ಪದ್ಯ ೧: ಸೂರ್ಯೋದಯವು ಹೇಗೆ ಕಂಡಿತು?

ಕೇಳು ಜನಮೇಜಯ ಧರಿತ್ರೀ
ಪಾಲಪಾಶುಪತಾಸ್ತ್ರವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವದಿ
ಶಾಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ (ಅರಣ್ಯ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಪಾಶುಪತಾಸ್ತ್ರವೇದದ ಉಚ್ಚಾರಣೆಯ ಮೊದಲು ಬರುವ ಓಂಕಾರವೋ ಎಂಬಂತೆ ಪೂರ್ವ ದಿಕ್ಕಿನಲ್ಲಿ ಅರುಣೋದಯವಾಯಿತು. ಪೂರ್ವದಿಕ್ಕಿನ ವನಿತೆಯ ಮುಂದಲೆಯನ್ನು ಅಲಂಕರಿಸಲು ಸರಿಯಾದ ಮಾಣಿಕ್ಯವೋ ಎಂಬಂತೆ ಉದಯ ರವಿಯ ಬಿಂಬವು ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಅಸ್ತ್ರ: ಶಸ್ತ್ರ, ಆಯುಧ; ವೇದ: ಜ್ಞಾನ; ಪಾಳಿ: ಸಾಲು; ಉಚ್ಚರಣೆ: ಹೇಳು; ಪ್ರಣವ: ಓಂಕಾರ; ಸ್ವರೂಪ: ನಿಜವಾದ ರೂಪ; ಮೇಳವಿಸು: ಸೇರು, ಜೊತೆಯಾಗು; ಅರುಣ:ಸೂರ್ಯನ ಸಾರ, ಕೆಂಪುಬಣ್ಣ; ಅಂಶ: ಭಾಗ, ಘಟಕ; ಪೂರ್ವ: ಮೂಡಣ ದಿಕ್ಕು; ದಿಶ: ದಿಕ್ಕು; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಉಚಿತ: ಸರಿಯಾದ; ಮೌಳಿ: ಶಿರ; ಮಾಣಿಕ: ಅಮೂಲ್ಯವಾದ ಮಣಿ; ಮೆರೆ: ಹೊಳೆ; ದಿನಮಣಿ: ಸೂರ್ಯ; ಬಿಂಬ: ಕಾಂತಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ಪಾಶುಪತಾಸ್ತ್ರ+ವೇದದ
ಪಾಳಿ+ಉಚ್ಚರಣೆಯಲಿ +ತತ್+ಪ್ರಣವ +ಸ್ವರೂಪವೆನೆ
ಮೇಳವಿಸಿತ್+ಅರುಣಾಂಶು +ಪೂರ್ವ+ದಿ
ಶಾಲತಾಂಗಿಯ+ ಮಂಡನೋಚಿತ
ಮೌಳಿಮಾಣಿಕವೆನಲು +ಮೆರೆದುದು +ದಿನಮಣಿಯ +ಬಿಂಬ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ