ಪದ್ಯ ೭: ಸ್ವಯಂವರದಲ್ಲಿದ್ದ ರಾಜರು ಏತಕ್ಕೆ ಕಾತುರಗೊಂಡರು?

ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ (ಆದಿ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜರ ದರ್ಪ, ವೈಭವ, ಅಲಂಕೃತರಾದ ಅವರ ಸೊಬಗು ಏನೆಂದು ಹೇಳಲಿ, ಇದೊಂದು ಸ್ಪರ್ಧೆ, ಈ ಯುದ್ಧದಲ್ಲಿ ಜಯವು ನನಗೆ ಇರಲಿ ಎಂದು ಎಲ್ಲರು ಸಿದ್ಧರಾಗಿದ್ದರು, ಮನ್ಮಥನ ಯುದ್ಧವು ಹತ್ತಿರವಾಗುತ್ತಿದ್ದಂತೆ, ಕಾತರಗೊಂಡ ರಾಜರು ಮನದ ಬಾಣಗಳಿಂದ ಆರ್ತರಾಗಿ ಕುಳಿತಿದ್ದರು, ಇವರ ವಿವರವನ್ನು ಹೇಳುತ್ತೇನೆ, ಕೇಳು ಜನಮೇಜಯ…

ಅರ್ಥ:
ಅಂಕೆ: ದರ್ಪ, ಠೀವಿ, ಗುರುತು; ಪಾರ್ಥಿವ: ರಾಜ; ವಿಭವ: ಸಿರಿ, ಸಂಪತ್ತು, ಹಿರಿಮೆ; ಅಲಂಕೃತ: ಸಿಂಗರಿಸಲ್ಪಟ್ಟ; ಅಂಕ: ಬಿರುದು, ಹೆಸರು, ಸ್ಪರ್ಧೆ; ಕಳ:ಕಳೆ,ಕಾಂತಿ; ಆಹವ: ಯುದ್ಧ, ಕಾಳಗ; ಎನಗೆ: ನನಗೆ; ಶಂಕರ: ಈಶ್ವರ; ಅರಿ: ವೈರಿ; ಶಂಕರಾರಿ: ಮದನ, ಮನ್ಮಥ, ರತೀಶ; ಮಸೆ: ದ್ವೇಷಿಸು, ಹರಿತವಾದ; ಮಾರ: ಕಾಮ, ಮನ್ಮಥ; ಬಿಂಕ: ಜಂಬ, ಠೀವಿ; ಜಂಕೆ: ಗರ್ಜನೆ, ಕೂಗು; ವಿಸ್ತರ: ವಿವರವಾಗಿ; ನರ: ಮನುಷ್ಯ; ನರನಾಥ: ರಾಜ (ಜನಮೇಜಯ);

ಪದವಿಂಗಡಣೆ:
ಅಂಕೆ+ಯಿದು +ಪಾರ್ಥಿವರ +ವಿಭವ
ಅಲಂಕೃತಿಯನದನ್+ಏನ+ಹೇಳುವೆನ್
ಅಂಕ+ವಿದು+ ಕಳನೇರಿತ್+ಆಹವವ್+ಎನಗೆ+ ತನಗೆನುತ
ಶಂಕರಾರಿಯ+ ಮಸೆದಲಗು +ಮಾ
ರಂಕದ್+ಉಬ್ಬಿನ +ಜಂಕೆ+ಯಂಕೆಯ
ಬಿಂಕವನು+ ವಿಸ್ತರಿಸುವೆನು +ನರನಾಥ+ ಕೇಳೆಂದ

ಅಚ್ಚರಿ:
(೧) ಅಂಕೆ, ಅಂಕ – ೪ ಬಾರಿ ಪ್ರಯೋಗ – ಅಂಕೆಯಿದು, ಅಂಕವಿದು, ಯಂಕೆಯ; ಅಂಕದುಬ್ಬಿನ
(೨) ರಾಜನಿಗೆ – ನರನಾಥ; ಮನ್ಮಥನಿಗೆ – ಶಂಕರಾರಿ, ಮಾರ – ಪದಗಳ ಬಳಕೆ
(೩) ಅಂಕೆ, ಬಿಂಕ – ಸಮಾನಾರ್ಥಕ ಪದಗಳು
(೪) ಅಂಕೆ, ಅಲಂಕೃತ, ಶಂಕರ, ಮಾರಂಕ, ಬಿಂಕ, ಅಂಕ – ಅನುಸ್ವಾರದ ಜೊತೆಗೆ “ಕ” ಕಾರದ ಪದಗಳು