ಪದ್ಯ ೪೫: ಘಟೋತ್ಕಚನು ಧರ್ಮಜನ ಬಳಿ ಏನು ಹೇಳಿದನು?

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ (ದ್ರೋಣ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನನ್ನನ್ನು ಏಕೆ ಕರೆಸಿದಿರಿ? ಕೌರವ ಸೈನ್ಯವು ಇದಿರಾಯಿತೇ? ತಡಮಾಡದೆ ನನ್ನನ್ನು ಬಿಡು, ದೇವ ದಾನವರಲ್ಲಿ ನಿನ್ನ ಮಗನಿಗೆ ಸರಿಯಾದವರೇ ಇಲ್ಲವೆನ್ನುವಮ್ತೆ ನಾನು ಯುದ್ಧಮಾಡಬಲ್ಲೆ. ನೋಡು, ತಡವೇಕೆ, ಮೊದಲು ವೀಳೆಯವನ್ನು ನೀಡು ಎಂದು ತನ್ನ ಕತ್ತಿಯನ್ನು ಹೊರತೆಗೆದು ಝಳಪಿಸುತ್ತಾ, ವೀಳೆಯನ್ನು ತೆಗೆದುಕೊಳ್ಳಲು ತನ್ನ ಎಡಗೈಯನ್ನು ಒಡ್ಡಿದನು.

ಅರ್ಥ:
ಕರಸು: ಬರೆಮಾಡು; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಬಿಡು: ತೊರೆ; ತಡ: ನಿಧಾನ; ವೀಳೆ: ತಾಂಬೂಲ; ಕಯ್ಯ್: ಹಸ್ತ; ಅರಳಿಚು: ಬಿರಿಯುವಂತೆ ಮಾಡು; ದಾನವ: ರಾಕ್ಷಸ; ಅಮರ: ದೇವತೆ; ಸೂನು: ಮಗ; ನಿಲಲು: ಎದುರು ನಿಲ್ಲು; ಬಲ್ಲೆ: ತಿಳಿ; ನೋಡು: ವೀಕ್ಷಿಸು; ಬಿದಿರು: ಕೊಡಹು, ಒದರು; ಖಂಡೆಯ: ಕತ್ತಿ;

ಪದವಿಂಗಡಣೆ:
ಏನು+ ಧರ್ಮಜ+ ಕರಸಿದೈ+ ಕುರು
ಸೇನೆ +ಮಲೆತುದೆ+ ಬಿಡು +ಬಿಡಾ+ ತಡ
ವೇನು +ತಾ +ವೀಳೆಯವನ್+ಎನುತ್+ಎಡಗಯ್ಯನ್+ಅರಳಿಚುತ
ದಾನವ+ಅಮರರೊಳಗೆ +ನಿನ್ನಯ
ಸೂನುವಿಗೆ +ಸರಿಯಿಲ್ಲೆನಿಸಿ+ ನಿಲಲ್
ಆನು +ಬಲ್ಲೆನು +ನೋಡೆನುತ +ಬಿದಿರಿದನು +ಖಂಡೆಯವ

ಅಚ್ಚರಿ:
(೧) ಘಟೋತ್ಕಚನ ಧೈರ್ಯದ ನುಡಿ – ದಾನವಾಮರರೊಳಗೆ ನಿನ್ನಯಸೂನುವಿಗೆ ಸರಿಯಿಲ್ಲೆನಿಸಿ ನಿಲಲಾನು ಬಲ್ಲೆನು