ಪದ್ಯ ೪೭: ವರುಣಾಸ್ತ್ರವು ಹೇಗೆ ನಾರಾಯಣಾಸ್ತ್ರದ ತಾಪವನ್ನು ತಗ್ಗಿಸಿತು?

ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ವರುಣಾಸ್ತ್ರವು ಹೊಗೆಯನ್ನು ಭೇದಿಸಿ ಒಳಹೊಕ್ಕು, ಭೀಮನ ರಥದ ಸುತ್ತಲೂ ನೀರಿನ ತೆರೆಯನ್ನು ನಿರ್ಮಿಸಿತು. ವರುಣಾಸ್ತ್ರದ ನೀರನ್ನು ಇದಿರು ಬಿಟ್ಟು ಜಾರಿಕೊಳ್ಳಲು ನೋಡುತ್ತಿದ್ದಾರೆ. ನನ್ನ ಕತ್ತಿಯ ಅಲುಗು ಕತ್ತರಿಸುವುದನ್ನು ಇವರು ತಪ್ಪಿಸುವರೋ ಎನ್ನುತ್ತಾ ನಾರಾಯಣಾಸ್ತ್ರವು ಮುನ್ನುಗ್ಗಿತು.

ಅರ್ಥ:
ಹೊಗೆ: ಧೂಮ; ಒದೆ: ನೂಕು; ಕಿಡಿ: ಬೆಂಕಿ; ಉಗಿ: ಹೊರಹಾಕು; ದಳ್ಳುರಿ: ದೊಡ್ಡಉರಿ; ತನಿ: ಹೆಚ್ಚಾಗು; ಬಿಗಿ: ಭದ್ರವಾಗಿರುವುದು; ರಥ: ಬಂಡಿ; ಸುತ್ತಲು: ಎಲ್ಲಾ ಕಡೆ; ಸೂಸು: ಎರಚು, ಚಲ್ಲು; ತೆರೆ: ತೆಗೆ, ಬಿಚ್ಚು; ಮಸಗು: ರೇಗು, ಸಿಟ್ಟುಗೊಳ್ಳು; ಹಗೆ: ವೈರಿ; ಜುಣುಗು: ಜಾರು; ಬಗೆ: ತಿಳಿ; ಖಂಡೆಯ: ಕತ್ತಿ, ಖಡ್ಗ; ಮೊನೆ: ತುದಿ, ಕೊನೆ; ಮಗುಳು: ಪುನಃ, ಮತ್ತೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹೊಗೆಯನೊದೆದ್+ಒಳಬಿದ್ದು +ಕಿಡಿಗಳನ್
ಉಗಿದು +ದಳ್ಳುರಿದ್+ಉರುಗಲನು +ತನಿ
ಬಿಗಿದು +ಭೀಮನ +ರಥದ +ಸುತ್ತಲು +ಸೂಸಿ +ತೆರೆ +ಮಸಗೆ
ಹಗೆಯನ್+ಎನಗ್+ಇದಿರೊಡ್ಡಿ +ಜುಣುಗಲು
ಬಗೆದರೇ +ಖಂಡೆಯದ +ಮೊನೆಯಲಿ
ಮಗುಳಿಚುವರೇ +ತನ್ನನ್+ಎನುತ್+ಉರವಣಿಸಿತ್+ಅಮಳಾಸ್ತ್ರ

ಅಚ್ಚರಿ:
(೧) ಹೊಗೆ, ಹಗೆ, ಬಗೆ – ಪ್ರಾಸ ಪದಗಳು

ಪದ್ಯ ೪೦: ನಾರಾಯಣಾಸ್ತ್ರವು ಏನನ್ನು ನೋಡಿತು?

ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಬೈಗುಳಿಗೆ ಹೆದರಿ ಧರ್ಮಜನು ನಿರಾಯುಧನಾಗಿ ಕುಳಿತಿದ್ದನು. ನಕುಲ, ಸಹದೇವ, ಶಿಖಂಡಿ, ಯುಯುತ್ಸು, ಸಾತ್ಯಕಿ ಸೃಂಜಯ ಮೊದಲಾದವರೆಲ್ಲಾ ಕೆನ್ನೆಯ ಮೇಲೆ ಕೈಯಿಟ್ಟು ಮುಸುಕು ಹಾಕಿಕೊಂಡು ಆಯುಧಗಳನ್ನೂ ತಮ್ಮ ಮುಂದೆ ಹರಡಿ ಇಟ್ಟುಕೊಂಡಿರುವುದನ್ನು ನಾರಾಯಣಾಸ್ತ್ರವು ನೋಡಿತು.

ಅರ್ಥ:
ಹರಿ: ಕೃಷ್ಣ; ಬಯ್ಗುಳು: ಜರಿದ ಮಾತು; ಬೆದರಿಸು: ಹೆದರಿಸು; ನೃಪ: ರಾಜ; ನಿರಾಯುಧ: ಆಯುಧವಿಲ್ಲದ ಸ್ಥಿತಿ; ಆದಿ: ಮುಂತಾದ; ಕರ: ಕೈ; ಕದಪು: ಕೆನ್ನೆ; ತಳಿತ: ಚಿಗುರಿದ; ಮುಸುಕು: ಹೊದಿಕೆ; ಮುರಿ: ಸೀಳು; ಮೋರೆ: ಮುಖ; ಮುಂದೆ: ಎದುರು; ಹರಹು: ವಿಸ್ತಾರ, ವೈಶಾಲ್ಯ; ತರತರ: ವಿಧವಿಧ; ಕೈದು: ಆಯುಧ; ಸುಭಟ: ಪರಾಕ್ರಮಿ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹರಿಯ +ಬಯ್ಗುಳು +ಬೆದರಿಸಲು+ ನೃಪ
ನಿರೆ +ನಿರಾಯುಧನಾಗಿ+ ಮಾದ್ರೇ
ಯರು +ಶಿಖಂಡಿ +ಯುಯುತ್ಸು +ಸಾತ್ಯಕಿ+ ಸೃಂಜಯಾದಿಗಳು
ಕರದ +ಕದಪಿನ +ತಳಿತ +ಮುಸುಕಿನ
ಮುರಿದ+ ಮೋರೆಯ +ಮುಂದೆ +ಹರಹಿದ
ತರತರದ +ಕೈದುಗಳ +ಸುಭಟರ +ಕಂಡುದ್+ಅಮಳಾಸ್ತ್ರ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಸುಕಿನ ಮುರಿದ ಮೋರೆಯ ಮುಂದೆ
(೨) ಬೇಜಾರು, ನಿರುತ್ಸಾಹ ಎಂದು ಹೇಳುವ ಪರಿ – ಮುರಿದ ಮೋರೆಯ

ಪದ್ಯ ೧೬: ನಾರಾಯಣಾಸ್ತ್ರವು ಹೇಗೆ ಝಗಮಗಿಸಿತು?

ಸರಳ ಚೂಳಿಯ ಝಳದೊಳಗೆ ಸಾ
ವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ
ಬರಸಿಡಿಲ ಶತಕೋಟಿ ಸೀದವು
ನಿರಿವೊಗರ ಕಬ್ಬೊಗೆಯ ಕಿಡಿಯಲಿ
ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ಅಸ್ತ್ರದ ಮುಂಭಾಗದ ಉರಿಯ ಝಳದಿಂದ ಸಾವಿರ ಸೂರ್ಯರ ಪ್ರಕಾಶ ಕರಗಿಹೋಯಿತೋ, ಬಾಯಧಾರೆಯ ಕಿಡಿಗಳ ದಾಳಿಯಿಂದ ನೂರುಕೋಟಿ ಬರಸಿಡಿಲು ಸುಟ್ಟು ಕರಿಕಾದವೋ, ಹಬ್ಬುತ್ತಿದ್ದ ಹೊಗೆಯು ಪ್ರಳಯ ಮೇಘಗಳು ನೆರೆದವೋ ಎಂಬಂತೆ ನಾರಾಯಣಾಸ್ತ್ರವು ಝಗಝಗಿಸಿತು.

ಅರ್ಥ:
ಸರಳು: ಬಾಣ; ಚೂಳಿ: ಆರಂಭ, ಸೈನ್ಯದ ಮುಂಭಾಗ; ಝಳ: ಕಾಂತಿ; ಸಾವಿರ: ಸಹಸ್ರ; ನಿದಾಘ: ಬೇಸಿಗೆ, ಸೆಖೆ; ಸೂರ್ಯ: ರವಿ; ಉಬ್ಬಟೆ: ಅಧಿಕ; ಕರಗು: ಕಡಿಮೆಯಾಗು; ಧಾರೆ: ವರ್ಷ; ಕಿಡಿ: ಬೆಂಕಿ; ಧಾಳಿ: ಲಗ್ಗೆ, ಮುತ್ತಿಗೆ; ಸಿಡಿಲು: ಅಶನಿ; ಶತ: ನೂರು; ಕೋಟಿ: ಅಸಂಖ್ಯಾತ; ಸೀದು: ಕರಕಲಾಗು; ನಿರಿ: ಕೊಲ್ಲು, ಸಾಯಿಸು; ಕಬ್ಬೊಗೆ: ಕರಿಯಾದ ಹೊಗೆ; ಕಿಡಿ: ಬೆಂಕಿ; ನೆರೆ: ಗುಂಪು; ಅಂತ್ಯ: ಕೊನೆ; ಮೇಘ: ಮೋಡ; ಝಗ: ಪ್ರಕಾಶ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಸರಳ +ಚೂಳಿಯ +ಝಳದೊಳಗೆ +ಸಾ
ವಿರ +ನಿದಾಘದ +ಸೂರ್ಯರ್+ಉಬ್ಬಟೆ
ಕರಗಿ +ಹೋಯಿತು +ಬಾಯಿಧಾರೆಯ+ ಕಿಡಿಯ+ ಧಾಳಿಯಲಿ
ಬರಸಿಡಿಲ +ಶತ+ಕೋಟಿ +ಸೀದವು
ನಿರಿವೊಗರ+ ಕಬ್ಬೊಗೆಯ +ಕಿಡಿಯಲಿ
ನೆರೆದವ್+ಅಂತ್ಯದ+ ಮೇಘವ್+ಎನೆ+ ಝಗಝಗಿಸಿತ್+ಅಮಳಾಸ್ತ್ರ

ಅಚ್ಚರಿ:
(೧) ರೂಪಕದ ಪ್ರಯೋಗ – ಸರಳ ಚೂಳಿಯ ಝಳದೊಳಗೆ ಸಾವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು; ಬಾಯಿಧಾರೆಯ ಕಿಡಿಯ ಧಾಳಿಯಲಿ ಬರಸಿಡಿಲ ಶತಕೋಟಿ ಸೀದವು

ಪದ್ಯ ೩೨: ಅರ್ಜುನನು ಎದುರಾಳಿಯ ವಿಜಯದ ಭ್ರಮೆಯನ್ನು ಹೇಗೆ ಬಿಡಿಸಿದನು?

ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ (ದ್ರೋಣ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸೂರ್ಯನ ಹೊಡೆತವನ್ನು ಅಂಧಕಾರ ರಾಜನ ದೇಹವು ಸುಧಾರಿಸಿಕೊಳ್ಳಬಹುದೇ? ವಿಕ್ರಮ ದರಿದ್ರರಾದ ಇವರ ಹೊಡೆತಕ್ಕೆ ಅಳುಕಿದರೆ ಅವನು ಅರ್ಜುನನಾಗಬಲ್ಲನೇ ಅವರ ಬಾಣಗಳನ್ನು ಕತ್ತರಿಸಿ ಬಾಣಗಳ ಮಳೆಗರೆದು ಮಮಕಾರದ ಭ್ರಾಂತಿಯಿಂದಿದ್ದ ಇದಿರಾಳಿಗಳ ವಿಜಯದ ಭ್ರಮೆಗಳನ್ನು ಅಸ್ತ್ರಗಳ ಬೋಧೆಯಿಂದ ಬಿಡಿಸಿದನು.

ಅರ್ಥ:
ದ್ಯುಮಣಿ: ಸೂರ್ಯ; ಒದೆ: ಹೊಡೆ; ತರಹರಿಸು: ಕಳವಳಿಸು, ಸೈರಿಸು; ತಿಮಿರ: ಅಂಧಕಾರ; ರಾಜ: ನೃಪ; ದೇಹ: ತನು; ವಿಕ್ರಮ: ಶೂರ, ಸಾಹಸ; ದರಿದ್ರ; ಬಡವ, ಧನಹೀನ; ಅಳುಕು: ಹೆದರು; ಬಳಿಕ: ನಂತರ; ಸಮತಳ: ಸಮತಟ್ಟಾದ ಪ್ರದೇಶ; ಶರವಳೆ: ಬಾಣಗಳ ಮಳೆ; ಕರೆದು: ಬರೆಮಾಡು; ಭ್ರಮೆ: ಇದ್ದುದನ್ನು ಇದ್ದ ಹಾಗೆ ಗ್ರಹಿಸದೆ ಬೇರೆ ರೀತಿಯಲ್ಲಿ ಗ್ರಹಿಸುವುದು, ಭ್ರಾಂತಿ; ಮಹಾರಥ: ಪರಾಕ್ರಮಿ; ಭಟ: ಸೈನಿಕ; ವಿಜಯ: ಗೆಲುವು; ಮಮತೆ: ಪ್ರೀತಿ; ಮಾಣಿಸು: ನಿಲ್ಲಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ, ಆಯುಧ; ಬೋಧೆ: ಉಪದೇಶ;

ಪದವಿಂಗಡಣೆ:
ದ್ಯುಮಣಿ+ಒದೆದರೆ +ತರಹರಿಸುವುದೆ
ತಿಮಿರ +ರಾಜನ +ದೇಹವ್+ಈ+ ವಿ
ಕ್ರಮ +ದರಿದ್ರರಿಗ್+ಅಳುಕಿದರೆ +ಬಳಿಕವ +ಧನಂಜಯನೆ
ಸಮತಳಿಸಿ +ಶರವಳೆಯ +ಕರೆದುದ್
ಭ್ರಮಿ +ಮಹಾರಥ +ಭಟರ +ವಿಜಯದ
ಮಮತೆಗಳ +ಮಾಣಿಸಿದನಂದ್+ಅಮಳಾಸ್ತ್ರ+ಬೋಧೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ದ್ಯುಮಣಿಯೊದೆದರೆ ತರಹರಿಸುವುದೆ ತಿಮಿರ ರಾಜನ ದೇಹವ್
(೨) ಅರ್ಜುನನ ಪರಾಕ್ರಮ – ವಿಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ