ಪದ್ಯ ೫: ಭೀಮ ದುರ್ಯೊಧನರ ಗದಾಯುದ್ಧವನ್ನು ಯಾರು ಹೇಗೆ ಹೊಗಳಿದರು?

ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರ ಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ (ಗದಾ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಲರಾಮನು ಅವರಿಬ್ಬರ ಗದಾಯುದ್ಧದ ವಿಧಾನವನ್ನು ನೋಡಿ, ಮೆಚ್ಚಿ, ಅವರಿಟ್ಟ ಒಂದೊಂದು ಹೆಜ್ಜೆಗೂ ಬೆರಳನ್ನು ತೂಗಿದನು. ಶ್ರೀಕೃಷ್ಣನು ಸಹ ಮೆಚ್ಚಿ ತಲೆಯಾಡಿಸಿದನು. ಯುಧಿಷ್ಠಿರನು ಅತಿಶಯವಾಗಿ ಮೆಚ್ಚಿದನು. ಅರ್ಜುನನು ಗದಾಯುದ್ಧದ ಹಲವು ವಿಧದ ರೀತಿಗಳಿಗೆ ಇದು ಭೂಷಣವೆಂದು ಹೊಗಳಿದನು. ಪರಿವಾರದ ಯೋಧರು ಅರರೇ, ಭಲೇ, ರಾವು, ಜಾಗು ಎಂದು ಕೊಂಡಾಡಿದರು.

ಅರ್ಥ:
ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಹಲಧರ: ಬಲರಾಮ; ಉದಗ್ರ: ವೀರ, ಶೂರ; ಗದೆ: ಮುದ್ಗರ; ವಿಧಾನ: ರೀತಿ; ಶಿರ: ತಲೆ; ಒಲೆ: ತೂಗಾಡು; ಶೌರಿ: ಕೃಷ್ಣ; ಮಿಗೆ: ಮತ್ತು, ಅಧಿಕ; ಮೆಚ್ಚು: ಇಷ್ಟಪಡು; ಸೂನು: ಮಗ; ವರ: ಶ್ರೇಷ್ಠ; ವಿವಿಧ: ಹಲವಾರು; ಸತ್ವ: ಸಾರ; ಪರಮ: ಶ್ರೇಷ್ಠ; ಜೀವ: ಪ್ರಾಣ; ಅರರೆ: ಆಶ್ಚರ್ಯ ಸೂಚಕ ಪದ; ಮಝ: ಭಲೇ; ರಾವು: ದಿಗ್ಭ್ರಮೆ; ಜಾಗು:ಹೊಗಳಿಕೆ ಮಾತು; ಭಟ: ಸೈನಿಕ; ವ್ರಾತ: ಗುಂಪು;

ಪದವಿಂಗಡಣೆ:
ಬೆರಳ +ತೂಗಿದನ್+ಅಡಿಗಡಿಗೆ +ಹಲ
ಧರನ್+ಉದಗ್ರ+ ಗದಾ +ವಿಧಾನಕೆ
ಶಿರವನ್+ಒಲೆದನು +ಶೌರಿ +ಮಿಗೆ +ಮೆಚ್ಚಿದನು +ಯಮಸೂನು
ವರ +ಗದಾಯುಧ +ವಿವಿಧ +ಸತ್ವಕೆ
ಪರಮ+ಜೀವವಿದ್+ಎಂದನ್+ಅರ್ಜುನನ್
ಅರರೆ +ಮಝರೇ +ರಾವು +ಜಾಗೆಂದುದು +ಭಟ+ವ್ರಾತ

ಅಚ್ಚರಿ:
(೧) ಮೆಚ್ಚುಗೆಯ ಮಾತುಗಳು – ಅರರೆ, ಮಝರೇ, ರಾವು, ಜಾಗು
(೨) ತೂಗು, ಒಲೆದು – ಸಾಮ್ಯಾರ್ಥ ಪದ
(೩) ಒಂದೇ ಪದವಾಗಿ ರಚನೆ – ಪರಮಜೀವವಿದೆಂದನರ್ಜುನ

ಪದ್ಯ ೫೬: ಮಲ್ಲಯುದ್ದವು ಹೇಗೆ ಮುಂದುವರೆಯಿತು?

ಅರರೆ ಸಿಕ್ಕಿದ ವಲಲ ಹೋಹೋ
ಅರರೆ ಸೋತನು ಮಲ್ಲನೆಂಬ
ಬ್ಬರವು ಮಸಗಿರೆ ಭೀಮ ಕೇಳಿದನಧಿಕ ರೋಷದಲಿ
ತಿರುಗಿ ಪೈಸರದಿಂದ ಮಲ್ಲನ
ನೊರಸಿದನು ಮುಷ್ಟಿಯಲಿ ನೆತ್ತಿಯ
ತರಹರಿಸೆ ಸಂತವಿಸಿ ತಿವಿದನು ಮಲ್ಲ ಮಾರುತಿಯ (ವಿರಾಟ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅರೇ ವಲಲನು ಸಿಕ್ಕ, ಅರೇ ಜೀಮೂತನು ಸೋತ ಎಂದು ನೋಟಕರು ಕೂಗುತ್ತಿರಲು, ಭೀಮನದನ್ನು ಕೇಳಿ ಮಹಾರೋಷದಿಂದ ಮಗ್ಗುಲಿಗೆ ಜಾರಿ, ಜೀಮೂತನ ನೆತ್ತಿಯನ್ನು ಮುಷ್ಟಿಯಿಂದ ಹೊಡೆದನು. ಜೀಮೂತನು ಅತ್ತಿತ್ತ ಅದುರಿ ಭೀಮನನ್ನು ಹೊಡೆದನು.

ಅರ್ಥ:
ಸಿಕ್ಕು: ತೊಡಕು; ಸೋಲು: ಪರಾಭವ; ಮಲ್ಲ: ಜಟ್ಟಿ; ಅಬ್ಬರ: ಆರ್ಭಟ; ಮಸಗು: ತಿಕ್ಕು, ಕೆರಳು; ಕೇಳು: ಆಲಿಸು; ಅಧಿಕ: ಹೆಚ್ಚು; ರೋಷ: ಕೋಪ; ತಿರುಗು: ಸುತ್ತು, ಅಲೆದಾಡು; ಪೈಸರ: ಮಲ್ಲಯುದ್ಧದ ಒಂದು ಪಟ್ಟು, ಕುಗ್ಗು; ಒರಸು: ಸಾರಿಸು, ನಾಶಮಾಡು; ಮುಷ್ಟಿ: ಮುಚ್ಚಿದ ಅಂಗೈ; ನೆತ್ತಿ: ಶಿರ; ತರಹರಿಸು: ತಡಮಾಡು, ಕಳವಳಿಸು; ಸಂತವಿಸು: ಸಾಂತ್ವನಗೊಳಿಸು; ತಿವಿ: ಚುಚ್ಚು; ಮಲ್ಲ: ಜಟ್ಟಿ; ಮಾರುತಿ: ವಾಯುಪುತ್ರ (ಭೀಮ);

ಪದವಿಂಗಡಣೆ:
ಅರರೆ +ಸಿಕ್ಕಿದ +ವಲಲ +ಹೋ+ಹೋ
ಅರರೆ+ ಸೋತನು +ಮಲ್ಲನೆಂಬ್
ಅಬ್ಬರವು +ಮಸಗಿರೆ+ ಭೀಮ +ಕೇಳಿದನ್+ಅಧಿಕ+ ರೋಷದಲಿ
ತಿರುಗಿ +ಪೈಸರದಿಂದ +ಮಲ್ಲನನ್
ಒರಸಿದನು +ಮುಷ್ಟಿಯಲಿ +ನೆತ್ತಿಯ
ತರಹರಿಸೆ+ ಸಂತವಿಸಿ+ ತಿವಿದನು+ ಮಲ್ಲ+ ಮಾರುತಿಯ

ಅಚ್ಚರಿ:
(೧) ಅರೆರೆ – ೧, ೨ ಸಾಲಿನ ಮೊದಲ ಪದ