿಕೆ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಭಟ: ಸೈನಿಕ; ಇನಿಬರು: ಇಷ್ಟುಜನ; ಸುಲಭ: ನಿರಾಯಾಸ; ಸೋಲು: ಪರಾಭವ; ಕೂಡು: ಸೇರು, ಈಡೇರು;

ಪದವಿಂಗಡಣೆ:
ಎಲೆಲೆ +ಕರ್ಣ+ದ್ರೋಣ +ಗುರುಸುತರ್
ಅಲಘು +ಭುಜಬಲ+ ಕೃಪನು +ಹೊಕ್ಕಿರಿದ್
ಅಳುಕಿದರು +ಮಝ +ಭಾಪುರೆಂತುಟೊ+ ಪಾರ್ಥನ್+ಅಗ್ಗಳಿಕೆ
ಗೆಲುವನ್+ಒಬ್ಬನೆ +ನಮ್ಮ +ಬಲದಲಿ
ನಿಲುಕಿ +ಹಿಂಗುವ +ಸುಭಟರ್+ಇನಿಬರು
ಸುಲಭವ್+ಎಮಗೀ +ಸೋಲವೆಂದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಕೌರವ ಸೇನೆಯವರ ಸ್ಥಿತಿ – ನಮ್ಮ ಬಲದಲಿ ನಿಲುಕಿ ಹಿಂಗುವ ಸುಭಟರಿನಿಬರು ಸುಲಭವೆಮಗೀ ಸೋಲು

ಪದ್ಯ ೫೧: ಅರ್ಜುನನು ಯುದ್ಧಕ್ಕೆ ಹೇಗೆ ಸಿಂಗಾರಗೊಂಡನು?

ಬಳೆಯ ನುಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗುಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ (ವಿರಾಟ ಪರ್ವ, ೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕೌರವ ಬಲದ ಕತ್ತನ್ನು ಮುರಿಯುವಂತೆ ಕೈಯಲ್ಲಿದ್ದ ಬಳೆಗಲನ್ನು ನೆಲಕ್ಕೆ ಬಡಿದು ಪುಡಿ ಮಾಡಿದನು. ಮಲ್ಲರಿಗೆ ಯೋಗ್ಯವಾಗುವಂತೆ ವಸ್ತ್ರವನ್ನು ಮಡಿಚಿ ತೊಟ್ಟನು. ತಲೆಯ ಕೂದಲು ಜಡೆಯನ್ನು ತೆಗೆದು, ಹಣೆಗೆ ವೀರ ತಿಲಕವನ್ನಿಟ್ಟುಕೊಂಡು, ಸೊಂತದಲ್ಲಿ ಕಠಾರಿಯನ್ನು, ಗೊಂಡೆಯ ಕುಚ್ಚು ಕಾಣಿಸುವಂತೆ ಧರಿಸಿ, ಗಂಡು ವೇಷವನ್ನು ಅರ್ಜುನನು ತೊಟ್ಟನು.

ಅರ್ಥ:
ಬಳೆ: ಕಂಕಣ, ಕೈಗೆ ಹಾಕುವ ಗಾಜು, ಲೋಹ ಗಳ ದುಂಡನೆಯ ಆಭರಣ; ನುಗ್ಗು: ಚೂರು, ನುಚ್ಚು, ಪುಡಿ; ಒತ್ತು: ಚುಚ್ಚು, ತಿವಿ; ಬಲ: ಸೈನ್ಯ; ಗಂಟಲು: ಕಂಠ; ಮುರಿ: ಚೂರುಮಾಡು; ಲಘು: ವೇಗವಾದ, ಶೀಘ್ರವಾದ; ಸಾಹಸಿ: ಪರಾಕ್ರಮಿ; ಘಳಿ: ನೆರಗೆ, ಮಡಿಸಿದ ಸೀರೆ; ಉಟ್ಟು: ತೊಡು; ಮಲ್ಲ: ಜಟ್ಟಿ; ಗಂಟು: ಸೇರಿಸಿ ಕಟ್ಟಿದುದು, ಕಟ್ಟು; ತಲೆ: ಶಿರ; ನವಿರು: ಕೂದಲು, ಕೇಶ; ಹಿಣಿಲು: ಬಿಗಿದು ಸುತ್ತಿದ ತಲೆಗೂದಲು, ಮುಡಿ; ಇರಿ: ತಿವಿ; ತಿಲಕ: ಹಣೆಯಲ್ಲಿಡುವ ಬೊಟ್ಟು; ಕಿಗ್ಗುಟ್ಟು: ಕೆಳಭಾಗದ ಕಟ್ಟು; ಕಠಾರಿ: ಚೂರಿ, ಕತ್ತಿ; ಹೊಳೆ: ಪ್ರಕಾಶ; ಗೊಂಡೆ: ಕುಚ್ಚು; ಮೆರೆ: ತೋರು, ಹೊಳೆ; ಗಂಡು: ಪುರುಷ; ಅಂದ: ಸೊಬಗು; ಕೈಕೊಂಡ: ತೊಡು;

ಪದವಿಂಗಡಣೆ:
ಬಳೆಯ +ನುಗ್ಗೊತ್ತಿದನು +ಕೌರವ
ಬಲದ +ಗಂಟಲ +ಬಳೆಯ +ಮುರಿವವೊಲ್
ಅಲಘು +ಸಾಹಸಿ +ಘಳಿಯನುಟ್ಟನು +ಮಲ್ಲಗಂಟಿನಲಿ
ತಲೆ +ನವಿರ +ಹಿಣಿಲಿರಿದು +ತಿಲಕವ
ಗೆಲಿದು +ಕಿಗ್ಗುಟ್ಟಿನ +ಕಠಾರಿಯ
ಹೊಳೆವ +ಗೊಂಡೆಯ +ಮೆರೆಯೆ +ಗಂಡಂದವನು +ಕೈಕೊಂಡ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೌರವಬಲದ ಗಂಟಲ ಬಳೆಯ ಮುರಿವವೊಲ್