ಪದ್ಯ ೫೫: ಅರ್ಜುನನು ಯಾವ ವಿದ್ಯೆಯನ್ನು ಕಲಿತನು?

ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನಮರ ಭುವನದ
ಭರತವಿದ್ಯೆಯನರುಹಿಸಿದನಾ ಶಾಸ್ತ್ರ ವಿಧಿಯಿಂದ
ಸುರರಿಗಲಗಣಸಾದ ದೈತ್ಯರ
ನೊರಸಿದನು ಸತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳ ರಹಸ್ಯವನ್ನು ಇಂದ್ರನು ಅರ್ಜುನನಿಗೆ ಹೇಳಿಕೊಟ್ಟನು. ದೇವಲೋಕದ ನಾಟ್ಯವಿದ್ಯೆಯನ್ನು ಅರ್ಜುನನಿಗೆ ಚಿತ್ರರಥಾದಿಗಳಿಂದ ಹೇಳಿಸಿದನು. ದೇವತೆಗಳಿಗೆ ಕಂಟಕರಾಗಿದ್ದ ರಾಕ್ಷಸರನ್ನು ಅರ್ಜುನನು ಸಂಹರಿಸಿದನು. ಅವನ ಕೀರ್ತಿಯ ಬಳ್ಳಿಯು ಚಿಗುರಿ ಬೆಳೆಯಿತು.

ಅರ್ಥ:
ಸುರಪ: ಇಂದ್ರ; ಅರುಹು: ಹೇಳು; ಅಸ್ತ್ರ: ಬಾಣ; ಶಸ್ತ್ರ: ಆಯುಧ; ರಹಸ್ಯ: ಗುಟ್ಟು; ಅಮರ: ದೇವತೆ; ಭುವನ: ಆಲಯ; ಭರತವಿದ್ಯೆ: ನಾಟ್ಯಶಾಸ್ತ್ರ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ವಿಧಿ: ನಿಯಮ; ಸುರರು: ದೇವತೆಗಳು; ಅಲಗಣಸು: ಕತ್ತಿಯ ಏಟು; ದೈತ್ಯ: ರಾಕ್ಷಸ; ಒರಸು: ನಾಶಮಾಡು; ಕೀರ್ತಿ: ಯಶಸ್ಸು; ಲತೆ: ಬಳ್ಳಿ; ಕುಡಿ: ಚಿಗುರು; ಬೆಳೆ: ವಿಕಸನವಾಗು; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಸುರಪನ್+ಅರುಹಿದನ್+ಅಸ್ತ್ರ +ಶಸ್ತ್ರೋ
ತ್ತರ +ರಹಸ್ಯವನ್+ಅಮರ+ ಭುವನದ
ಭರತವಿದ್ಯೆಯನ್+ಅರುಹಿಸಿದನ್+ಆ+ ಶಾಸ್ತ್ರ +ವಿಧಿಯಿಂದ
ಸುರರಿಗ್+ಅಲಗಣಸಾದ +ದೈತ್ಯರನ್
ಒರಸಿದನು +ಸತ್ಕೀರ್ತಿಲತೆ +ಕುಡಿ
ವರಿದು +ಬೆಳೆದುದು+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ವೀರನಾರಾಯಣನ ಮೈದುನ ಎಂದು ಕರೆದಿರುವುದು
(೨) ಭರತನಾಟ್ಯ ಎಂದು ಹೇಳಲು – ಅಮರ ಭುವನದ ಭರತವಿದ್ಯೆ
(೩) ವೈರಿ ಎಂದು ಹೇಳಲು – ಅಲಗಣಸಾದ ಪದದ ಬಳಕೆ
(೪) ಅರ್ಜುನನ ಯಶಸ್ಸು ಹರಡಿತೆಂದು ಹೇಳಲು – ಸತ್ಕೀರ್ತಿಲತೆ ಕುಡಿವರಿದು ಬೆಳೆದುದು